ಚಿಲಿಯ ಜನ ಅತ್ಯಂತ ಪ್ರಗತಿಪರ ಸಂವಿಧಾನವನ್ನು ಏಕೆ ತಿರಸ್ಕರಿಸಿದರು?

ವಸಂತರಾಜ ಎನ್.ಕೆ.

ಜಗತ್ತಿನಲ್ಲಿಯೇ ಅತ್ಯಂತ ಪ್ರಜಾಸತ್ತಾತ್ಮಕವಾಗಿ ರಚಿಸಲಾದ ಅತ್ಯಂತ ಪ್ರಗತಿಪರ ಜನಪರ ಸಂವಿಧಾನವನ್ನು ಚಿಲಿಯ ಜನತೆ ತಿರಸ್ಕರಿಸಿದ್ದು ಅದೂ ಭಾರೀ ಪ್ರಮಾಣದಲ್ಲಿ ಜಗತ್ತಿನಾದ್ಯಂತ ಆಶ್ಚರ್ಯ ಮತ್ತು ತೀವ್ರ ಆತಂಕಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣಗಳೇನು ಎಂದು ವ್ಯಾಪಕ ಚರ್ಚೆ, ವಿಶ್ಲೇಷಣೆಗಳು ನಡೆಯುತ್ತಿವೆ. ಈ ಕುರಿತು ಒಂದು ವಿಶ್ಲೇಷಣೆ…

ಸೆಪ್ಟೆಂಬರ್ 4ರಂದು ನಡೆದ ಜನಮತ ಸಂಗ್ರಹದಲ್ಲಿ ಚಿಲಿಯ ಜನರು ಜುಲೈ 4 ರಂದು ಅಂತಿಮಗೊಳಿಸಲಾದ ಹೊಸ ಕರಡು ಸಂವಿಧಾನವನ್ನು ಭಾರೀ ಬಹುಮತದಿಂದ ತಿರಸ್ಕರಿಸಿದ್ದಾರೆ. ಸುಮಾರು ಶೇ.80 ಮತದಾರರು ಮತ ಚಲಾಯಿಸಿದ್ದು, ಮತದಾನ ಮಾಡಿದವರಲ್ಲಿ ಶೇ. 62ರಷ್ಟು ಅಂದರೆ ಸುಮಾರು 80 ಲಕ್ಷ ಜನ “ತಿರಸ್ಕರಿಸಿದ್ದೇನೆ” ಆಯ್ಕೆಗೆ ಮತ ಚಲಾಯಿಸಿದ್ದಾರೆ. ಶೇ.38ರಷ್ಟು ಅಂದರೆ ಸುಮಾರು 49 ಲಕ್ಷ ಜನ ‘ಅನುಮೋದಿಸಿದ್ದೇನೆ’ ಆಯ್ಕೆ ಮಾಡಿಕೊಂಡಿದ್ದಾರೆ.  ಜಗತ್ತಿನಲ್ಲಿಯೇ ಅತ್ಯಂತ ಪ್ರಜಾಸತ್ತಾತ್ಮಕವಾಗಿ ರಚಿಸಲಾದ ಅತ್ಯಂತ ಪ್ರಗತಿಪರ ಜನಪರ ಸಂವಿಧಾನವನ್ನು ಚಿಲಿಯ ಜನತೆ ತಿರಸ್ಕರಿಸಿದ್ದು ಅದೂ ಇಷ್ಟು ಭಾರೀ ಪ್ರಮಾಣದಲ್ಲಿ ಜಗತ್ತಿನಾದ್ಯಂತ ಆಶ್ಚರ್ಯ ಮತ್ತು ತೀವ್ರ ಆತಂಕಗಳನ್ನು ಉಂಟುಮಾಡಿದೆ. ಇದಕ್ಕೆ ಕಾರಣಗಳೇನು ಎಂದು ವ್ಯಾಪಕ ಚರ್ಚೆ, ವಿಶ್ಲೇಷಣೆಗಳು ನಡೆಯುತ್ತಿವೆ.

ಹೊಸ ಸಂವಿಧಾನ ರಚಿಸುವ ಪ್ರಕ್ರಿಯೆ ಅಕ್ಟೋಬರ್ 2019ರಲ್ಲಿ ನಡೆದ ಯುವಜನ ಮತ್ತು ಕಾರ್ಮಿಕರ ಅಭೂತಪೂರ್ವ ಪ್ರತಿಭಟನಾ ಪ್ರದರ್ಶನಗಳು ಮತ್ತು ದಂಗೆಯಿಂದ ಆರಂಭವಾಗಿತ್ತು. ಪ್ರತಿಭಟನೆಗಳು ಆರಂಭವಾಗಿದ್ದು ಮೆಟ್ರೊ ಬೆಲೆಏರಿಕೆಯ ವಿರುದ್ಧವಾಗಿ, ಆದರೆ ತೀವ್ರ ಅಸಮಾನತೆ, ಖಾಸಗೀಕರಣ ಮತ್ತು ಮಿತವ್ಯಯದ ಹೆಸರಲ್ಲಿ ಆರ್ಥಿಕ ಸಂಕಷ್ಟಗಳ ಹೊರೆ ಹಾಗೂ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಜನರಿಗೆ ನಿಲುಕದೆ ಹೋಗುವುದರ ವಿರುದ‍್ಧವಾಗಿ ಬೃಹದಾಕಾರವಾಗಿ ಬೆಳೆದು ಹಲವು ತಿಂಗಳುಗಳ ಕಾಲ ನಡೆಯಿತು. ಇದರ ಭಾಗವಾಗಿ, ಜನರ ಮೇಲೆ ಸಂಕಟಗಳನ್ನು ಹೇರುವ ನೀತಿಗಳ ಮೂಲ ಆಧಾರವಾಗಿದ್ದ ಮಿಲಿಟರಿ ಸರ್ವಾಧಿಕಾರಿ ಪಿನೊಶೆ 1980ರಲ್ಲಿ ರೂಪಿಸಿದ ಸಂವಿಧಾನದ ವಿರುದ್ಧ ಆಕ್ರೋಶ  ಮೂಡಿದ್ದು ಸಂವಿಧಾನವನ್ನು ಆಮೂಲಾಗ್ರವಾಗಿ ಬದಲಾಯಿಸಬೇಕೆಂದು ತೀವ್ರ ಒತ್ತಡ ಬಂದಿತ್ತು.

ಈ ಒತ್ತಡಕ್ಕೆ ಮಣಿದು ಆಗಿನ ಶತಕೋಟ್ಯಾಧಿಪತಿ ಅಧ್ಯಕ್ಷ ಈ ಕುರಿತು ಜನಮತಸಂಗ್ರಹ ಏರ್ಪಡಿಸಲು ಒಪ್ಪಿದ್ದ. ಆ ಪ್ರಕಾರ ಅಕ್ಟೋಬರ್ 25, 2020 ರಂದು ಜನಮತಸಂಗ್ರಹ ನಡೆದು ಶೇ.75ಕ್ಕೂ ಹೆಚ್ಚು ಜನ ಸಂವಿಧಾನವನ್ನು ಬದಲಾಯಿಸಬೇಕು ಮತ್ತು ಅದಕ್ಕಾಗಿ ಚುನಾಯಿತ ಸಂವಿಧಾನ ಕಮಿಶನ್ ರಚಿಸಬೇಕೆಂಬುದನ್ನು ಬೆಂಬಲಿಸಿದರು. ಮೇ 2021ರಲ್ಲಿ ಸಂವಿಧಾನ ಕಮಿಶನ್ ಗೆ ಚುನಾವಣೆ ನಡೆದು ಸಭೆಯ ರಚನೆಯಾಗಿ ಜುಲೈ 4, 2021ರಿಂದ ಕೆಲಸ ಪ್ರಾರಂಭಿಸಿತ್ತು. ಡಿಸೆಂಬರ್ 2021ರಲ್ಲಿ ಚುನಾವಣೆ ನಡೆದು ಎಡಪಂಥೀಯ ಯುವ ಅಧ್ಯಕ್ಷರ ಆಯ್ಕೆಯಾಗಿ ಎಡ-ನಡುಪಂಥೀಯ ಸರಕಾರ  ಅಧಿಕಾರಕ್ಕೆ ಬಂದಿತ್ತು. ಹೊಸ ಸಂವಿಧಾನಕ್ಕೆ 15 ಸಾವಿರ ಜನರ ಸಹಿ ಇರುವ ಎಲ್ಲ ಕರಡು ಪ್ರಸ್ತಾವಗಳನ್ನು ಸಲ್ಲಿಸಲು  ಅವಕಾಶವಿತ್ತು ಮತ್ತು ಅದರ ವ್ಯಾಪಕ ಬಳಕೆಯೂ ಆಯಿತು. ಸಂವಿಧಾನ ರಚನೆಯ ಪ್ರಕ್ರಿಯೆಯೇ ವ್ಯಾಪಕ ಉತ್ಸಾಹ, ಆಸಕ್ತಿ ಮತ್ತು ಪಾಲುಗೊಳ್ಳುವಿಕೆಯನ್ನು ಉಂಟು ಮಾಡಿತ್ತು.

