ಜುಬೀನ್ ಗರ್ಗ್ ಅವರ ಅಂತಃಕರಣ

ಗಾಯಕ ಜುಬೀನ್ ಗರ್ಗ್ ಸಾವಿನ ಸುದ್ದಿ ಓದಿದ ಕೂಡಲೆ ಅವನು ಹಾಡಿರುವ ನನ್ನಿಷ್ಟದ ಹಾಡೊಂದು ನೆನಪಾಗಿ, ನೆಪವಾಗಿ, ಒಂದು ಪೋಸ್ಟ್ ಹಾಕಿದ್ದೆ. ಅದಾಗಿ ಒಂದು ವಾರ ಕಳೆದಿದೆ. ಈ ಒಂದು ವಾರವಿಡೀ ಜುಬೀನ್ ನನ್ನ ಯೋಚನೆಗಳನ್ನು ಆವರಿಸಿಕೊಂಡಿದ್ದಾನೆ. ನನ್ನ ಆ ಪೋಸ್ಟ್ ಎಷ್ಟು ಅಸಮರ್ಪಕವಾದುದು ಎಂಬ ಪಾಪಪ್ರಜ್ಞೆ ಕೂಡ. ಜೊತೆಗೆ ಒಬ್ಬ ವ್ಯಕ್ತಿ ಹೇಗೆ ಲಕ್ಷಾಂತರ ಜನರ ಹೃದಯದ ಮಿಡಿತವಾಗಬಲ್ಲ ಎಂಬ ಸೋಜಿಗವೂ ಕಾಡುತ್ತಿದೆ. ಮೇಲ್ನೋಟಕ್ಕೆ ಜುಬೀನ್ ಒಬ್ಬ ಯಶಸ್ವಿ, ಪ್ರಸಿದ್ಧ, ಜನಪ್ರಿಯ ಗಾಯಕ. ಹಾಗಾಗಿ ಆತನ ಸಾವು ಒಂದು ವ್ಯಾಪಕವಾದ ಸುದ್ದಿಯಾಗುವುದು ವಿಶೇಷವೇನಲ್ಲ. ಹಾಗೆ ನೋಡಿದರೆ ಅವನಿಗಿಂತ ಯಶಸ್ವಿಯಾದ, ಉತ್ತಮ ತಾಲೀಮು ಪಡೆದು ಅತ್ಯಂತ ಕ್ಲಿಷ್ಟಕರ ಪಟ್ಟುಗಳನ್ನು ಲೀಲಾಜಾಲವಾಗಿ ಹಾಡಬಲ್ಲ ಅದೆಷ್ಟು ಗಾಯಕರಿಲ್ಲ. 

ಪ್ರೇಮ್ ಸಾಗರ್ ಕಾರಕ್ಕಿ

ಆದ್ದರಿಂದ ಜುಬೀನ್ ಜನರ ಹೃದಯದಲ್ಲಿ ನೆಲೆಯಾದದ್ದು ಕೇವಲ ತನ್ನ ಪ್ರತಿಭೆಯಿಂದಲ್ಲ, ಅದರ ಜೊತೆಗೆ ಆತನಿಗಿದ್ದ ನೇರ, ಪ್ರಾಮಾಣಿಕ, ಮಾನವೀಯ ವ್ಯಕ್ತಿತ್ವದಿಂದ. ಒಂದು ವಾರದಲ್ಲಿ ಆತನ ಹಲವು ಸಂದರ್ಶನಗಳನ್ನು, ವೇದಿಕೆ ಕಾರ್ಯಕ್ರಮಗಳನ್ನು ನಾನು ನೋಡಿದೆ. ಒಂದೇ ಒಂದು ಕ್ಷಣಕ್ಕೂ ಆತನದು ತೋರಿಕೆಯ ವ್ಯಕ್ತಿತ್ವ ಅನಿಸಲಿಲ್ಲ. ಬಾಲಿವುಡ್ಡಿನಲ್ಲಿ ಯಶಸ್ಸು ಪಡೆದ ಆತ ಅಲ್ಲಿನ ತೋರಿಕೆಯ ಪ್ರಪಂಚ ಒಗ್ಗದೆ ತನ್ನ ತವರು ನೆಲಕ್ಕೆ ವಾಪಸಾಗಿ ಅಸ್ಸಾಮಿನ ಅಸ್ಮಿತೆಯ ಪ್ರತೀಕವಾದವನು. ಹಾಗಾಗಿಯೇ ಮೊನ್ನೆ ಆತನ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರೆಲ್ಲ ಪತ್ರಕರ್ತರ ಪ್ರಶ್ನೆಗಳಿಗೆ ‘ಜುಬೀನ್ ದಾ ಎಂದರೆ ಅಸ್ಸಾಮ್!’ ಎನ್ನುತ್ತ ಗದ್ಗದಿತರಾದದ್ದು.

ಜುಬೀನ್ ಎಂದಿಗೂ ಸೆಲೆಬ್ರಿಟಿಯಾಗಲಿಲ್ಲ, ಎಲ್ಲರಿಗೂ ಎಟಕುವಂಥ ಸಾಮಾನ್ಯ ಮನುಷ್ಯನಾಗಿಯೇ ಉಳಿದ. ಗುವಾಹಟಿಯ ಬೀದಿಯಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ತಿರುಗಾಡುತ್ತ ರಸ್ತೆಬದಿಯ ಹೋಟೆಲುಗಳಲ್ಲಿ ತಿನ್ನುತ್ತ ಒಬ್ಬ ಸಹಜ ಮನುಷ್ಯನಾಗಿ ಬದುಕಿದ. ಅವನ ಭೇಟಿಗೆ ಯಾವುದೇ ಅಪಾಯಿಂಟ್ಮೆಂಟ್ ಬೇಕಿರಲಿಲ್ಲವಂತೆ. ‘ಬಾಲಿವುಡ್ಡಿಗೆ ನಾನು ಬೇಕಾಗಿದ್ದರೆ ಇಲ್ಲೇ ಅಸ್ಸಾಮಿಗೆ ಬಂದು ನನ್ನ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿಕೊಂಡು ಹೋಗಲಿ’ ಎನ್ನುವ ಸ್ವಾಭಿಮಾನದ ಗರ್ವಿಯಾಗಿದ್ದನೇ ಹೊರತು ಅಹಂಕಾರಿಯಾಗಿರಲಿಲ್ಲ. ಮಾನವೀಯ ಅಂತಃಕರಣವುಳ್ಳವನಾಗಿದ್ದ ಆತ ಯಾವುದೇ ಪ್ರಚಾರವಿಲ್ಲದೆ ಅದೆಷ್ಚೋ ಜನಕ್ಕೆ ಹಣಕಾಸು ಸಹಾಯ ಮಾಡಿರುವ ಉದಾಹರಣೆಗಳಿವೆ.

ಇದನ್ನೂ ಓದಿ: ಕಲಬುರಗಿ | ಧರ್ಮಸ್ಥಳದ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ : ಕೆ.ನೀಲಾ

ಯಾರದೋ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಓದಿದಂತೆ, ಗುವಾಹಟಿ ನಗರದ ರಸ್ತೆಯೊಂದರಲ್ಲಿ ರಾತ್ರಿ ಕಾರಿನಲ್ಲಿ ಹೋಗುತ್ತಿರುವಾಗ ಯಾರೋ ಒಬ್ಬರು ಬಾಲಕಿಯೊಬ್ಬಳನ್ನು ಎಳೆದಾಡುತ್ತಿರುವುದನ್ನು ಕಂಡು ಕಾರು ನಿಲ್ಲಿಸಿ ಆಕೆಯನ್ನು ರಕ್ಷಿಸಿ ನೇರ ಪೋಲೀಸ್ ಠಾಣೆಗೆ ಹೋಗಿ ಆ ವ್ಯಕ್ತಿಗೆ ಶಿಕ್ಷೆಯಾಗುವವರೆಗೂ ಫಾಲೋ ಅಪ್ ಮಾಡಿದನಂತೆ. ಆನಂತರ ಅಂಥ ಹಲವಾರು ಶೋಷಿತ ಹೆಣ್ಣುಮಕ್ಕಳ ರಕ್ಷಣೆಗೆ ತನ್ನ ಸಹಕಾರ ನೀಡಿದನಂತೆ. ಎಷ್ಟು ಜನ ಸೆಲೆಬ್ರಿಟಿಗಳು ಹೀಗೆ ಮಾಡಿಯಾರು? ಜಾತಿ, ಧರ್ಮ, ದೇವರುಗಳಲ್ಲಿ ನಂಬಿಕೆಯಿಲ್ಲದ ಆತ ‘ನಾನು ಕೇವಲ ಮನುಷ್ಯ’ ಎಂದೇ ಹೇಳುತ್ತಿದ್ದ. ಯಾವುದೇ ರಾಜಕೀಯ ಪಕ್ಷದ ಜೊತೆಯೂ ಗುರುತಿಸಿಕೊಳ್ಳದ ಆತ ಯಾವುದೇ ಪಕ್ಷದ ಅನ್ಯಾಯಕರ ಧೋರಣೆ/ನೀತಿಗಳನ್ನು ವಿರೋಧಿಸುತ್ತಿದ್ದ.

ತನ್ನನ್ನು ‘ಎಡಪಂಥೀಯ ಸಮಾಜವಾದಿ’ ಎಂದು ಕರೆದುಕೊಂಡಿದ್ದ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ನೇರವಾಗಿ ಮುಂಚೂಣಿಯಲ್ಲಿ ಪಾಲ್ಗೊಂಡು ಅಸ್ಸಾಮಿ ಅಸ್ಮಿತೆಗೆ ಒಂದು ಬಲ ತಂದಿದ್ದ. ಇಂಥ ಹಲವಾರು ಜನಪರ ಹೋರಾಟಗಳಲ್ಲಿ ಆತ ಮುಂದಿನ ಸಾಲಿನಲ್ಲಿರುತ್ತಿದ್ದ. ಪ್ರವಾಹ ಇತ್ಯಾದಿ ವಿಕೋಪಗಳ ಸಂದರ್ಭದಲ್ಲಿಯೂ ಪರಿಹಾರ ಕಾರ್ಯಗಳಲ್ಲಿ ಧನಸಹಾಯ ಮಾಡುವುದರ ಜೊತೆಗೆ ಖುದ್ದಾಗಿಯೂ ಪಾಲ್ಗೊಳ್ಳುತ್ತಿದ್ದ. ಇಂಥ ವ್ಯಕ್ತಿತ್ವದ ಒಬ್ಬ ವ್ಯಕ್ತಿ ಅಸ್ಸಾಮಿನ ಜನಮಾನಸದಲ್ಲಿ ಆಳವಾಗಿ ನೆಲೆನಿಂತಿರುವುದು ಸಹಜವೇ ಸರಿ.

‘ಇದ್ದರೂ ಅಸ್ಸಾಮಿನಲ್ಲೇ, ಸತ್ತರೂ ಇಲ್ಲೇ ರಾಜನಂತೆ ಸಾಯುತ್ತೇನೆ’ ಎನ್ನುತ್ತಿದ್ದ ಈತ ಅಕ್ಷರಶಃ ರಾಜನಂತೆಯೇ ತನ್ನ ಅಂತಿಮಯಾತ್ರೆಯನ್ನು ಪೂರ್ಣಗೊಳಿಸಿದ್ದಾನೆ. ಅಸ್ಸಾಮಿನ ಮೂಲೆಮೂಲೆಗಳಿಂದ ಅಬಾಲವೃದ್ಧ ಮಹಿಳೆಯರಾದಿಯಾಗಿ ಲಕ್ಷಾಂತರ ಜನ ಈತನ ಅಂತಿಮದರ್ಶನಕ್ಕೆ ಗುವಾಹಟಿಗೆ ಸಾಗರೋಪಾದಿಯಲ್ಲಿ ಬಂದಿದ್ದಾರೆ. ‘ಮಾಯಾಬಿನಿ ರಾತಿರ್ ಬುಕೊತ್’ ಎಂಬುದು ಅವನ ಪ್ರಸಿದ್ಧ ಹಾಡುಗಳಲ್ಲೊಂದು. ನಾನು ಸತ್ತಾಗ ಈ ಹಾಡನ್ನು ಹಾಡಬೇಕು ಎಂದೊಮ್ಮೆ ಆತ ವೇದಿಕೆಯ ಮೇಲೆ ಹೇಳಿದ್ದ. ಮೊನ್ನೆ ಅಸ್ಸಾಮಿನ ಗಾಳಿಯ ತುಂಬೆಲ್ಲ ಈ ಹಾಡು ಅಲೆಅಲೆಯಾಗಿ ಹರಿದಾಡಿತು.

ಜನರು ಗದ್ಗದಿತರಾಗಿ ಈ ಹಾಡು ಹಾಡುತ್ತಿರುವುದನ್ನು ನೋಡಿದರೆ ಎಂಥವರೂ ಭಾವುಕರಾಗದೆ ಇರಲು ಸಾಧ್ಯವಿಲ್ಲ. ಈ ಒಂದು ವಾರದಲ್ಲಿ ನಾನು ಈ ದೃಶ್ಯವನ್ನು ನೋಡಿದಾಗೆಲ್ಲ ಕಣ್ಣುಗಳು ತೇವಗೊಂಡಿವೆ. ಇವನು ವಿರೋಧಿಸಿದ ಪಕ್ಷ/ಧೋರಣೆಗಳನ್ನು ಪ್ರತಿನಿಧಿಸುವ ಅಸ್ಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಕೂಡ ಕಣ್ಣಿನಲ್ಲಿ ನೀರಿಳಿಸುತ್ತ ಈ ಹಾಡು ಗುನುಗುತ್ತಿದ್ದುದು ಈತನ ಸಾವು ಅಸ್ಸಾಮನ್ನು ಕಾಡುತ್ತಿರುವ ಪರಿಗೆ ಸಾಕ್ಷಿಯಾಗಿದೆ. ಅಸ್ಸಾಮ್ ಅಕ್ಷರಶಃ ಶೋಕಸಾಗರದಲ್ಲಿ ಮುಳುಗಿದೆ. ಪ್ರತಿ ಮನೆಯಲ್ಲೂ ಒಂದು ಸಾವು ಸಂಭವಿಸಿದ ಹಾಗಾಗಿದೆ.

ಯಾರ ಮಾತಿನಲ್ಲೂ ಮನಸಿನಲ್ಲೂ ಜುಬೀನ್ ದಾ ಅಲ್ಲದೆ ಮತ್ತೇನೂ ಇಲ್ಲ. ಈತನ ಅಂತ್ಯಕ್ರಿಯೆ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನ ನೆರೆದ ಅಂತ್ಯಕ್ರಿಯೆಗಳಲ್ಲಿ ನಾಲ್ಕನೆಯದಾಗಿ ದಾಖಲೆ ಮಾಡಿದೆ. ರಕ್ಷಣೆಯ ಜವಾಬ್ದಾರಿ ಹೊತ್ತ ಪೋಲೀಸರು ಸ್ವತಃ ದುಖಃ ಸಹಿಸಲಾಗದೆ ಕಣ್ಣೀರಿಡುತ್ತಿರುವ ದೃಶ್ಯಗಳು ನಿಜಕ್ಕೂ ಮನಕಲಕುತ್ತವೆ. ಮಾನವೀಯ ಅಂತಃಕರಣದೊಂದಿಗೆ ಪ್ರಾಮಾಣಿಕವಾಗಿ ಸರಳವಾಗಿ ಬದುಕುವುದು, ಕಣ್ಣೆದುರಿನ ಅನ್ಯಾಯವನ್ನು ನಿರ್ಭಿಡೆಯಿಂದ ವಿರೋಧಿಸುವುದು ಎಷ್ಟು ಮುಖ್ಯ ಎಂಬುದನ್ನು ತನ್ನ ಸಾವಿನಲ್ಲೂ ಜುಬೀನ್ ನಮ್ಮೆದುರಿಗಿಟ್ಟು ನಡೆದಿದ್ದಾನೆ… ಇಂಥವರು ಬಹು ಅಪರೂಪಕ್ಕೊಮ್ಮೆ ಹುಟ್ಟುತ್ತಾರೆ……

ಇದನ್ನೂ ನೋಡಿ: ಮುಸುಕುಧಾರಿ ಭೀಮ ಆಗಿದ್ದಾಗ ನಿಜ ಹೇಳಿದ, ಚಿನ್ನಯ್ಯ ಆದ ಮೇಲೆ ಸುಳ್ಳು ಹೇಳಿದ – ಎಸ್‌ ಬಾಲನ್‌ Janashakthi Media

Donate Janashakthi Media

Leave a Reply

Your email address will not be published. Required fields are marked *