ಬೆಂಗಳೂರು: 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಿಎಂ ಹಲವು ಮಹತ್ವದ ಘೋಷಣೆಗಳನ್ನು ಮಾಡಿದರು.
ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾಗುವ ರಾಜ್ಯದ ಯೋಧರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವುದಾಗಿ ಹೇಳಿರುವ ಬಸವರಾಜ ಬೊಮ್ಮಾಯಿ, ಯಾವುದೇ ವಿಳಂಬ ಮಾಡದೇ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರವನ್ನೂ ನೋಡುವುದಾಗಿ ಘೋಷಿಸಿದ್ದಾರೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಶೇ. 100ರಷ್ಟು ಶೌಚಾಲಯ ನಿರ್ಮಾಣ ಮಾಡಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲಕರ್ಮಿಗಳಿಗೆ ತಲಾ 50 ಸಾವಿರ ರೂ.ವರೆಗೆ ಸಾಲ ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
30 ಲಕ್ಷ ರೈತರಿಗೆ ಸಾಲ ಒದಗಿಸಿದ್ದೇವೆ. 3 ಸಾವಿರ ರಾಜ್ಯ ಹೆದ್ದಾರಿ ಅಭಿವೃದ್ಧಿಯಾಗಿದೆ. ರಾಜ್ಯದಲ್ಲಿ ಮೂಲಸೌಕರ್ಯದ ಅಭಿವೃದ್ಧಿಯಾಗಿದೆ. ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಲ್ಲರ ಆರೋಗ್ಯ ತಪಾಸಣೆಗೆ ಕ್ರಮಕೈಗೊಳ್ಳುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮತ್ತು ಪೌರಕಾರ್ಮಿಕರ ವೇತನ ಹೆಚ್ಚಳ ಮಾಡಿ, ಅವರ ಗೌರವ ಹೆಚ್ಚಿಸಿದ್ದೇವೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಕೇಂದ್ರದ 1 ಲಕ್ಷದ ಜೊತೆಗೆ ರಾಜ್ಯದಿಂದ ಹೆಚ್ಚುವರಿ 4 ಲಕ್ಷ ಸೇರಿಸಿ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಒಂದು ತಿಂಗಳಲ್ಲಿಯೇ ಮಳೆಯಿಂದಾಗಿ ಬೆಳೆನಾಶವಾದ 18 ಲಕ್ಷ ಜನ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.