ಬೆಂಗಳೂರು: ಯುವಕರೇ ದೇಶದ ಆಸ್ತಿ, ಯುವಕರಿಂದಲೇ ದೇಶ ಮುನ್ನಡೆಯಬೇಕು. ದೇಶದ ಉಳಿವಿಗಾಗಿ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಆಶ್ರಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಉತ್ತಮ ಭಾರತದ ಅಡಿಪಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, 2024ರ ಚುನಾವಣೆ ನಮ್ಮ ಮುಂದಿನ ಗುರಿಯಾಗಿದ್ದು, ಈ ಗುರಿತಲುಪಬೇಕಿದೆ ಎಂದರು.
ಇದನ್ನೂ ಓದಿ:ಮಹಿಳೆಯರು ರಾಜಕೀಯ ಏಣಿಯನ್ನು ವೇಗವಾಗಿ ಏರುವುದು ಸುಲಭವಲ್ಲ : ಲಕ್ಷ್ಮೀ ಹೆಬ್ಬಾಳ್ಕರ್
ಭವಿಷ್ಯದ ನಾಯಕರನ್ನು ರೂಪಿಸಲು ಯುವ ಘಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ನಾನು ಕೂಡ ಪಂಚಾಯತಿ ಮಟ್ಟದಲ್ಲಿ ರಾಜಕೀಯ ಆರಂಭಿಸಿ ಇಂದು ಕರ್ನಾಟಕದ ಸಚವೆಯಾಗಿರುವೆ. ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಎದೆಗುಂದದೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಇಂದು ಸಚಿವೆಯಾಗಿರುವೆ ಎಂದರು.
ನಮ್ಮೆಲ್ಲರ ನಾಯಕ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೈಲಿಗಟ್ಟಿದರೂ ಎದೆಗುಂದದೆ ಮುನ್ನಡೆದರು. ನಮ್ಮ ನಾಯಕ ಸಿದ್ದರಾಮಯ್ಯ ನವರ ಜೊತೆ ಪಕ್ಷ ಕಟ್ಟಿದ ಫಲವಾಗಿ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಅಧಿಕಾರ ಹಿಡಿದಿದೆ ಎಂದು ಸಚಿವರು ಹೇಳಿದರು. ಯುವ ಸಮುದಾಯ ಎಂದರೆ ಭವಿಷ್ಯ ಎಂಬುದನ್ನು ಅರಿತ ಇಂದಿರಾ ಗಾಂಧಿ ಅವರು, ಭವಿಷ್ಯದ ನಾಯಕರ ನಿರ್ಮಾಣಕ್ಕೆ ಯುವ ಕಾಂಗ್ರೆಸ್ ಆರಂಭಿಸಿದರು. ಪರಿಣಾಮ ಯುವ ಕಾಂಗ್ರೆಸ್ ನಿಂದ ಅನೇಕ ನಾಯಕರು ಬೆಳೆದು ಬಂದಿದ್ದಾರೆ.
ರಾಜ್ಯದಲ್ಲಿ ನಾನು ಸೇರಿದಂತೆ ಅನೇಕ ನಾಯಕರು ಯುವ ಕಾಂಗ್ರೆಸ್‍ನಲ್ಲಿ ಪಳಗಿದವರು. ನಾಯಕತ್ವ, ಹೋರಾಟದ ಗುಣಗಳನ್ನು ಬೇಳೆಯಸಿಕೊಳ್ಳಲು ಯುವ ಕಾಂಗ್ರೆಸ್ ಗರಡಿ ಮನೆಯಂತೆ, ನೀವು ಆ ಗರಡಿ ಮನೆಯಲ್ಲಿ ಎಂತಹ ಪಟ್ಟುಗಳನ್ನು ಕಲಿಯುತ್ತೀರಿ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.