ಧಾರವಾಡ : ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ರೋಗ ವಿಜ್ಞಾನ ಸಂಸ್ಥೆ ( DIMHANS) ಈಗ ಮತ್ತೊಂದು ಸಾಧನೆ ಮಾಡಿದೆ. ಕೋವಿಡ್ ನಂತರದ ದಿನಗಳಲ್ಲಿ ದೇಶದಲ್ಲಿ ಆರಂಭಿಸಲಾಗಿರುವ ಟೆಲಿ ಮಾನಸ್ ಯೋಜನೆಯಡಿ ಡಿಮ್ಹಾನ್ಸ್ ದಾಖಲೆ ಸಂಖ್ಯೆಯ ಜನರಿಗೆ ಮಾನಸಿಕ ಸಲಹೆ, ಚಿಕಿತ್ಸೆ ನೀಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆ ಮೂಲಕ ಅನೇಕರ ಆತ್ಮಹತ್ಯೆಗಳನ್ನು ತಡೆದಿದೆ. ಎಂಬ ಮಾಹಿತಿ ತಿಳಿದು ಬಂದಿದೆ.
ಟೆಲಿ ಮಾನಸ್‌ಗೆ ಯಾರೆಲ್ಲ ಕರೆ ಮಾಡಬಹುದು?
ವ್ಯಥೆಗೆ ಒಳಪಟ್ಟವರು, ಪರೀಕ್ಷಾ ಒತ್ತಡಕ್ಕೊಳಗಾದವರು, ಕೌಟುಂಬಿಕ ಸಮಸ್ಯೆಗೊಳಗಾದವರು, ಆತ್ಮಹತ್ಯೆ ಆಲೋಚನೆಗಳು, ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು, ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು, ಜ್ಞಾಪಕಶಕ್ತಿ ತೊಂದರೆಯುಳ್ಳವರು, ಆರ್ಥಿಕ ಒತ್ತಡದಲ್ಲಿರುವವರು ಹಾಗೂ ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕರೆ ಮಾಡಿ, ಪರಿಹಾರವನ್ನು ಕಂಡುಕೊಳ್ಳಬಹುದು.

ಉಚಿತ ಸಹಾಯವಾಣಿ ಸಂಖ್ಯೆ 14416 ಅಥವಾ 18008914416ಕ್ಕೆ ಫೋನ್ ಮಾಡಿದರೆ ದಿನದ 24 ಗಂಟೆಯೂ ಪಾಳಿ ಪ್ರಕಾರ ಕಾರ್ಯನಿರ್ವಹಿಸುತ್ತಿರೋ 20 ಜನ ಸಿಬ್ಬಂದಿ, ಆಪ್ತ ಸಮಾಲೋಚಕರು ಕರೆ ಸ್ವೀಕರಿಸುತ್ತಾರೆ. ಕರೆ ಮಾಡುವಾಗ ಇನ್ನೊಂದು ಕರೆ ಬಂದರೂ ವೇಟಿಂಗ್ ಮೂಲಕ ನಂತರದಲ್ಲಿ ಅವರನ್ನು ಸಂಪರ್ಕಿಸುವ ವ್ಯವಸ್ಥೆಯೂ ಇದೆ.
ಡಿಮ್ಹಾನ್ಸ್ ನಿರ್ದೇಶಕರು ಹೇಳುವುದೇನು?
ಸಂಸ್ಥೆಯ ಸಾಧನೆ ಬಗ್ಗೆ ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣ ಕುಮಾರ್ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಕಳೆದ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯುವಕನೋರ್ವ ಧಾರವಾಡದ ರೈಲ್ವೆ ನಿಲ್ದಾಣದ ಬಳಿ ಹೋಗಿದ್ದ. ಅಲ್ಲಿ ಟೆಲಿ ಮಾನಸ್ ಪೋಸ್ಟರ್ ನೋಡಿ, 14416 ನಂಬರ್ ಗೆ ಫೋನ್ ಮಾಡಿದ. ಕೂಡಲೇ ಆತನಿಗೆ ಕೌನ್ಸೆಲಿಂಗ್ ಮಾಡಲಾಯಿತು. ಬಳಿಕ ಆತನ ಮನವೊಲಿಸಿ ಡಿಮ್ಹಾನ್ಸ್ಗೆ ಕರೆಯಿಸಿಕೊಳ್ಳಲಾಯಿತು. ಬಳಿಕ ಆತನಿಗೆ ಆಪ್ತ ಸಮಾಲೋಚನೆ ಮಾಡಿದ ಬಳಿಕ ಆತ ಗುಣಮುಖನಾದ. ಇದೀಗ ಆ ಯುವಕ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇದರರ್ಥ, ಸಮಸ್ಯೆಗಳು ಬಂದ ಕೂಡಲೇ ಆತ್ಮಹತ್ಯೆಯೊಂದೇ ದಾರಿಯಲ್ಲ. ಬದಲಿಗೆ ಆ ಸಮಸ್ಯೆಗಳನ್ನು ಮೀರಿ ನಿಂತು ಬದುಕನ್ನು ಗೆಲ್ಲಬೇಕು. ಟೆಲಿ ಮಾನಸ್ ಇಂಥ ಆತ್ಮಸ್ಥೈರ್ಯವನ್ನು ಜನರಲ್ಲಿ ತುಂಬುವಲ್ಲಿ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದರು.
ಟೆಲಿ ಮಾನಸ್ ಕೇಂದ್ರದ ನೋಡಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ ಮಾತನಾಡಿ, ಈ ಟೆಲಿ ಮಾನಸ್ನ ವಿಶೇಷ ಎಂದರೆ ಯಾವುದೇ ಕಾರಣಕ್ಕೂ ಯಾರ ಐಡೆಂಟಿಟಿಯನ್ನು ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಜನರು ಎಲ್ಲೇ ಇದ್ದರೂ ಮೊಬೈಲ್ ಮೂಲಕ ತಮ್ಮ ಸಮಸ್ಯೆಯನ್ನು ನಮ್ಮ ಸಿಬ್ಬಂದಿಗೆ ಹೇಳಿಕೊಳ್ಳಬಹುದು. ಅಲ್ಲದೇ ಅವರ ಮೊಬೈಲ್ ಸಂಖ್ಯೆ ಕೂಡ ಡಿ ಕೋಡ್ ಆಗಿರುತ್ತದೆ. ಹೀಗಾಗಿ ಯಾವ ರೋಗಿಯ ಗುರುತನ್ನು ಕೂಡ ಪತ್ತೆ ಹಚ್ಚಲು ಸಾಧ್ಯವೇ ಆಗೋದಿಲ್ಲ. ಇಲ್ಲಿ ರೋಗಿಗಳು ಫೋನ್ ಮಾಡಿದಾಗ ಮೂರು ಹಂತಗಳಲ್ಲಿ ಅವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಅವರ ಮಾನಸಿಕ ಸಮಸ್ಯೆ ತೀವ್ರವಾಗಿದೆ ಎಂದು ಅನ್ನಿಸಿದರೆ ಅವರ ಮನವೊಲಿಸಿ, ಡಿಮ್ಹಾನ್ಸ್ ಅಥವಾ ಆ ವ್ಯಕ್ತಿಯ ಸಮೀಪದ ಮಾನಸಿಕ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಗುತ್ತದೆ. ಆ ಮೂಲಕ ಆತನ ಸಮಸ್ಯೆಯನ್ನು ಪರಿಹರಿಸೋ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
