ಟೆಸ್ಟ್ ಕ್ರಿಕೆಟ್‌: ಆಸ್ಟ್ರೇಲಿಯಾ ವಿರುದ್ಧ ಶತಕಗಳಿಸಿದ ಸ್ಮೃತಿ ಮಂದಾನ

ಗೋಲ್ಡ್‌ ಕೋಸ್ಟ್‌: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 127 ರನ್ ಗಳಿಸಿದರು. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಮೊದಲ ಶತಕವಾಗಿದೆ.

ಸ್ಮೃತಿ ಮಂದಾನ 216 ಎಸೆತಗಳಲ್ಲಿ 22 ಬೌಂಡರಿ ಹಾಗೂ  ಒಂದು ಸಿಕ್ಸರ್ ಸಹಾಯದಿಂದ 127 ರನ್ ಗಳಿಸಿದರು ಹಾಗೂ  ಪೂನಂ ರಾವತ್ (36) ರೊಂದಿಗೆ ಎರಡನೇ ವಿಕೆಟ್ ಗೆ 102 ರನ್ ಸೇರಿಸಿ ದಾಖಲೆಯನ್ನು ನಿರ್ಮಿಸಿದರು. ಪೂನಂ ರಾವತ್ 165 ಎಸೆತದಲ್ಲಿ 36 ರನ್‌ ಬಾರಿಸಿದ್ದರು. ಸ್ಮೃತಿ ಮಂದಾನ ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಜೊತೆಗೆ 93 ರನ್‌ಗಳ ಜೊತೆಯಾಟ ನೀಡಿದರು.

ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ಜೋಡಿ ಮೊದಲ 16 ಓವರ್‌ನಲ್ಲಿ 16 ಬೌಂಡರಿಗಳನ್ನು ಬಾರಿಸಿತ್ತು. ಮೊದಲಿಗೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಮಂದಾನ ಆ ಬಳಿಕ ಎಚ್ಚರಿಕೆಯ ಆಟಕ್ಕೆ ಮೊರೆ ಹೋದರು. ಮೊದಲ 51 ರನ್‌ಗಳಿಸಲು ಕೇವಲ 50 ಎಸೆತಗಳನ್ನು ಬಳಸಿಕೊಂಡಿದ್ದರು.

ಮಳೆ ಅಡ್ಡಿಯಾದ ಪಂದ್ಯದಲ್ಲಿ ತಾಜಾ ವರದಿಗಳ ವೇಳೆಗೆ ಭಾರತ ಎರಡನೇ ದಿನದಾಟದಲ್ಲಿ 101.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ.

ಗುರುವಾರ ಆರಂಭಗೊಂಡ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತು. ಇಡೀ ದಿನ ಕೇವಲ 44.1 ಓವರ್‌ ಆಟವಷ್ಟೇ ನಡೆಯಿತು. ಮೊದಲ ದಿನದಾಟದಂತ್ಯದ ವೇಳೆ 1 ವಿಕೆಟ್ ಕಳೆದುಕೊಂಡು 132 ರನ್‌ ಕಲೆಹಾಕಿದ್ದ ಭಾರತ ತಂಡ ಇದಾದ ಬಳಿಕ ಎರಡನೇ ದಿನದಾಟವನ್ನು ಮುಂದುವರೆಸಿ  46ನೇ ಓವರ್‌ನಲ್ಲಿ ಟೆಸ್ಟ್ ವೃತ್ತಿ ಜೀವನದಲ್ಲಿ ಸ್ಮೃತಿ ಮಂದಾನ ಚೊಚ್ಚಲ ಶತಕ ಬಾರಿಸುವಲ್ಲಿ ಯಶಸ್ವಿಯಾದರು. ಸ್ಮೃತಿ ಮಂದಾನ ಈ ಮೊದಲು ಟೆಸ್ಟ್‌ ಕ್ರಿಕೆಟ್‌ನಲ್ಲಿ 78 ರನ್‌ ಗಳಿಸಿದ್ದೇ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತ್ತು. ಅವರ ಸಾಧನೆಗೆ ಕ್ರಿಕೆಟ್‌ ಲೋಕದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಇನ್ನುಳಿದಂತೆ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ 86 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 30 ರನ್‌ ಕಲೆ ಹಾಕಿ ರನೌಟ್‌ ಆಗಿ ಪೆವಿಲಿಯನ್ ಸೇರಿದರು. ಯಾಶ್ತಿಕಾ ಭಾಟಿಯಾ 40 ಎಸೆತಗಳಲ್ಲಿ 3 ಬೌಂಡರಿ ಬಾರಿಸಿ 19 ರನ್ ಪಡೆದುಕೊಂಡು ಎಲಿಸಾ ಪೆರ್ರಿಗೆ ವಿಕೆಟ್ ಒಪ್ಪಿಸಿದರು. ಸದ್ಯ ದೀಪ್ತಿ ಶರ್ಮಾ(12) ಹಾಗೂ ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ(0) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *