ಉತ್ತರ ಪ್ರದೇಶ : ಉತ್ತರ ಪ್ರದೇಶ ಚುನಾವಣೆಯಲ್ಲಿ ಈಗ ತೆಲಂಗಾಣ ಶಾಸಕರೊಬ್ಬರ ಎಂಟ್ರಿಯಾಗಿದೆ. ತೆಲಂಗಾಣ ಬಿಜೆಪಿ ಶಾಸಕರೊಬ್ಬರು ಯುಪಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ಗೆ ಮತ ನೀಡಿ ಇಲ್ಲದಿದ್ದರೆ ಬುಲ್ಡೋಜರ್‌ಗಳನ್ನು ಎದುರಿಸಬೇಕಾಗುತ್ತದೆ ಎಂದು ಮತದಾರರಿಗೆ ಬೆದರಿಕೆ ಹಾಕಿದ್ದಾರೆ.
ಹೈದರಾಬಾದ್‌ನ ಗೋಶಾಮಹರ್ ವಿಧಾನಸಭೆಯ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಸೋಮವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಉತ್ತರ ಪ್ರದೇಶದ ಎರಡನೇ ಹಂತದ ಚುನಾವಣೆಯ ವೇಳೆ ಯೋಗಿ ಆದಿತ್ಯನಾಥ್ ಅವರ ಶತ್ರುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕದವರಿಗೆ ಭೀಕರ ಪರಿಣಾಮಗಳು ಎದುರಾಗಬಹುದು ಎಂದು ಹೇಳಿದ್ದಾರೆ.
ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು ಎಂದಿರುವ ಅವರು, ಈ ವೇಳೆ ಬಿಜೆಪಿಗೆ ಮತ ಹಾಕದವರಿಗೆ ಬೆದರಿಕೆ ಹಾಕಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಬಳಿ ಸಾವಿರಾರು ಜೆಸಿಬಿ, ಬುಲ್ಡೋಜರ್‌ಗಳಿವೆ ಎಂಬುದನ್ನ ನೆನಪಿಟ್ಟುಕೊಳ್ಳಿ ಎಂದಿದ್ದಾರೆ. ಯುಪಿಯಲ್ಲೇ ಇರಲು ಯೋಗಿಗೆ ಜೈ ಹೊಡೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮತ ಹಾಕದವರು ರಾಜ್ಯ ತೊರೆಯಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಜನತೆಗೆ ಎಚ್ಚರಿಕೆ ನೀಡಲಾಗಿದೆ.
ಸದ್ಯದಲ್ಲೇ ಮೂರನೇ ಹಂತದ ಚುನಾವಣೆ ನಡೆಯಲಿದೆ. ಯೋಗಿಗೆ ಮತ ಹಾಕದಿದ್ದರೆ ಜೆಸಿಬಿ ಬುಲ್ಡೋಜರ್‌ಗಳನ್ನು ಎದುರಿಸಬೇಕಾಗುತ್ತದೆ. ಯೋಗಿ ಪರ ಮತ ಹಾಕದವರನ್ನು ಚುನಾವಣೆ ನಂತರ ಗುರುತಿಸುತ್ತೇವೆ. ಯೋಗಿಗೆ ಮತ ಹಾಕದವರು ಉಳಿಯಬೇಕಾದರೆ ಉತ್ತರ ಪ್ರದೇಶವನ್ನು ತೊರೆಯಬೇಕು ಎಂದು ಟಿ. ರಾಜಾ ಸಿಂಗ್ ಯುಪಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಬಹಿರಂಗವಾಗಿ ಈ ರೀತಿ ಬೆದರಿಕೆ ಹಾಕಿರುವ ಶಾಸಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಶಾಸಕ ರಾಜಾಸಿಂಗ್ ರವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.