ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಯಣಿಸುತ್ತಿರುವ ಹಡಗು ಮುಳುಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಇಂದು ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.
‘ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿತ್ಯವೂ ಏನಾದರೊಂದು ಹೇಳಿಕೆಗಳನ್ನು ಕೊಡುತ್ತಿರುವುದು ಗಮನಿಸಿಲ್ಲವೇ?’ ಮುಖ್ಯಮಂತ್ರಿ ಹಡಗೇ ಮುಳುಗುತ್ತಿದೆ ಎನ್ನುವುದಕ್ಕೆ ಯತ್ನಾಳ್ ಹೇಳಿಕೆಗಳೇ ಸಾಕ್ಷಿʼʼ ಎಂದರು.
ಇದನ್ನು ಓದಿ : ಪ.ಬಂ. 4ನೇ ಹಂತದ ಮತದಾನ: ಗುಂಡಿನ ಧಾಳಿಗೆ ನಾಲ್ವರು ಬಲಿ-ಮತದಾನ ಮುಂದೂಡಿಕೆ
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಮುಖ್ಯಮಂತ್ರಿ ಹೇಳಿಕೆಗೆ ಸಿದ್ದರಾಮಯ್ಯ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಬಸನಗೌಡ ಯತ್ನಾಳ ಆ ಪಕ್ಷದ ಹಿರಿಯ ಮುಖಂಡ. ಅವರು ಏನು ಹೇಳುತ್ತಿದ್ದಾರೆ ? ಅವರ ಮಾತು ಕೇಳಿದರೆ ಯಡಿಯೂರಪ್ಪ ಕುಳಿತಿರುವ ಹಡಗು ಮುಳುಗುತ್ತಿದೆ ಎಂದು ಭಾಸವಾಗುತ್ತಿದೆ ಎಂಬ ಅಂಶವನ್ನು ವಿವರಿಸಿದರು.
ಸತೀಶ ಜಾರಕಿಹೊಳಿ ಅವರನ್ನು ಹರಕೆಯ ಕುರಿಯಾಗಿಸಿ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿಯವರು ಮಂಗಳ ಅಂಗಡಿ ಅವರಿಗೆ ಏನು ಮಾಡಿದರು? ಮೊದಲು ಯಾರ ಹೆಸರು ಕೇಳಿಬರುತ್ತಿತ್ತು. ನಂತರ ಏನಾಯ್ತು ? ರವಿ ಯಾವಾಗಲೂ ಸುಳ್ಳನ್ನೆ ಹೇಳುತ್ತಾನೆ. ಅವನ ಹೇಳಿಕೆಗೆ ಉತ್ತರ ಕೊಡುವುದಿಲ್ಲ ಎಂದರು.
ಬೈಲಹೊಂಗಲದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರ ಪರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹೆಚ್.ಎಂ.ರೇವಣ್ಣ, ಕೆ.ಎಚ್.ಮುನಿಯಪ್ಪ, ಎಂ.ಬಿ.ಪಾಟೀಲ್, ಪ್ರಕಾಶ್ ಹುಕ್ಕೇರಿ, ಮಹಂತೇಶ ಕೌಜಲಗಿ ಭಾಗವಹಿಸಿದ್ದರು.