ಗಾಂಧಿನಗರ: ಗುಜರಾತ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ, ಪೋರಬಂದರ್ ಮಾಜಿ ಶಾಸಕ ಅರ್ಜುನ್ ಮೋಧವಾಡಿಯಾ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಕಾರ್ಯಾಧ್ಯಕ್ಷ ಅಂಬರೀಷ್ ಡೇರ್ ಅವರು ಇಂದು (ಮಾ.05) ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗುಜರಾತ್
ಗಾಂಧಿನಗರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರು ಅರ್ಜುನ್ ಮತ್ತು ಅಂಬರೀಷ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಗುಜರಾತ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ನಿಗದಿತ ಪ್ರವೇಶಕ್ಕೆ ಕೇವಲ ಮೂರು ದಿನಗಳ ಮೊದಲು ಇಬ್ಬರೂ ನಾಯಕರು ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಘೋಷಿಸಿ, ಬಿಜೆಪಿ ಸೇರಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಯಾವುದೇ ಷರತ್ತುಗಳಿಲ್ಲದೆ ಭಾರತೀಯ ಜನತಾ ಪಕ್ಷಕ್ಕೆ ಸೇರುವುದಾಗಿ ಅಂಬರೀಶ್ ದೇರ್, ಅರ್ಜುನ್ ಮೋಧವಾಡಿಯಾ ಹೇಳಿದ್ದಾರೆ. ಅರ್ಜುನ್ ಮೋಧವಾಡಿಯಾ ನಿನ್ನೆಯಷ್ಟೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ : ಗುಜರಾತ್ | 2 ವರ್ಷಗಳಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನದ ನಿರ್ವಹಣೆಗೆ 58 ಕೋಟಿ ರೂ. ಖರ್ಚು ಮಾಡಿದ ಬಿಜೆಪಿ ಸರ್ಕಾರ
ಗುಜರಾತ್‌ನ ಅತ್ಯಂತ ಹಿರಿಯ ಮತ್ತು ಅತ್ಯಂತ ಪ್ರಭಾವಿ ವಿರೋಧ ಪಕ್ಷದ ನಾಯಕರಲ್ಲಿ ಒಬ್ಬರಾದ 67 ವರ್ಷದ ಅರ್ಜುನ್ ಮೊದ್ವಾಡಿಯಾ ಅವರು ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದರು. ವಿರೋಧ ಪಕ್ಷದ ನಾಯಕರಾಗಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಬಾಬು ಬೋಖಿರಿಯಾ ಅವರನ್ನು ಸೋಲಿಸಿದ್ದರು.
ಅಂಬರೀಶ್ ದೇರ್ ಮತ್ತು ಅರ್ಜುನ್ ಮೊದ್ವಾಡಿಯಾ ಅವರು ಕಾಂಗ್ರೆಸ್ ತೊರೆಯುವ ಕೆಲವು ದಿನಗಳ ಮೊದಲು, ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ನರನ್ ರಥ್ವಾ ಅವರು ತಮ್ಮ ಮಗ ಮತ್ತು ಹೆಚ್ಚಿನ ಸಂಖ್ಯೆಯ ಬೆಂಬಲಿಗರೊಂದಿಗೆ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿ ಇಡಿ, ಐಟಿ ಹೆಸರಿನಲ್ಲಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.