ದೆಹಲಿ | ಹೊಸ ವಿದ್ಯುತ್ ತಿದ್ದುಪಡಿ ಮಸೂದೆ ಕೃಷಿ ಮತ್ತು ಬಳಕೆದಾರರಿಗೆ ಆಘಾತಕಾರಿ; ಹೋರಾಟಕ್ಕೆ ಕರೆ ನೀಡಿದ ಸಿಪಿಐ(ಎಂ)

ದೆಹಲಿ : ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು ಉದ್ದೇಶಿಸಿರುವ ಹೊಸ ಮಸೂದೆಯು ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳನ್ನು ಆಕ್ರಮಣಕಾರಿಯಾಗಿ ಮುಂದೊತ್ತುತ್ತದೆ . ಮಸೂದೆ ಅಂಗೀಕಾರವಾದರೆ ಅದು ಅನಿವಾರ್ಯವಾಗಿ ಕೃಷಿ ಮತ್ತು ಗೃಹಬಳಕೆದಾರರಿಗೆ ಭಾರಿ ದರಪಟ್ಟಿ ಆಘಾತಕ್ಕೆ ಕಾರಣವಾಗುತ್ತದೆ, ಆಧ್ದರಿಂದ ದರ ವಿರುದ್ಧ ಜನಾಭಿಪ್ರಾಯವನ್ನು ಅಣಿನೆರೆಸಲು ನಿರ್ಧರಿಸಿರುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.ಇದರ ವಿರುದ್ಧದ ಹೋರಾಟವನ್ನು ಈಗಾಗಲೇ ಮುನ್ನಡೆಸುತ್ತಿರುವ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳಿಗೆ ಬೆಂಬಲವನ್ನು ಸೂಚಿಸುತ್ತ , ಈ ಹೋರಾಟದಲ್ಲಿ ಸೇರಿಕೊಂಡು ಅದನ್ನು ಬಲಪಡಿಸಬೇಕು ಎಂದು ಸಮಾಜದ ಎಲ್ಲಾ ವಿಭಾಗಗಳಿಗೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಮನವಿ ಮಾಡಿದೆ.

ನವಂಬರ್‍13-14ರಂದು ನವದೆಹಲಿಯಲ್ಲಿ ಸಭೆ ಸೇರಿದ ಪೊಲಿಟ್‍ಬ್ಯುರೊ ಹೊಸ ವಿದ್ಯುತ್‍ ಮಸೂದೆಯ ಪ್ರಶ್ನೆಯಲ್ಲದೆ, ಬಿಹಾರದ ಚುನಾವಣೆಗಳು, ದಿಲ್ಲಿಯ ಕೆಂಪುಕೋಟೆಯ ಬಳಿ ಕಾರಿನಲ್ಲಿ ಸ್ಫೋಟ, ಕೇಂದ್ರ ಸರಕಾರದ ಶ್ರಮಶಕ್ತಿ ನೀತಿ 2025, 12 ರಾಜ್ಯಗಳಲ್ಲಿ ಎಸ್‍ಐಆರ್ ಮುಂತಾದ ವಿಷಯಗಳನ್ನು ಚರ್ಚಿಸಿ, ಸಭೆಯ ನಂತರ ನೀಡಿರುವ ನವಂಬರ್‍ 16 ರಂದು ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಮನವಿಯನ್ನು ಮಾಡಿದೆ.

ಇದನ್ನೂ ಓದಿ : ಪ್ರಭುತ್ವ ಯಂತ್ರ ಮತ್ತು ಅಪಾರ ಹಣ ಬಳಸಿ ಜನತೆಯ ಪ್ರಶ್ನೆಗಳನ್ನು ಮುಳುಗಿಸಿಬಿಡಲಾಗಿದೆ-ಬಿಹಾರ ಚುನಾವಣಾ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ)

ಬಿಹಾರ ಚುನಾವಣೆಗಳು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 67ಶೇ. ಮತದಾರರು ಭಾಗವಹಿಸಿದ್ದಾರೆ – ಹಿಂದಿನ ಚುನಾವಣೆಗೆ ಹೋಲಿಸಿದರೆ ಇದು 9.6 ಶೇ.ದಷ್ಟು ಹೆಚ್ಚಾಗಿದೆ. ಶೇ. 71.6 ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂಬುದು ಗಮನಾರ್ಹ, ಇದು ಮಹಿಳಾ ರಾಜಕೀಯ ಭಾಗವಹಿಸುವಿಕೆಯಲ್ಲಿ ಒಂದು ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ. ಮತ ಹಂಚಿಕೆಯ ದತ್ತಾಂಶವು ತೋರಿಸುವಂತೆ, ಎನ್‌ಡಿಎ ಮತಗಳಿಕೆಯ ವಿಷಯದಲ್ಲಿ ಬಹಳ ಹೆಚ್ಚೇನೂ ಗಳಿಸದಿದ್ದರೂ (2024 ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ), ಶಾಸಕಾಂಗ ಸಭೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿದೆ. ಆಡಳಿತ ಒಕ್ಕೂಟವು ಇಡೀ ಪ್ರಭುತ್ವ ಯಂತ್ರವನ್ನು; ಬಳಸಿಕೊಂಡಿತು, ವಿವಿಧ ವಿವಿಧ ಕೈಚಳಕಗಳನ್ನು ನಡೆಸಿತು; ಅಪಾರ ಪ್ರಮಾಣದ ಹಣವನ್ನು ತೊಡಗಿಸಿತು ಮತ್ತು ರಾಜ್ಯದ ಹೊರಗಿನಿಂದ ತಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ನಿಯೋಜಿಸಿತು. ಪ್ರಧಾನ ಮಂತ್ರಿ ಮತ್ತು ಗೃಹಮಂತ್ರಿಗಳು ಸೇರಿದಂತೆ ಅದರ ನಾಯಕರ ಧ್ರುವೀಕರಣ ತರುವ ಕೋಮುವಾದಿ ಮತ್ತು ಜಾತಿವಾದಿ ಅಬ್ಬರದ ಭಾಷಣಗಳ ಲಾಭವನ್ನೂ ಅದು ಪಡೆಯಿತು. ಇದನ್ನು ವಿಧೇಯ ಕಾರ್ಪೊರೇಟ್ ಮಾಧ್ಯಮಗಳು ಇನ್ನಷ್ಟು ವರ್ಧಿಸಿ, ಮಹಾಘಟಬಂಧನ್ ಎತ್ತಿದ ಜನರ ಪ್ರಶ್ನೆಗಳನ್ನು ಮುಳುಗಿಸಿ ಬಿಟ್ಟಿತು.

ಬಿಹಾರ ಚುನಾವಣೆಗಳು, ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಅದರ ಜನವಿರೋಧಿ ನೀತಿಗಳ ವಿರುದ್ಧ ಜಂಟಿ ಹೋರಾಟಗಳನ್ನು ಮುನ್ನಡೆಸಲು ಹೆಚ್ಚು ಸಂಯೋಜಿತ ಪ್ರಯತ್ನವನ್ನು ಮಾಡಬೇಕು ಎಂದು ತೋರಿಸುತ್ತದೆ. ಸಿಪಿಐ(ಎಂ) ಚುನಾವಣಾ ಆಯೋಗದ ಪಕ್ಷಪಾತದ ವರ್ತನೆ, ಎಸ್‌ಐಆರ್‌ನ ಹಠಾತ್ ಆರಂಭ ಮತ್ತು ಈ ಫಲಿತಾಂಶಗಳ ಹಿಂದಿರುವ ಇತರ ಎಲ್ಲಾ ಅಂಶಗಳನ್ನು ವಿವರವಾಗಿ ಪರಿಶೀಲಿಸುತ್ತದೆ. ಸಿಪಿಐ(ಎಂ) ಪೊಲಿಟ್‌ಬ್ಯುರೊ ತನ್ನ ಅಭ್ಯರ್ಥಿಗಳಿಗೆ ಮತ್ತು ಇತರ ವಿರೋಧ ಪಕ್ಷಗಳಿಗೆ ಮತ ಹಾಕಿದ ಬಿಹಾರದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ.

ದೆಹಲಿಯಲ್ಲಿ ಬಾಂಬ್ ಸ್ಫೋಟ: ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟವು ಈ ದಾಳಿಯನ್ನು ನಡೆಸುವಲ್ಲಿ ಒಂದು ವ್ಯಾಪಕ ಜಾಲವು ಒಳಗೊಂಡಿರುವುದನ್ನು ಪ್ರಕಟಪಡಿಸಿದೆ. ಜನರಿಗೆ ಭದ್ರತೆ ಒದಗಿಸುವಲ್ಲಿ ಮತ್ತು ಇಂತಹ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವು ಈ ಘಟನೆಯಿಂದ ಮತ್ತೊಮ್ಮೆ ಬಹಿರಂಗಗೊಂಡಿದೆ. ಪಹೆಲ್ಗಾಂ ಭಯೋತ್ಪಾದಕ ದಾಳಿಯ ನಂತರ, ‘ಆಪರೇಷನ್ ಸಿಂಧೂರ್’, ವಿಶೇಷವಾಗಿ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದರಿಂದ, ಅದು ಭಯೋತ್ಪಾದಕತೆಯ ಮೂಲರಚನೆಯನ್ನು ನಾಶಪಡಿಸಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ದೆಹಲಿ ಸ್ಫೋಟವು ಈ ದಾವೆಗಳನ್ನು ಹುಸಿಗೊಳಿಸಿದೆ, ಏಕೆಂದರೆ ಸರ್ಕಾರವೇ ಇತ್ತೀಚಿನ ದಾಳಿಗೆ ಜೈಶ್‌ ಹೊಣೆಯೆಂದು ಸೂಚಿಸಿದೆ. ಸರ್ಕಾರವು ಇದಕ್ಕೆ ಹೊಣೆಯಾಗಿರುವ ಭಯೋತ್ಪಾದಕ ಜಾಲಗಳನ್ನು ಪತ್ತೆಹಚ್ಚಲು ಮತ್ತು ಎಲ್ಲಾ ಅಪರಾಧಿಗಳನ್ನು ಕಟಕಟೆಗೆ ತರುವಂತೆ ಖಚಿತಪಡಿಸಲು ತ್ವರಿತವಾಗಿ ಕಾರ್ಯಪ್ರವೃತ್ತವಾಗಬೇಕು. ಈ ಘಟನೆಯನ್ನು ಬಳಸಿಕೊಂಡು ಸಮಾಜವನ್ನು ಕೋಮು ಆಧಾರದ ಮೇಲೆ ಧ್ರುವೀಕರಿಸುವ ಪ್ರಯತ್ನಗಳನ್ನು ದೃಢವಾಗಿ ಎದುರಿಸಬೇಕು.

