ಲಕ್ನೋ : ಬಿಜೆಪಿ ಪಕ್ಷವನ್ನು ಬಿಟ್ಟಿದ್ದಕ್ಕಾಗಿ ಮಾಜಿ ಶಾಸಕ ಹಾಗೂ ಇಬ್ಬರು ಮುಖಂಡರ ಕಟ್ಟಡವನ್ನು ಉತ್ತರ ಪ್ರದೇಶ ಸರಕಾರ ನೆಲಸಮಗೊಳಿಸುವ ಮೂಲಕ ಸೇಡಿನ ಕ್ರಮಕ್ಕೆ ಮುಂದಾಗಿದೆ.
ಈ ಮೂರೂ ಮಂದಿ ಈ ವರ್ಷ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಿಂತ ಮುಂಚೆ ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಂಡು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು.
ಮಾಜಿ ಬಿಜೆಪಿ ನಾಯಕರಾಗಿರುವ ಹಾಗೂ ಈಗ ಸಮಾಜವಾದಿ ಪಕ್ಷದ ಶಾಸಕರಾಗಿರುವ ರೋಶನ್ ಲಾಲ್ ವರ್ಮಾ ಎಂಬವರಿಗೆ ಸೇರಿದ ಉತ್ತರ ಪ್ರದೇಶದ ಶಹಜಾನಪುರ್ ಎಂಬಲ್ಲಿನ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಕೆಲದಿನಗಳ ಹಿಂದೆಯಷ್ಟೇ ವರ್ಮಾ ಅವರಿಗೆ ಸೇರಿದ ಜಮೀನೊಂದನ್ನು ತಿಲ್ಹಾರ್ ಜಿಲ್ಲಾಡಳಿತದ ಅಧಿಕಾರಿಗಳು ಪರಿಶೀಲಿಸಿದ್ದರು. ಅಕ್ರಮವಾಗಿ ಪಡೆದ ಜಮೀನಿನಲ್ಲಿ ವರ್ಮಾ ಅವರು ಆಸ್ಪತ್ರೆ ನಿರ್ಮಿಸಿದ್ದರು ಎಂದು ಹೇಳಲಾಗಿದೆ.
ಬಿಜೆಪಿ ಪಕ್ಷ ತೊರೆಯುವ ಮುನ್ನ ಆದಿತ್ಯನಾಥ್ ಸಂಪುಟದಲ್ಲಿ ಸಚಿವರಾಗಿದ್ದ ಧರಂ ಸಿಂಗ್ ಸೈನಿ ಎಂಬವರು ಅತಿಕ್ರಮಿಸಲಾದ ಜಮೀನಿನಲ್ಲಿ ನಿರ್ಮಿಸಿದ ಎರಡು ಅಂಗಡಿಗಳಿಗೆ ಸಂಬಂಧಿಸಿದಂತೆ ನೋಟಿಸ್ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಅವರು ಸೋತಿದ್ದರು.
ಸಹರಣಪುರ ಜಿಲ್ಲೆಯ ಚಿಲ್ಕಾನ-ಸುಲ್ತಾನಪುರ್ ನಗರ ಪಂಚಾಯತ್ ಸೈನಿ ಸಹಿತ 12 ಮಂದಿ ಅಂಗಡಿ ಮಾಲೀಕರಿಗೆ ಎಪ್ರಿಲ್ 19ರಂದು ನೋಟಿಸ್ ನೀಡಿ ಏಳು ದಿನಗಳೊಳಗೆ ಉತ್ತರಿಸುವಂತೆ ಇಲ್ಲದೇ ಹೋದಲ್ಲಿ ಅಂಗಡಿಗಳನ್ನು ನೆಲಸಮಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಚಿಲ್ಕಾನ ಬಸ್ ನಿಲ್ದಾಣ ಸಮೀಪದ ಜಮೀನಿನಲ್ಲಿರುವ ಎರಡು ಅಂಗಡಿಗಳನ್ನು ರಸ್ತೆ ಅತಿಕ್ರಮಿಸಿ ನಿರ್ಮಿಸಲಾಗಿದೆ, ಈ ಕುರಿತು ಎಪ್ರಿಲ್ 7ರಂದು ದೂರು ದಾಖಲಾಗಿತ್ತು ಎಂದು ಅಲ್ಲಿನ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಾಜಿ ಬಿಜೆಪಿ ಶಾಸಕ ಬೃಜೇಶ್ ತ್ರಿಪಾಟಿ ಅವರಿಗೆ ಸೇರಿದ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸುವ ಕುರಿತಂತೆ ಬಂಡ ಜಿಲ್ಲೆಯ ಅಧಿಕಾರಿಗಳು ಎಪ್ರಿಲ್ 18ರಂದು ನೋಟಿಸ್ ಜಾರಿಗೊಳಿಸಿದ್ದಾರಲ್ಲದೆ ಕಟ್ಟಡವನ್ನು 15 ದಿನಗಳೊಳಗಾಗಿ ತೆರವುಗೊಳಿಸುವಂತೆಯೂ ಸೂಚಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ದೂರಲಾಗಿದೆ.
ಬಿಜೆಪಿ ಪಕ್ಷವನ್ನು ತೊರೆದ ಮುಖಂಡರ ಮನೆ, ಅಂಗಡಿಗಳ ಮೇಲೆ ಯೋಗಿ ಸರಕಾರ ಇದೇರೀತಿ ದಾಳಿ ನಡೆಸಿ ಸೇಡು ತೀರಿಸುಕೊಳ್ಳು ಸಂಚು ರೂಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
” ನಾನು ಪರವಾನಿಗೆ ಪಡೆದೆ ಕಟ್ಟಡ ನಿರ್ಮಾಣ ಮಾಡಿದ್ದೇನೆ. ಬಿಜೆಪಿ ಬಿಟ್ಟ ಕಾರಣವನ್ನುನೆಪಮಾಡಿಕೊಂಡು ಸೇಡಿನ ದಾಳಿ ನಡೆಸುತ್ತಿದೆ. ಬುಲ್ಡೋಜರ್ ಸಂಸ್ಕೃತಿಯ ವಿರುದ್ಧ ಹೋರಾಟ ರೂಪಿಸುತ್ತೇವೆ” – ರೋಶನ್ ಲಾಲ್ ವರ್ಮಾ, ಶಾಸಕರು