ಲಕ್ನೋ: ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟ ಸಚಿವರೊಬ್ಬರು ರಾಜೀನಾಮೆ ಸಲ್ಲಿಸಿದ್ದು, ಮತ್ತೊಬ್ಬರು ರಾಜೀನಾಮೆ ಸಲ್ಲಿಸಲು ಮುಂದಾಗಿದ್ದು, ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಜಲಶಕ್ತಿ (ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ) ರಾಜ್ಯ ಸಚಿವ ದಿನೇಶ್ ಖಟಿಕ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರದೊಂದಿಗೆ ಇನ್ನೊಂದು ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೊಂದೆಡೆ ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಕೂಡ ಸರ್ಕಾರದ ವಿರುದ್ಧಸಿಟ್ಟಿಗೆದ್ದಿದ್ದಾರೆ. ಆದರೆ, ಇದನ್ನು ಸರ್ಕಾರ ಇನ್ನೂ ದೃಢಪಡಿಸಿಲ್ಲ. ಈ ವರದಿಗಳು ಕೇವಲ ವದಂತಿ ಎಂದು ಹೇಳಿದೆ.
ದಿನೇಶ್ ಖಟಿಕ್ ಅವರು, ‘ದಲಿತನಾದ ನನ್ನ ಮಾತನ್ನು ಅಧಿಕಾರಿಗಳು ಕೇಳುವವರೇ ಇಲ್ಲ. ನಾನು ಹೇಳಿದ ಯಾವ ಕೆಲಸವನ್ನು ಇಲಾಖೆಯಲ್ಲಿ ಆಗಿಲ್ಲ. ದಲಿತ ಸಮಾಜದ ರಾಜ್ಯ ಸಚಿವನಾಗಿದ್ದರೂ ನನ್ನ ಆದೇಶದ ಮೇಲೆ ಯಾವುದೇ ಕ್ರಮವನ್ನುಕೈಗೊಂಡಿಲ್ಲ. ಇಲಾಖೆ ವತಿಯಿಂದ ಕೈಗೊಳ್ಳುವಂತಹ ಯಾವುದೇ ಕಾರ್ಯಕ್ರಮಗಳು, ಕಾಮಗಾರಿಗಳ ಬಗ್ಗೆಯೂ ನನ್ನ ಗಮನಕ್ಕೆ ತರುವುದಿಲ್ಲ. ಇಂಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ?’ ಎಂದು ಪ್ರಶ್ನಿಸಿದ್ದಾರೆ.
ಕಳೆದ 100 ದಿನಗಳಲ್ಲಿ ನನಗೆ ಯಾವುದೇ ಕೆಲಸ, ಜವಾಬ್ದಾರಿ ವಹಿಸಿಲ್ಲ. ನನಗೆ ತುಂಬಾ ನೋವಾಗಿದೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಸಚಿವನಾಗಿ ನನಗೆ ಯಾವುದೇ ಅಧಿಕಾರವಿಲ್ಲ. ನಾನು ರಾಜ್ಯದ ಸಚಿವನಾಗಿ ಕೆಲಸ ಮಾಡುವುದು ದಲಿತ ಸಮುದಾಯಕ್ಕೆ ವ್ಯರ್ಥ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ(ಜುಲೈ 19) ಸಚಿವ ಸಂಪುಟ ಸಭೆಯಲ್ಲಿ ದಿನೇಶ್ ಖಟಿಕ್ ಭಾಗವಹಿಸಿದ್ದರು. ಸಭೆಯ ನಂತರ ಭ್ರದತಾ ತಂಡ ಹಾಗೂ ಸರ್ಕಾರಿ ಕಾರನ್ನು ಬಿಟ್ಟು ಮೀರತ್ ನ ಗಂಗಾನಗರದಲ್ಲಿರುವ ಅವರ ಮನೆಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಸಂಘಟನಾ ಸಚಿವ ಸುನಿಲ್ ಬನ್ಸಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಸಚಿವರು 5 ಮಂದಿಗೆ ಪತ್ರವನ್ನೂ ಕಳುಹಿಸಿದ್ದಾರೆ.
ಲೋಕೋಪಯೋಗಿ ಸಚಿವ ಜಿತಿನ್ ಪ್ರಸಾದ್ ಅವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡದ ಅಧಿಕಾರಿಯೊಬ್ಬರನ್ನು ಮುಖ್ಯಮಂತ್ರಿ ಅಮಾನತು ಮಾಡಿರುವ ಬಗ್ಗೆ ಜಿತಿನ್ ಪ್ರಸಾದ್ ಕೋಪಗೊಂಡಿದ್ದಾರೆ.
ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಜಿತಿನ್ ಪ್ರಸಾದ್ ಅವರಿಗೆ ಯೋಗಿ ಆದಿತ್ಯನಾಥ್ ಸರಕಾರದಲ್ಲಿ ಬೃಹತ್ ಲೋಕೋಪಯೋಗಿ ಇಲಾಖೆ ವಹಿಸಿಕೊಂಡರು. ಇಲಾಖೆಯಲ್ಲಿ ನಡೆದ ವರ್ಗಾವಣೆಯಲ್ಲಿ ಹಲವು ಪ್ರಮುಖ ಅಕ್ರಮಗಳು ಬಯಲಿಗೆ ಬಂದಿವೆ. ಇದಾದ ಬಳಿಕ ಮುಖ್ಯಮಂತ್ರಿ ಸಮಿತಿ ರಚಿಸಿ ತನಿಖೆಗೆ ಒಪ್ಪಿಸಿದ್ದಾರೆ.
ವಿಶೇಷ ಕರ್ತವ್ಯದಲ್ಲಿರುವ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಪಾಂಡೆಯವರನ್ನು ವರ್ಗಾವಣೆಗಾಗಿ ಲಂಚ ಪಡೆದ ಆರೋಪದ ಮೇಲೆ ಅಮಾನತು ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಅನಿಲ್ ಪಾಂಡೆ ಅವರನ್ನು ದೆಹಲಿಯಿಂದ ಲಕ್ನೋಗೆ ಇಲಾಖೆಯ ಒಎಸ್‌ಡಿಯಾಗಿ ಜಿತಿನ್ ಪ್ರಸಾದ್ ಕರೆತಂದಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಸರ್ಕಾರ ತೆಗೆದು ಹಾಕಿರುವುದು ಜಿತಿನ್ ಪ್ರಸಾದ್ ಅವರ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ. ದೆಹಲಿಗೆ ತೆರಳಿ ಈ ವಿಚಾರವನ್ನು ಕೇಂದ್ರದ ಗಮನ ತರಲಿದ್ದಾರೆ ಎನ್ನಲಾಗಿದೆ.