ಜುಲೈ 4, 2022 ರಂದು ಅಂತಿಮಗೊಳಿಸಿದ ಸಂವಿಧಾನವನ್ನು ಸರಕಾರಕ್ಕೆ ಸಲ್ಲಿಸಲಾಯಿತು. ಅದನ್ನು ಸರಕಾರ ಅಂಗೀಕರಿಸಿ ಸೆಪ್ಟೆಂಬರ್ 4, 2022 ರಂದು ಜನಮತಸಂಗ್ರಹವನ್ನು ಏರ್ಪಡಿಸಿತ್ತು.  ಹೊಸ ಕರಡು ಸಂವಿಧಾನವನ್ನು ‘ಅನುಮೋದಿಸುತ್ತೇನೆ’ ಆಯ್ಕೆಗೆ ಬೆಂಬಲವಾಗಿ ಎಡ-ನಡುಪಂಥೀಯ  ರಾಜಕೀಯ ಪಕ್ಷಗಳು/ಶಕ್ತಿಗಳು ಮತ್ತು ‘ತಿರಸ್ಕರಿಸುತ್ತೇನೆ’ ಆಯ್ಕೆಗೆ ಬೆಂಬಲವಾಗಿ ಬಲಪಂಥೀಯ ರಾಜಕೀಯ ಪಕ್ಷಗಳು/ಶಕ್ತಿಗಳು ತೀವ್ರ ಪ್ರಚಾರಾಂದೋಲನ ನಡೆಸಿದ್ದವು. ಇದರ ಭಾಗವಾಗಿ ಹೊಸ ಕರಡು ಸಂವಿಧಾನ ಚಿಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಲಾದ ಪುಸ್ತಕವಾಗಿತ್ತು.

ಸಂವಿಧಾನದಲ್ಲಿ ಏನಿದೆ?

ಸಂವಿಧಾನ ಹಲವು ರಾಜಕೀಯ, ಸಾಮಾಜಿಕ ಆರ್ಥಿಕ ಹಕ್ಕುಗಳನ್ನು ಜನತೆಗೆ ನೀಡಿತ್ತು. ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯದ ಜಾರಿಯಲ್ಲಿ ತೀವ್ರ ಸುಧಾರಣೆಗಳನ್ನು ತರುವ ಹಲವು ಜನಪರ ಪ್ರಗತಿಪರ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತ್ತು.

ಸಂವಿಧಾನದ ಕೆಲವು ಪ್ರಮುಖ ಅಂಶಗಳು ಹೀಗಿವೆ :

* ಸುಮಾರು ಶೇ.13 ರಷ್ಟು ಇರುವ ಆದಿವಾಸಿಗಳಿಗೆ ಸ್ವಯಮಾಡಳಿತದ ಹಕ್ಕು

* ಶಿಕ್ಷಣ, ಆರೋಗ್ಯ ಸೇವೆ, ಮನೆಗಳು ಮತ್ತು ಪಿಂಚಣಿ ನಾಗರಿಕರ ಹಕ್ಕು. ಇದನ್ನು ಒದಗಿಸುವುದು ಸರಕಾರದ ಪ್ರಾಥಮಿಕ ಜವಾಬ್ದಾರಿ.

* ಕೆಳಸದನಕ್ಕೆ ಹೆಚ್ಚಿನ ಅಧಿಕಾರ, ಮೇಲ್ಸದನದ ಅಧಿಕಾರ ಕಡಿತ

* ಎಲ್ಲ ಸರಕಾರಿ ಸಂಸ್ಥೆಗಳು ಮತ್ತು ಏಜೆನ್ಸಿಗಳ್ಲಲಿ ಪದಾಧಿಕಾರಿಗಳು ಮತ್ತು ಅಧಿಕಾರಿಗಳಲ್ಲಿ ಕನಿಷ್ಠ ಶೇ.50 ಮಹಿಳೆಯರಿರಬೇಕು

* ಮಹಿಳೆಯರ ಲೈಂಗಿಕ ಮತ್ತು ಗರ್ಭಧಾರಣೆಯ ಪೂರ್ಣ ಸ್ವಾತಂತ್ರ್ಯಕ್ಕೆ ಮಾನ್ಯತೆ. ಗರ್ಭಪಾತದ ನಿಷೇಧ ಮತ್ತು ದಂಡ ವಿಧಿಸುವುದಕ್ಕೆ ಕತ್ತರಿ

* ದೇಶದ ಎಲ್ಲ ಪ್ರಾಕೃತಿಕ ಸಂಪತ್ತು (ಜಲಮೂಲಗಳು, ಗಣಿಗಳು ಇತ್ಯಾದಿ) ಪ್ರಭುತ್ವದ ಸ್ವತ್ತು ಮತ್ತು ಅದರ ನಿರ್ವಹಣೆ, ಸಂರಕ್ಷಣೆ ಪ್ರಭುತ್ವದ ಕರ್ತವ್ಯ. ಸ್ಪಷ್ಟ ಸಾರ್ವಜನಿಕ ಹಿತಾಸಕ್ತಿ ಇದ್ದರೆ ಮಾತ್ರ ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಹುದು.

* ಪರಿಸರ ಸಂರಕ್ಷಣೆ, ಪರಿಸರ ತಾಳಿಕೊಳ್ಳಬಹುದಾದ ಅಭಿವೃದ್ಧಿ, ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅದರ ಅನ್ವಯ, ಹವಾಮಾನ ಬದಲಾವಣೆ ಪರಿಹಾರ ಕ್ರಮಗಳು – ಇವು ಪ್ರಭುತ್ವದ ಜವಾಬ್ದಾರಿ. ಪ್ರಕೃತಿಗೂ ಅದರದೇ ಆದ ಹಕ್ಕುಗಳಿವೆ.

* ಬೌದ್ಧಿಕ ಹಕ್ಕುಗಳಿಗೆ ಮಾನ್ಯತೆಯಿಲ್ಲ

ಈ ಪ್ರಗತಿಪರ ಜನಪರ ಸಂವಿಧಾನದ ಕರಡು ಅಂತರ್ರಾಷ್ಟ್ರೀಯ ಗಮನ ಸೆಳೆದಿತ್ತು. ಅದು ವಿಜ್ಞಾನ ಮತ್ತು ಪರಿಸರ ತಾಳಿಕೊಳ್ಳಬಹುದಾದ ಅಭಿವೃದ್ಧಿಗೆ ಕೊಟ್ಟಿರುವ ಒತ್ತನ್ನು ಪ್ರಸಿದ್ಧ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ ‘ನೇಚರ್’ ಲೇಖನವೊಂದರಲ್ಲಿ ‘ವಿಜ್ಞಾನದಲ್ಲಿ ಮಿಂದ ಸಂವಿಧಾನ’ ಎಂದು ಹೊಗಳಿತ್ತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಶನ್ “ಜನ ಪಾಲುಗೊಳ್ಳುವ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಅಗಾಧವಾಗಿ ವಿಸ್ತರಿಸಿದ ಸಂವಿಧಾನ’ ಎಂದು ಬಣ್ಣಿಸಿತ್ತು. ಅದರ ಕರಡು ಪ್ರಸ್ತಾವಗಳ ತಯಾರಿಯಲ್ಲಿ ಸಹಾಯ ನೀಡಿತ್ತು.

ಸಂವಿಧಾನದ ತಿರಸ್ಕಾರಕ್ಕೆ ಕಾರಣವಾದ ಅಂಶಗಳು

ಇಂತಹ ಜನಪರ ಪ್ರಗತಿಪರ ಸಂವಿಧಾನದ ಕರಡನ್ನು ಚಿಲಿಯ ಜನ ಯಾಕೆ ತಿರಸ್ಕರಿಸಿದರು ? ಇದಕ್ಕೆ ಹಲವು ಕಾರಣಗಳನ್ನು ಕೊಡಲಾಗಿದೆ. ಅವುಗಳಲ್ಲಿ ಪ್ರಮುಖವಾದ ಕೆಲವು ಹೀಗಿವೆ :

* ಗಣಿಗಳು ಇತ್ಯಾದಿ ಪ್ರಾಕೃತಿಕ ಸಂಪತ್ತುಗಳ ಖಾಸಗೀಕರಣದ ನಿಷೇಧ, ಬೌದ್ಧಿಕ ಹಕ್ಕುಗಳಿಗೆ ಅಮಾನ್ಯತೆ ಇತ್ಯಾದಿ ಸಂವಿಧಾನದ ಕಲಮುಗಳು, ದೇಶೀಯ ಮತ್ತು ಬಹುರಾಷ್ಟ್ರೀಯ ಕಾರ್ಪೊರೆಟ್ ಗಳನ್ನು ಆತಂಕಕ್ಕೀಡು ಮಾಡಿದ್ದವು. ಆದ್ದರಿಂದ ಅವು ಬಲಪಂಥೀಯ ಶಕ್ತಿಗಳ ಜತೆ ಸೇರಿ ತಮ್ಮ ಮಾಧ್ಯಮ ಬಲ ಮತ್ತು ಸಾಮಾಜಿಕ ಮಾಧ್ಯಮ ಬಳಸಿ ತೀವ್ರ ಅಪಪ್ರಚಾರ ಮಾಡಿದವು.  ಹೊಸ ಸಂವಿಧಾನದ ವಿರುದ್ಧ ಹಲವು ಸುಳ್ಳು ವದಂತಿಗಳನ್ನು ಹರಡಲಾಯಿತು. ಮನೆಗಳು ಮತ್ತು ಪಿಂಚಣಿ ನಾಗರಿಕರ ಹಕ್ಕು ಮತ್ತು ಅದನ್ನು ಒದಗಿಸುವುದು ಪ್ರಭುತ್ವದ ಜವಾಬ್ದಾರಿ ಎಂಬುದನ್ನು ತಿರುಚಿ ಮನೆ, ಪೆನ್ಶನ್ ಗಳನ್ನು ಸರಕಾರ ಕಿತ್ತುಕೊಳ್ಳುತ್ತದೆ ಎಂದು ಪ್ರಚಾರ ಮಾಡಲಾಯಿತು. ಆದಿವಾಸಿಗಳಿಗೆ ಸ್ವಾಯತ್ತತೆಯನ್ನು ತಿರುಚಿ ಆದಿವಾಸಿಗಳಿಗೆ ಪ್ರತ್ಯೇಕ ದೇಶವಾಗುವ ಹಕ್ಕುಗಳನ್ನು ಕೊಟ್ಟು ದೇಶ ಒಡೆಯಲು ಪ್ರಯತ್ನ ನಡೆದಿದೆ ಎಂದು ಆತಂಕ ಹುಟ್ಟಿಸಲಾಯಿತು. ಗರ್ಭಪಾತದ ಹಕ್ಕನ್ನು ತಿರುಚಿ 9 ತಿಂಗಳವರೆಗೂ ಗರ್ಭಪಾತಕ್ಕೆ ಅವಕಾಶವಿರುತ್ತದೆ ಎಂದು ಹೇಳುತ್ತಾ ಕ್ಯಾಥೊಲಿಕ್ ಧಾರ್ಮಿಕ ನಂಬಿಕೆಗಳನ್ನು ಕೆರಳಿಸಲಾಯಿತು. ಒಂದು ಸಮೀಕ್ಷೆಯ ಪ್ರಕಾರ ಸಂವಿಧಾನ ‘ತಿರಸ್ಕಾರ’ ಆಯ್ಕೆ ಮಾಡಿದವರಲ್ಲಿ ಶೇ. 52 ರಷ್ಟು ಜನ ಈ ಅಪಪ್ರಚಾರಗಳಲ್ಲಿ ಒಂದಕ್ಕೆ ಬಲಿಯಾದರು.

* ಈ ಅಪಪ್ರಚಾರವನ್ನು ಸಂವಿಧಾನ ಕಮಿಶನ್ ಆಗಲಿ ಸಂವಿಧಾನದ ಪರವಾಗಿದ್ದ ನಡು-ಎಡಪಂಥೀಯ ಶಕ್ತಿಗಳು ಪರಿಣಾಮಕಾರಿಯಾಗಿ ಎದುರಿಸಲಿಲ್ಲ, ಸಂವಿಧಾನದ ಜನಮತಸಂಗ್ರಹದ ಕುರಿತ ಪ್ರಚಾರಕ್ಕೆ ‘ತಿರಸ್ಕಾರ’ ಗುಂಪು ‘ಅನುಮೋದನೆ’ ಗುಂಪಿಗಿಂತ 4 ಪಟ್ಟು ಖರ್ಚು ಮಾಡಿತು.

* ಸಂವಿಧಾನದ ಕುರಿತು ವಾಗ್ವಾದಕ್ಕಿಂತ ಎಡ-ನಡುಪಂಥೀಯ ಸರಕಾರದ ಆರ್ಥಿಕ ವೈಫಲ್ಯಗಳು ಕೆಲವು ಜನವಿಭಾಗಗಳಿಗೆ ಮಹತ್ವದ ವಿಷಯವಾಗಿತ್ತು. ಚಿಲಿಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಈಗ ಶೇ.14ರಷ್ಟು ಬೆಲೆಏರಿಕೆ-ಹಣದುಬ್ಬರ ಉಂಟಾಗಿದ್ದು, ಇದು 28 ವರ್ಷಗಳಲ್ಲಿ ಅತಿ ಹೆಚ್ಚು ಎಂದು ದಾಖಲಾಗಿದೆ. ಈ ಕುರಿತು ಸರಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳದ್ದು ಅವರನ್ನು ಕೆರಳಿಸಿತ್ತು.  ಈ ಜನವಿಭಾಗಗಳು ಸರಕಾರದ ಆರ್ಥಿಕ ವೈಫಲ್ಯಗಳ ವಿರುದ್ಧ ಪ್ರತಿಭಟನೆ ದಾಖಲಿಸಲು ಜನಮತಸಂಗ್ರಹವನ್ನು ಬಳಸಿಕೊಂಡವು. ಸಂವಿಧಾನ ‘ಅನುಮೋದನೆ’ ಗುಂಪು ಸಾಮಾಜಿಕ ರಾಜಕೀಯ ಹಕ್ಕುಗಳ ಕುರಿತು ಒತ್ತು ಕೊಟ್ಟಿದ್ದವು. ಸಂವಿಧಾನದ ಕಲಮುಗಳ ಆರ್ಥಿಕ ಪರಿಣಾಮಗಳ ಕುರಿತು ಒತ್ತು ಕೊಟ್ಟಿರಲಿಲ್ಲ.

* ಜನಮತಸಂಗ್ರಹದ ಕುರಿತು ಸರಕಾರ ತೆಗೆದುಕೊಂಡ ಕೆಲವು ಕ್ರಮಗಳು ಸಹ ಹೊಸ ಸಂವಿಧಾನಕ್ಕೆ ‘ಸ್ವಯಂ-ಗೋಲು’ ಆದವು. ಜನಮತಸಂಗ್ರಹಕ್ಕೆ ಮತದಾನವನ್ನು ಕಡ್ಡಾಯ ಮಾಡಿದ್ದು ಇಂತಹ ಒಂದು ಕ್ರಮ, ಚಿಲಿಯಲ್ಲಿ ಪಾರ್ಲಿಮೆಂಟರಿ ಚುನಾವಣೆಗಳಿಗೆ ಹಿಂದೆ ಕಡ್ಡಾಯ ಮತದಾನದ ನಿಯಮವಿದ್ದು ಇತ್ತೀಚೆಗೆ ಅದನ್ನು ತೆಗೆದು ಹಾಕಲಾಗಿತ್ತು. ದೂರಗಾಮಿ ಪರಿಣಾಮ ಬೀರುವ ಸಂವಿಧಾನದ ಕುರಿತ ಜನಮತಸಂಗ್ರಹದಲ್ಲಿ ಎಲ್ಲ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸುವಂತೆ ಕಡ್ಡಾಯ ಮಾಡುವುದು ಸೈದ್ಧಾಂತಿಕವಾಗಿ ಸರಿಯಾದರೂ ವಾಸ್ತವಿಕ ಸ್ಥಿತಿಯಲ್ಲಿ ಸರಿಯಾದ ರಾಜಕೀಯ ನಿಲುವು ಆಗಿರಲಿಲ್ಲ. ಕಳೆದ ಅಧ್ಯಕ್ಷೀಯ/ಪಾರ್ಲಿಮೆಂಟರಿ ಹಾಗು ಜನಮತಸಂಗ್ರಹದ ಮತದಾನದ ವಿಶ್ಲೇಷಣೆ ಮಾಡಿದರೆ ಆಳುವ ಎಡ-ನಡುಪಂಥೀಯ ರಂಗದ ಮತಗಳು 46 ಲಕ್ಷ ಇದ್ದಿದ್ದು ಸಂವಿಧಾನದ ಅನುಮೋದನೆಗೆ ಮತಗಳು 48 ಲಕ್ಷಕ್ಕೆ ಏರಿದ್ದವು ಅಂದರೆ  2 ಲಕ್ಷ ಜಾಸ್ತಿಯಾಗಿದ್ದವು. ಆದರೆ ವಿರೋಧಿ ರಂಗದ ಮತಗಳು 37 ಲಕ್ಷ ಇದ್ದಿದ್ದು ಸಂವಿಧಾನದ ತಿರಸ್ಕಾರಕ್ಕೆ ಮತಗಳು 79 ಲಕ್ಷಕ್ಕೇರಿದವು. ಅಂದರೆ ಕಡ್ಡಾಯ ಮತದಾನದ ಫಲವಾಗಿ 83 ಲಕ್ಷದಿಂದ 127 ಲಕ್ಷಕ್ಕೆ ಏರಿದಾಗ ಹೆಚ್ಚಿದ 44 ಲಕ್ಷ ಮತಗಳಲ್ಲಿ ಬಹುಭಾಗ ಸಂವಿಧಾನ ‘ತಿರಸ್ಕಾರ’ ಪರವಾಗಿ ಬಿದ್ದಿದ್ದವು. ಏಕೆಂದರೆ ಸಾಮಾನ್ಯವಾಗಿ ಮತದಾನವನ್ನೇ ಮಾಡದ ಇವರು ಯಾವುದೇ ರಾಜಕೀಯ ನಿಲುವು ಹೊಂದಿರುವವರಲ್ಲ. ರಾಜಕೀಯ ವ್ಯವಸ್ಥೆಯ ‘ಹೊರಗಿರುವವರು’. ಸಂವಿಧಾನದ ಕುರಿತು ಏನನ್ನೂ ಅರಿಯದವರು. ಇವರಲ್ಲಿ ಹಲವರು ಅಪಪ್ರಚಾರಕ್ಕೆ ಸುಲಭವಾಗಿ ಗುರಿಯಾದರು. ಇಲ್ಲವೇ ಆರ್ಥಿಕ ವೈಫಲ್ಯದಿಂದ ರೇಗಿ ಮತದಾನ ಮಾಡಿದರು.

* ಅದೇ ರೀತಿ ಸಂವಿಧಾನ ಕಮಿಶನ್  ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಲ್ಲದೆ ಸ್ವತಂತ್ತರು ತಮ್ಮದೇ ಪಟ್ಟಿ ಮಾಡಿಕೊಳ್ಳಬಹುದು ಎಂಬ ನಿಯಮ  ‘ಸಾಮಾಜಿಕ ಚಳುವಳಿ ಗಳ ಪ್ರತಿನಿಧಿಗಳು ಅವರ ಬಲಕ್ಕಿಂತ ಹೆಚ್ಚು ಪಾಲು ಪ್ರಾತಿನಿಧ್ಯ ಪಡೆಯುವಂತಾಯಿತು. ಹಲವು ರಾಜಕೀಯ ಪಕ್ಷಗಳಿಗೆ ಇದರಿಂದ ಪ್ರಾತಿನಿಧ‍್ಯ ಸಿಗಲಿಲ್ಲ.  ಯಾವುದೇ ರಾಜಕೀಯ ಅನುಭವವಿಲ್ಲದ  ‘ಸಾಮಾಜಿಕ ಚಳುವಳಿ ಗಳ ಪ್ರತಿನಿಧಿಗಳು ಕಮಿಶನ್ ಸಭೆಗಳಲ್ಲಿ ಅತ್ಯಂತ ಬೆಜವಾಬ್ದಾರಿಯಿಂದ ನಡೆದುಕೊಂಡರು. ಕೆಲವು ಸೀಮಿತ ಅಜೆಂಡಾ ಇರುವ ಇವರು ತಮ್ಮ ಅಭಿಪ್ರಾಯಗಳಿಗೆ ಅಂಟಿಕೊಂಡು ಹಲವು ವಿಷಯಗಳ ಕುರಿತು ಸಹಮತಕ್ಕೆ ಬರುವುದಕ್ಕೆ ಅಡ್ಡಿಯಾದರು. ಅವರ ಬೆಜವಾಬ್ದಾರ ನಡವಳಿಕೆಗಳನ್ನು ಮಾಧ್ಯಮಗಳು ಬಲಪಂಥೀಯ ಶಕ್ತಿಗಳು ಸಂವಿಧಾನ ಪ್ರಕ್ರಿಯೆಯನ್ನೇ ದೂಷಿಸಲು ಬಳಸಿಕೊಂಡವು.

* ಸಂವಿಧಾನ ಕಮಿಶನ್ ಚುನಾವಣೆಯಲ್ಲಿ ಸ್ವತಂತ್ತರ ಪಟ್ಟಿಗೆ ಅವಕಾಶ ಹಲವು ನಡು, ನಡು-ಬಲಪಂಥೀಯ, ಬಲಪಂಥೀಯ ಧೋರಣೆಗಳಿಗೆ ಕಮಿಶನ್ ನಲ್ಲಿ ಪ್ರಾತಿನಿಧ್ಯ ಇಲ್ಲದಂತಾಯಿತು. ಇವುಗಳಿಗೆ ಪ್ರಾತಿನಿಧ್ಯ ಇದ್ದರೆ ಕಮಿಶನ್ ನ ಚರ್ಚೆಗಳಲ್ಲಿ ಭಾಗವಹಿಸಿ ಅದು ರೂಪಿಸಿದ ಸಂವಿಧಾನಕ್ಕೂ ಹೆಚ್ಚಿನ ಜನವಿಭಾಗಗಳ ಭಾಗವಹಿಸುವಿಕೆ ಇರುತ್ತಿತ್ತು. ಇದಕ್ಕೆ ಅವಕಾಶ ಇಲ್ಲವಾದ್ದರಿಂದ ಈ ಶಕ್ತಿಗಳು ಮೊದಲಿನಿಂದಲೇ ಹೊಸ ಸಂವಿಧಾನದ ವಿರುದ್ಧ ಅಪಪ್ರಚಾರ ಆರಂಭಿಸಿದವು.

* ಚಿಲಿಯ ಬಹುಸಂಖ್ಯಾತ ಕ್ಯಾಥೊಲಿಕರಲ್ಲಿ ಹಲವರಿಗೆ ಗರ್ಭಪಾತ ಧಾರ್ಮಿಕ ನಂಬಿಕೆಯ ವಿಷಯವಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹೊಸ ಇವಾಂಜಲಿಕ್ ಪಂಥಗಳು ವಿಶೇಷವಾಗಿ ಗರ್ಭಪಾತದ ಕುರಿತು ಇನ್ನಷ್ಟು ಉಗ್ರಮತ ವಹಿಸಿದವು. ಬಲಪಂಥೀಯ ಶಕ್ತಿಗಳು ಇವಾಂಜಲಿಕ್ ಪಂಥಗಳಲ್ಲಿ ವಿಶೇಷ ಪ್ರಚಾರ ಮಾಡಿ ಅವರನ್ನು ಸಂವಿಧಾನದ ವಿರುದ್ಧ ತಿರುಗಿಸಿದವು.

ಮುಂದೇನು?

ಮೇಲಿನ ಕಾರಣಗಳನ್ನು ಇನ್ನೊಂದು ರೀತಿಯಲ್ಲಿ ಪರಿಶೀಲಿಸಿದರೆ ಈ ಜನಮತಸಂಗ್ರಹ ಪಿನೋಶೆ ಸಂವಿಧಾನ ಬದಲಾವಣೆಗೆ ವಿರುದ್ಧವೆಂದಲ್ಲ. ಎಡ-ನಡು ಶಕ್ತಿ ಕುಂದಿ, ಬಲಪಂಥೀಯ ಶಕ್ತಿಗಳು ಬಲವಾಗಿವೆ ಎಂತಲೂ ಅಲ್ಲ. ಅವರಿಗೆ ಹೊಸ ಪ್ರಜಾಸತ್ತಾತ್ಮಕ ಪ್ರಗತಿಪರ ಹೊಸ ಸಂವಿಧಾನ ಬೇಕು. ಆದರೆ ಈ ಹೊಸ ಸಂವಿಧಾನದ ಕೆಲವು ಅಂಶಗಳು ಕೆಲವು ಜನವಿಭಾಗಗಳಿಗೆ ಅರ್ಥವಾಗಿಲ್ಲ ಅಥವಾ ಅವರನ್ನು ದಾರಿತಪ್ಪಿಸಲಾಗಿದೆ ಅಥವಾ ಅವರು ಈ ಬದಲಾವಣೆಗಳಿಗೆ ಸಿದ್ಧವಿಲ್ಲ ಅಥವಾ ಎಲ್ಲ ಬದಲಾವಣೆಗಳನ್ನು ಒಂದೇ ಏಟಿಗೆ ತರುವುದು ಬೇಡ ಅನ್ನುತ್ತಿದ್ದಾರೆ ಎಂದು ಗ್ರಹಿಸಬೇಕು. ಈ ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಯಾವುದನ್ನು ಕೈಬಿಡಬೇಕು ಯಾವುದನ್ನು ಸೇರಿಸಬೇಕು ಎಂಬ ವ್ಯಾಪಕ ಸಹಮತಕ್ಕೆ ಸರಕಾರ ಪ್ರಯತ್ನಿಸಬೇಕಾಗಿದೆ.

ಅದನ್ನೇ ಚಿಲಿಯ ಎಡ-ನಡುಪಂಥೀಯ ಸರಕಾರ  ಮಾಡಲು ಹೊರಟಿದೆ. ಅದು ರಾಜಕೀಯವಾಗಿ ಸವಾಲಿನ ಸಂಕೀರ್ಣವಾದ ಕೆಲಸ. ಇನ್ನೊಂದು ಸಂವಿಧಾನದ ಕರಡು ತಯಾರಿಸುವ ವಿಧಾನವನ್ನು ಪಾರ್ಲಿಮೆಂಟು ಅನುಮೋದಿಸಬೇಕು. ಅಲ್ಲಿ ಬಲಪಂಥೀಯರಿಗೆ ಸಾಕಷ್ಟು ಬಲವಿದೆ,  ಅದೇ ಸಮಯದಲ್ಲಿ ಪಿನೋಶೆ ಸಂವಿಧಾನಕ್ಕೆ ಹಿಂದಕ್ಕೆ ಹೋಗುವುದೂ ಅವರಿಗೆ ಸಾಧ್ಯವಿಲ್ಲ. ಸರಕಾರ ಈ ಸವಾಲನ್ನು ಸ್ವೀಕರಿಸುತ್ತದೆ. ಈ ಜನಮತಸಂಗ್ರಹ ಬೆಳಕಿಗೆ ತಂದ ನ್ಯೂನತೆಗಳನ್ನು ಎಡ-ನಡುಪಂಥೀಯ ಶಕ್ತಿಗಳು ಅರಿತುಕೊಂಡು ಮುನ್ನಡೆಯುತ್ತವೆ ಎಂದು ಆಶಿಸಬಹುದು.

Donate Janashakthi Media

Leave a Reply

Your email address will not be published. Required fields are marked *