ನವದೆಹಲಿ: ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು 2013ರಿಂದ ಹಲವಾರು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ರೆಫರಿ ಜಗ್‌ಬೀರ್ ಸಿಂಗ್ ಅವರು ಹೇಳಿದ್ದಾರೆ.
ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತ ಹಲವು ಅಗ್ರ ಕುಸ್ತಿಪಟುಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತಿದ್ದಾರೆ.
2007ರಿಂದಲೂ ಅಂತಾರಾಷ್ಟ್ರೀಯ ಕುಸ್ತಿ ರೆಫರಿಯಾಗಿರುವ ಜಗಬೀರ್ ಸಿಂಗ್, ಸಂತ್ರಸ್ತ ಕುಸ್ತಿಪಟು ಮಾಡಿರುವ ಆರೋಪವನ್ನು ದೃಢಪಡಿಸಿದ್ದಾರೆ. ಅಂದು ಈ ರೆಫರಿಯು ದೂರದಾರ ಕುಸ್ತಿಪಟು ಮತ್ತು ಬ್ರಿಜ್ ಭೂಷಣ್ ಅವರಿಂದ ಕೆಲವೇ ಅಡಿಗಳ ಅಂತರದಲ್ಲಿ ನಿಂತಿದ್ದರು. ದೆಹಲಿ ಪೊಲೀಸರಿಗೆ ಕುಸ್ತಿಪಟು ಫೋಟೋ ಸಾಕ್ಷಿಯನ್ನು ಒದಗಿಸಿದ್ದಾರೆ.
ಇದನ್ನೂ ಓದಿ : ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಿರುವ 2 ಎಫ್‌ಐಆರ್‌ಗಳಲ್ಲಿ ಏನಿದೆ?
“ಬ್ರಿಜ್ ಭೂಷಣ್ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಆದರೆ ಹುಡುಗಿಯರು ಆತನ ವಿರುದ್ಧ ದೂರುಗಳನ್ನು ದಾಖಲಿಸುವವರೆಗೆ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆ ದೃಶ್ಯಗಳನ್ನು ನೋಡಿ ನನಗೆ ಬೇಸರವಾಯಿತು” ಎಂದು ಅವರು ಹೇಳಿದ್ದಾರೆ.
125+ ಸಾಕ್ಷಿಗಳು ಲಭ್ಯ : ಬ್ರಿಜ್ ವಿರುದ್ಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಈವರೆಗೆ 4 ರಾಜ್ಯಗಳ ಸುಮಾರು 125ಕ್ಕೂ ಹೆಚ್ಚು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಜಗ್ಬೀರ್, ಅನಿತಾ ಕೂಡಾ ಒಳಗೊಂಡಿದ್ದಾರೆ. ಕುಸ್ತಿಪಟುಗಳು, ಕೋಚ್ಗಳು, ಸಿಬ್ಬಂದಿ ಜೊತೆ ಕೆಲ ಕಡೆಗಳಲ್ಲಿ ಸಿಸಿ ಟಿವಿ ದೃಶ್ಯಗಳನ್ನೂ ಸಂಗ್ರಹಿಸಿದ್ದಾರೆ. ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಚುನಾವಣೆಗೆ ಸಿದ್ಧತೆ ಆರಂಭ : ಜೂ.30ರೊಳಗೆ ಡಬ್ಲ್ಯುಎಫ್ಐಗೆ ಚುನಾವಣೆ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದ ಬೆನ್ನಲ್ಲೇ ಡಬ್ಲ್ಯುಎಫ್ಗೆ ನೇಮಿಸಲಾದ ತಾತ್ಕಾಲಿಕ ಸಮಿತಿಯು ಚುನಾವಣೆಗೆ ಸಿದ್ಧತೆ ಕೈಗೊಂಡಿದೆ. ಈಗಾಗಲೇ ಮತದಾರರ ಪಟ್ಟಿಯನ್ನು ಸಮಿತಿ ಸಿದ್ಧಪಡಿಸಿದ್ದು, ಒಂದೆರಡು ದಿನಗಳಲ್ಲಿ ಚುನಾವಣೆಗೆ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ. ಡಬ್ಲ್ಯುಎಫ್ಐಗೆ 2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 25 ರಾಜ್ಯ ಸಂಸ್ಥೆಗಳಿದ್ದು, ಪ್ರತಿ ಸಂಸ್ಥೆಯಿಂದ ತಲಾ ಇಬ್ಬರು ಮತ ಚಲಾಯಿಸಲಿದ್ದಾರೆ.