ಕೇರಳ ಎಲ್‍ಡಿಎಫ್ ನ ಐತಿಹಾಸಿಕ ಸಾಧನೆ: ನವೆಂಬರ್ 1 ರಂದು, ಕೇರಳದ ಎಲ್‍ಡಿಎಫ್ ಸರ್ಕಾರವು ರಾಜ್ಯದೊಳಗೆ ತೀವ್ರ ಬಡತನ ನಿರ್ಮೂಲನೆಯಲ್ಲಿ ಐತಿಹಾಸಿಕ ಯಶಸ್ಸನ್ನು ಘೋಷಿಸಿತು. ಈ ಸಾಧನೆಯು ನಿಖರವಾಗಿ ಯೋಜಿಸಿ ಕಾರ್ಯಗತಗೊಳಿಸಿದ ‘ತೀವ್ರ ಬಡತನ ನಿರ್ಮೂಲನಾ’ ಕಾರ್ಯಕ್ರಮದ(ಇಪಿಇಪಿ) ಫಲಿತಾಂಶವಾಗಿದೆ, ಇದು ನಾಲ್ಕು ವರ್ಷಗಳ, ದತ್ತಾಂಶ ಆಧಾರಿತ ಉಪಕ್ರಮವಾಗಿದ್ದು, ಸ್ಥಳೀಯ ಸ್ವಂಯಾಡಳಿತಗಳು 64,006 ಮನೆಗಳನ್ನು ಗುರುತಿಸಿ ಅವನ್ನು ನಿರ್ದಿಷ್ಟ ಮಧ್ಯಪ್ರವೇಶಗಳ ಮೂಲಕ ಮೇಲಕ್ಕೆತ್ತುವಂತೆ ಸಜ್ಜುಗೊಳಿಸಿದ ಉಪಕ್ರಮವಾಗಿದೆ. ಈ ಯಶಸ್ಸು ಪ್ರಗತಿಪರ ರಾಜಕೀಯ, ವಿಕೇಂದ್ರೀಕೃತ ಆಳ್ವಿಕೆ ಮತ್ತು ಹಕ್ಕು ಆಧಾರಿತ ವಿಧಾನವನ್ನು ಆಧರಿಸಿದ ಕೇರಳ ಅಭಿವೃದ್ಧಿ ಮಾದರಿಯು ಪರಿಣಾಮಕಾರಿ ಎಂಬುದಕ್ಕೆ ಸಾಕ್ಷಿಯಾಗಿದೆ. ವಿರೋಧ ಪಕ್ಷಗಳು ಆಳುವ ರಾಜ್ಯಗಳಿಗೆ ವ್ಯವಸ್ಥಿತವಾಗಿ ಹಣದ ಕೊರತೆಯನ್ನುಂಟುಮಾಡಿರುವ ಕೇಂದ್ರ ಸರ್ಕಾರವು ನಡೆಸಿದ ಅವಿರತ ಹಣಕಾಸು ಸಮರದ ಹೊರತಾಗಿಯೂ ಕೇರಳದ ಈ ಯಶಸ್ಸನ್ನು ಸಾಧಿಸಲಾಗಿದೆ. ಇದು ಈ ಸಾಧನೆಯನ್ನು ಇನ್ನಷ್ಟು ಮಹತ್ವದ್ದಾಗಿ ಮಾಡುತ್ತದೆ, ಏಕೆಂದರೆ ಇದು ನಿರ್ಬಂಧಗಳ ಹೊರತಾಗಿಯೂ ಉನ್ನತ ಕಲ್ಯಾಣ ಫಲಿತಾಂಶಗಳನ್ನು ಸಾಧಿಸಲು ಒಂದು ಎಡ ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಲ್‍ಡಿಎಫ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮತ್ತು ಯುಡಿಎಫ್‍ನ್ನು ಹಾಗೂ ಬಿಜೆಪಿಯಂತಹ ಯಂತಹ ಕೋಮುವಾದಿ ಶಕ್ತಿಗಳ ಸಂಪೂರ್ಣ ಸೋಲನ್ನು ಖಚಿತಪಡಿಸಬೇಕು ಎಂದು ಪೊಲಿಟ್ ಬ್ಯುರೊ ಕೇರಳದ ಜನರಿಗೆ ಮನವಿ ಮಾಡುತ್ತದೆ. ಯುಡಿಎಫ್ ಸ್ವಯಂ ತಾನೇ ಬಿಜೆಪಿ ಮತ್ತು ಇತರ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಿರುವುದನ್ನು ಬಹಿರಂಗಪಡಿಸಿದೆ.

ವಿದ್ಯುತ್ ತಿದ್ದುಪಡಿ ಮಸೂದೆ 2025 : ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು ಉದ್ದೇಶಿಸಿರುವ ಹೊಸ ಮಸೂದೆಯು ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಪ್ರಯತ್ನಗಳನ್ನು ಆಕ್ರಮಣಕಾರಿಯಾಗಿ ಮುಂದೊತ್ತುತ್ತಿದೆ. ವಿದ್ಯುತ್ ಕ್ಷೇತ್ರದ ಸಾರ್ವಜನಿಕ ಸ್ವರೂಪವನ್ನು ಕಳಚಿ ಹಾಕಲು ಮತ್ತು ಅದನ್ನು ಸಂಪೂರ್ಣವಾಗಿ ಖಾಸಗೀಕರಣಗೊಂಡ, ಲಾಭ-ಚಾಲಿತ ಮಾರುಕಟ್ಟೆಯಾಗಿ ಮರುರೂಪಿಸುವ ಗುರಿಯನ್ನು ಇದು ಹೊಂದಿದೆ. ಮಸೂದೆ ಅಂಗೀಕಾರವಾದರೆ ಅದು ಅನಿವಾರ್ಯವಾಗಿ ಕೃಷಿ ಮತ್ತು ಗೃಹಬಳಕೆದಾರರಿಗೆ ಭಾರಿ ದರಪಟ್ಟಿ ಆಘಾತಕ್ಕೆ ಕಾರಣವಾಗುತ್ತದೆ, ರಾಜ್ಯ ವಿದ್ಯುತ್‍ ವಿತರಣೆ ಕಂಪನಿ (ಡಿಸ್ಕಾಮ್‌)ಗಳನ್ನು ಕುಂಠಿತಗೊಳಿಸುತ್ತದೆ ಮತ್ತು ರಾಷ್ಟ್ರೀಯ ಇಂಧನ ಸಾರ್ವಭೌಮತ್ವವನ್ನು ಖಾಸಗಿ ಏಕಸ್ವಾಮ್ಯಗಳಿಗೆ ಬಿಟ್ಟುಕೊಡುತ್ತದೆ. ಈ ಮಸೂದೆಯು ಒಕ್ಕೂಟತತ್ವ, ಜೀವನೋಪಾಯದ ಹಕ್ಕು ಮತ್ತು ವಿದ್ಯುತ್ ಒಂದು ಸಾರ್ವಜನಿಕ ಸ್ವತ್ತು ಎಂಬ ಪರಿಕಲ್ಪನೆಯ ಮೇಲೆ ನೇರ ದಾಳಿಯಾಗಿದೆ.

ಸಿಪಿಐ(ಎಂ) ಪ್ರಸ್ತಾವಿತ ಬದಲಾವಣೆಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಅಣಿನೆರೆಸುತ್ತದೆ. ವಿದ್ಯುತ್ ಖಾಸಗೀಕರಣದ ವಿರುದ್ಧದ ಹೋರಾಟವನ್ನು ಈಗಾಗಲೇ ಮುನ್ನಡೆಸುತ್ತಿರುವ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳಿಗೆ ಇದು ಬೆಂಬಲವನ್ನು ನೀಡುತ್ತದೆ. ಈ ಹೋರಾಟದಲ್ಲಿ ಸೇರಿಕೊಂಡು ಅದನ್ನು ಬಲಪಡಿಸಬೇಕು ಎಂದು ಸಮಾಜದ ಎಲ್ಲಾ ವಿಭಾಗಗಳಿಗೆ ಪೊಲಿಟ್‍ಬ್ಯುರೊ ಮನವಿ ಮಾಡುತ್ತದೆ.

ಶ್ರಮ ಶಕ್ತಿ ನೀತಿ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿರುವ ಶ್ರಮ ಶಕ್ತಿ ನೀತಿ 2025 ರ ಕರಡಿನ ಮುಖ್ಯ ಉದ್ದೇಶವೆಂದರೆ ಕಾರ್ಮಿಕರಿಗೆ ರಕ್ಷಣೆ, ಜಾರಿ ವ್ಯವಸ್ಥೆ ಮತ್ತು ಸಾಮೂಹಿಕ ಚೌಕಾಸಿ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಳಚಿಹಾಕುವುದು. ಮಸೂದೆಯು ‘ಧರ್ಮ ಶಾಸ್ತ್ರ’ಗಳಿಂದ ಸ್ಫೂರ್ತಿ ಪಡೆಯುವುದಾಗಿ ಹೇಳಿಕೊಳ್ಳುತ್ತದೆ ಮತ್ತು ಇದು ಪ್ರಜಾಸತ್ತಾತ್ಮಕ, ಜಾತ್ಯತೀತ, ಗಣರಾಜ್ಯ ಸಂವಿಧಾನದ ಮೇಲೆ ನೇರ ದಾಳಿಯಾಗಿದೆ. ಈ ನೀತಿಯು ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ರಾಜ್ಯಗಳನ್ನು ಬಲವಂತಪಡಿಸಲು ಹಣಕಾಸಿನ ಉತ್ತೇಜನೆಗಳನ್ನು ಬಳಸುವ ಮೂಲಕ ಒಕ್ಕೂಟ ರಚನೆಯನ್ನು ಸಕ್ರಿಯವಾಗಿ ದುರ್ಬಲಗೊಳಿಸುತ್ತದೆ. ಇದು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೋಸದ ಪ್ರಯತ್ನವಾಗಿದೆ ಮತ್ತು ಅದರ ಕಾರ್ಪೊರೇಟ್, ಕೋಮುವಾದಿ ಹಿಂದುತ್ವ ನಿರಂಕುಶ ಆಳ್ವಿಕೆಗೆ ಅನುಗುಣವಾಗಿ ರೂಪಿಸಲಾಗಿದೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ: ಹನ್ನೆರಡು ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಮತದಾರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಬಿಜೆಪಿ-ಆರ್‌ಎಸ್‌ಎಸ್ ಕೂಟ ಲೆಕ್ಕಾಚಾರ ಮಾಡಿರುವ ರಾಜಕೀಯ ಯೋಜನೆಯಾಗಿದ್ದು, ಇದನ್ನು ತಾಳಕ್ಕೆ ತಕ್ಕಂತೆ ಕುಣಿಯುವ ಭಾರತದ ಚುನಾವಣಾ ಆಯೋಗ ಮೂಲಕ ಕಾರ್ಯಗತಗೊಳಿಸಲಾಗಿದೆ. ಲಕ್ಷಾಂತರ ಮತದಾರರನ್ನು ವ್ಯವಸ್ಥಿತವಾಗಿ ಮತದಾನದಿಂದ ವಂಚಿತಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ವಿವಾದಾತ್ಮಕ ಬಿಹಾರ ಪ್ರಕ್ರಿಯೆಯ ಮಾದರಿಯಲ್ಲಿ, ಎಸ್‍ಐಆರ್ ಉದ್ದೇಶಪೂರ್ವಕವಾಗಿ ಕಠಿಣ ದಾಖಲೆಗಳನ್ನು ಸಲ್ಲಿಸಬೇಕೆನ್ನುವ ಮತ್ತು ಹಳೆಯ 2002 ರ ಆಧರಿಸಿಕೊಂಡು ಹಿಂಬಾಗಿಲಿನ ತರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ ಆರ್‍ ಸಿ)ಯೇ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಾಥಮಿಕ ಉದ್ದೇಶ ಆಳುವ ಪಕ್ಷದ ಪರವಾಗಿ ಚುನಾವಣಾ ಜನಸಂಖ್ಯಾ ಸ್ವರೂಪವನ್ನು ವ್ಯತ್ಯಸ್ತಗೊಳಿಸುವುದು ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಅಡಿಪಾಯವನ್ನು ಹಾಳು ಮಾಡುವುದು ಆಗಿದೆ, ಇದು ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಅತ್ಯಂತ ಮಹತ್ವದ ದಾಳಿಯಾಗಿದೆ.

ಪೌರತ್ವವನ್ನು ನಿರ್ಧರಿಸುವ ಹಕ್ಕನ್ನು ಕಸಿದುಕೊಳ್ಳುವ ಚುನಾವಣಾ ಆಯೋಗದ ಪ್ರಯತ್ನದ ವಿರುದ್ಧ ಮತ್ತು ಮತದಾರರ ಪಟ್ಟಿಗಳಿಂದ ಯಾವುದೇ ಅರ್ಹ ಮತದಾರರನ್ನು ತೆಗೆದುಹಾಕದಂತೆ ಖಚಿತಪಡಿಸಲು ಪಕ್ಷವು ವ್ಯಾಪಕ ಅಭಿಯಾನವನ್ನು ನಡೆಸುತ್ತದೆ. ಅದೇ ರೀತಿ, ಜನರು ಜಾಗರೂಕರಾಗಿರಬೇಕು ಮತ್ತು ಬಿಜೆಪಿ ಮತ್ತು ಚುನಾವಣಾ ಆಯೋಗದ ವ್ಯವಸ್ತೆಯ ಮೂಲಕ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ದಾಖಲಾಗದಂತೆ ನೋಡಿಕೊಳ್ಳಬೇಕು ಎಂದು ಅದು ಕರೆ ನೀಡುತ್ತದೆ.

ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲೆ ದಾಳಿಗಳು: ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಮೇಲೆ ದಾಳಿಗಳು, ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ಈ ದಾಳಿಗಳು ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳು ಪ್ರಚಾರ ಮಾಡುತ್ತಿರುವ ಮನುವಾದಿ ಸಿದ್ಧಾಂತದ ಪ್ರತಿಬಿಂಬವಾಗಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳ ಶಾಮೀಲು ಮತ್ತು ಆರೋಪಿ ಅಪರಾಧಿಗಳನ್ನು ಶಿಕ್ಷಿಸಲು ಅವರು ನಾಚಿಕೆಯಿಲ್ಲದೆ ನಿರಾಕರಿಸುವುದು ಅಪರಾಧ ಎಸಗುವವರಿಗೆ ಮತ್ತಷ್ಟು ಧೈರ್ಯ ತುಂಬುತ್ತಿದೆ, ಇದು ಅಂತಹ ದಾಳಿಗಳು ಹೆಚ್ಚಲು ಕಾರಣವಾಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶವು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ 11 ವರ್ಷಗಳ ಅವಧಿಯಲ್ಲಿ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ವಿರುದ್ಧದ ಅಪರಾಧಗಳಲ್ಲಿ ತೀವ್ರ ಏರಿಕೆಯನ್ನು ತೋರಿಸುತ್ತದೆ.

ಆರ್‌ಎಸ್‌ಎಸ್ ಶತಮಾನೋತ್ಸವ: ಆರ್‌ಎಸ್‌ಎಸ್ ಶತಮಾನೋತ್ಸವದ ಸ್ಮರಣಾರ್ಥ ಆಚರಣೆ ಅದರ ನಾಯಕರ ಸರಣಿ ಉಪನ್ಯಾಸಗಳೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭವನ್ನು ಅದರ ಕೋಮುವಾದಿ ಮತ್ತು ವಿಭಜಕ ಸಿದ್ಧಾಂತವನ್ನು ವ್ಯಾಪಕವಾಗಿ ಹರಡಲು ಬಳಸಲಾಗುತ್ತಿದೆ. ಮಾರ್ಕ್ಸ್ ವಾದದ ಬಗ್ಗೆ ಸಂಘದ ದ್ವೇಷವನ್ನು ಅದರ ನಾಯಕರು ಬಹಳಷ್ಟು ಪ್ರಮಾಣದಲ್ಲಿ ಅದರ ನಾಯಕರು ಸ್ಪಷ್ಟಪಡಿಸುತ್ತಿರೆ, ಕೇರಳದ ಬಗ್ಗೆ ಕೆಲವು ಅವಹೇಳನಕಾರಿ ಟಿಪ್ಪಣಿಗಳನ್ನು ಮಾಡಿದ್ದಾರೆ, ಅದನ್ನು ‘ಕ್ಷೋಭೆಗ್ರಸ್ತ ರಾಜ್ಯ’ ಎಂದು ಕರೆದಿದ್ದಾರೆ. ‘ಹಿಂದೂರಾಷ್ಟ್ರ’ ಸ್ಥಾಪನೆಯ ತನ್ನ ಉದ್ದೇಶವನ್ನು ಈಡೇರಿಸಲು ಆರ್‌ಎಸ್‌ಎಸ್ ಪ್ರಭುತ್ವದ ವಿವಿಧ ಆನಿಕೆಗಳ ಮೇಲೆ ತನ್ನ ನಿಯಂತ್ರಣವನ್ನು ಬಳಸುತ್ತಿದೆ.

ಅರ್ಥವ್ಯವಸ್ಥೆ: ಇತ್ತೀಚೆಗೆ ಬಿಡುಗಡೆಯಾದ ದತ್ತಾಂಶವು ಕೇಂದ್ರ ಸರ್ಕಾರ ಮಾಡಿದ ದಾವೆಗಳಿಗೆ ವ್ಯತಿರಿಕ್ತವಾಗಿ, ನಮ್ಮ ಅರ್ಥವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಸೂಚಿಸುತ್ತದೆ. ನಿರುದ್ಯೋಗ, ಉದ್ಯೋಗಾವಕಾಶಗಳ ಕೊರತೆ, ವೇತನ ಸ್ಥಗಿತತೆ ಇವೆಲ್ಲವೂ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿವೆ. ಅರ್ಥವ್ಯವಸ್ಥೆಯು ಎದುರಿಸುತ್ತಿರುವ ಸಂರಚನಾ ಪ್ರಶ್ನೆಗಳನ್ನು ಎದುರಿಸುವ ಬದಲು, ಸರ್ಕಾರವು ಯುಎಸ್‍ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ‘ಮುಕ್ಯ ವ್ಯಾಪಾರ ಒಪ್ಪಂದ’(ಎಫ್‌ಟಿಎ)ಗಳಿಗೆ ಸಹಿ ಹಾಕಿ ಅರ್ಥವ್ಯವಸ್ಥೆಯನ್ನು ವಿದೇಶಿ ಬಂಡವಾಳಕ್ಕೆ ತೆರೆಯುವ ಮೂಲಕ ಮತ್ತು ಕೆಲವು ತಾತ್ಕಾಲಿಕ ಹಣಕಾಸಿನ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಬಿಕ್ಕಟ್ಟನ್ನು ಹೇಗಾದರೂ ದಾಟಲು ಪ್ರಯತ್ನಿಸುತ್ತಿದೆ.

ಅಮೆರಿಕ ವಿಧಿಸಿದ ಸುಂಕದರಗಳ ಪರಿಣಾಮವಾಗಿ, ಭಾರತದ ರಫ್ತು ಶೇಕಡಾ 37.5 ರಷ್ಟು ಕುಸಿದಿದೆ, ಇದು ಹಲವು ವರ್ಷಗಳಲ್ಲಿನ ಅತ್ಯಂತ ತೀಕ್ಷ್ಣವಾದ ಅಲ್ಪಾವಧಿಯ ಕುಸಿತಗಳಲ್ಲಿ ಒಂದಾಗಿದೆ. ಸರ್ಕಾರದ ತುರ್ತು ಮಧ್ಯಪ್ರವೇಶವಿಲ್ಲದೆ, ಭಾರತವು ಹಿಂದೆ ಬಲವಾದ ಸ್ಥಾನವನ್ನು ಹೊಂದಿದ್ದ ಕ್ಷೇತ್ರಗಳಲ್ಲಿ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವ ಅಪಾಯವಿದೆ.

ಅಮೆರಿಕ ಜೊತೆ ವ್ಯಾಪಾರ ವ್ಯವಹಾರ: ವಿವಿಧ ಕ್ಷೇತ್ರಗಳಲ್ಲಿ ಯುಎಸ್ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆ ಪ್ರವೇಶವನ್ನು ನೀಡುವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಭಾರತ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಭಾರತವು ಹೆಚ್ಚಿನ ಕೈಗಾರಿಕಾ ಸರಕುಗಳ ಮೇಲಿನ ಸುಂಕಗಳನ್ನು ತೆಗೆದುಹಾಕಬೇಕು, ಕೃಷಿ ಮತ್ತು ಡೈರಿ ವಲಯಗಳನ್ನು ತೆರೆಯಬೇಕು (ಇದರಲ್ಲಿ ತಳೀಯವಾಗಿ ಮಾರ್ಪಡಿಸಿದ ಜೋಳ ಮತ್ತು ಸೋಯಾಬೀನ್‌ಗಳಿಗೆ ಅವಕಾಶವೂ ಸೇರಿದೆ), ಗಡಿಯಾಚೆ-ಈಚೆ ದತ್ತಾಂಶಗಳ ಅನಿರ್ಬಂಧಿತ ಹರಿವು, ಉದಾರಗೊಳಿಸಿದ ಇ-ವಾಣಿಜ್ಯ ಮತ್ತು ಬೌದ್ಧಿಕ ಆಸ್ತಿ (ಐಪಿ) ನಿಯಮಗಳು ಮತ್ತು ಯುಎಸ್ ತೈಲ, ದ್ರವೀಕೃತ ಸಾರಜನಕ ಅನಿಲ(ಎಲ್‍ಎನ್‍ಜಿ)ವನ್ನು ಮತ್ತು ರಕ್ಷಣಾ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಭರವಸೆ ಇತ್ಯಾದಿಗಳನ್ನು ಅಮೆರಿಕ ಬಯಸುತ್ತದೆ. ಸರ್ಕಾರವು ಯುಎಸ್ ಒತ್ತಡಕ್ಕೆ ಮಣಿಯುತ್ತಿದೆ ಮತ್ತು ನಮ್ಮ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ವರದಿಗಳು ಸೂಚಿಸುತ್ತವೆ.

ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಯ ಚೌಕಟ್ಟು: ಭಾರತ-ಯುಎಸ್ 10-ವರ್ಷಗಳ ರಕ್ಷಣಾ ಸಹಕಾರ ಚೌಕಟ್ಟು, ಯುಎಸ್ ಸಾಮ್ರಾಜ್ಯಶಾಹಿ ಉದ್ದೇಶಗಳೊಂದಿಗೆ ಭಾರತವನ್ನ ಸಾಮರಿಕವಾಗಿ ಸಮಗ್ರೀಕರಿಸುವುದನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಒಪ್ಪಂದವು ಕೇವಲ ಶಸ್ತ್ರಾಸ್ತ್ರ ಮಾರಾಟವನ್ನೂ ಮೀರಿ ಪೂರ್ಣ ಪ್ರಮಾಣದಲ್ಲಿ ಮಿಲಿಟರಿ ಸಹ-ಕಾರ್ಯದತ್ತ ಚಲಿಸಲು ಸಾಧ್ಯವಾಗುವಂತೆ ಎಲ್ಲಾ ಭೂಮಿ, ವಾಯು, ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್ ರಂಗಗಳಲ್ಲಿ ಆಳವಾದ ಸಹಕಾರದ ಗುರಿಯನ್ನಿಟ್ಟುಕೊಂಡಿದೆ, ಇದರ ನಿಬಂಧನೆಗಳು ಮೂಲಭೂತವಾಗಿ ಭಾರತದ ಸಾಮರಿಕ ಸ್ವಾಯತ್ತತೆಯನ್ನೇ ತಟ್ಟುತ್ತವೆ, ಭಾರತದ ಮಿಲಿಟರಿ ಮತ್ತು ವಿದೇಶಾಂಗ ನೀತಿಯನ್ನು ಯುಎಸ್‌ನ ಆದೇಶಗಳಿಗೆ ಅಧೀನಗೊಳಿಸುತ್ತದೆ. ಈ ಚೌಕಟ್ಟು ತಾಂತ್ರಿಕ ಅವಲಂಬನೆಯನ್ನು ಆಳಗೊಳಿಸುತ್ತದೆ ಮತ್ತು ಭಾರತದ ರಕ್ಷಣಾ ಕೈಗಾರಿಕಾ ನೆಲೆಯನ್ನು ಯುಎಸ್ ಏಕಸ್ವಾಮ್ಯಗಳ ಹಿತಾಸಕ್ತಿಗಳಿಗೆ ಅಧೀನಗೊಳಿಸುತ್ತದೆ ಮತ್ತು ಇನ್ನೊಂದೆಡೆಯಲ್ಲಿ ಪ್ರಾದೇಶಿಕ ಮುಖಾಮುಖಿಯ ಅಪಾಯವನ್ನು ಕೂಡ ಹೆಚ್ಚಿಸುತ್ತದೆ ಈ ಒಪ್ಪಂದದ ಉದ್ದೇಶ ಚೀನಾವನ್ನು ತಡೆಗಟ್ಟುವುದು ಮತ್ತು ಭಾರತವನ್ನು ಅಮೆರಿಕ ನೇತೃತ್ವದ ಮಿಲಿಟರಿ ರಚನೆಯೊಳಗೆ ಔಪಚಾರಿಕವಾಗಿ ಬದ್ಧಗೊಳಿಸುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ ನಮ್ಮ ಹಿತಾಸಕ್ತಿಗಳಿಗೆ ಹಾನಿಕಾರಕವೆಂದು ಸಾಬೀತಾಗುತ್ತಿರುವ ಅಮೆರಿಕದ ಅಪ್ಪುಗೆಗೆ ನಮ್ಮ ದೇಶವನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತಿರುವುದನ್ನು ಪೊಲಿಟ್ ಬ್ಯೂರೋ ಖಂಡಿಸುತ್ತದೆ.

ಅಮೆರಿಕದ ಆಕ್ರಮಣಕಾರಿ ನಡೆಗಳು: ವೆನೆಜುವೆಲಾದ ಮೇಲೆ ಮಿಲಿಟರಿ ದಾಳಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಆಪರೇಷನ್ ಸದರ್ನ್ ಸ್ಪಿಯರ್ ಮಾಡಿಕೊಂಡಿರುವುದಾಗಿ ಯುಎಸ್ ಪ್ರಕಟಿಸಿದೆ. ಕೆರಿಬಿಯನ್ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ದೋಣಿಗಳ ಮೇಲೆ ಸುಮಾರು 80 ಜನರು ಸಾವನ್ನಪ್ಪಿದ್ದಾರೆ, ಅವರು ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡಲಾಗಿದೆ. ನೌಕಾ ವಾಹಕ ಗುಂಪುಗಳಿಂದ ಬೆಂಬಲಿತವಾದ 10,000 ಕ್ಕೂ ಹೆಚ್ಚು ಯುಎಸ್ ಮಿಲಿಟರಿ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ಸಜ್ಜುಗೊಳಿಸಲಾಗಿದೆ. ಯುಎಸ್ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳಿಗೆ ತನ್ನ ದೃಢ ವಿರೋಧಕ್ಕಾಗಿ ವೆನೆಜುವೆಲಾವನ್ನು ಗುರಿಯಾಗಿಸುವ ತನ್ನ ದೃಢನಿರ್ಧಾರವನ್ನು ಯುಎಸ್ ಕ್ರಮಗಳು ಬಿಂಬಿಸುತ್ತವೆ. ಲ್ಯಾಟಿನ್ ಅಮೆರಿಕಾದಾದ್ಯಂತ ಎಲ್ಲಾ ಎಡ ಮತ್ತು ಪ್ರಗತಿಪರ ಸರ್ಕಾರಗಳನ್ನು ಕೆಡವಲು ಅಮೆರಿಕ ಉದ್ದೇಶಿಸಿರುವಂತೆ ಕಾಣುತ್ತದೆ. ವೆನೆಜುವೆಲಾ ಸರ್ಕಾರವನ್ನು ಬುಡಮೇಲು ಮಾಡುವುದನ್ನು ಸಮಾಜವಾದಿ ಕ್ಯೂಬಾವನ್ನು ಏಕಾಂಗಿಯಾಗಿಸುವ ಮತ್ತು ಅಂತಿಮವಾಗಿ ಅದರ ಮೇಲೆ ದಾಳಿ ಮಾಡುವ ಕಡೆಗೆ ಒಂದು ನಿರ್ಣಾಯಕ ಹೆಜ್ಜೆಯೆಂದು ಅಮೆರಿಕ ಕಾಣುತ್ತದೆ.

ವೆನೆಜುವೆಲಾವನ್ನು ಗುರಿಯಾಗಿಸಿಕೊಂಡಿರುವ ಅಮೆರಿಕದ ಆಕ್ರಮಣಕಾರಿ ನಡೆಗಳನ್ನು ಪೊಲಿಟ್ ಬ್ಯೂರೋ ಖಂಡಿಸುತ್ತದೆ ಮತ್ತು ತಮ್ಮ ದೇಶವನ್ನು ಅಸ್ಥಿರಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಪ್ರತಿರೋಧಿಸುತ್ತಿರುವ ವೆನೆಜುವೆಲಾದ ಜನರಿಗೆ ತನ್ನ ಸೌಹಾರ್ದವನ್ನು ವ್ಯಕ್ತಪಡಿಸುತ್ತದೆ.

ಕದನ ವಿರಾಮ ಮತ್ತು ಗಾಜಾ ಶಾಂತಿ ಯೋಜನೆ: ಗಾಜಾದಲ್ಲಿ ಕದನ ವಿರಾಮ ಮತ್ತು ಇಸ್ರೇಲಿ ಬಾಂಬ್ ದಾಳಿ ಮತ್ತು ವೈಷಮ್ಯಗಳ ಅಂತ್ಯವು ಗಾಜಾದ ದೀರ್ಘಕಾಲದಿಂದ ಬಳಲುತ್ತಿರುವ ಜನರಿಗೆ ಸ್ವಲ್ಪ ಸಮಾಧಾನ ತಂದಿದೆ. ಪ್ಯಾಲೆಸ್ಟೈನ್ ಜೊತೆ ಸೌಹಾರ್ದದ ಬೆಳೆಯುತ್ತಿರುವ ಜನಪ್ರಿಯ ಚಳುವಳಿಯಿಂದ ಉಂಟಾದ ಅಗಾಧ ಒತ್ತಡದಿಂದಾಗಿ ಅಮೆರಿಕವು ಇಸ್ರೇಲ್ ಮೇಲೆ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಬೇಕಾಯಿತು. ಆದಾಗ್ಯೂ, ಝಿಯೋನಿಸ್ಟ್ ಇಸ್ರೇಲ್ ಕದನ ವಿರಾಮ ಉಲ್ಲಂಘನೆ ಮತ್ತು ವಸಾಹತುಗಾರರಿಂದ ಹಿಂಸಾಚಾರ ಮುಂದುವರೆದಿದೆ. ಭಾರತ ಸರ್ಕಾರವು ಇಸ್ರೇಲ್ ಬಗೆಗಿನ ತನ್ನ ನೀತಿಯನ್ನು ಪರಾಮರ್ಶಿಸಬೇಕು, ತನ್ನ ಎಲ್ಲಾ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಕಡಿಯಬೇಕು ಮತ್ತು ಪ್ಯಾಲೆಸ್ಟೈನ್ ಜೊತೆ ಸೌಹಾರ್ದದಿಂದ ನಿಲ್ಲಬೇಕು.

ಇದನ್ನೂ ನೋಡಿ : ಚುನಾವಣಾ ಆಯೋಗದ ‘ಸರ್’ಗೆ(sir) ಯಾಕೆ ‘ನೋ ಸರ್’ ಅಂತ ಹೇಳಬೇಕು?Janashakthi Media

Donate Janashakthi Media

Leave a Reply

Your email address will not be published. Required fields are marked *