ಬೆಂಗಳೂರು : ಒಬ್ಬ ವ್ಯಕ್ತಿ ನಿರುದ್ಯೋಗಿ ಆಗಿದ್ದರೆ, ಅದಕ್ಕೆ ಆತ ಹೊಣೆಯಲ್ಲ, ಅದಕ್ಕೆ ಸಮಾಜ ಕಾರಣ, ಆಳುವ ಸರ್ಕಾರಗಳ ನೀತಿ ಕಾರಣ ಎಂದು ಆರ್ಥಿಕ ತಜ್ಞ, ರಾಜಕೀಯ ವಿಮರ್ಶಕ ಪ್ರಭಾತ್ ಪಟ್ನಾಯಕ್ ಆರೋಪಿಸಿದರು.
ಅವರು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮಲ್ಟಿಮೀಡಿಯಾ ಸಂಭಾಗಣದಲ್ಲಿ, ಟಿ.ಆರ್. ಚಂದ್ರಶೇಖರ್ ಬರೆದಿರುವ ನಿರುದ್ಯೋಗ ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಗುತ್ತಿಗೆ ಆಧಾರಿತ ಉದ್ಯೋಗವನ್ನು ನಿಲ್ಲಿಸಬೇಕಾಗಿದೆ. ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಾತಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದಾಗಲೂ, ಶಾಲಾ -ಕಾಲೇಜುಗಳಿಗೆ ಅತಿಥಿ ಶಿಕ್ಷಕ, ಉಪನ್ಯಾಸಕರ ನೇಮಕಾತಿ ಮಾಡತೊಡಗಿವೆ. ಇಂತದ್ದೆಲ್ಲಾ ನಿಲ್ಲಬೇಕಿದೆ ಎಂದರು.
ಶಿಕ್ಷಣ, ಉದ್ಯೋಗ, ಆಹಾರ, ಆರೋಗ್ಯ, ಸಾಮಾಜಿಕ ಭದ್ರತೆಯು ಹಕ್ಕುಗಳಾಗಿ ಸಂವಿಧಾನಾತ್ಮಕವಾಗಿ ಜಾರಿಯಾಗಬೇಕು. ದೇಶದಲ್ಲಿ ಯುವಜನರ ಬಗ್ಗೆ ಮತ್ತು ದೇಶದ ನ್ಯಾಯಾಲಯದ ತೀರ್ಪನ್ನು ಟೀಕಿಸಿ ಬರೆದ ಪುಸ್ತಕ ಇಲ್ಲವೇ ಇಲ್ಲ. ಈ ಕೃತಿ ದೇಶದ ನಿರುದ್ಯೋಗದ ಮೇಲೆ ಬೆಳಕು ಚೆಲ್ಲಲಿದೆ ಎಂದರು.
ನಿರುದ್ಯೋಗದ ಬಗ್ಗೆ ತಪ್ಪು ಕಲ್ಪನೆ : ನಿರುದ್ಯೋಗಕ್ಕೆ ಪ್ರಮುಖ ಕಾರಣ ಮೀಸಲಾತಿ ಎಂಬ ತಪ್ಪು ಅಭಿಪ್ರಾಯ ಇವೆ. ಆಳುವ ಸರಕಾರಗಳ ಹಿತಾಸಕ್ತಿ ಕೊರತೆಯಿಂದ ನಿರುದ್ಯೋಗ ಸೃಷ್ಟಿಯಾಗಿದೆ ಎಂದು ಕೃತಿಕಾರರಾದ ಟಿ.ಆರ್. ಚಂದ್ರಶೇಖರ್ ಮಾತನಾಡಿದರು. ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗ ಕಡಿತ 13% ಇದೆ. ಇವುಗಳಲ್ಲಿ ದಲಿತ ಉದ್ಯೋಗಿಗಳ ಕಡಿತ 33% ರಷ್ಟಿದೆ. ರಾಜ್ಯ ಸರ್ಕಾರದಲ್ಲಿ 35% , ಇದೆ. ಕೇಂದ್ರದಲ್ಲಿಯೂ ಗುತ್ತಿಗೆ ಉದ್ಯೋಗ ಹೆಚ್ಚಿಸುಚ್ಚಿದ್ದಾರೆ. ಇದು 70% ಹೆಚ್ಚಾಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.
