ನವದೆಹಲಿ: ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಇಂದು ಸಂಜೆ ಆನ್ಲೈನ್ ಸುದ್ದಿತಾಣ “ದಿ ವೈರ್”ನ ಇಬ್ಬರು ಸಂಪಾದಕರ ಮನೆಗಳನ್ನು ಶೋಧಿಸಿದ್ದಾರೆ.
ಆನ್ಲೈನ್ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ ಕೆ ವೇಣು, ಸಿದ್ಧಾರ್ಥ್ ಭಾಟಿಯಾ, ಉಪಸಂಪಾದಕರಾದ ಜಾಹ್ನವಿ ಸೇನ್, ಉತ್ಪನ್ನ ಮತ್ತು ಉದ್ಯಮ ಮುಖ್ಯಸ್ಥ ಮಿಥುನ್ ಕಿಡಂಬಿ ಅವರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿ ಮುತ್ತಿಗೆಹಾಕಲಾಗಿದೆ ಈ ಸಂದರ್ಭದಲ್ಲಿ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ.
ದೆಹಲಿಯ ಭಗತ್ ಸಿಂಗ್ ಮಾರ್ಕೆಟ್ನಲ್ಲಿರುವ ‘ದಿ ವೈರ್’ನ ಕಚೇರಿಯನ್ನೂ ಶೋಧಿಸಲಾಗಿದೆ. ನಮ್ಮ ವಕೀಲರೊಬ್ಬರನ್ನು ಆ ಸ್ಥಳದಲ್ಲಿದ್ದ ಅಧಿಕಾರಿಗಳು ಹೊರಗೆ ತಳ್ಳಿದ್ದಾರೆ. ನಮ್ಮ ಅಕೌಂಟ್ ಸಿಬ್ಬಂದಿ ಬಳಸುವ ಎರಡು ಕಂಪ್ಯೂಟರ್ಗಳಿಂದ ಹಾರ್ಡ್ ಡಿಸ್ಕ್ಗಳನ್ನೂ ಕ್ರೈಂ ಬ್ರಾಂಚ್ನವರು ವಶಕ್ಕೆ ಪಡೆದಿದ್ದಾರೆ ಎಂದಿದೆ.
ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಂಚನೆ, ಫೋರ್ಜರಿ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸಿದ ಎರಡು ದಿನಗಳ ನಂತರ ಈ ದಾಳಿಗಳು ನಡೆದಿವೆ.
ಡಿಜಿಟಲ್ ಸುದ್ದಿ ವೇದಿಕೆಗಳ ಸಂಸ್ಥೆ ಖಂಡನೆ : 11 ಡಿಜಿಟಲ್ ನ್ಯೂಸ್ ಸಂಸ್ಥೆಗಳ ಸಂಘಟನೆಯಾದ ‘ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಷನ್’ ದಾಳಿಯನ್ನು ಖಂಡಿಸಿದೆ. ಆಡಳಿತಾರೂಢ ಬಿಜೆಪಿಯ ವಕ್ತಾರರು ಸಲ್ಲಿಸಿದ ದೂರಿನ ಆಧಾರದ ಮೇಲೆ ತಕ್ಷಣದ ಮತ್ತು ಅನಿಯಂತ್ರಿತ ದಾಳಿ ನಡೆಸಿರುವುದು ದುರುದ್ದೇಶಪೂರಿತವಾಗಿದೆ ಎಂದಿದೆ.
ಭಾರತದಲ್ಲಿ ಪತ್ರಿಕೋದ್ಯಮದ ವಿರುದ್ಧ ಭೀತಿಯನ್ನು ಸೃಷ್ಟಿಸುವುದು ಈ ದಾಳಿಯ ಉದ್ದೇಶವಾಗಿದೆ ಎಂದು ಡಿಜಿಪಬ್ ಹೇಳಿಕೆಯಲ್ಲಿ ತಿಳಿಸಿದೆ.