– ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ರದ್ದು ಮಾಡಿದ ಸಿಎಂ ಬಿಎಸ್ವೈ ಸರ್ಕಾರ
– ಪೊಲೀಸ್, ಕಾನೂನು, ವ್ಯಾಜ್ಯಗಳ ಇಲಾಖೆ, ಪ್ರಾಸಿಕ್ಯೂಷನ್ ಆಕ್ಷೇಪಗಳ ನಡುವೆಯೂ ಪ್ರಕರಣ ವಾಪಸ್
ಬೆಂಗಳೂರು: ಹೋರಾಟ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು ಹಾಗೂ ಬೆಂಬಲಿಗರ ವಿರುದ್ಧ ದಾಖಲಾದ ಗಂಭೀರ ಸ್ವರೂಪದ ಪ್ರಕರಣಗಳನ್ನು ವಾಪಾಸು ಪಡೆಯಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜಪಿ ಸರ್ಕಾರ ನಿರ್ಧರಿಸಿದೆ. ಇದರನ್ವಯ 62 ಕ್ರಿಮಿನಲ್ ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆಯಲಿದೆ.
ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ರದ್ದು ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಸಮಜಾಯಿಷಿ ನಡುವೆಯೂ ಗಂಭೀರ ಪ್ರಕರಣ ಸರ್ಕಾರ ಹಿಂಪಡೆದಿದ್ದು, ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
62 ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂದು ಡಿಜಿ, ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಡಿಸಿದೆ. ಆದರೆ ಜುಲೈ 22ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಸಭೆಗೆ ಶಿಫಾರಸು ಮಾಡಲಾಗಿದೆ.
ಪ್ರಕರಣ ಮುಕ್ತರಾದ ಬಿಜೆಪಿ ನಾಯಕರಾರು?:
ಆಗಸ್ಟ್ 20ಕ್ಕೆ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಒಟ್ಟು 62 ಕ್ರಿಮಿನಲ್ ಪ್ರಕರಣ ವಾಪಸು ಪಡೆಯಲು ತೀರ್ಮಾನಿಸಿತ್ತು. ಇಲ್ಲಿ, ಹೋರಾಟಗಾರರು, ವಿದ್ಯಾರ್ಥಿಗಳ ಹೆಸರನ್ನು ತೆಗೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಇದರ ಮಧ್ಯೆ ಸೈಲೆಂಟಾಗಿ ಸ್ವಪಕ್ಷೀಯರ ವಿರುದ್ಧದ ಕೇಸ್ಗಳನ್ನೂ ಹಿಂದಕ್ಕೆ ಪಡೆದಿದೆ.
ಪ್ರತಾಪ್ ಸಿಂಹ ವಿರುದ್ಧದ ಕೇಸ್ ವಾಪಸ್:
ಮೈಸೂರು ಸಂಸದ ಪ್ರತಾಪ್ ಸಿಂಹ ಡಿ.3, 2017ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ರ್ಯಾಲಿ ನಡೆಸಲು ಯತ್ನಿಸಿದ್ದರು. 114 ನಿಷೇಧಾಜ್ಞೆ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಸಂಸದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಸಂಸದ ಪ್ರತಾಪ್ ಸಿಂಹ ವಿರುದ್ಧ ಐಪಿಸಿ 279, 353, 188 ಮತ್ತು 332ರಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕರಣಗಳನ್ನು ವಾಪಸು ಪಡೆಯಲಾಗಿದೆ.
ಹನುಮ ಜಯಂತಿ ಪ್ರಯುಕ್ತ ಪ್ರತಾಪ್ ಸಿಂಹ ಬೆಂಬಲಿಗರು ಮೆರವಣಿಗೆ ನಡೆಸಿದ್ದರು. ಈ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿತ್ತು. ಈಗ ಈ ಕೇಸ್ಅನ್ನು ವಾಪಸು ಪಡೆಯಲಾಗಿದೆ.
ರೇಣುಕಾಚಾರ್ಯ ಬೆಂಬಲಿಗರ ಕೇಸ್ ವಾಪಸ್:
ಸಿಎಂ ಬಿಎಸ್ವೈ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರೇಣುಕಾಚಾರ್ಯ ಜಯಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಗುಂಪು ಕಟ್ಟಿಕೊಂಡಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಎಚ್.ಪಿ.ಮಂಜಪ್ಪ ಮನೆ ಹತ್ತಿರ ಬೈದಾಡಿಕೊಂಡು ಸುತ್ತಾಡಿದ್ದರು.
ಅಷ್ಟೇ ಅಲ್ಲ ಮಂಜಪ್ಪ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದ ರೇಣುಕಾಚಾರ್ಯ ಬೆಂಬಲಿಗರು, ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದ್ದರು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂನಡಿ 143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈಗ ಈ ಪ್ರಕರಣ ಹಿಂದಕ್ಕೆ ಪಡೆಯಲಾಗಿದೆ.
ಇತರೆ ಸಚಿವ, ಶಾಸಕ ಬೆಂಬಲಿಗರ ವಿರುದ್ಧದ ಕೇಸ್ ವಾಪಸು:
ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ಹಿಂಪಡೆಯಲಾಗಿದೆ.
ಮೈಸೂರು ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂದಲೆ ನಡೆಸಿ, ಕೋಮು ಗಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು ವಾಪಸು ಪಡೆಯಲಾಗಿದೆ.
ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಿಂದ 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣವನ್ನು ಸರ್ಕಾರ ಹಿಂಪಡೆದಿದೆ.