ಸುಸ್ತಿದಾರರ ಸಾಲಮನ್ನಾ- ಬ್ಯಾಂಕಿಂಗ್‌ ವ್ಯವಸ್ಥೆಯ ಅಪಹಾಸ್ಯ

ಮನ್ನಾ ಮಾಡಲಾಗಿರುವ ಸುಸ್ತಿ ಸಾಲಗಳ ಮೊತ್ತ ಸಾಮಾಜಿಕ ವಲಯದ ವೆಚ್ಚಗಳನ್ನೂ ಮೀರಿಸುತ್ತದೆ

ಮೂಲ : ಅನಿರ್ಬನ್‌ ಭಟ್ಟಾಚಾರ್ಯ ಮತ್ತು ಪ್ರಣಾಯ್‌ ರಾಜ್‌

ಅನುವಾದ : ನಾ ದಿವಾಕರ

ಈಡೇರಿಸದೆ ಉಳಿದ ಭರವಸೆಗಳು ನೀಡಿದ ಭರವಸೆಗಳಷ್ಟೇ ಹಳತಾಗಿವೆ. ಆದರೆ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂಬ ಯಾವುದೇ ಆರೋಪಗಳಲ್ಲಿ ಕನಿಷ್ಠ ಸ್ವಲ್ಪಮಟ್ಟದ ಉತ್ತರದಾಯಿತ್ವ ಇರುತ್ತದೆ. ವಾಸ್ತವವಾಗಿ, ಅದು ಪ್ರಜಾಪ್ರಭುತ್ವದ ಸಾರವನ್ನು ರೂಪಿಸುತ್ತದೆ. ಆಡಳಿತಗಾರ ಭರವಸೆಗಳ ಬಗ್ಗೆ ಆಗಾಗ್ಗೆ ಪ್ರಶ್ನಿಸದೆ ಇರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಜೂನ್ 8 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ಅಧಿಕೃತ ಹೇಳಿಕೆಯು ದೇಶಾದ್ಯಂತ ತೀವ್ರ ಚರ್ಚೆಗೆ ನಾಂದಿ ಹಾಡಿದೆ. ಹಣಕಾಸು ವಂಚನೆಗಳು ಮತ್ತು ಉದ್ದೇಶಪೂರ್ವಕ ಸುಸ್ತಿದಾರರ ವಂಚನೆಗಳಿಗೆ ಸಾಲ ಮನ್ನಾ ಅಥವಾ ರಾಜಿ ಇತ್ಯರ್ಥದ ಅವಕಾಶ ನೀಡುವುದೇ ಅಲ್ಲದೆ ಅಂತಹ ಸಾಲಗಾರರ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕ್ರಿಯೆಗಳ ಬಗ್ಗೆ ಯಾವುದೇ  ಪೂರ್ವಾಗ್ರಹವಿಲ್ಲದೆ  ಮನ್ನಾ ಮಾಡಲು ಮತ್ತು ರಾಜಿ ಇತ್ಯರ್ಥಗಳಿಗೆ ಮುಂದಾಗಲು ರಿಸರ್ವ್‌ ಬ್ಯಾಂಕ್ ಅನುಮತಿ ನೀಡಿದೆ.

ಈ ನಿರ್ಧಾರವನ್ನು ಬ್ಯಾಂಕ್‌ ನೌಕರರ ಮತ್ತು ಅಧಿಕಾರಿಗಳ ಒಕ್ಕೂಟಗಳು ತೀವ್ರವಾಗಿ ಖಂಡಿಸಿವೆ.  ಉದ್ದೇಶಪೂರ್ವಕ ಸುಸ್ತಿದಾರರ ಸಮಸ್ಯೆಯನ್ನು ಪರಿಹರಿಸಲು ಕಠಿಣ ಕ್ರಮಗಳನ್ನು ಅನುಸರಿಸಬೇಕೆಂದು ನಾವು ಸದಾಕಾಲವೂ ಪ್ರತಿಪಾದಿಸಿದ್ದೇವೆ ಎಂದು ಒಕ್ಕೂಟಗಳು ಹೇಳಿಕೆಯಲ್ಲಿ ತಿಳಿಸಿವೆ. “ ವಂಚನೆ ಅಥವಾ ಉದ್ದೇಶಪೂರ್ವಕ ಸುಸ್ತಿದಾರರು ಎಂದು ವರ್ಗೀಕರಿಸಲಾದ ಖಾತೆಗಳಿಗೆ ರಾಜಿ ಇತ್ಯರ್ಥಕ್ಕೆ ಅವಕಾಶ ನೀಡುವುದು ನ್ಯಾಯ ಮತ್ತು ಉತ್ತರದಾಯಿತ್ವದ ತತ್ವಗಳಿಗೆ ಅಗೌರವ ಎಂದು ನಾವು ದೃಢವಾಗಿ ನಂಬುತ್ತೇವೆ ”ಎಂದು ಬ್ಯಾಂಕ್‌ ನೌಕರ ಸಂಘಟನೆಗಳು ಹೇಳಿವೆ. ಸಾಲ ಮರುಪಾವತಿ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ಸಾಲವನ್ನು ಮರುಪಾವತಿಸಲು ನಿರಾಕರಿಸುವವರನ್ನು ಉದ್ದೇಶಪೂರ್ವಕ ಸುಸ್ತಿದಾರರು ಎಂದು  ಪರಿಗಣಿಸಲಾಗುತ್ತದೆ.

ರಿಸರ್ವ್ ಬ್ಯಾಂಕ್ ಹೇಳಿಕೆಯಲ್ಲಿ ಉಲ್ಲೇಖಿಸಲಾದ ರಾಜಿ ಸೂತ್ರದ ಅನುಸಾರ ಈ ಉದ್ದೇಶಪೂರ್ವಕ ಸುಸ್ತಿದಾರರ ಬಾಕಿಯನ್ನು ಪರಸ್ಪರ ರಿಯಾಯಿತಿಯ ಮೂಲಕ ಇತ್ಯರ್ಥಪಡಿಸಬಹುದು ಹಾಗೂ  ಬಾಕಿ ಇರುವ ಸಾಲದ ಮೊತ್ತವನ್ನು ಸಂಪೂರ್ಣವಾಗಿ ಮರುಪಡೆಯಲಾಗುವುದಿಲ್ಲ. ಉದ್ದೇಶಪೂರ್ವಕ ಸುಸ್ತಿದಾರರಿಂದ ಸಾಲಗಳನ್ನು ವಸೂಲಿ ಮಾಡುವ ವಿಧಾನಗಳನ್ನು ಬಲಪಡಿಸುವ ಬದಲು, ಈ ಹೇಳಿಕೆಯ ಮೂಲಕ ಆರ್‌ಬಿಐ ಬಾಕಿ ಇರುವ ಮೊತ್ತವನ್ನು ತಾಂತ್ರಿಕವಾಗಿ ಮನ್ನಾ ಮಾಡುವ ಮೂಲಕ ಮರುಹೊಂದಿಸುವ ವಿಧಾನವನ್ನು ಜಾರಿಗೊಳಿಸಲೆತ್ನಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳು ಕುಸಿಯುತ್ತಿರುವುದನ್ನು ಗಮನಿಸಿದಾಗ ಈ ಕುಸಿತದ ಕಾರಣಗಳಲ್ಲಿ ಈ ಮಾರ್ಗವೂ ಒಂದಾಗಿದೆ.   ಮಂತ್ರದಂಡದಂತೆ ಕಾರ್ಯನಿರ್ವಹಿಸುವ ಈ ವಿಧಾನದ ಮೂಲಕ ಅನುತ್ಪಾದಕ ಅಥವಾ ಕೆಟ್ಟ ಸಾಲವನ್ನು ಬ್ಯಾಂಕುಗಳ ಬ್ಯಾಲೆನ್ಸ್‌ಷೀಟ್‌ಗಳಿಂದ ಅಳಿಸಿಹಾಕಲು ಅನುವು ಮಾಡಿಕೊಡಲಾಗುತ್ತಿದೆ.

ಉದ್ದೇಶಪೂರ್ವಕ ಸುಸ್ತಿದಾರರೊಂದಿಗೆ ರಾಜಿ ಸಂಧಾನದಲ್ಲಿ ತೊಡಗಲು ಬ್ಯಾಂಕುಗಳಿಗೆ ಅನುಮತಿ ನೀಡುವುದು ಹೊಸದೇನಲ್ಲ ಎಂದು ರಿಸರ್ವ್ ಬ್ಯಾಂಕ್ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳ ಟಿಪ್ಪಣಿಯಲ್ಲಿ ಹೇಳಿದೆ. ಅಂತಹ ರಾಜಿಗಳು ಸಾಲದಾತರ ವಿವೇಚನೆ ಮತ್ತು ಅವರ ವಾಣಿಜ್ಯ ನಿರ್ಧಾರಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಎಂದು ಆರ್‌ಬಿಐ ಹೇಳಿದೆ. ನಿಖರವಾಗಿ ಈ “ವಿವೇಚನೆ” ಸುಸ್ತಿದಾರರಿಗೆ ಸುಲಭವಾದ ಮಾರ್ಗವನ್ನು ನೀಡುವ ಮೂಲಕ ವಿಷಯಗಳನ್ನು ಮತ್ತಷ್ಟು ಕ್ಲಿಷ್ಟಕರವಾಗಿ ಮಾಡುತ್ತದೆ. ಆದರೆ ಹೆಚ್ಚಾಗುತ್ತಿರುವ ಮರುಪಾವತಿ ಮಾಡದಿರುವ ಸುಸ್ತಿದಾರರ ಪ್ರವೃತ್ತಿ,  ಮರುಪಾವತಿಯಾಗದೆ ಬಾಕಿ ಇರುವ ಸಾಲದ ಮೊತ್ತ ಹಾಗೂ ಸಾಲ ಮನ್ನಾಗಳನ್ನು ಪರಿಹರಿಸುವ ಮನಸ್ಥಿತಿಯಲ್ಲಿ ರಿಸರ್ವ್ ಬ್ಯಾಂಕ್ ಅಥವಾ ಸರ್ಕಾರ ಆಸಕ್ತಿ ಹೊಂದಿರುವಂತೆ ತೋರುವುದಿಲ್ಲ.

ಸಾಲಮನ್ನಾ-ವಂಚನೆಗಳ ಚರಿತ್ರೆ 

ಈಡೇರಿಸದೆ ಉಳಿದ ಭರವಸೆಗಳು ನೀಡಿದ ಭರವಸೆಗಳಷ್ಟೇ ಹಳತಾಗಿವೆ. ಆದರೆ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂಬ ಯಾವುದೇ ಆರೋಪಗಳಲ್ಲಿ ಕನಿಷ್ಠ ಸ್ವಲ್ಪಮಟ್ಟದ ಉತ್ತರದಾಯಿತ್ವ ಇರುತ್ತದೆ. ವಾಸ್ತವವಾಗಿ, ಅದು ಪ್ರಜಾಪ್ರಭುತ್ವದ ಸಾರವನ್ನು ರೂಪಿಸುತ್ತದೆ. ಆಡಳಿತಗಾರ ಭರವಸೆಗಳ ಬಗ್ಗೆ ಆಗಾಗ್ಗೆ ಪ್ರಶ್ನಿಸದೆ ಇರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಉದಾಹರಣೆಗೆ, 2018 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎನ್‌ಡಿಎ ಆಳ್ವಿಕೆಯ ಅವಧಿಯಲ್ಲಿ ಮರುಪಾವತಿ ಮಾಡಲು  ವಿಫಲವಾದ ಗ್ರಾಹಕರಿಗೆ ಒಂದೇ ಒಂದು ಸಾಲವನ್ನು ನೀಡಿಲ್ಲ ಎಂದು ಹೆಮ್ಮೆಯಿಂದ ಘೋಷಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ “ನಾಮ್ ದಾರ್ ಗಳ ಅಂದರೆ ವಂಶಾಡಳಿತಗಳ ಆಜ್ಞೆಯ ಮೇರೆಗೆ ನೀಡಲಾದ ಸಾಲದ ಪ್ರತಿ ಪೈಸೆಯನ್ನು ವಸೂಲಿ ಮಾಡಲಾಗುವುದು” ಎಂದು ಸಹ ಘೋಷಿಸಿದ್ದರು. 2006-8 ರಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತಾವಧಿಯಲ್ಲಿ ಆರ್ಥಿಕತೆಯ ಹೆಚ್ಚಿನ ಬೆಳವಣಿಗೆಯ ಭ್ರಮೆಯಲ್ಲಿ ಮುಳುಗಿದ್ದಾಗ , ನೀಡಲಾದ ಅನುತ್ಪಾದಕ ಸಾಲಗಳ ಬಿಕ್ಕಟ್ಟನ್ನು ಅವರು ಇಲ್ಲಿ ಉಲ್ಲೇಖಿಸುತ್ತಿದ್ದರು. ಈ ಶ್ರೀಮಂತ ಸಾಲಗಾರರು ಸುಸ್ತಿದಾರರಾಗಲು ಪ್ರಾರಂಭಿಸಿದಾಗ, ಅವರಿಗೆ ಹೆಚ್ಚಿನ ಸಮಯ ನೀಡುವಂತೆ ಅಥವಾ ಸಾಲಗಳನ್ನು ಪುನಾರಚನೆ ಮಾಡಲು ಬ್ಯಾಂಕುಗಳ ಮೇಲೆ ಒತ್ತಡ ಹೇರಲಾಯಿತು ಎಂದು ಮೋದಿ ಹೇಳಿದ್ದರು.

ಆದರೆ 2023ರಲ್ಲಿ  ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಥವಾ  ಮಧ್ಯಪ್ರವೇಶ ಮಾಡುವ ಮೂಲಕ ಪ್ರತ್ಯುತ್ತರವನ್ನೂ ನೀಡಿಲ್ಲ. ಬೃಹತ್ ಕಾರ್ಪೊರೇಟ್ ಸಾಲಗಳನ್ನು ಮರುಪಾವತಿಸದೆ ವಿದೇಶಗಳಿಗೆ ಪಲಾಯನ ಮಾಡುವ ಉದ್ದೇಶಪೂರ್ವಕ ಸಾಲ ಸುಸ್ತಿದಾರರಿಗೆ ಕಾನೂನು ಕ್ರಮಗಳ ಬಿಸಿ ಮುಟ್ಟಿಸುತ್ತೇವೆ ಎಂದು ಏಳು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಈ ಉಪಕ್ರಮವನ್ನು ಯಾರಾದರೂ ಇದನ್ನು ಕೈಗೊಳ್ಳಲು ಸಾಧ್ಯವಾಗುವುದಾದರೆ ಅದು ನರೇಂದ್ರ ಮೋದಿಯಿಂದ ಮಾತ್ರ ಎಂದು ಸಾರ್ವಜನಿಕರಿಗೆ ಖಚಿತವಾಗಿದೆ ಎಂದು ಹೆಮ್ಮೆಯಿಂದ ಹೇಳಿದ್ದುದೇ ಅಲ್ಲದೆ,  ಖಂಡಿತವಾಗಿಯೂ ಅದನ್ನು ಮಾಡಿಯೇ ತೀರುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದರು.

ಇದೇ ಮೇ ಅಂತ್ಯಕ್ಕೆ ಒಂಬತ್ತು ವರ್ಷಗಳ ಆಡಳಿತವನ್ನು ಪೂರೈಸಿದ ಮೋದಿ ಸರ್ಕಾರದ ಕಳೆದ ಒಂಬತ್ತು ವರ್ಷಗಳ ಸಾಧನೆಗಳು ಒಂಬತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾಕಷ್ಟು ಪ್ರಸಾರವನ್ನು ಪಡೆದಿರುವ ಹಿನ್ನೆಲೆಯಲ್ಲಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದವರ ಬಗ್ಗೆ ಬಿಜೆಪಿ ಸರ್ಕಾರ ಕೈಗೊಂಡ ಕ್ರಮಗಳ ದಾಖಲೆಯ ಒಂದು ಇಣುಕು ನೋಟ ಇಲ್ಲಿದೆ.

ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಮಾಡಿದ ಸಾಲ ಮನ್ನಾಗಳು ಅಸಾಧಾರಣ ಹೆಚ್ಚಳವನ್ನು ತೋರಿಸಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಮನ್ನಾ ಮಾಡಿರುವ ಸಾಲದ ಮೊತ್ತ 2013 ರಲ್ಲಿ 7,187 ಕೋಟಿ ರೂ.ಗಳಷ್ಟಿದ್ದುದು 2022 ರಲ್ಲಿ 1,19,713 ಕೋಟಿ ರೂ.ಗಳಿಗೆ ಏರಿದೆ. ಈ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಮೊತ್ತವನ್ನು , ಅಂದರೆ 2,97,196 ಕೋಟಿ ರೂಗಳನ್ನು ಮನ್ನಾ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (92,511 ಕೋಟಿ ರೂ.), ಬ್ಯಾಂಕ್ ಆಫ್ ಬರೋಡಾ (75,429 ಕೋಟಿ ರೂ.) ಮತ್ತು ಬ್ಯಾಂಕ್ ಆಫ್ ಇಂಡಿಯಾ (53,961 ಕೋಟಿ ರೂ.) ನಂತರದ ಸ್ಥಾನಗಳಲ್ಲಿವೆ.

ಖಾಸಗಿ ವಲಯದ ಬ್ಯಾಂಕುಗಳಲ್ಲಿ , ಒಟ್ಟು ಮನ್ನಾ ಮಾಡಲಾದ ಸಾಲಗಳ ಮೊತ್ತ 2013 ರಲ್ಲಿ 4,115.02 ಕೋಟಿ ರೂಗಳಿಂದ 2022 ರ ಮಾರ್ಚ್‌ ವೇಳೆಗೆ 53,087.03 ಕೋಟಿ ರೂಗಳಿಗೆ ಏರಿದೆ. ಐಸಿಐಸಿಐ, ಆಕ್ಸಿಸ್ ಮತ್ತು ಎಚ್‌ಡಿಎಫ್‌ಸಿ ಹೆಚ್ಚು ಸಾಲ-ಮುಂಗಡಗಳನ್ನು ಮನ್ನಾ ಮಾಡಿದ ಖಾಸಗಿ ವಲಯದ ಬ್ಯಾಂಕುಗಳ ಪೈಕಿ ಮೊದಲ ಮೂರು ಸ್ಥಾನದಲ್ಲಿವೆ. ಕಳೆದ ಹತ್ತು ವರ್ಷಗಳಲ್ಲಿ ಐಸಿಐಸಿಐ ಬ್ಯಾಂಕ್ 71,198 ಕೋಟಿ ರೂ., ಆಕ್ಸಿಸ್ ಬ್ಯಾಂಕ್ 60,764 ಕೋಟಿ ರೂ., ಎಚ್‌ಡಿಎಫ್‌ಸಿ 43,633 ಕೋಟಿ ರೂ ಸಾಲ ಮನ್ನಾ ಮಾಡಿವೆ.

ಸುಸ್ತಿದಾರರ ಬಗ್ಗೆ ಸರ್ಕಾರದ ದಾಖಲೆಯ ಸಂಪೂರ್ಣ ಚಿತ್ರಣವನ್ನು ಗಮನಿಸಿದಾಗ, ಈ ವರ್ಷದ ಮಾರ್ಚ್ 31 ರೊಳಗೆ ಒಂದು ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ಸುಸ್ತಿ ಮಾಡಿದ ಉದ್ಯಮಿಗಳ ವಿರುದ್ಧ ಸಲ್ಲಿಸಲಾದ ಒಟ್ಟು ದಾವೆಗಳ ಸಂಖ್ಯೆ 26,086 ಆಗಿದೆ. ಈ ಸುಸ್ತಿದಾರರ  ಒಟ್ಟು ಬಾಕಿ 6,01,834 ಕೋಟಿ ರೂಗಳಷ್ಟಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು 4,10,758 ಕೋಟಿ ರೂ.ಗಳ ಸಾಲ ವಸೂಲಿಗಾಗಿ 16,420 ಮೊಕದ್ದಮೆಗಳನ್ನು ದಾಖಲಿಸಿವೆ.

ಖಾಸಗಿ ಬ್ಯಾಂಕುಗಳು ಒಂದು ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ಮರುಪಾವತಿಸದ ಪಕ್ಷಗಳ ವಿರುದ್ಧ 8,194 ಮೊಕದ್ದಮೆಗಳನ್ನು ದಾಖಲಿಸಿವೆ. ಒಟ್ಟಾರೆಯಾಗಿ, ಈ ಘಟಕಗಳು 1,68,031 ಕೋಟಿ ರೂ.ಗಳ ಸಾಲವನ್ನು ಬಾಕಿ ಉಳಿಸಿಕೊಂಡಿವೆ. ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದಂತೆ ಒಂದು ಪ್ರವೃತ್ತಿ ಇರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 2005-14ರ ಅವಧಿಯಲ್ಲಿ 34,993 ಕೋಟಿ ರೂಗಳಷ್ಟಿದ್ದ ಸುಸ್ತಿ ಸಾಲದ ಮೊತ್ತ  2015-23ರ ಅವಧಿಯಲ್ಲಿ 5.89 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದ್ದು, ಸುಮಾರು 17 ಪಟ್ಟು ಹೆಚ್ಚಾಗಿದೆ. ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಬಲ್ಲ ಬಲಿಷ್ಠ ಆಡಳಿತ ಅಥವಾ ಸರ್ಕಾರದ ಭರವಸೆ ಮರೀಚಿಕೆಯಾಗಿಯೇ ಉಳಿದಿದೆ.

ಇದನ್ನೂ ಓದಿ:‘ನೆಹರೂ’ ಎಂದರೆ ಬಲಪಂಥೀಯ ಸರ್ಕಾರ ಭಯಪಡುತ್ತಿರುವುದೇಕೆ?

ಶ್ರೀಮಂತರಿಗೆ ‘ಉಚಿತಗಳು’

ಕಲ್ಯಾಣ ಯೋಜನೆಗಳ ವೆಚ್ಚಗಳನ್ನು ಕುರಿತು ಸಾಕಷ್ಟು ಸಾರ್ವಜನಿಕ ಚರ್ಚೆ ಮಾಡಲಾಗಿದೆ. ಆರ್ಥಿಕ ವಿಶ್ಲೇಷಕರು, ವಿಮರ್ಶಕರು ಅವುಗಳನ್ನು “ಉಚಿತಗಳು” ಅಥವಾ “ರೇವಾಡಿ” (ಅಂದರೆ ಕುರುಕಲು ಸಿಹಿ ತಿಂಡಿ ಎಂದರ್ಥ) ಎಂದು ಬಣ್ಣಿಸಿದ್ದಾರೆ, ಆದರೆ ಸಾರ್ವಜನಿಕ ವೆಚ್ಚಗಳಲ್ಲಿ ತೊಡಗಿರುವ ರಾಜ್ಯ ಸರ್ಕಾರಗಳನ್ನು ಹಣಕಾಸಿನ ವಿಚಾರದಲ್ಲಿ ಅಪ್ರಮಾಣಿಕ ಎಂದೋ ಅಥವಾ  ಬೇಜವಾಬ್ದಾರಿಯುತ ಎಂದೋ ದೂಷಿಸಲಾಗುತ್ತದೆ.  ಇದೆಲ್ಲದರ ನಡುವೆ ಕಂಪನಿಗಳ ಬ್ಯಾಲೆನ್ಸ್ ಶೀಟ್ ಗಳಿಂದ ಅಪಾರ ಪ್ರಮಾಣದ ಕಾರ್ಪೊರೇಟ್ ಸಾಲ ಅಳಿಸಿ ಹೋಗಿದೆ. ಈ ಮೊತ್ತಗಳು ಬೃಹತ್‌ ಪ್ರಮಾಣದಲ್ಲಿರುವುದರಿಂದ ಸಾಮಾನ್ಯ ಜನರಿಗೆ ಅಂತಹ ಮನ್ನಾಗಳನ್ನು ನಿಖರವಾಗಿ ಅಳತೆ ಮಾಡುವುದಾಗಲೀ, ಗ್ರಹಿಸುವುದಾಗಲೀ ಕಷ್ಟಕರವಾಗುತ್ತದೆ.

ಈ ನಿಟ್ಟಿನಲ್ಲಿ ಈ ಕೆಲವು  ಉದಾಹರಣೆಗಳು ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನದಲ್ಲಿಡಲು  ನೆರವಾಗಬಹುದು.

