ಸತತ ಎರಡು ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದ ಭಾರತದ ಶೂಟರ್ ಮನು ಭಾಕರ್ 25 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಹ್ಯಾಟ್ರಿಕ್ ಪದಕ ಗಳಿಸುವ ಕನಸು ಭಗ್ನಗೊಂಡಿದೆ.
ಶನಿವಾರ ನಡೆದ ವನಿತೆಯರ 25 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್ ಸುತ್ತಿನಲ್ಲಿ ಮನು ಭಾಕರ್ 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಕೂದಲೆಳೆ ಅಂತರದಿಂದ ಪದಕ ಗಳಿಸುವ ಅವಕಾಶದಿಂದ ವಂಚಿತರಾದರು.
ಒಂದೇ ಆವೃತ್ತಿಯ ಒಲಿಂಪಿಕ್ಸ್ ನಲ್ಲಿ 2 ಕಂಚಿನ ಪದಕ ಗೆದ್ದು ಇತಿಹಾಸ ಬರೆದು ಆತ್ಮವಿಶ್ವಾಸದ ಕಡಲಲ್ಲಿ ತೇಲುತ್ತಿದ್ದ ಮನು ಭಾಕರ್ ಮೊದಲ ಸುತ್ತಿನ 5 ರೌಂಡ್ ಗಳಲ್ಲಿ 2 ಮಾತ್ರಕ್ಕೆ ಗುರಿ ಇಡುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದರು.
ಆದರೆ ಎರಡನೇ ಸುತ್ತಿನಲ್ಲಿ 5 ಸುತ್ತುಗಳ ಪೈಕಿ 4ರಲ್ಲಿ ಗುರಿ ಇಟ್ಟು ಭರ್ಜರಿಯಾಗಿ ಪದಕದ ರೇಸ್ ಗೆ ಮರಳಿದ್ದೂ ಅಲ್ಲದೇ 2ನೇ ಸ್ಥಾನಕ್ಕೆ ಜಿಗಿದಿದ್ದರು. ಆದರೆ ಮೂರನೇ ಸುತ್ತಿನಲ್ಲಿ 5 ಸುತ್ತುಗಳ ಪೈಕಿ 4ರಲ್ಲಿ ಯಶಸ್ಸು ಸಾಧಿಸಿ 1ರಲ್ಲಿ ಎಡವಿದ್ದರಿಂದ ಮತ್ತೆ ಮೂರನೇ ಸ್ಥಾನಕ್ಕೆ ಕುಸಿದರು.
ನಾಲ್ಕನೇ ಸುತ್ತಿನಲ್ಲಿ ಮತ್ತೆ 5 ಅವಕಾಶಗಳಲ್ಲಿ 4ರಲ್ಲಿ ಯಶಸ್ಸು ಸಾಧಿಸಿ ಮತ್ತೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದರು. ಚೀನಾದ ಜಿನ್ ಯಾಗ್ ಸತತವಾಗಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದ್ದು, ಅಂತಿಮ ಸುತ್ತಿನಲ್ಲಿ ಪದಕ ಖಚಿತವಾಗುವ ನಿರ್ಣಾಯಕ ಘಟ್ಟ ತಲುಪಿತು.
ಮನು ಭಾಕರ್ 10 ಮೀ. ಏರ್ ಪಿಸ್ತೂಲ್ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ಮತ್ತು ಮಿಶ್ರ ಡಬಲ್ಸ್ ನಲ್ಲಿ ಸರ್ಬಜೀತ್ ಸಿಂಗ್ ಜೊತೆ ತಲಾ ಒಂದು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ನಂತರ ಭಾರತದ ಮಹಿಳಾ ಕ್ರೀಡಾಪಟುವೊಬ್ಬರು ಶೂಟಿಂಗ್ ನಲ್ಲಿ ಹಾಗೂ ಎರಡು ಪದಕ ಗೆದ್ದ ಮೊದಲ ಮಹಿಳೆ ಎಂಬ ಐತಿಹಾಸಿಕ ದಾಖಲೆ ಬರೆದಿದ್ದರು.
25 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಆರಂಭದ ಸುತ್ತಿನಲ್ಲಿ ಅನುಭವಿಸಿದ ಹಿನ್ನಡೆ ಮನು ಭಾಕರ್ ಪಾಲಿಗೆ ಮುಳ್ಳಾಗಿದ್ದು, ನಂತರ ಅಮೋಘವಾಗಿ ಚೇತರಿಸಿಕೊಂಡು ತಿರುಗೇಟು ನೀಡಿದರೂ ಪ್ರತಿ ಸುತ್ತಿನಲ್ಲಿ ಪ್ರಬಲ ಹೋರಾಟ ನಡೆಸಿದರೂ ಫಲ ನೀಡಲಿಲ್ಲ.