ಯುವಕ ಮತ್ತು ಯುವತಿಯರಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. 2011-12 4.2 ಇದ್ದಿದ್ದು 10.7 ಆಗಿದೆ. 2011-12ರಲ್ಲಿ ಮಹಿಳಾ ಇದ್ದ ನಿರುದ್ಯೋಗ 5% ಇದ್ದ ನಿರುದ್ಯೋಗ ಪ್ರಮಾಣ 20% ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು : ಭೂಮಿ, ನೀರು, ಖನಿಜ ಸಂಪತ್ತಿನ ಸದ್ಬಳಕೆಯಿಂದ ಸಮಾಜ ಅಭಿವೃದ್ಧಿ ಆಗುತ್ತೆ ಎಂಬುದು ನಿಜ. ಆದರೆ ಮಾನವ ಸಂಪನ್ಮೂಲ ಇವೆಲ್ಲಕ್ಕಿಂತ ಪ್ರಮುಖ ಆಗಿದೆ. ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡದೆ ಸಮಾಜ ಅಭಿವೃದ್ಧಿ ಆಗುವುದಿಲ್ಲ ಎಂದು ಜಸ್ಟೀಸ್ ನಾಗಮೋಹನ್‌ದಾಸ ಅಭಿಪ್ರಾಯ ಪಟ್ಟರು.
15-35 ವರ್ಷದ ಯುವ ಜನರು ಮೂರನೇ ಒಂದಷ್ಟು ಜನಸಂಖ್ಯೆ ಇದ್ದಾರೆ. ಇವರಲ್ಲಿ ಹೆಚ್ಚಿನವರು ನಿರುದ್ಯೋಗಿಗಳಾಗಲಿದ್ದಾರೆ. ಇದಕ್ಕೆ ಕಾರಣ ಸರ್ಕಾರದ ನೀತಿಗಳು. ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಕೂಡಾ ನಿರುದ್ಯೋಗಕ್ಕೆ ಕಾರಣವಾಗಿದೆ. ಯಾವ ದೇಶ ಯುವ ಸಮುದಾಯವನ್ನು ದೇಶ ಕಟ್ಟುವುದಕ್ಕೆ ಬೆಳೆಸಿಕೊಳ್ಳುವುದಿಲ್ಲವೋ, ಆಗ ಅವರನ್ನು ವಿರೋಧಿಗಳು ಬೆಳೆಸಿಕೊಳ್ಳುತ್ತಾರೆ. ಹಾಗಾಗಿಯೆ ಭಯೋತ್ಪಾದನೆ, ಕೋಮುವಾದ ಹೆಚ್ಚಾಗಿದೆ. ವ್ಯಭಿಚಾರ, ಭ್ರಷ್ಟಾಚಾರ, ಮಾದಕ ದ್ರವ್ಯ, ಕ್ರೈಂ, ಹೆಚ್ಚಾಗಲು ನಿರುದ್ಯೋಗಕ್ಕೆ ಸಂಬಂಧವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ರಚನಾತ್ಮಕ ಪರಿಹಾರ ಕಂಡುಕೊಳ್ಳುವ ಬದಲು ಯುವಜನರ ಒಡೆದು ಆಳುವ, ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದೆ. ಇಂತಹ ಪ್ರಯೋಗವನ್ನು ಮಾಡಿದ ಸರ್ಕಾರವನ್ನು ರಾಜ್ಯದ ಜನ ಕಿತ್ತು ಹಾಕಿದ್ದಾರೆ. ಕರ್ನಾಟಕ ಚುನಾವಣೆಯ ಪಾಠ ದೇಶಕ್ಟೂ ಮಾದರಿ ಆಗಬೇಕಿದೆ ಎಂದರು.
ವೇದಿಕೆಯ ಮೇಲೆ ಜನ ಪ್ರಕಾಶನದ ಬಿ. ರಾಜಶೇಖರ್ ಮೂರ್ತಿ, ರಾಜಶೇಖರ್ ಕಿಗ್ಗ ಇದ್ದರು. ಮಾಜಿ ಶಿಕ್ಷಣ ಸಚಿವ ಬಿ.ಕೆ. ಚಂದ್ರಶೇಖರ್, ಹಿರಿಯ ಚಿಂತಕ ಜಿ. ರಾಮಕೃಷ್ಣ ಸೇರಿದಂತೆ ಅನೇಕರು ವೀಕ್ಷಕರಾಗಿ ಭಾಗವಹಿಸಿದ್ದರು.