ಬೆಂಗಳೂರು : ಕಳೆದ ವಾರವಷ್ಟೇ ತೆಲುಗು ನಿರ್ದೇಶಕ ಗೀತಾ ಕೃಷ್ಣ ಕನ್ನಡ ಚಿತ್ರರಂಗದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗ ಹಾಗೂ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇದು ಕನ್ನಡದ ನಟರು, ಹಾಗೂ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ನಿರ್ದೇಶಕ ಗೀತಾಕೃಷ್ಣ ಕೇವಲ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಲ್ಲದೆ, ತಮಿಳು ಚಿತ್ರರಂಗದ ಬಗ್ಗೆಯೂ ಅವಾಚ್ಯ ಪದಗಳನ್ನು ಬಳಕೆ ಮಾತನಾಡಿದ್ದರು. ಇದು ಎರಡು ಚಿತ್ರರಂಗದ ಕೋಪಕ್ಕೆ ಕಾರಣವಾಗಿತ್ತು.
ಸದ್ಯ ಇದೇ ಹೇಳಿಕೆ ಬಗ್ಗೆ ನಟ ಶಿವರಾಜ್ ಕುಮಾರ್ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಯಾರದೋ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಕನ್ನಡ ಸಿನಿಮಾ ರಂಗ ಏನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಯಾರೋ ಏನೋ ಅಂದರು ಅಂತ ಪ್ರತಿಕ್ರಿಯೆ ಮಾಡಿದರೆ. ಅದರಿಂದ ಅವರಿಗೆ ಲಾಭ, ಹಾಗಾಗಿ ಅಂತಹವರನ್ನು ದೂರದಲ್ಲೇ ಇಡಬೇಕು,” ಎಂದಿದ್ದಾರೆ.
ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ನ್ಯೂಸ್ 18 ಕನ್ನಡ ಜೊತೆ ಮಾತನಾಡಿ ಗೀತಕೃಷ್ಣ ಗೆ ಟಾಂಗ್ ಕೊಟ್ಟಿದ್ದಾರೆ. ಅವರ ಹೇಳಿಕೆ ಕುರಿತು ಮಾತನಾಡಿದ ಕೃತಿಕಾ, ‘ಗೀತಕೃಷ್ಣ ಅವ್ರೆ ನೀವು ತಿನ್ನೋ ಅನ್ನ ಕೂಡ ಒಂದು ಇಂಡಸ್ಟ್ರಿಯದೆ. ಕಲೆ ಎನ್ನುವುದು ಕನ್ನಡ, ತೆಲುಗು, ತಮಿಳು ಸೇರಿ ಯಾವುದೇ ಭಾಷೆದೆ ಇರಲಿ ಅದು ಕಲೆ ಕಲೆನೆ ಆಗಿರುತ್ತದೆ. ಕಲೆಗೆ, ಕಲಾವಿದರಿಗೆ, ಕಲಾವಿದರಿಗಾಗಿ ದುಡಿಯುವವರಿಗೆ ಬೆಲೆ ಕೊಡಬೇಕು. ಕನ್ನಡ ಇಂಡಸ್ಟ್ರಿ ಕೀಳು, ಕಚಡಾ ಅಂತ ಯಾರು ಮಾತನಾಡಬಾರದು. ಅದು ನೀವಾಗಿರಲಿ ಅಥವಾ ನಿಮಗಿಂತ ದೊಡ್ಡವರಾಗಲಿ ನಮ್ಮ ಚಿತ್ರರಂಗದ ಬಗ್ಗೆ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರು ಈ ಗೀತಕೃಷ್ಣ?: ಗೀತ ಕೃಷ್ಣ ತೆಲುಗಿನ ಸಿನಿಮಾ ನಿರ್ದೇಶಕ. ‘ಸಂಕೀರ್ತನ’, ‘ಕೋಕಿಲ’, ‘ಟೈಮ್’, ‘ಕಾಫಿ ಬಾರ್’ ಮುಂತಾದ ಕೆಲ ಸಿನಿಮಾ ಸೇರಿದಂತೆ 8 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಾಗಾರ್ಜುನ, ರಮ್ಯಾಕೃಷ್ಣ ಅಭಿನಯಿಸಿದ್ದ ಸಂಕೀರ್ತನ ಇವರ ನಿರ್ದೇಶನದ ಚೊಚ್ಚಲ ಸಿನಿಮಾ. ಇದಕ್ಕೆ ನಿರ್ದೇಶಕರ ಅತ್ಯುತ್ತಮ ಮೊದಲ ಚಲನಚಿತ್ರಕ್ಕಾಗಿ ಕೊಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದರು.