ದುಡಿಯುವ ಜನರ ಮಹಾಧರಣಿಯ ಮಹಾ ನಿರ್ಣಯ | ಕೇಂದ್ರಕ್ಕೆ ಛೀಮಾರಿ, ರಾಜ್ಯಕ್ಕೆ ಎಚ್ಚರಿಕೆ!

ಬೆಂಗಳೂರು: ನವೆಂಬರ್‌ 26ರಿಂದ ಮೂರು ದಿನಗಳ ಕಾಲ ನಗರದ ಫ್ರೀಡಂ ಪಾರ್ಕ್‌ನಲ್ಲಿ ದುಡಿಯುವ ಜನರ ಮಹಾಧರಣಿ ಮಂಗಳವಾರ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಈ ವೇಳೆ ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಿಂದೆ ನೀಡಿದ್ದ ಭರವಸೆಗಳನ್ನು ಪೂರೈಸುವಂತೆ ಆಗ್ರಹಿಸಿದ್ದರು. ಅಲ್ಲದೆ ತಮ್ಮ ಆಗ್ರಹಗಳನ್ನು ಕೇಳಲು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದ ಹೋರಾಟಗಾರರು ಮುಖ್ಯಮಂತ್ರಿಯ ಜೊತೆಗೆ ಸಭೆಗೆ ಸಮಯವನ್ನು ನಿಗದಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಪ್ರತಿನಿಧಿ ರಾಜ್ಯಪಾಲರು ಸ್ಥಳಕ್ಕೆ ಆಗಮಿಸದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಮಹಾಧರಣಿಯ ವೇಳೆ ಹೋರಾಟಗಾರರು ರಾಜ್ಯ ಮತ್ತು ಕೇಂದ್ರ ಸರ್ಕಾರ ಬಗ್ಗೆ ಬೇರೆ ಬೇರೆ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅವುಗಳು ಕೆಳಗಿನಂತಿವೆ.

ರಾಜ್ಯ ಸರ್ಕಾರದ ಕುರಿತು ಮಹಾ ಧರಣಿಯ ಮಹಾ ನಿರ್ಣಯಗಳು:

“ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ದ್ವೇಷ ರಾಜಕಾರಣದಿಂದ ರೋಸಿಹೋಗಿದ್ದ ರಾಜ್ಯದ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಜನಸಾಮಾನ್ಯರು ಎಲ್ಲರೂ ಕೂಡಿ ಅವರಿಗೆ ಪಾಠ ಕಲಿಸಿ ಅಧಿಕಾರದಿಂದ ಇಳಿಸಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಪಾಲಿನ ಪರಿಶ್ರಮವೂ ಅಡಗಿದೆ. ಆದರೆ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ತನ್ನನ್ನು ಅಧಿಕಾರಕ್ಕೆ ತಂದ ಜನ ವರ್ಗಗಳ ಕೂಗನ್ನೇ ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಮತ್ತು ದುರಂತ” ಎಂದು ಮಹಾ ಧರಣಿಯ ಮಹಾ ನಿರ್ಣಯ ಹೇಳಿದೆ.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಮಾತಿನಂತೆ ಅನ್ನ ಭಾಗ್ಯ, ವಿದ್ಯುತ್ ಭಾಗ್ಯ ಮತ್ತು ಸ್ತ್ರೀ ಭಾಗ್ಯಗಳನ್ನು ಜಾರಿಗೆ ತಂದಿದ್ದನ್ನು ನಾವು ಸ್ವಾಗತಿಸಿದ್ದೇವೆ. ಈಗಲೂ ಅದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇವೆ. ಆದರೆ ಜನ ಕೇಳಿದ್ದು ಇವನ್ನಲ್ಲ ಎಂಬುದನ್ನು ಸರ್ಕಾರ ಗಮನಕ್ಕೆ ತೆಗೆದುಕೊಳ್ಳಬೇಕಿದೆ. ಜನರು ಕೇಳುತ್ತಿರುವುದು ಉಚಿತ ವ್ಯವಸ್ಥೆಗಳನ್ನಲ್ಲ, ತಮ್ಮ ಆದಾಯಗಳಲ್ಲಿ ಹೆಚ್ಚಳ, ವೆಚ್ಚಗಳಲ್ಲಿ ಕಡಿತ, ಜೀವನದ ಸುರಕ್ಷತೆ, ಆಳ್ವಿಕೆಯಲ್ಲಿ ಬದಲಾವಣೆ ಮತ್ತು ಪ್ರತಿಭಟಿಸುವ ಸ್ವಾತಂತ್ರ್ಯ.

ಆದರೆ ಈ ನಿಟ್ಟಿನಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರ ಯಾವ ಗಮನ ನೀಡುತ್ತಿಲ್ಲ ಬದಲಿಗೆ ಜನರಿಂದ ದೂರವಾಗುತ್ತಾ ದಂತಗೋಪುರದಲ್ಲಿ ಸೇರಿಕೊಳ್ಳುತ್ತಿದ್ದು, ತನ್ನ ಗುಂಗಿನಲ್ಲೇ ತೇಲುತ್ತಾ ಜನರ ಪ್ರತಿಭಟಿಸುವ ಹಕ್ಕನ್ನು ದಮನ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ನಡತೆಯನ್ನು ಈ ಮಹಾ ಧರಣಿಯು ತೀವ್ರವಾಗಿ ಖಂಡಿಸುತ್ತದೆ” ನಿರ್ಣಯ ತಿಳಿಸಿದೆ.

“ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ (ತನ್ನ ಪ್ರಣಾಳಿಕೆಯಲ್ಲಿ ಮತ್ತು ನಮ್ಮೆಲ್ಲರ ಮುಂದೆ ಕೊಟ್ಟ ಮಾತಿನಂತೆ) ಬಿಜೆಪಿ ಸರ್ಕಾರ ತಂದ 4 ಪ್ರಮುಖ ಜನ ವಿರೋಧಿ ಕಾಯ್ದೆಗಳನ್ನು ಇನ್ನೂ ವಾಪಾಸ್ ಪಡೆದಿಲ್ಲ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆ, ಕಾರ್ಮಿಕರ ಕೆಲಸವನ್ನು 8 ರಿಂದ 12 ಗಂಟೆಗೆ ಏರಿಸುವ ಕಾಯ್ದೆಗಳು ಈಗಲೂ ಚಾಲ್ತಿಯಲ್ಲಿವೆ. ಅದನ್ನು ರದ್ದುಗೊಳಿಸಲು ತೋರಬೇಕಾದ ಯಾವ ಉತ್ಸುಕತೆಯನ್ನೂ ರಾಜ್ಯ ಸರ್ಕಾರ ತೋರುತ್ತಿಲ್ಲ.

ಇದಲ್ಲದೆ ಬಗರ್ ಹುಕುಂ ರೈತರು, ಭೂ ಸ್ವಾಧೀನಕ್ಕೆ ಗುರಿಯಾದವರು, ವಸತಿ ಹೀನರು, ವಿವಿಧ ಬೆಳೆ ಬೆಳೆದು ಬೆಲೆ ಕಾಣದವರು, ವಿವಿಧ ಇಲಾಖೆಗಳಡಿ ದುಡಿಯುತ್ತಿರುವ ಅಸಂಘಟಿತ ಹಾಗೂ ಗುತ್ತಿಗೆ ಕಾರ್ಮಿಕರು, ದಲಿತ – ಹಿಂದುಳಿದ – ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು – ಲೈಂಗಿಕ ಅಲ್ಪಸಂಖ್ಯಾತರು ಮತ್ತೆ ಮತ್ತೆ ನಿಮ್ಮ ಬಾಗಿಲು ಬಡಿಯುತ್ತಿದ್ದರೂ ನಿಮಗೆ ಎಚ್ಚರವಾಗುತ್ತಿಲ್ಲ. ಸಮಸ್ಯೆಗಳ ಕುರಿತು ಕೂಲಂಕುಷ ಚರ್ಚೆ ನಡೆಸಿ ಪರಹಾರ ಹುಡುಕುವ ಯಾವ ಪ್ರಯತ್ನವನ್ನೂ ನೀವು ಮಾಡುತ್ತಿಲ್ಲ. ಜನರ ಹಕ್ಕೊತ್ತಾಯಗಳ ಕುರಿತು ರಾಜ್ಯ ಸರ್ಕಾರದ ಈ ಉದಾಸೀನ ತೋರುತ್ತಿದ್ದೀರಿ” ಎಂದು ಸರ್ಕಾರದ ಧೋರಣೆಯನ್ನು ಮಹಾ ಧರಣಿಯು ತೀವ್ರವಾಗಿ ಖಂಡಿಸಿದೆ.

