(ನ್ಯೂ ಯಾರ್ಕ್ ಟೈಂಸ್‌ನಲ್ಲಿ ಪ್ರಕಟವಾದ ವರದಿ)
- ಲೀ ರಿಲೆ, ಇವಾ ರಾಫೆಲ್ ಮತ್ತು ರಾಬರ್ಟ್ ಸಿಂಡರ್
(ಅನುವಾದ : ಶೈಲಜ ಮತ್ತು ವೇಣುಗೋಪಾಲ್)
ಕೊರೋನಾ ಮಹಾಮಾರಿಯನ್ನು ಇಡೀ ವಿಶ್ವದಾದ್ಯಂತ ಹರಡಿದವರು ಏರೋಪ್ಲೇನುಗಳಲ್ಲಿ ಮತ್ತು ಖುಷಿಗಾಗಿ ಹಡಗುಗಳಲ್ಲಿ ಪಯಣಿಸಬಲ್ಲ ಸಿರಿವಂತರು. ಆದರೆ ಇಂದು ಕೊರೋನಾ ತೀವ್ರವಾಗಿ ಕಾಡುತ್ತಿರುವುದು ಸ್ಲಂಗಳಲ್ಲಿ ಬದುಕುತ್ತಿರುವ ಜನರನ್ನು. ಅವರೆಲ್ಲಾ ಸಾಮಾಜಿಕವಾಗಿ ಅದೃಷ್ಯವಾಗಿರುವ ಮಂದಿ. ನಾವು ಅವರನ್ನು ಮರೆತೇಬಿಟ್ಟಿದ್ದೇವೆ.
ಕೊಳೇಗೇರಿಗಳಲ್ಲಿ ಸುಮಾರು ಒಂದು ಬಿಲಿಯನ್ ಜನ ವಾಸಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಪ್ರಕಾರ ಕೊಳೇಗೇರಿ ಎಂದರೆ ಶುದ್ಧ ನೀರಿನ ಪೂರೈಕೆ ಇಲ್ಲದ, ನೈರ್ಮಲ್ಯ ವ್ಯವಸ್ಥೆ ಸಮರ್ಪಕವಾಗಿಲ್ಲದ, ವಾಸಿಸಲು ಯೋಗ್ಯವಲ್ಲದ ಮನೆಗಳ ಹಾಗೂ ಸದಾ ಕಿಕ್ಕಿರಿದು ಇಡಿಕಿರಿದಿರುವ, ಸುರಕ್ಷತೆಯಿಲ್ಲದ ವಸತಿ ಪ್ರದೇಶಗಳು.
ಈ ಸೋಂಕು ಖಾಯಿಲೆಗಳು ಕೊಳೆಗೇರಿಗಳಲ್ಲಿ ಬೇಗ ಹರಡುತ್ತವೆ. ಈಗಾಗಲೇ ಭಾರತದ ಮುಂಬೈನ ಧಾರಾವಿ, ಪಾಕಿಸ್ತಾನದ ಕರಾಚಿಯ ಒರಾಂಗಿ ನಗರ, ಮತ್ತು ಮನಿಲಾದ ಪಯತಸ್‌ನಲ್ಲಿ ಕರೋನಾ ಮಾರಿ ಕಾಲಿಟ್ಟಿದೆ. ೨೦೧೪-೨೦೧೬ರಲ್ಲಿ ಪಶ್ಚಿಮ ಆಫ್ರಿಕದಲ್ಲಿ ಎಬೋಲಾ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡಿದ್ದೇ ಕೊಳೆಗೇರಿಗಳಿಂದ. ತುಂಬಾ ದಟ್ಟವಾದ ಜನಸಂಖ್ಯೆ ಇರುವ ಲೈಬೀರಿಯಾ, ಗಿನಿ ಮತ್ತು ಸೈರ್ರಾ ಲಿಯೋನಿನ ನಗರಗಳ ಕೊಳೆಗೇರಿಗಳಿಂದ ಎಬೋಲಾ ಪಶ್ಚಿಮ ಆಫ್ರಿಕಾಕ್ಕೆ ಹರಡಿದೆ.
ಮಹಾಮಾರಿ ಪಿಡುಗುಗಳ ಸಂದರ್ಭದಲ್ಲಿ ಕೊಳೆಗೇರಿವಾಸಿಗಳಿಗೆ ಶ್ವಾಸಕೋಶದ ಸೋಂಕುಗಳಾದ ಇನ್‌ಫ್ಲುಯೆನ್‌ಜ಼ಾ ಮತ್ತು ಡೆಂಗ್ಯೂ ಇವು ಬಹು ಬೇಗನೇ ಬರುತ್ತವೆ. ೨೦೧೮ರಲ್ಲಿ ದೆಹಲಿಯ ಸಂಶೋಧಕರು ಒಂದು ವರದಿಯನ್ನು ಪ್ರಕಟಿಸಿದ್ದಾರೆ. ಅವರ ಪ್ರಕಾರ ಲಸಿಕೆಯನ್ನು ವ್ಯಾಪಕವಾಗಿ ಹಾಕಿದ್ದಾಗಲೂ ಮತ್ತು ಸಾಮಾಜಿಕ ದೂರವನ್ನು (ಮನೆಯಲ್ಲಿಯೇ ಇರುವುದು, ಶಾಲೆಗಳನ್ನು ಮುಚ್ಚುವುದು ಮತ್ತು ಸೋಂಕಿತರನ್ನು ಪ್ರತ್ಯೇಕವಾಗಿ ಇಡುವುದು) ಕಾಯ್ದುಕೊಂಡಿದ್ದಾಗಲೂ ಕೊಳೆಗೇರಿಯಲ್ಲಿ ವಾಸಿಸುವ ಸಮುದಾಯಗಳಿಗೆ ಇನ್‌ಫ್ಲುಯೆನ್‌ಜ಼ಾ ಸೋಂಕು ತಗುಲುವ ಸಾಧ್ಯತೆಗಳು ತುಂಬಾ ಹೆಚ್ಚು. ಬೇರೆ ಸಮುದಾಯಗಳಿಗೆ ಹೋಲಿಸಿದರೆ ಕೊಳೆಗೇರಿಯ ನಿವಾಸಿಗಳಿಗೆ ಸೋಂಕು ಹರಡುವ ಪ್ರಮಾಣ ಶೇಕಡ ೪೪ರಷ್ಟು ಹೆಚ್ಚು.
ಕೊಳೇಗೇರಿಗಳಲ್ಲಿ ಸೋಂಕು ಬೇಗ ಹರಡುವುದಕ್ಕೆ ಅತಿಯಾದ ಜನಸಂದಣಿ ಒಂದು ಮುಖ್ಯ ಕಾರಣ. ಬೇರೆ ಪ್ರದೇಶಗಳಿಗಿಂತ ದೆಹಲಿಯ ಕೊಳೆಗೇರಿಗಳಲ್ಲಿ ಜನಸಂಖ್ಯೆಯ ಒತ್ತಡ ಶೇಕಡ ೧೦ರಿಂದ ೧೦೦ರಷ್ಟು ಹೆಚ್ಚಿಗೆ ಇದೆ. ನ್ಯೂ ಯಾರ್ಕ್ ನಗರಕ್ಕೆ ಹೋಲಿಸಿದರೆ ಶೇಕಡ ೩೦ರಷ್ಟು ಹೆಚ್ಚಿಗೆ ಇದೆ. ಜೊತೆಗೆ ಕೊಳೆಗೇರಿಗಳಲ್ಲಿ ಇರುವ ಮಕ್ಕಳಲ್ಲಿ ಅಪೌಷ್ಠಿಕತೆ ತೀವ್ರವಾಗಿದೆ ಮತ್ತು ವಯಸ್ಕರಲ್ಲಿ ತೀವ್ರಸ್ವರೂಪದ ಆರೋಗ್ಯದ ಸಮಸ್ಯೆಗಳಿವೆ. ಹಾಗಾಗಿ ಅವರಿಗೆ ಸೋಂಕು ತಗುಲುವ ಸಾಧ್ಯತೆಗಳು ಉಳಿದೆಲ್ಲರಿಗಿಂತ ಹೆಚ್ಚು.
ಅಲ್ಲಿಯ ಇನ್ನೊಂದು ಸಮಸ್ಯೆ ನೈರ್ಮಲ್ಯ ವ್ಯವಸ್ಥೆಯ ಕೊರತೆ. ಕೊಳೆಗೇರಿಗಳಲ್ಲಿ ಶುದ್ಧವಾದ ಸಾರ್ವಜನಿಕ ಶೌಚಾಲಯಗಳಿಲ್ಲ. ಆದುದರಿಂದ ಮಲದ ಮೂಲಕ ಕೊರೋನಾ ಮಹಾಮಾರಿಯ ಸೋಂಕು ಹರಡುತ್ತದೆ. ಶುದ್ಧವಾದ ನೀರಂತೂ ಅಪರೂಪ. ಅದು ಆ ಪ್ರದೇಶಗಳ ಮತ್ತೊಂದು ದೊಡ್ಡ ಸಮಸ್ಯೆ. ಈಗ ಮುನ್ನೆಚ್ಚರಿಕೆಯ ಕ್ರಮವಾಗಿ ಮನೆಯಲ್ಲಿಯೇ ಇರುವುದರಿಂದ ನೀರಿನ ಸಮಸ್ಯೆ ಇನ್ನೂ ತೀವ್ರವಾಗಿದೆ.
ಇನ್ನು ಅಲ್ಲಿಯ ಮನೆಗಳಿಗೆ ಸೂಕ್ತವಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಬಹುಪಾಲು ಮನೆಗಳಿಗೆ ಕಿಟಕಿಗಳು ಇರುವುದಿಲ್ಲ. ಸೌದೆ, ಬೆರಣಿ ಬಳಸಿ ಅಡುಗೆ ಮಾಡುವುದರಿಂದ ಉಸಿರಾಟದ ಸಮಸ್ಯೆ ಮತ್ತಷ್ಟು ಗಂಭೀರಗೊಳ್ಳಬಹುದು ಮತ್ತು ಕೊರೋನಾ ಮಹಾಮಾರಿಯ ಸೋಂಕು ತೀವ್ರವಾಗುವ ಸಾಧ್ಯತೆಗಳು ತುಂಬಾ ಹೆಚ್ಚು.
ಸರ್ಕಾರದ ಗಣ್ಯರು ಅಂಚಿಗೆ ಸರಿದು ಹೋಗುತ್ತಿರುವ ಇಂತಹ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅದೂ ಕೂಡ ಮಹಾಮಾರಿಗಳು ಕೊಳೆಗೇರಿಗಳಲ್ಲಿ ಹರಡುವುದಕ್ಕೆ ಕಾರಣ. ಖಾಯಿಲೆಗಳು ಹರಡದಿರುವಂತೆ ತಡೆಯುವಂತಹ ಯಾವುದೇ ಪ್ರಯತ್ನಗಳು ಈ ಹಿಂದೆಯೂ ನಡೆದಿಲ್ಲ. ಇನ್ನು ಕೊರೋನಾ ವೈರಾಣುವಿಗಾಗಿ ಸುಲಭವಾಗಿ ಪರೀಕ್ಷಿಸಬಹುದಾದ ಸಾಧ್ಯತೆಗಳು ಇಂತಹ ಸ್ಥಳಗಳಲ್ಲಿ ತುಂಬಾ ಕಡಿಮೆ.
ಇಂತಹ ಪ್ರದೇಶಗಳಲ್ಲಿ ಸಂಬಂಧಪಟ್ಟವರ ಮಧ್ಯಪ್ರವೇಶ ತುಂಬಾ ಅವಶ್ಯಕ. ಜಾರಿಗೊಳಿಸಬಹುದಾದ ಕ್ರಮಗಳನ್ನು ತುಂಬಾ ಜಾಗರೂಕತೆಯಿಂದ ಕೈಗೊಳ್ಳಬೇಕು. ಕೊಳಚೆ ಪ್ರದೇಶಗಳ ವಾಸ್ತವ ಸ್ಥಿತಿಯನ್ನು, ಅವರ ಅವಶ್ಯಕತೆಗಳನ್ನು ಪರಿಗಣಿಸದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಬಯಸುವುದು ಪ್ರಾಯೋಗಿಕವಲ್ಲ.
ಸ್ಲಂ ಡ್ವೆಲ್ಲರ‍್ಸ್ ಇಂಟರ್‌ನ್ಯಾಷನಲ್ ಅಂತಹ ಸಾಮುದಾಯಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಎಲ್ಲಾ ನೀತಿಗಳನ್ನು ರೂಪಿಸಬೇಕು. ಇದು ಜಗತ್ತಿನ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಕೊಳೆಗೇರಿ ನಿವಾಸಿಗಳನ್ನು ಪ್ರತಿನಿಧಿಸುವ ಸಂಸ್ಥೆ. ಜೊತೆಗೆ ಸ್ಥಳೀಯ ಸಂಸ್ಥೆಗಳನ್ನು ಇಂತಹ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳಬೇಕು. ಬ್ರೆಜ಼ಿಲ್ಲಿನ ಕೆಲವು ಕೊಳೆಗೇರಿಗಳಲ್ಲಿ ಹಲವು ಸ್ಥಳೀಯ ಸಂಘಟನೆಗಳು ಕೊಳೆಗೇರಿಗಳನ್ನು ಪ್ರವೇಶಿಸುವ ಪ್ರಮುಖ ದಾರಿಗಳಲ್ಲಿ ಕೈತೊಳೆಯುವ ಯಂತ್ರಗಳಿರುವ ಸ್ಟಾಲುಗಳನ್ನು ಹಾಕಿವೆ.
ಯಾವುದೇ ಪಿಡುಗಾಗಲೀ ಒಮ್ಮೆ ಕೊಳೆಗೇರಿಯಲ್ಲಿ ಕಾಲಿಟ್ಟಿತೆಂದರೆ ಅದು ಮತಷ್ಟು ಹರಡುವ ಸಾಧ್ಯತೆಗಳು ಹೆಚ್ಚು. ಸಾಮಾನ್ಯವಾಗಿ ಈ ಅಪಾಯದ ತೀವ್ರತೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ. ಉದಾಹರಣೆಗೆ ಕೊಳೆಗೇರಿಗಳನ್ನು ಕಡೆಗಣಿಸಿದರೆ ನಗರದಲ್ಲಿ ಸೋಂಕಿನ ಪ್ರಮಾಣದ ಅಂದಾಜು ಶೇಕಡಾ ೧೦ರಿಂದ ೫೦ರಷ್ಟು ಕಡಿಮೆಯಾಗಿ ಕಾಣುತ್ತದೆ. ಅಷ್ಟೇ ಅಲ್ಲ ಲಸಿಕೆಯ ಪರಿಣಾಮಕಾರಿತ್ವದ ಅಂದಾಜು ಇರುವುದಕ್ಕಿಂತ ಶೇಕಡಾ ೩೦ರಿಂದ ೫೫ರಷ್ಟು ಹೆಚ್ಚಾಗಿಬಿಡುತ್ತದೆ. ಇದನ್ನು ದೆಹಲಿಯ ಸಂಶೋಧಕರು ತಿಳಿಸಿದ್ದಾರೆ.
ಕೊಳೆಗೇರಿಗಳಲ್ಲಿ ಸೋಂಕಿನ ತೀವ್ರತೆಯನ್ನು ಕಡಿಮೆ ಅಂದಾಜು ಮಾಡಿಕೊಂಡಲ್ಲಿ, ಆರೋಗ್ಯ ಸುರಕ್ಷಾ ಸಂಪನ್ಮೂಲಗಳ ಹಂಚಿಕೆ ಅಸಮವಾಗಬಹುದು. ಕೋವಿಡ್-೧೯ರಿಂದ ಒದ್ದಾಡುತ್ತಿರುವ ಗಂಭೀರ ರೋಗಿಗಳಿಗೆ ಐಸಿಯು ಮತ್ತು ವೆಂಟಿಲೇಟರುಗಳಂತಹ ಉನ್ನತ ಜೀವರಕ್ಷಕ ಸಹಾಯಗಳ್ಯಾವುವೂ ದೊರೆಯದೇ ಹೋಗುವ ಸಾಧ್ಯತೆಗಳೇ ಹೆಚ್ಚು.
ಇನ್ನು ಇದಕ್ಕೆ ಆರ್ಥಿಕ ಆಯಾಮವೂ ಇದೆ. ಕೊರೋನಾ ಮಹಾಮಾರಿಯ ಆರ್ಥಿಕ ಸಮಸ್ಯೆಗಳು ಕೊಳೆಗೇರಿ ನಿವಾಸಿಗಳನ್ನು ಹೆಚ್ಚು ತೀವ್ರವಾಗಿ ಕಾಡುತ್ತವೆ. ಕೊಳಚೆಗೇರಿಯ ಬಹುಪಾಲು ಜನ ಅನೌಪಚಾರಿಕ ವಲಯಗಳಲ್ಲಿ ಕೆಲಸಮಾಡುತ್ತಿರುತ್ತಾರೆ. ಹಾಗಾಗಿ ಲಾಕ್‌ಡೌನ್ ಸಂದರ್ಭದಲ್ಲಿ ಅವರ ಆರ್ಥಿಕ ಮೂಲವೇ ಇಲ್ಲವಾಗಿಬಿಡುತ್ತದೆ.
ನವ ದೆಹಲಿ, ಮುಂಬೈ, ಕೇಪ್ ಟೌನ್, ಮನಿಲಾ, ಕರಾಚಿ, ರಿಯೋ ಡಿ ಜನೈರೋ ಮತ್ತು ನೈರೋಬಿ, ಕೆನ್ಯಾಗಳ ಕೊಳೆಗೇರಿಗಳಲ್ಲಿ ದಿನಕೂಲಿ ಕಾರ್ಮಿಕರ ಸಂಕಟ ಈ ಲಾಕ್‌ಡೌನಿನಿಂದಾಗಿ ತುಂಬಾ ತೀವ್ರಗೊಂಡಿದೆ. ಮನೆಯಲ್ಲಿ ಉಳಿದುಕೊಳ್ಳುವುದು ಈ ಸಮುದಾಯಗಳಿಗೆ ಸಾಧ್ಯವೇ ಇಲ್ಲ. ಅವರ ಜೀವನೋಪಾಯ ಸಂಪೂರ್ಣವಾಗಿ ಅನೌಪಚಾರಿಕ ಕೆಲಸವನ್ನೇ ಅವಲಂಬಿಸಿದೆ.
ಈ ಎಲ್ಲಾ ಪರಿಣಾಮಗಳನ್ನು ಊಹಿಸಿ, ಬ್ರೆಜ಼ಿಲ್ ಸರ್ಕಾರವು ಮೂರು ತಿಂಗಳ ಕಾಲ ಈ ಅನೌಪಚಾರಿಕ ಕಾರ್ಮಿಕರಿಗೆ ೬೦೦ ಬ್ರೆಜ಼ಿಲ್ ರಿಯಾಗಳನ್ನು ನೀಡಿ ಬೆಂಬಲಿಸುವ ತುರ್ತುಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿತು. ಈ ಮೊತ್ತ ಸುಮಾರು ೧೧೪ ಡಾಲರುಗಳಿಗೆ ಸಮ. ದೆಹಲಿಯಲ್ಲಿ ಮಾಲೀಕರು ಕಾರ್ಮಿಕರಿಗೆ ವೇತನ ನೀಡಬೇಕು ಮತ್ತು ಭೂಮಾಲಿಕರು ಕೆಲಸಗಾರರನ್ನು ಒಕ್ಕಲೆಬ್ಬಿಸಬಾರದು ಎಂದು ದೆಹಲಿಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ ಇಷ್ಟೇ ಸಾಲುವುದಿಲ್ಲ ಅನ್ನುವುದು ಸ್ಪಷ್ಟ.
ಗ್ರೂಪ್ ಆಫ್ ೨೦ ಎಂಬ ಸಂಸ್ಥೆಯು ಕೊರೋನಾ ಮಹಾಮಾರಿಯ ಬಿಕ್ಕಟ್ಟಿಗೆ ಸ್ಪಂದಿಸುತ್ತಾ ೫ ಟ್ರಿಲಿಯನ್ ಡಾಲರುಗಳನ್ನು ಪರಿಹಾರಕ್ಕಾಗಿ ಮುಡುಪಾಗಿಟ್ಟಿದೆ. ಈ ಪರಿಹಾರ ಕಡ್ಡಾಯವಾಗಿ ಕೊಳೆಗೇರಿ ನಿವಾಸಿಗಳಿಗೂ ಸಿಗಬೇಕು. ಈ ನಿಧಿಯನ್ನು ಬ್ರೆಜ಼ಿಲ್‌ನ ಬೋಲ್ಸಾ ಫ್ಯಾಮೀಲಿಯಾ, ಮೆಕ್ಸಿಕೊದ ಪ್ರೊಸ್ಪೆರಾ ಅಂತಹ ಸರ್ಕಾರದ ಷರತ್ತಿಗೆ ಒಳಪಟ್ಟು ಹಣವನ್ನು ವರ್ಗಾಯಿಸುವ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ವಿಸ್ತರಿಸುವುದಕ್ಕೆ ತಾತ್ಕಾಲಿಕವಾಗಿ ಬಳಸಬಹುದು. ಭಾರತವು ಈ ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ಮೂರುತಿಂಗಳ ಕಾಲ ಪಡಿತರವನ್ನೂ ಮತ್ತು ನಗದನ್ನೂ ವರ್ಗಾಯಿಸುವುದಾಗಿ ಘೋಷಿಸಿದೆ. ಕಡಿಮೆ ಆದಾಯದ ಜನರನ್ನು ಕಾಪಾಡಲು ಹಲವು ದೇಶಗಳು ನಗದು ವರ್ಗಾವಣೆಯ ಯೋಜನೆಯನ್ನು ರೂಪಿಸಿಕೊಂಡಿವೆ. ಅವುಗಳನ್ನು ವಿಸ್ತರಿಸಬೇಕು.
ಬ್ರೆಜ಼ಲ್ಲಿನಲ್ಲಿ ಫ್ಯಾಮಿಲಿ ಹೆಲ್ತ್ ಸ್ಟ್ರಾಟಜಿ ಕಾರ್ಯಕ್ರಮದಲ್ಲಿ ತರಬೇತಿಗೊಂಡ ಸ್ಥಳೀಯರನ್ನೇ ತಮ್ಮ ತಮ್ಮ ಸಮುದಾಯಗಳಿಗೆ ಮೂಲಭೂತ ಮತ್ತು ಮುನ್ನೆಚ್ಚರಿಕೆಯ ರಕ್ಷಣೆಯನ್ನು ನೀಡುವುದಕ್ಕಾಗಿ ಬಳಸಿಕೊಂಡರು. ಅದೇ ರೀತಿಯಲ್ಲಿ ಈಗ ಕೆಲಸ ಕಳೆದುಕೊಂಡಿರುವ ಕಾರ್ಮಿಕರಿಗೆ ತರಬೇತಿ ನೀಡಿ, ತಮ್ಮದೇ ನೆರೆಹೊರೆಯಲ್ಲಿ ಕೊರೋನಾ ವೈರಾಣು ಸೋಂಕಿತರನ್ನು ಗುರುತಿಸುವ ಕೆಲಸಗಾರರನ್ನಾಗಿ ಅವರನ್ನು ಮತ್ತೆ ನೇಮಿಸಿಕೊಳ್ಳಬಹುದು.
ಅನೌಪಚಾರಿಕ ನೆಲಸುನಾಡುಗಳು ಕೇವಲ ಅಭಿವೃದ್ಧಿಶೀಲ ದೇಶಗಳಲ್ಲಿ ಮಾತ್ರ ಕಂಡುಬರುತ್ತವೆಂದು ಭಾವಿಸಬಾರದು. ಶ್ರೀಮಂತ ದೇಶಗಳ ನಗರಗಳಲ್ಲಿಯೂ ಇಂಥಹ ನೆಲಸುನಾಡುಗಳಿವೆ. ಲಾಸ್ ಅಂಜಲಿಸ್, ಓಕ್‌ಲ್ಯಾಂಡ್, ಸಿಯಾಟೆಲ್, ನ್ಯೂ ಯಾರ್ಕ್ ಸಿಟಿ, ಕಾಲಿಫ್, ಪ್ಯಾರಿಸ್ ಮತ್ತು ಲಂಡನ್ನಿನ ಮನೆಯಿಲ್ಲದವರ ಬಿಡಾರಗಳು ಇಂತಹ ಮಹಾಮಾರಿಗಳಿಗೆ ಬಹು ಸುಲಭವಾಗಿ ಬಲಿಯಾಗುವಂತಹ ಸ್ಥಳಗಳು.
ಜಗತ್ತಿನ ಹಲವೆಡೆಗಳಲ್ಲಿ ನಿರಾಶ್ರಿತರಿಗಾಗಿ ನಿರ್ಮಿಸಿದ ಬಿಡಾರಗಳೇ ಈಗ ಅವರ ನೆಲಸುನಾಡುಗಳಾಗಿವೆ. ಅವುಗಳಿಗೆ ಯುನೈಟೆಡ್ ನೇಷನ್ಸ್ಸ್ ವ್ಯಾಖ್ಯಾನಿಸುವ ಕೊಳೆಗೇರಿಯ ಲಕ್ಷಣಗಳೂ ಇವೆ. ಬಾಂಗ್ಲಾದೇಶ, ಲೆಬನಾನ್, ಕೆನ್ಯಾ ಮತ್ತು ಗ್ರೀಸ್‌ನ ನಿರಾಶ್ರಿತರ ಬಿಡಾರಗಳಲ್ಲಿ ಕೊರೋನವೈರಸ್ ಹರಡಬಹುದೆಂಬ ಭೀತಿ ದಟ್ಟವಾಗಿದೆ. ಕಳೆದ ವಾರ ಅಥೆನ್ಸ್‌ನ ಬಳಿಯಿರುವ ಬಿಡಾರವೊಂದರ ಕನಿಷ್ಠ ಇಪ್ಪತ್ತು ನಿರಾಶ್ರಿತರಿಗೆ ಕೊರೋನ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಜಗತ್ತಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸರ್ಕಾರಗಳು ಇಂತಹ ಕೊಳೆಗೇರಿಗಳನ್ನು ಮನೆಯಿಲ್ಲದವರ ಪಾಳೆಯಗಳನ್ನು ಮತ್ತು ನಿರಾಶ್ರಿತರ ಬಿಡದಿಗಳನ್ನು ಮರೆಯಬಾರದು ಮತ್ತು ಅವರ ಬಗ್ಗೆ ಎಚ್ಚರ ವಹಿಸಬೇಕು. ಮಹಾಮಾರಿಯಿಂದ ಜಗತ್ತಿನ ಎಲ್ಲಾ ವರ್ಗದ ಜನರ ಮೇಲೆ ಆಗುವ ಪರಿಣಾಮಗಳನ್ನು ಎದುರಿಸಲು ಸಿದ್ಧರಿರಬೇಕು.
ಲೀ ಡಬ್ಲು ರೈಲಿ
ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ
ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರು,
ಇವಾ ರಾಫೆಲ್
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ
ಕ್ಲಿನಿಕಲ್ ರೀಸರ್ಚ್ ಫೆಲೊ.