ಯುದ್ಧನೌಕೆಗೆ ಮಹಿಳೆಯರ ನಿಯೋಜನೆ: ನೌಕಾಪಡೆಯಿಂದ ಐತಿಹಾಸಿಕ ಕ್ರಮ

ನವದೆಹಲಿ: ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಯುದ್ಧನೌಕೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳು ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದರೂ, ಯುದ್ಧನೌಕೆಯಲ್ಲಿ ಕಾರ್ಯಾಚರಣೆ ಕರ್ತವ್ಯಕ್ಕೆ ಮಹಿಳೆಯರನ್ನು ನಿಯೋಜಿಸುತ್ತಿರುವುದು ಇದೇ ಮೊದಲು.

ಯುದ್ಧನೌಕೆಯಲ್ಲಿರುವ ಹಲವು ಸೆನ್ಸಾರ್‌ಗಳ ಬಳಕೆ ಬಗ್ಗೆ ಇವರಿಬ್ಬರೂ ತರಬೇತಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನೌಕಾಪಡೆಯ ಭಾಗವಾಗಲಿರುವ ಅತ್ಯಾಧುನಿಕ ಎಂಎಚ್-60 ಆರ್‌ ಹೆಲಿಕಾಪ್ಟರ್‌ಗಳನ್ನೂ ಈ ಮಹಿಳಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಕ್ಷಿಪಣಿ ಮತ್ತು ಟಾರ್ಪೆಡೊಗಳ ಮೂಲಕ ಶತ್ರುದೇಶದ ಯುದ್ಧನೌಕೆ, ಜಲಾಂತರ್ಗಾಮಿಗಳನ್ನೂ ನಾಶಪಡಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್‌ಗೆ ಇದೆ.

ಮಹಿಳೆಯರ ನಿಯೋಜನೆ ಘೋಷಣೆ ಹೊರಬಿದ್ದ ಬೆನ್ನಿಗೇ ನೂರಾರು ಮಂದಿ ಟ್ವಿಟರ್‌ನಲ್ಲಿ ಇವರಿಬ್ಬರನ್ನೂ ಅಭಿನಂದಿಸಿದ್ದಾರೆ.

‘ನಮಗೆ ಪುರುಷ ಸಿಬ್ಬಂದಿಗೆ ಸರಿಸಮನಾದ, ಅತ್ಯಂತ ಕಠಿಣ ತರಬೇತಿ ಸಿಕ್ಕಿತ್ತು. ಎಂಥದ್ದೇ ಒತ್ತಡವನ್ನೂ ನಾವು ನಿಭಾಯಿಸಬಲ್ಲೆವು’ ಎಂದು ಈ ಮಹತ್ತರ ನಿಯೋಜನೆಯ ಭಾಗವಾಗಿರುವ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಪ್ರತಿಕ್ರಿಯಿಸಿದರು.

ಭಾರತೀಯ ವಾಯುಪಡೆಯು ರಫೇಲ್ ಯುದ್ಧವಿಮಾನಕ್ಕೆ ಮಹಿಳಾ ಫೈಟರ್ ಪೈಲಟ್‌ ಒಬ್ಬರನ್ನು ನಿಯೋಜಿಸಿದ ಬೆನ್ನಿಗೇ ನೌಕಾಪಡೆಯಿಂದ ಈ ಮಾಹಿತಿ ಹೊರಬಿದ್ದಿದೆ.

ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪದವಿ ‘ಅಬ್‌ಸರ್ವರ್ಸ್’ ಪದವಿ ಪಡೆದ 17 ಅಧಿಕಾರಿಗಳಲ್ಲಿ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್‌ ಸಹ ಸೇರಿದ್ದಾರೆ ಎಂದು ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *