ಬೆಂಗಳೂರು, ಜ.11: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವುದು ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಪಕ್ಷದ ವರಿಷ್ಠರು ದಿಢೀರನೆ ದೆಹಲಿಗೆ ಕರೆಸಿಕೊಂಡು ಸುದೀರ್ಘ ಸಮಾಲೋಚನೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಮಾತು ಹೇಳಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟುಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸೋದು ಪಕ್ಕಾ. ಆದರೆ ಯಾವಾಗ ಎನ್ನುವುದನ್ನು ಯಡಿಯೂರಪ್ಪನವರೇ ಹೇಳಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು.
ಸಿದ್ದರಾಮಯ್ಯ ಅವರು ಈ ರೀತಿ ಹೇಳುವುದಕ್ಕೆ ಕಾರಣವೂ ಇದೆ. ಈ ಹಿಂದೆ ಎರಡು ಬಾರಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಿರಲಿಲ್ಲ, ಆದರೆ ನಿನ್ನೆ ನಡೆದ ಸಭೆ ಒಂದೂವರೆ ಗಂಟೆಗಳ ಕಾಲ ಸುದೀರ್ಘ ಅವಧಿ ಅವಧಿ ತೆಗೆದ್ದುಕೊಂಡಿದ್ದರಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಯಡಿಯೂರಪ್ಪ ಸಾಲು ಸಾಲು ಸಭೆ : ಶಾಸಕರ ವಿಸ್ವಾಸಕ್ಕೆ ಮಾಸ್ಟರ್ ಪ್ಲ್ಯಾನ್
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಿದ್ಧರಾಮಯ್ಯನವರು ಕಳೆದ ಎರಡು ತಿಂಗಳಿಂದ ನಿರಂತರ ಹೇಳಿಕೆಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಈ ಹೇಳಿಕೆ ಯಡಿಯೂರಪ್ಪನವರನ್ನು ಮಾನಸಿಕವಾಗಿ ವೀಕ್ ಮಾಡುತ್ತಿದ್ದರೆ, ಇತ್ತ ಅಮಿತ್ ಶಾ ಯಡಿಯೂರಪ್ಪ ಜೊತೆ ಇದು ಲಾಸ್ಟ ಮೀಟಿಂಗ್ ಎಂದು ಹೇಳಿದ್ದಾರೆ ಎಂದು ಬಿಜೆಪಿಗರೆ ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗಿಳಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.