ರಾಜ್ಯ ಸರ್ಕಾರದ ಪರವಾಗಿ ನಿನ್ನೆ ಮಹಾ ಧರಣಿಗೆ ಭೇಟಿಕೊಟ್ಟ ಕಂದಾಯ ಸಚಿವ ಕೃಷ್ಣ ಭೈರೇ ಗೌಡರು ಸಂಯುಕ್ತ ಹೋರಾಟ ಕರ್ನಾಟಕವು ಮುಂದಿಟ್ಟಿರುವ 18 ಹಕ್ಕೊತ್ತಾಯಗಳು ಕುರಿತು ಚರ್ಚಿಸಲು ಅಧಿವೇಶನ ಮುಗಿದ ಕೂಡಲೇ ವಿವರವಾದ ಸಭೆ ಏರ್ಪಡಿಸುತ್ತೇವೆ ಎಂದು ಹೇಳಿದ್ದರು. ಅದರಂತೆ ಮುಖ್ಯಮಂತ್ರಿ ಪರವಾಗಿ ಮಹಾ ಧರಣಿಗೆ ಭೇಟಿಕೊಟ್ಟ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಗಳಾದ ನಜೀರ್ ಅಹಮದ್ ಅವರು ಮುಖ್ಯಮಂತ್ರಿ ಕಛೇರಿಯ ಪತ್ರವನ್ನು ತಂದು ತಲುಪಿಸಿದ್ದರು ಹಾಗೂ ಡಿಸೆಂಬರ್ 18ಕ್ಕೆ ಮುಖ್ಯಮಂತ್ರಿಯೊಂದಿಗೆ ಸಭೆಗೆ ದಿನ ನಿಗದಿ ಮಾಡಿದ್ದರು. ಇದಕ್ಕಾಗಿ ಸಂಯುಕ್ತ ಹೋರಾಟವು ಸರ್ಕಾರಕ್ಕೆ ಕೃತಜ್ಞತೆ ತಿಳಿದೆ.

ಅಲ್ಲದೆ, ಸಭೆಗೆ ನಿಗದಿ ಮಾಡಿರುವ ದಿನಾಂಕವನ್ನು ಯಾವುದೇ ಕಾರಣಕ್ಕೂ ಮತ್ತೆ ಮುಂದುಡಬಾರದು ಮತ್ತು ನಾವು ಮುಂದಿಟ್ಟಿರುವ ಎಲ್ಲಾ 18 ಹಕ್ಕೊತ್ತಾಯಗಳ ಕುರಿತು ಚರ್ಚಿಸಲು ಸಂಬಂಧಿತ ಎಲ್ಲಾ ಸಚಿವರು ಮತ್ತು ಕಾರ್ಯದರ್ಶಿಗಳೂ ಇರುವಂತಹ ವಿಶೇಷ ಉನ್ನತ ಸಭೆಯಾಗಿ ಆಯೋಜಿಸಬೇಕು ಎಂದು ಒತ್ತಿ ಹೋರಾಟ ಸಮಿತಿಯ ನಿರ್ಣಯ ಸರ್ಕಾರವನ್ನು ಒತ್ತಾಯಿಸಿದೆ.

ಒಂದು ವೇಳೆ ವಿಶೇಷ ಉನ್ನತ ಸಭೆ ನಡೆದು ಪರಿಹಾರ ಕ್ರಮಗಳಿಗೆ ಸರ್ಕಾರ ಮುಂದಾಗದಿದ್ದಲ್ಲಿ ರಾಜ್ಯವ್ಯಾಪಿಯಾಗಿ ಅನಿರ್ಧಿಷ್ಟ ಹೋರಾಟವನ್ನು ಹಮ್ಮಿಕೊಳ್ಳಾಗುವುದು ಎಂದು ಮಹಾ ಧರಣಿಯ ನಿರ್ಣಯವು ಸರ್ಕಾರವನ್ನು ಎಚ್ಚರಿಸಿದೆ.

ಇದನ್ನೂ ಓದಿ: ಮಹಾಧರಣಿ ಅಂತ್ಯ| ಕರಾಳ ಕಾಯ್ದೆ ಸುಟ್ಟು ಆಕ್ರೋಶ | ಡಿ.19ಕ್ಕೆ ಮುಖ್ಯಮಂತ್ರಿ ಜೊತೆ ಮಾತುಕತೆ

ಕೇಂದ್ರ ಸರ್ಕಾರದ ಕುರಿತ ಮಹಾಧರಣಿಯ ನಿರ್ಣಯಗಳು:

“ದೇಶಕ್ಕೇ ಅನ್ನ ಹಾಕುವ ರೈತಾಪಿಯ ಅನ್ನಕ್ಕೇ ವಿಷ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅದು ತರಲು ಬಯಸುತ್ತಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಭೂ ತಿದ್ದುಪಡಿ ಕಾಯ್ದ ಎಲ್ಲವೂ ಅವರ ಕಾರ್ಪೊರೇಟ್ ಮಿತ್ರರ ಕೊನೆ ಇಲ್ಲದ ದಾಹವನ್ನು ತಣಿಸುವ ಸಂಚುಗಳಾಗಿವೆ. ರೈತರನ್ನು ಸುಲಭವಾಗಿ ಏಮಾರಿಸಬಹುದು. ಕೋವಿಡ್ ಸಂದರ್ಭದಲ್ಲಂತೂ ಇವರೇನೂ ಮಾಡಲು ಸಾಧ್ಯವಿಲ್ಲ ಎಂಬ ದುರಹಂಕಾರದಲ್ಲಿ ಕೇಂದ್ರ ಇವನ್ನೆಲ್ಲಾ ರೈತಾಪಿಯ ಮೇಲೆ ಹೇರುವ ಷಡ್ಯಂತರ ರೂಪಿಸಿತ್ತು” ಎಂದು ನಿರ್ಣಯವು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

“ರೈತರು ಅಮಾಯಕರು ನಿಜ ಆದರೆ ನಾವು ಮೂರ್ಖರಲ್ಲ, ಅಹಿಂಸಾವಾದಿಗಳು ಹೌದು ಆದರೆ ಹೇಡಿಗಳಲ್ಲ ಎಂಬುದನ್ನು ರೈತಕುಲ ದಿಲ್ಲಿಯ ದೊರೆಗಳಿಗೆ ತೋರಿಸಿಕೊಟ್ಟಿತು. 13 ತಿಂಗಳುಗಳ ಕಾಲ ದೆಹಲಿ ಸುತ್ತುವರೆದು ನಡೆಸಿದ ಹೋರಾಟ ಕಡೆಗೂ ಆಳುವವರನ್ನು ಬಗ್ಗಿಸಿ ರೈತ ವಿರೋಧಿ ಹಾಗೂ ಕಾರ್ಪೊರೇಟ್ ಸಂಚಿನ ಕಾಯ್ದೆಗಳನ್ನು ವಾಪಾಸ್ ಪಡೆದುಕೊಳ್ಳುವ ನಾಟಕವಾಡಿತು. ಜೊತೆಗೆ ರೈತರ ಇತರೆ ಹಕ್ಕೊತ್ತಾಯಗಳನ್ನು ಈಡೇರಿಸುವ ಲಿಖಿತ ಭರವಸೆ ಕೊಟ್ಟಿತು. ಆದರೆ ಯಾವೊಂದು ಹಕ್ಕೊತ್ತಾಯವನ್ನೂ ಈಡೇರಿಸದೆ ತನ್ನ ನಿಜಬಣ್ಣವನ್ನು ತೋರಿಸಿಕೊಂಡಿದೆ” ಎಂದು ನಿರ್ಣಯವು ಉಲ್ಲೇಖೀಸಿದೆ.

“ರೈತರ ಬೆಳೆ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕನಿಷ್ಟ ಪ್ರಯತ್ನವೂ ಕೇಂದ್ರ ಸರ್ಕಾರ ಮಾಡುತ್ತಿಲ್ಲ. ರೈತ ಹೋರಾಟಗಾರರ ಮೇಲೆ  ಹಾಕಿದ್ದ ಮೊಕದ್ದಮೆಗಳನ್ನೂ ವಾಪಾಸ್ ಪಡೆದಿಲ್ಲ. ಮಡಿದ 780 ರೈತ ಕುಟುಂಬಗಳಿಗೆ ಕನಿಷ್ಟ ಪರಿಹಾರ ನೀಡುವ ಮಾತನ್ನೂ ಉಳಿಸಿಕೊಂಡಿಲ್ಲ.  ರೈತರ ಹತ್ಯೆಗೈದ ಅಜಯ್ ಮಿಶ್ರನನ್ನು ಬಂಧಿಸುವ ಬದಲು ಮಂತ್ರಿ ಮಂಡಲದಲ್ಲೇ ಉಳಿಸಿಕೊಂಡು ಕಾಪಾಡಲಾಗುತ್ತಿದೆ” ಎಂದು ನಿರ್ಣಯವು ಹೇಳಿದೆ.

“ಸಣ್ಣ ರೈತರ ಭೂಮಿ ಕಸಿಯುವ, ಅರಣ್ಯಗಳಿಂದ ಆದಿವಾಸಿಗಳನ್ನು ಹೊರದಬ್ಬುವ, ಕನಿಷ್ಟ ಕೂಲಿಯಾದರೂ ಕೊಡುತ್ತಿದ್ದ ನರೇಗಾ ಯೋಜನೆಯನ್ನೂ ಕೊಂದು ಬಡವರನ್ನು ಬೀದಿಪಾಲು ಮಾಡುವ ನೀಚ ನಡೆಗಳಿಗೆ ಸರ್ಕಾರ ಮುಂದಾಗಿದೆ” ಎಂದಿರುವ ನಿರ್ಣಯವು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು “ಮಹಾದ್ರೋಹ” ಎಂದು ತೀವ್ರವಾಗಿ ಖಂಡಿಸಿದೆ.

“ಜಗತ್ತಿನ ಹಾಗೂ ಭಾರತದ ಬಂಡವಾಳಶಾಹಿಗಳೆಲ್ಲಾ ಸೇರಿ ಶ್ರಮಜೀವಿಗಳ ಬದುಕನ್ನು ಹೀರಿ ತಮ್ಮ ಸಾಮ್ರಾಜ್ಯಗಳನ್ನು ವಿಸ್ತರಿಸಿಕೊಳ್ಳುವ ಮತ್ತೊಂದು ಷಡ್ಯಂತ್ರ ತೀವ್ರಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ರೂವಾರಿಯಾಗಿ ಕೆಲಸ ಮಾಡುತ್ತಿದೆ. ಒಂದೊಂದಾಗಿ ಕಾರ್ಮಿಕರು ಹೋರಾಡಿ ಗಳಿಸಿದ್ದ ಹಕ್ಕುಗಳನ್ನೆಲ್ಲಾ ರದ್ದುಗೊಳಿಸುತ್ತಾ ನಮ್ಮನ್ನು ಸಂಪೂರ್ಣ ದೈನೇಸಿ ಆಧುನಿಕ ಗುಲಾಮರನ್ನಾಗಿ ಮಾಡುವ ಪ್ರಯತ್ನವನ್ನು ಇವರುಗಳು ಮಾಡುತ್ತಿದ್ದಾರೆ” ಎಂದು ನಿರ್ಣಯವು ಹೇಳಿದೆ.

“ಶಾಶ್ವತ ಉದ್ಯೋಗ ರದ್ದು ಮಾಡಿ ಗುತ್ತಿಗೆ, ಹೊರಗುತ್ತಿಗೆ, ಸ್ಕೀಮ್ ಪದ್ದತಿ ಇತ್ಯಾದಿ, ನೇರ ನೇಮಕಾತಿ ಬದಲು ಔಟ್ ಸೋರ್ಸಿಂಗ್, ಜೀವನ ಭಧ್ರತೆಯ ಪಿಎಫ್ , ಇ ಎಸ್ ಐ, ಪೆನ್ಷನ್ನಿನ ರದ್ದತಿ, ಜೀವನಾವಷ್ಯಕ ವೇತನದ ಬದಲು ಬಿಡಿಗಾಸಿನ ಸಂಬಳ, ಓ ಪಿ ಎಸ್ ಬದಲು ಎನ್ ಪಿ ಎಸ್, ಕಲ್ಯಾಣ ಮಂಡಳಿಗಳ ಹಣದ ದುರುಪಯೋಗ, ಈಗ 8 ಗಂಟೆ ಕೆಲಸದ ಅವಧಿಯ ಬದಲು 12 ಗಂಟೆ ಕೆಲಸ….ಒಟ್ಟಿನಲ್ಲಿ ನಮ್ಮನ್ನು ಉದ್ಯೋಗ ಭದ್ರತೆಯಾಗಲೀ, ಜೀವನ ಭದ್ರತೆಯಾಗಲೀ ಇಲ್ಲದ, ಕನಿಷ್ಟ ವೇತನವೂ ದಕ್ಕದ, ನಮ್ಮ ವಿಶ್ರಾಂತಿಗೆ ಸಮಯವೇ ಸಿಗದ ಗಾಣದಲ್ಲಿ ಹಾಕಿ ರುಬ್ಬಲು ಹೊರಟಿದ್ದಾರೆ” ಎಂದಿರುವ ನಿರ್ಣಯವು, ದೊಡ್ಡ ಬಂಡವಾಳಿಗರ ಮತ್ತುಅವರ ಜೊತೆ ಕೈಗೂಡಿಸಿರುವ ಕೇಂದ್ರ ಸರ್ಕಾರದ ಈ ದುಷ್ಟ ನಡೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

“ರೈತ – ಕಾರ್ಮಿಕರನ್ನು ಮಾತ್ರವಲ್ಲದ ಈ ದೇಶದ ಪ್ರತಿಯೊಬ್ಬ ನಾಗರೀಕರನ್ನೂ ಕೇಂದ್ರ ಸರ್ಕಾರ ವಂಚಿಸಿ, ಸುಲಿಗೆ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಎಲ್ಲಾ ವಸ್ತು ಮತ್ತು ಸೇವೆಗಳ ಬೆಲೆಗಳನ್ನು ದುಪ್ಪಟ್ಟು ಮಾಡಿದೆ. ಪೆಟ್ರೋಲ್, ಗ್ಯಾಸ್, ಎಣ್ಣೆ, ದಿನಸಿ, ಶಿಕ್ಷಣ, ಆರೋಗ್ಯ, ರೈಲು, ವಿದ್ಯುತ್, ಮೊಬೈಲ್ ಎಲ್ಲದರ ಬೆಲೆಗಳೂ ಮೂರು ಪಟ್ಟು ಹೆಚ್ಚಾಗಿವೆ. ಜಿ ಎಸ್ ಟಿ ತಂದು ಜನಸಾಮಾನ್ಯರಿಂದ ಹೆಚ್ಚುವರಿ ವಸೂಲಿ ಮಾಡುತ್ತಿದೆ. ದೇಶದ ಸಾರ್ವಜನಿಕರ ಸಂಪತ್ತಾದ ಭೂಮಿಯನ್ನು, ಖನಿಜವನ್ನು, ಅರಣ್ಯವನ್ನು, ಸಮುದ್ರವನ್ನು, ಉದ್ದಿಮೆಗಳನ್ನು, ವಿಮಾನ ನಿಲ್ದಾಣಗಳನ್ನು, ವಿಮೆಯನ್ನು ….ಎಲ್ಲವನ್ನೂ ಖಾಸಗೀಯವರಿಗೆ ಧಾರೆ ಎರೆದು ಕೊಡುತ್ತಿದೆ” ಎಂದು ನಿರ್ಣಯ ಹೇಳಿದೆ.

“ಬಡವರು ಮಾತ್ರವಲ್ಲದೆ, ಮಧ್ಯಮ ವರ್ಗದ ಜೀವನವೂ ಅತಂತ್ರ ಮತ್ತು ಅಭದ್ರಗೊಳ್ಳುತ್ತಿದೆ. ಸಣ್ಣ ವ್ಯಾಪಾರಸ್ಥರೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯನ್ನು ಈ ಸರ್ಕಾರ ಸೃಷ್ಟಿಸಿದೆ. ಜನರನ್ನು ಸುಲಿಯುವ, ಕತ್ತು ಹಿಸುಕುವ, ದೇಶವನ್ನು ಮಾರುವ ಕೇಂದ್ರದ ಈ ಕ್ರೂರ ನಡೆಗಳನ್ನು ಜನಸಾಮಾನ್ಯರಾದ ನಾವು ಒಕ್ಕೊರಲ ಜೊತೆ ಖಂಡಿಸುತ್ತಿದ್ದೇವೆ” ಎಂದು ನಿರ್ಣಯ ತಿಳಿಸಿದೆ.

“ಜನ ವಿರೋಧಿ ಕುಕೃತ್ಯಗಳನ್ನು ಮುಚ್ಚಿಕೊಂಡು ಜನರನ್ನು ಏಮಾರಿಸಿ ಓಟು ಪಡೆಯಲು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಜಗಳ ಹಚ್ಚಿದೆ. ಸಂತರ ನಾಡಿನಲ್ಲಿ ದ್ವೇಷದ ಬೀಜಗಳನ್ನು ಚೆಲ್ಲುತ್ತಿದೆ. ಯುವಜನರನ್ನು ದುರ್ಬಳಕೆ ಮಾಡಿಕೊಂಡು ದ್ವೇಷ ರಾಜಕಾರಣವನ್ನು ಹರಡುತ್ತಿದೆ. ಇದೆಲ್ಲದರ ಫಲವಾಗಿ ದಮನಿತ ಸಮುದಾಯಗಳಾದ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಾಗರೀಕರು ತಲೆತಗ್ಗಿಸುವಂತೆ ಹೆಚ್ಚಾಗಿವೆ.

ಕಾರ್ಪೋರೇಟ್ ಮಿತ್ರರ ಬೃಹತ್ ದೇಣಿಗೆಗಳನ್ನು ಹಾಗೂ ಅವರ ಬೃಹತ್ ಮಾಧ್ಯಮಗಳ ಪ್ರಚಾರವನ್ನು ಬಳಸಿಕೊಂಡು ಇಡೀ ದೇಶವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಜನರ ಗಮನವನ್ನು ಬದುಕಿನ ನಿಜ ಸಮಸ್ಯೆಗಳಿಂದ ಹಾಗೂ ನಿತ್ಯ ನಡೆಯುತ್ತಿರುವ ವಂಚನೆ ಮತ್ತು ಸುಲಿಗೆಯಿಂದ ಮರೆಮಾಚಿ ಭಾವುಕ ದ್ವೇಷ ರಾಜಕಾರಣದ ಮೂಲಕ ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಮಹಾ ಧರಣಿಯು ಹೇಳಿದ್ದು, ಈ ಮಹಾ ಮೋಸವನ್ನು ಛೀಮಾರಿ ಹಾಕಿ ಖಂಡಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ

ಕೇಂದ್ರೀಯ ನಿರ್ಣಯ:

ಕೇಂದ್ರದಲ್ಲಿ ಅಧಿಕಾರ ಕಬಳಿಸಿ ಕೂತಿರುವ ಷಡ್ಯಂತ್ರಕಾರಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯದೆ ಈ ದೇಶದ ರೈತರಿಗಾಗಲೀ, ಶ್ರಮಿಕರಿಗಾಗಲೀ, ಜನಸಾಮಾನ್ಯರಿಗಾಗಲೀ, ದಮನಿತ ಜನಸಮುದಾಯಗಳಿಗಾಗಲೀ ಮುಕ್ತಿ ಇಲ್ಲ ಎಂಬ ಸತ್ಯ ನಮಗೆಲ್ಲಾ ನಿಚ್ಚಳವಾಗಿ ಗೊತ್ತಾಗಿದೆ ಎಂದಿರುವ ಮಹಾಧರಣಿಯು, “ಅನುಭವಿಸಿದ್ದು ಸಾಕು – ಇವರನ್ನು ಕೆಳಗಿಳಿಸಲೇ ಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ” ಎಂದು ತಿಳಿಸಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣ್ಣುಮುಕ್ಕಿಸಲು ಈಗಿನಿಂದಲೇ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿರುವ ಮಹಾಧರಣಿ, “ಸಮಾನ ಮನಸ್ಕ ಸಮುದಾಯಗಳು, ಸಂಘಟನೆಗಳ ಜೊತೆಗೆ ಸಮಾಲೋಚನೆ ನಡೆಸಿ ಬೃಹತ್ ಪ್ರಚಾರಂದೋಲನವನ್ನು ಈ ರಾಜ್ಯದ ಮನೆಮನೆಗೆ ಒಯ್ಯುತ್ತೇವೆ. ಇವರನ್ನು ಸೋಲಿಸುವ, ಈ ದೇಶವನ್ನು ರಕ್ಷಿಸುವ, ನಮ್ಮ ಬದುಕನ್ನು ಉಳಿಸಿಕೊಳ್ಳುವ, ನಮ್ಮ ಮಕ್ಕಳ ಭವಿಷ್ಯವನ್ನು ಕಾಪಾಡುವ ಹೊಣೆಯೊಂದಿಗೆ ಹಗಲಿರುಳು ಕೆಲಸ ಮಾಡುತ್ತೇವೆ. ದಿಲ್ಲಿಗಿಂತ ಹಳ್ಳಿ ಬಲಶಾಲಿ ಎಂಬುದನ್ನು, ಬಂಡವಾಳಿಗರಿಗಿಂತ ದುಡಿವವರೇ ಬಲಶಾಲಿಗಳೆಂಬುದನ್ನು, ಸುಳ್ಳಿಗಿಂತ ಸತ್ಯವೇ ಶಾಶ್ವತವೆಂಬುದನ್ನು ಮತ್ತೊಮ್ಮೆ ರುಜುವಾತು ಪಡಿಸುತ್ತೇವೆ” ಎಂದು ಪ್ರತಿಜ್ಞೆ ಮಾಡಿದೆ.

ವಿಡಿಯೋ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

Donate Janashakthi Media

Leave a Reply

Your email address will not be published. Required fields are marked *