ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿರುವ ರಾಜ್ಯ ಸರ್ಕಾರವು ಬುಧವಾರ ಆದೇಶ ಹೊರಡಿಸಿದೆ. ನವೆಂಬರ್ 1ರಿಂದ ನೋಂದಣಿ ಆರಂಭವಾಗಲಿದೆ ಎಂದು ಪ್ರಕಟಿಸಿದೆ.
ರೈತರು ಹಾಗೂ ಬಡವರಿಗಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮರು ಜಾರಿಗೊಳಿಸಬೇಕೆಂದು ರೈತರು ಹಾಗೂ ಸಹಕಾರಿ ಸಂಘಗಳು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮರು ಜಾರಿಗೊಳಿಸಿದ್ದು, ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ ರೂ.300 ಕೋಟಿ ಘೋಷಿಸಿದೆ.
ನೊಂದಣಿ ಪ್ರಕ್ರಿಯೆಯನ್ನು ನವೆಂಬರ್ 1, 2022 ರಿಂದ ಪ್ರಾರಂಭವಾಗಲಿದ್ದು, 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1,650 ಖಾಯಿಲೆಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತದೆ. ಯಶಸ್ವಿನಿ ಯೋಜನೆ ಅಡಿಯಲ್ಲಿನ ಫಲಾನುಭವಿಗಳು ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ರೂಪಾಯಿ ನಿಗದಿಗೊಳಿಸಲಾಗಿದೆ.
4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ರೂಪಾಯಿ ವಂತಿಕೆ ಕಟ್ಟಬೇಕಾಗಿದೆ. ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರಿದ್ದರೆ ಹೆಚ್ಚುವರಿ ಸದಸ್ಯರಿಗೆ ತಲಾ ₹ 100 ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹ 1,000, ಹೆಚ್ಚುವರಿ ಸದಸ್ಯರಿಗೆ ತಲಾ ₹ 200 ಪಾವತಿಸಬೇಕು. ಅರ್ಜಿದಾರ ಮತ್ತು ಅವರ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಖಾಸಗಿ ಕಂಪನಿಯ ನೌಕರರಾಗಿದ್ದರೆ ಅಥವಾ ವಿಮಾ ಯೋಜನೆ ಹೊಂದಿದ್ದರೆ ಈ ಯೋಜನೆಗೆ ಅರ್ಹರಲ್ಲ.
ಯಶಸ್ವಿನಿ ಯೋಜನೆಯ ಮಾರ್ಗಸೂಚಿಯಂತೆ, ಸಹಕಾರ ಸಂಘಗಳ ಸದಸ್ಯರು, ಗ್ರಾಮೀಣ ಸ್ವ ಸಹಾಯ ಗುಂಪುಗಳ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರು, ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರಿಗೆ ಈ ಯೋಜನೆ ಅನ್ವಯವಾಗಲಿದೆ.
2003ರಲ್ಲಿ ಸಹಕಾರಿ ಇಲಾಖೆಯ ಮೂಲಕ ಆರಂಭಗೊಂಡ ಯೋಜನೆಯನ್ನು ಬಳಿಕ ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಯಶಸ್ವಿನಿ ಯೋಜನೆಯನ್ನು 2018ರ ಮೇ 31ರಂದು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ ಅದನ್ನು, ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಳಿಸಿತ್ತು. ಇದೀಗ ಮತ್ತೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೆ ಬಂದಿದೆ.