ಬೆಂಗಳೂರು |ಉದ್ಯೋಗ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ VB GRAM ಮಸೂದೆಗೆ ಡಿವೈಎಫ್ಐ ವಿರೋಧ

ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ದಶಕಗಳ ಕಾಲ ಜನತೆ ಹಾಗೂ ಎಡಪಕ್ಷಗಳು ನಡೆಸಿದ ಐಕ್ಯ ಹೋರಾಟಗಳ ಮೂಲಕ ಗಳಿಸಿದ ಅತ್ಯಂತ ಮಹತ್ವದ ಹಕ್ಕಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಹೆಸರನ್ನು ಬದಲಾಯಿಸುವ ಪ್ರಯತ್ನವಾಗಿ ಪ್ರಸ್ತಾವಿತ VB-GRAMG ಮಸೂದೆಯನ್ನು ಮಂಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರದ ನಡೆಯನ್ನು ಭಾರತ ಪ್ರಜಾಸತ್ತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ತಿವ್ರವಾಗಿ ಖಂಡಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದ್ದಾರೆ.
ಮಸೂದೆಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ವಾಸ್ತವದಲ್ಲಿ ಯೋಜನೆಯ ಹಣಕಾಸಿನ ಮಾದರಿಯನ್ನು ಮೂಲಭೂತವಾಗಿ ಬದಲಾಯಿಸುವ ಮೂಲಕ ಹೊಣೆಗಾರಿಕೆಯಿಂದ ಕೇಂದ್ರ ಸರಕಾರವು ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ದೆಹಲಿ | VB-GRAMG ಮಸೂದೆ ಗ್ರಾಮೀಣ ಬಡವರಿಗೆ ಕೊಡುವ ಕೆಲಸದ ಸೀಮಿತ ಉದ್ಯೋಗ ಹಕ್ಕು ನಿರಾಕರಿಸುವ ಹುನ್ನಾರ

ಮಸೂದೆಯು ವೇತನ ಪಾವತಿಗೆ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು 100 ಪ್ರತಿಶತದಿಂದ ರಾಜ್ಯಗಳಿಗೆ 60:40 ಹಂಚಿಕೆ ವ್ಯವಸ್ಥೆಗೆ ಕಡಿಮೆ ಮಾಡುತ್ತದೆ. ಇದು ನಿರುದ್ಯೋಗ ಭತ್ಯೆಯ ಹೊರೆ ಮತ್ತು ವಿಳಂಬ ಪಾವತಿಗಳಿಗೆ ಪರಿಹಾರವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸುತ್ತದೆ. ಹಾಗೂ ರಾಜ್ಯಗಳ ಮೇಲೆ ಸಮರ್ಥನೀಯವಲ್ಲದ ಆರ್ಥಿಕ ಒತ್ತಡವನ್ನು ಹೇರುತ್ತದೆಯಲ್ಲದೇ ಅದೇ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ಸರಕಾರಗಲಕ ಯಾವುದೇ ಅರ್ಥಪೂರ್ಣ ಪಾತ್ರವನ್ನು ನಿರಾಕರಿಸುತ್ತದೆ. ಕೇಂದ್ರವು ರಾಜ್ಯವಾರು ವೆಚ್ಚದ ಮಿತಿಗಳು ಮತ್ತು ರಾಜ್ಯಗಳು ಭರಿಸಬೇಕಾದ ಹೆಚ್ಚುವರಿ ವೆಚ್ಚಗಳೊಂದಿಗೆ “ನಿಯಮಿತ ಹಂಚಿಕೆ” ಯ ಪರಿಚಯವು ಕಾರ್ಯಕ್ರಮದ ವ್ಯಾಪ್ತಿಯನ್ನು ತೀವ್ರವಾಗಿ ಮೊಟಕುಗೊಳಿಸುತ್ತದೆ ಮತ್ತು ದುಡಿಯುವ ಬಡಜನರ ಮೇಲಿನ ಕೇಂದ್ರದ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಟೀಕಿಸಿದರು.

ಈ ಮಸೂದೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದುಹಾಕುವ ಕ್ರಮವನ್ನು ಡಿವೈಎಫ್‌ಐ ತೀವ್ರವಾಗಿ ವಿರೋಧಿಸುತ್ತದೆ. MGNREGA ಅನ್ನು ಮರು ಹೆಸರಿಸುವ ಪ್ರಯತ್ನವು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ; ಇದು ಉದ್ದೇಶಪೂರ್ವಕ ರಾಜಕೀಯ ಕುಟಿಲ ನೀತಿಯ ಕೃತ್ಯವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಸ್ಮರಣೆ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಗಾಂಧೀಜಿಯವರನ್ನು ಅಳಿಸಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಮತ್ತು ಈ ಮರುನಾಮಕರಣವು ಆ ದೊಡ್ಡ ಸೈದ್ಧಾಂತಿಕ ಯೋಜನೆಯ ಭಾಗವಾಗಿದೆ. ಗಾಂಧೀಜಿಯವರ ಹೆಸರನ್ನು ಅಳಿಸುವ ಪ್ರಯತ್ನವು ಕಾರ್ಮಿಕರು ಮತ್ತು ಗ್ರಾಮೀಣ ಬಡವರ ಹಕ್ಕುಗಳ ಮೇಲಿನ ನಿರ್ಲಜ್ಯ ಧಾಳಿಯೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರುದ್ಯೋಗವು ವಿಶೇಷವಾಗಿ ಯುವಜನರಲ್ಲಿ ಆತಂಕಕಾರಿ ಮಟ್ಟದಲ್ಲಿರುವಾಗ, ಉದ್ಯೋಗ ಖಾತ್ರಿಯ ವ್ಯಾಪ್ತಿಯನ್ನು ವಿಸ್ತರಿಸುವುದು, ಸಮಯೋಚಿತ ಪಾವತಿಗಳನ್ನು ಖಚಿತಪಡಿಸುವುದು, ವೇತನವನ್ನು ಹೆಚ್ಚಿಸುವುದು ಮತ್ತು ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿಯನ್ನು ವಿಸ್ತರಿಸುವುದು ಈ ಸಂದರ್ಭದ ತುರ್ತು ಅಗತ್ಯವಾಗಿದೆ. ಆದರೆ ಕೇಂದ್ರ ಸರ್ಕಾರವು ಈ ಮಹತ್ವದ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲಿಗೆ ತಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಅಲ್ಲದೇ ಜನತೆಯ ಹಕ್ಕು ಆಧಾರಿತ ಈ ಮಹತ್ವದ ಯೋಜನೆಯನ್ನು ದುರ್ಬಲಗೊಳಿಸುತ್ತದೆ ಎಂದು ದೂರಿದರು.

ತನ್ನ ರಾಜಕೀಯ ಲಾಭಕ್ಕಾಗಿ ಯೋಜನೆಯ ಮರು ನಾಮಕರಣಕ್ಕೆ ಮುಂದಾಗಿರುವ ಈ ದುಷ್ಟ ಕ್ರಮವನ್ನು ಡಿವೈಎಫ್‌ಐ ಪ್ರಬಲವಾಗಿ ವಿರೋಧಿಸುತ್ತದೆ. ಉದ್ಯೋಗ ಹಕ್ಕುಗಳು, ಫೆಡರಲ್ ತತ್ವಗಳು ಮತ್ತು ಸಾಮಾಜಿಕ ನ್ಯಾಯದ ಮೇಲಿನ ಈ ದಾಳಿಯ ವಿರುದ್ಧ ಪ್ರಬಲ ಪ್ರತಿರೋಧ ನಡೆಸಲು ಯುವಜನತೆಗೆ ಡಿವೈಎಫ್ಐ ಕರೆ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ನೋಡಿ  : ಧರ್ಮಸ್ಥಳ ಪ್ರಕರಣ : ಕೊಂದವರು ಯಾರು? ಅಭಿಯಾನವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ – ಜ್ಯೋತಿ ಎ Janashakthi

 

Donate Janashakthi Media

Leave a Reply

Your email address will not be published. Required fields are marked *