ಒಡಿಷಾದ ಬಾಲಸೋರ್ನಲ್ಲಿ ಕನಿಷ್ಠ 292 ಜನರ ಸಾವಿಗೆ ಕಾರಣವಾದ ದುರಂತ ರೈಲು ಅಪಘಾತವು ಸುರಕ್ಷತೆಗಾಗಿ ಖರ್ಚು ಮಾಡುವ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ 2022ರಲ್ಲಿ ಪ್ರಕಟಿಸಿದ 23 ನೇ ವರದಿಯ ಪ್ರಕಾರ, ಹಳೆಯ ಹಳಿಗಳನ್ನು ಬದಲಾಯಿಸಲು ಖರ್ಚು ಮಾಡಿದ ಹಣ ಸಾಕಾಗುವುದಿಲ್ಲ. ಹಳಿಗಳ ನವೀಕರಣಕ್ಕೆ ಅಗತ್ಯವಿರುವ ಹಣದ ಒಟ್ಟು ಕೊರತೆ 1,03,395 ಕೋಟಿ ರೂಗಳಷ್ಟಿದ್ದು ಇದಕ್ಕೆ ಹೋಲಿಸಿದರೆ ಆ ವರ್ಷ ಸಾರ್ವಜನಿಕ ವಲಯದ ಬ್ಯಾಂಕುಗಳು 1,33,945 ಕೋಟಿ ರೂ.ಗಳನ್ನು ಮನ್ನಾ ಮಾಡಿವೆ.

2021-22ರ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮನ್ನಾ ಮಾಡಿರುವ ಒಟ್ಟು ಸಾಲದ ಮೊತ್ತ 1,72,800 ಕೋಟಿ ರೂಗಳಾಗಿದ್ದು, ಇದು 2023-24ರಲ್ಲಿ ಯಾವುದೇ ಮೂರು ಪ್ರಮುಖ ಸಾಮಾಜಿಕ ಕ್ಷೇತ್ರಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಖಾತರಿ ಯೋಜನೆಯ ವೆಚ್ಚಗಳನ್ನು ಸ್ವಲ್ಪ ಹೆಚ್ಚಿಸಬೇಕೆಂಬ ಬೇಡಿಕೆಗಳು ಹುಬ್ಬೇರುವಂತೆ ಮಾಡುತ್ತವೆ. ಆದರೆ ಇತ್ತೀಚಿನ ಬದಲಾವಣೆಗಳನ್ನು ಗಮನಿಸಿದರೆ ನಾವು ಸಾಲ ಮನ್ನಾ ಪ್ರಮಾಣವನ್ನು ಹೆಚ್ಚಿಸಲು ದಾರಿ ಮಾಡಿಕೊಡುವುದು ಕಾಣುತ್ತಿದೆ.

ಈ ಭಾರಿ ಪ್ರಮಾಣದ ಸಾರ್ವಜನಿಕ ಹಣವನ್ನು ಮಾಡುವುದನ್ನು ರಾಷ್ಟ್ರೀಯ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಗೊಳಪಡಿಸದೆ ಹೋದರೆ ಮತ್ತು ಭಾರತದ ಜನತೆ  ನಮ್ಮ ಆಡಳಿತಗಾರರಿಂದ ಅವರ ಭರವಸೆಗಳ ಬಗ್ಗೆ ಉತ್ತರದಾಯಿತ್ವವನ್ನು ಆಗ್ರಹಿಸದೆ ಹೋದರೆ ಅದು ಪ್ರಜಾಪ್ರಭುತ್ವದ ಮೂಲಾಧಾರವಾದ ಸಾರ್ವಜನಿಕ ಉತ್ತರದಾಯಿತ್ವದ ವ್ಯವಸ್ಥೆಯ ಸಂಪೂರ್ಣ ಕುಸಿತದ ಸೂಚನೆಯಾಗಿಯೇ ಕಾಣುತ್ತದೆ.

(ಅನಿರ್ಬನ್ ಭಟ್ಟಾಚಾರ್ಯ ಅವರು ರಾಷ್ಟ್ರೀಯ ಹಣಕಾಸು ತಂಡದ ಮುಂಚೂಣಿ ವಕ್ತಾರರಾಗಿದ್ದಾರೆ ಮತ್ತು ಪ್ರಣಯ್ ಸಿಂಗ್ ಸೆಂಟರ್ ಫಾರ್ ಫೈನಾನ್ಷಿಯಲ್ ಅಕೌಂಟಬಿಲಿಟಿಯಲ್ಲಿ ದತ್ತಾಂಶ ವಿಶ್ಲೇಷಕರಾಗಿದ್ದಾರೆ.)

Donate Janashakthi Media

Leave a Reply

Your email address will not be published. Required fields are marked *