ಅಗಾಧ ಸಾಮಾಜಿಕ ಬೆದರಿಕೆಯೆದುರು ಪ್ರಧಾನಿಗಳ ದಿವ್ಯ ಮೌನ!

ದ್ವೇಷ ರಾಜಕೀಯವನ್ನು ನಿಲ್ಲಿಸಲು ಕರೆ ನೀಡಿ- ನಿವೃತ್ತ ನಾಗರಿಕ ಅಧಿಕಾರಿಗಳ ಬಹಿರಂಗ ಪತ್ರ

ನವದೆಹಲಿ: ಭಾರತೀಯ ಜನತಾ ಪಕ್ಷದ ನಿಯಂತ್ರಣದಲ್ಲಿರುವ ಸರ್ಕಾರಗಳು ಬಹಳ “ತತ್ಪರತೆಯಿಂದ” “ದ್ವೇಷದ ರಾಜಕೀಯ”ವನ್ನು ನಡೆಸುತ್ತಿವೆ, ಅದನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡುತ್ತಾರೆ ಎಂಬ ಆಶಾಭಾವನೆಯನ್ನು ನೂರಕ್ಕೂ ಹೆಚ್ಚು ನಿವೃತ್ತ  ಐಎಎಸ್‍ ಮುಂತಾದ ಆಡಳಿತಾಧಿಕಾರಿಗಳು ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

“ದೇಶದಲ್ಲಿ ದ್ವೇಷ ತುಂಬಿದ ವಿನಾಶದ ಉನ್ಮಾದವನ್ನು ನಾವು ನೋಡುತ್ತಿದ್ದೇವೆ, ಅಲ್ಲಿ ಬಲಿಪೀಠದ ಮೇಲೆ ಕೇವಲ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಮಾತ್ರವಲ್ಲ, ಸ್ವತಃ ಸಂವಿಧಾನವೇ ಇದೆ” ಎಂದು ಈ ಪತ್ರದಲ್ಲಿ ಅವರು ತಮ್ಮ ಅತೀವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಟಿ ಕೆ ಎ ನಾಯರ್ ಸೇರಿದಂತೆ 108 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.

“ನಾಗರಿಕ ಸೇವೆಯಲ್ಲಿದ್ದವರಾಗಿ, ನಾವು ಸಾಮಾನ್ಯವಾಗಿ ಇಂತಹ ತೀವ್ರ ಪದಗಳಲ್ಲಿ ನಮ್ಮನ್ನು ವ್ಯಕ್ತಪಡಿಸಲು ಬಯಸುವುದಿಲ್ಲ, ಆದರೆ ನಮ್ಮ ಸ್ಥಾಪಕ ಪಿತೃಗಳು ನಿರ್ಮಿಸಿದ ಸಾಂವಿಧಾನಿಕ ಸೌಧವನ್ನು ಪಟ್ಟುಬಿಡದೆ ವೇಗವಾಗಿ ಧ್ವಂಸಗೊಳಿಸುತ್ತಿರುವುದನ್ನು ಕಂಡಾಗ ನಮ್ಮ ಆಕ್ರೋಶವನ್ನು ಮತ್ತು ದುಃಖವನ್ನು ನಾವು ವ್ಯಕ್ತಗೊಳಿಸಲೇ ಬೇಕಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ, ಬಿಜೆಪಿ ಇರುವ ಎಲ್ಲಾ ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳು ಮತ್ತು ತಿಂಗಳುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳು, ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷದ ಹಿಂಸಾಚಾರವು ಉಲ್ಬಣಗೊಂಡಿದ್ದು ಭೀತಿಕಾರಕ ಆಯಾಮವನ್ನು  ಪಡೆಯುತ್ತಿದೆ. ಈ ಎಲ್ಲ ರಾಜ್ಯಗಳಲ್ಲಿ, ದಿಲ್ಲಿಯನ್ನು ಹೊರತುಪಡಿಸಿ, ಬಿಜೆಪಿ ಅಧಿಕಾರ ನಡೆಸುತ್ತಿದೆ. ದಿಲ್ಲಿಯಲ್ಲೂ ಪೋಲೀಸ್‍ ಇಲಾಖೆ  ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ.

ಇದು ಅಭೂತಪೂರ್ವ ಬೆದರಿಕೆ, ಈಗ ಅಪಾಯಕ್ಕೊಳಗಾಗಿರುವುದು ಕೇವಲ ಸಾಂವಿಧಾನಿಕ ನೈತಿಕತೆ ಮತ್ತು ನಡವಳಿಕೆಯಷ್ಟೇ ಅಲ್ಲ, ನಮ್ಮ ವಿಶಿಷ್ಟ ಸಮ್ಮಿಶ್ರ ಸಾಮಾಜಿಕ ಹಂದರವನ್ನೇ ಇದು ಚಿಂದಿ ಮಾಡುವ ಸಾಧ್ಯತೆ ಇದೆ ಎಂಬುದು ತಮ್ಮ ನಂಬಿಕೆ ಎಂದಿರುವ ಈ ನಿವೃತ್ತ ಉನ್ನತಾಧಿಕಾರಿಗಳು ಈ ಸಮ್ಮಿಶ್ರ ಸಾಮಾಜಿಕ ಹಂದರ ನಮ್ಮ ನಾಗರಿಕತೆಯ ಶ್ರೇಷ್ಠ ಪರಂಪರೆ, ಇದನ್ನು ಸಂರಕ್ಷಿಸಲು ನಮ್ಮ ಸಂವಿಧಾನವನ್ನು ಬಹಳ ಶ್ರಮಪಟ್ಟು ರೂಪಿಸಲಾಗಿದೆ ಎಂದು ನೆನಪಿಸಿದ್ದಾರೆ.

“ಈ ಅಗಾಧ ಸಾಮಾಜಿಕ ಬೆದರಿಕೆ ಎದುರು ನಿಮ್ಮ ಮೌನ  ಕಿವುಡಾಗಿಸುವಂತದ್ದು” ಎಂದು ಈ ಬಹಿರಂಗ ಪತ್ರ ಪ್ರಧಾನ ಮಂತ್ರಿಯವರಿಗೆ ಹೇಳಿದೆ.

“ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಎಂಬ ನಿಮ್ಮ ಆಶ್ವಾಸನೆಯಿಂದ ಹೃದಯ ತುಂಬಿಸಿಕೊಂಡಿರುವ ನಾವು  ನಿಮ್ಮ ಆತ್ಮಸಾಕ್ಷಿಗೆ ಮನವಿ ಮಾಡುತ್ತೇವೆ” ಎಂದಿರುವ ಈ ನಿವೃತ್ತ ಹಿರಿಯ ಅಧಿಕಾರಿಗಳು ʻಆಜಾದಿ ಕಾ ಅಮೃತ್ ಮಹೋತ್ಸವ’ದ ಈ ವರ್ಷದಲ್ಲಿ ಪಕ್ಷಪಾತೀ ಪರಿಗಣನೆಗಳನ್ನು ಮೀರಿ ನಿಂತು, ನಿಮ್ಮ ಪಕ್ಷದ ನಿಯಂತ್ರಣದಲ್ಲಿರುವ ಸರ್ಕಾರಗಳು ತುಂಬಾ ತತ್ಪರತೆಯಿಂದ ನಡೆಸುತ್ತಿರುವ ದ್ವೇಷದ ರಾಜಕಾರಣವನ್ನು ಕೊನೆಗೊಳಿಸಲು ನೀವು ಕರೆ ನೀಡುತ್ತೀರಿ ಎಂಬುದು ನಮ್ಮ ಅಕ್ಕರೆಯ ಆಶಯವಾಗಿದೆ” ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *