ಯುವಂ 2023: ಕೇರಳದ ಯುವಜನರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರಧಾನಿ

ಕೇರಳ : ಕೊಚ್ಚಿ ಜಲ ಮೆಟ್ರೊ ಮತ್ತು ವಂದೇಭಾರತ್ ರೈಲು ಉದ್ಘಾಟನೆಗೆ ಸೇರಿದಂತೆ ಕೇರಳಕ್ಕೆ ಎರಡು ದಿನಗಳ ಪ್ರಧಾನಿ ಭೇಟಿಯ ಕಾಲದಲ್ಲಿ ಏಪ್ರಿಲ್ 24 ರಂದು ಕೊಚ್ಚಿಯಲ್ಲಿ ‘ಯುವಂ 2023’ ಸಮಾವೇಶದಲ್ಲಿ ಕೇರಳದ ಯುವಜನರೊಂದಿಗೆ ಪ್ರಧಾನಿಗಳ ಸಂವಾದದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

‘ವೈಬ್ರೆಂಟ್ ಯೂತ್ ಫಾರ್ ಮೋಡಿಫೈಯಿಂಗ್ ಇಂಡಿಯಾ’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದು ರಾಜಕೀಯೇತರ ಕಾರ್ಯಕ್ರಮ ಎಂದು ಹೇಳಿಕೊಳ್ಳಲಾಗಿತ್ತು. ಆದರೆ ವೇದಿಕೆಯಲ್ಲಿ ಬಿಜೆಪಿ ನಾಯಕರೇ ತುಂಬಿದ್ದರು ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಬಿಜೆಪಿಗೆ ಹೊಸ ದಾಗಿ ಪ್ರವೇಶಿಸಿದ ಅನಿಲ್ ಆಂಟನಿ ಮತ್ತು ಇತರರು ಉಪಸ್ಥಿತರಿದ್ದರು.

ಆನ್‌ಲೈನ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಮತ್ತು ಮೋದಿ ಅವರೊಂದಿಗೆ ಸಂವಾದ ನಡೆಸಲು ‘ಯುವಂ’ ವೇದಿಕೆಯಾಗಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಪ್ರಧಾನ ಮಂತ್ರಿಗಳು 45 ನಿಮಿಷಗಳ ಉಪನ್ಯಾಸ ನೀಡಿದ ನಂತರ ತಕ್ಷಣವೇ ನಿರ್ಗಮಿಸಿದರು. ಯುವಜನರ ಪ್ರಶ್ನೆಗಳನ್ನು ಕೇಳಲು ನಿಲ್ಲಲಿಲ್ಲಎಂದು ವರದಿಯಾಗಿದೆ. ಆದರೂ ಕೆಲವು ಮುಖ್ಯಧಾರೆಯ ಮಾಧ್ಯಮಗಳು ಇದೊಂದು ಹೊಸ ದಾರಿ ತೆರೆದ ಕಾರ್ಯಕ್ರಮ ಎಂದೆಲ್ಲ ಹೇಳುವಂತಿದೆ.

ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಎ ಎ ರಹೀಮ್ “ಯುವಂ 2023 ರ ಸಂಘಟಕರು ಯುವಜನರು ಪ್ರಧಾನ ಮಂತ್ರಿಯೊಂದಿಗೆ ಸಂವಹನ ನಡೆಸಬಹುದು ಮತ್ತು ಈ ಕಾರ್ಯಕ್ರಮ ರಾಜಕೀಯಾತೀತವಾಗಿರುತ್ತದೆ ಎಂದು ಬಿಂಬಿಸಿದ್ದರು. ಆದರೆ, ಯಾವುದೇ ಪ್ರಶ್ನೆಗಳಿಗೆ ಅವಕಾಶ ಕೊಡಲಿಲ್ಲ. ಪ್ರಧಾನಿ ರಾಜಕೀಯ ಭಾಷಣ ಮಾಡಿದರು ಮತ್ತು ಸ್ಥಳದಿಂದ ನಿರ್ಗಮಿಸಿದರು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಪ್ರಶ್ನೆಯೆಂದರೆ ಭಯಪಡುವವರಿಗೆ 100 ಪ್ರಶ್ನೆಗಳು”
ಈ ಯುವ ಸಮಾವೇಶ ನಡೆಸುವ ಬಗ್ಗೆ ಪ್ರಕಟಣೆ ಮಾಡಿದ ಕೂಡಲೇ ಮೋದಿಯವರಿಗೆ ಕೇಳುವ ಪ್ರಶ್ನೆಗಳ ಪೂರ್ವ-ಪರೀಕ್ಷಣೆ ನಡೆಸಲಾಗುವುದು, ಮೊದಲೇ ಮಂಜೂರು ಮಾಡಿದ ಪ್ರಶ್ನೆಗಳನ್ನಷ್ಟೇ ಕೇಳಲಾಗವುದು ಎಂದು ಪ್ರತಿಕ್ರಿಯಿಸಿದ ಕೇರಳ ಡಿವೈಎಫ್‍ಐ “ಭಾರತದ ಯುವಜನ- ಪ್ರಧಾನಿಗಳನ್ನು ಕೇಳುತ್ತಾರೆ” ಎಂಬ ವಿಷಯದ ಅಡಿಯಲ್ಲಿ 100 ಪ್ರಶ್ನೆಗಳನ್ನು ಪ್ರಕಟಿಸಿ ಎಲ್ಲ ಜಿಲ್ಲೆಗಳಲ್ಲಿ ಎಪ್ರಿಲ್‍ 23 ಮತ್ತು 24ರಂದು ಸಾರ್ವಜನಿಕ ಸಭೆಗಳನ್ನು ನಡೆಸಿದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 121 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 107 ನೇ ಸ್ಥಾನಕ್ಕೆ ಏಕೆ ಕುಸಿದಿದೆ ಎಂಬುದು ಇದರಲ್ಲಿ ಮೊದಲ ಪ್ರಶ್ನೆಯಾಗಿದ್ದರೆ, 2014ರ ಚುನಾವಣಾ ಪ್ರಚಾರದ ವೇಳೆ ನೀಡಿದ ಭರವಸೆಯಂತೆ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳು ಏಕಿಲ್ಲ, 100 ದಿನಗಳಲ್ಲಿ ವಿದೇಶದಲ್ಲಿ ಕೂಡಿಟ್ಟಿರುವ ಕಪ್ಪು ಹಣವನ್ನು ಹಿಂಪಡೆಯುವುದು ಎಲ್ಲಿಗೆ ಬಂತು, ರೈತರಿಗೆ ಸಿ2+50% ಅನ್ನು ಎಂಎಸ್‌ಪಿಯಾಗಿ ಶಿಫಾರಸು ಮಾಡುವ ಎಂಎಸ್ ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರ ಏಕೆ ನಿರಾಕರಿಸುತ್ತದೆ, ಪುಲ್ವಾಮ ಭಯೋತ್ಪಾದಕ ದಾಳಿಯ ಬಗ್ಗೆ ಮೌನ ಏಕೆ- ಇವೇ ಮೊದಲಾದ ಪ್ರಶ್ನೆಗಳನ್ನು ರಾಜ್ಯಾದ್ಯಂತ ಪ್ರಧಾನ ಮಂತ್ರಿಗಳಿಗೆ ಕೇಳಲಾಯಿತು.


ಕೊಚ್ಚಿ ಸಮಾವೇಶದಲ್ಲಿ ಒಬ್ಬ ಯುವಕ ಕೇಂದ್ರ ಸರಕಾರ ಮೆಟ್ರಿಕ್‍-ಪೂರ್ವ ಸ್ಕಾಲರ್‍ ಶಿಪ್‍ಗಳಿಗೆ .ಬಜೆಟಿನಲ್ಲಿ 41% ಕಡಿತ ಮಾಡಿದ್ದು ಏಕೆ ಎಂದೂ ಕೇಳಿದನಂತೆ. ಕೊಚ್ಚಿಯ ಪಕ್ಕದ ಎರ್ಣಾಕುಳಂನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದವರು ಪ್ರಧಾನಿಗಳಿಗೆ ಪ್ರಶ್ನೆಗಳ ಪ್ಲೆಕಾರ್ಡ್‍ಗಳನ್ನು ಹಿಡಿದುಕೊಂಡಿದ್ದರು.

ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ರಸ್ತೆ ಅಪಘಾತ : ಮಗು ಸೇರಿ ಮೂವರ ಸಾವು, ಇಬ್ಬರು ಗಂಭೀರ

“ಪ್ರಶ್ನಿಸುವುದನ್ನು ನಿಲ್ಲಿಸದಿರುವುದು ಮಹತ್ವದ ಸಂಗತಿ” ಎಂಬ ಆಲ್ಬರ್ಟ್‍ ಐನ್‍ಸ್ಟೈನ್‍ ರ ಉಕ್ತಿಯನ್ನು ನೆನಪಿಸಿರುವ ಕೇರಳ ಡಿವೈಎಫ್‍ಐ, ಪ್ರಧಾನ ಮಂತ್ರಿಗಳು ಅಧಿಕಾರ ವಹಿಸಿಕೊಂಡಂದಿನಿಂದ ಕಳೆದ 9 ವರ್ಷಗಳಲ್ಲಿ ಎಂದೂ ಪತ್ರಿಕಾಗೋಷ್ಠಿ ನಡೆಸಿಲ್ಲ, ಅವರಿಗೆ ಪ್ರಶ್ನೆಗಳೆಂದರೆ ಭಯ ಎಂದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *