ಚುನಾವಣಾ ಆಯೋಗದ ಮೇಲೆ ಹತೋಟಿಗೆ ಮೋದಿ ಸರಕಾರದ ನಡೆ-ಯೆಚುರಿ ಟೀಕೆ

“ಪ್ರಭುತ್ವದ ಸ್ವತಂತ್ರ ಅಂಗಗಳನ್ನು ನಿಯಂತ್ರಿಸುವ ಮೋದಿ ಸರ್ಕಾರದ ಧಾವಂತ ಅಸಹ್ಯಕರ”

 ದಿಲ್ಲಿ ಸರ್ಕಾರದ ಅಧಿಕಾರಗಳನ್ನು ಕುರಿತು ಸುಪ್ರೀಂ ಕೋರ್ಟಿನ ತೀರ್ಪನ್ನು ಅಲ್ಲಗಳೆದ ನಂತರ  ಮೋದಿ ಸರ್ಕಾರ ಇನ್ನೊಂದು  ಸಂವಿಧಾನ ಪೀಠದ ತೀರ್ಪನ್ನು ದುರ್ಬಲಗೊಳಿಸಿದೆ, ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ಪ್ರಧಾನಿ ಆರಿಸಿದ ಸಂಪುಟ ಮಂತ್ರಿಯನ್ನು ಕೂರಿಸಿದೆ. ಮೋದಿ ಸರಕಾರ ನ್ಯಾಯಾಂಗವನ್ನು ಅಡಿಯಾಳುವಾಗಿ ಮಾಡುವ ಇಸ್ರೇಲಿನ ಅತಿ ಬಲಪಂಥೀಯ ಸರಕಾರದ  ಪ್ರಯತ್ನಗಳನ್ನು ನಕಲು ಮಾಡುತ್ತಿರುವಂತೆ ಕಾಣುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಟೀಕಿಸಿದ್ದಾರೆ.

ಸುಪ್ರೀಂ ಕೋರ್ಟಿನ ಒಂದು ಸಂವಿಧಾನ ಪೀಠ ತನ್ನ ತೀರ್ಪಿನಲ್ಲಿ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರುಗಳನ್ನು ಪ್ರಧಾನ ಮಂತ್ರಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ನೇಮಿಸಬೇಕು ಎಂದು ಹೇಳಿತ್ತು. ಆದರೆ ಮೋದಿ ಸರ್ಕಾರ ಈಗ ಮಂಡಿಸಿರುವ ಮಸೂದೆಯಲ್ಲಿ, ಭಾರತದ ಮುಖ್ಯ ನ್ಯಾಯಾಧೀಶರ ಜಾಗದಲ್ಲಿ “ಪ್ರಧಾನ ಮಂತ್ರಿ ನಾಮನಿರ್ದೇಶನ ಮಾಡುವ ಒಬ್ಬ ಕೇಂದ್ರ ಸಂಪುಟ ಮಂತ್ರಿ” ಎಂದು ಸೇರಿಸಲಾಗಿದೆ. ಇದು ಕಾರ್ಯಾಂಗದ ಬಹುಮತದ ಅಭಿಪ್ರಾಯವೇ ಮೇಲುಗೈ ಸಾಧಿಸಬೇಕೆಂಬುದನ್ನು ಖಚಿತಪಡಿಸುತ್ತದೆ ಎಂದು ಸರಕಾರದ ಈ ನಡೆಯ ಬಗ್ಗೆ ಟಿಪ್ಪಣಿ  ಮಾಡುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ. ಇದು ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಸ್ವಾತಂತ್ರ‍್ಯವನ್ನು ಧ್ವಂಸಗೊಳಿಸುತ್ತದೆ. ಭಾರತದ ಸಂವಿಧಾನವು “ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು” ನಡೆಸಲು ಕಾರ್ಯಾಂಗದ ಒತ್ತಡಗಳು ಮತ್ತು ಪ್ರಭಾವದಿಂದ ಸ್ವತಂತ್ರವಾದ ನಿಷ್ಪಕ್ಷಪಾತ ಚುನಾವಣಾ ಆಯೋಗ ಇರಬೇಕು ಎಂದು ಆದೇಶಿಸಿದೆ ಎಂಬ ಸಂಗತಿಯತ್ತ ಅದು ಗಮನ ಸೆಳೆದಿದೆ.

ಪ್ರಭುತ್ವದ ಸ್ವತಂತ್ರ ಅಂಗಗಳನ್ನು ನಿಯಂತ್ರಿಸುವ ಮೋದಿ ಸರ್ಕಾರದ ಧಾವಂತ ಅಸಹ್ಯಕರವಾಗಿದೆ. ಸಂಸತ್ತಿನಲ್ಲಿ ಮಂಡಿಸಲಾದ ಈ ಮಸೂದೆಯನ್ನು ಸಿಪಿಐ(ಎಂ) ಬಲವಾಗಿ ವಿರೋಧಿಸುತ್ತದೆ ಎಂದಿರುವ ಪೊಲಿಟ್‌ಬ್ಯುರೊ ಭಾರತದ ಸಂವಿಧಾನವನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಬದ್ಧವಾಗಿರುವ ಎಲ್ಲಾ ಪಕ್ಷಗಳು ಈ ಮಸೂದೆಯನ್ನು ಸೋಲಿಸಲು ಮುಂದೆ ಬರಬೇಕೆಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *