ಮದರಸಾಗಳನ್ನು ಧ್ವಂಸಗೊಳಿಸಲು ಕರೆ ನೀಡಿದ ಯತಿ ನರಸಿಂಹಾನಂದ; ಪ್ರಕರಣ ದಾಖಲು

ಲಕ್ನೋ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಮದರಸಾಗಳನ್ನು ಧ್ವಂಸಗೊಳಿಸಬೇಕೆಂದು ಕರೆ ನೀಡಿದ ಧರ್ಮಪ್ರಚಾರಕ ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಸದಾ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಯತಿ ನರಸಿಂಹಾನಂದ ಈ ಹಿಂದೆಯೂ ವಿವಾದವನ್ನು ಹುಟ್ಟು ಹಾಕುತ್ತಿದ್ದರು. ಇದೀಗ ನೆನ್ನೆ (ಸೆಪ್ಟಂಬರ್‌ 18) ಅಲಿಗಢದಲ್ಲಿ ನಡೆದ ಮಹಾಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯತಿ ನರಸಿಂಹಾನಂದ, ಉತ್ತರ ಪ್ರದೇಶ ಸರ್ಕಾರದಿಂದ ಮಾನ್ಯತೆ ಪಡೆಯದ ಮದರಸಾಗಳ ಕುರಿತಂತೆ ನಡೆಯುತ್ತಿರುವ ಸಮೀಕ್ಷೆಯ ಬಗ್ಗೆ ಮಾತನಾಡಿ ಮದರಸಾದಂತಹ ಸಂಸ್ಥೆ ಇರಬಾರದು. ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್‍ಪೌಡರ್‌ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು. ಇದರಿಂದ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬಹುದು ಎಂದು ಹೇಳಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಅಲ್ಲದೆ, ಮದರಸಾಗಳಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು ಧ್ವಂಸಗೊಳಿಸಬೇಕೆಂದು ಕರೆ ನೀಡಿದ್ದು, ಅಲ್ಲಿನ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ಕೊಡಬೇಕೆಂದು ಹೇಳಿರುವುದು ಚಿತ್ರೀಕರಣಗೊಂಡಿದೆ.

ಯತಿ ನರಸಿಂಹಾನಂದ ಕಳೆದ ವರ್ಷ ಹರಿದ್ವಾರದಲ್ಲೂ ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *