ಶ್ರೀಲಂಕಾದ ಆಹಾರ ಬಿಕ್ಕಟ್ಟು, ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ‘ಪೂರ್ಣ ಸಾವಯವ ಕೃಷಿ’ಯ ‘ಪರಿಸರ-ಉಗ್ರವಾದ’

ಪ್ರೊ. ಆರ್. ರಾಮಕುಮಾರ್

ಶ್ರೀಲಂಕಾವನ್ನು ಇತ್ತೀಚೆಗೆ (ಸೆಪ್ಟೆಂಬರ್ ಮೊದಲ ವಾರದಿಂದ) ಆಹಾರದ  ಕೊರತೆಯ ಮತ್ತು ವಿಪರೀತ ಬೆಲೆ ಏರಿಕೆಯ ಬಿಕ್ಕಟ್ಟು ಕಾಡುತ್ತಿದೆ. ಪರಿಸ್ಥಿತಿ ಎಷ್ಟು ಗಂಭಿರವಾಯಿತೆಂದರೆ ಸರಕಾರ ಆರ್ಥಿಕ ಪರಿಸ್ಥಿತಿ ಘೋಷಿಸಿತು. ಅಗತ್ಯ ವಸ್ತುಗಳ ವ್ಯಾಪಾರದ ಮೇಲೆ ಕಠಿಣ ನಿಯಂತ್ರಣ ಹೇರಿತು. ಆಹಾರದ ಕೊರತೆ ಇಲ್ಲ, ಆದರೆ ವರ್ತಕರ ಅಕ್ರಮ ದಾಸ್ತಾನು, ಕಾಳಸಂತೆಯಿಂದಾಗಿ ಮತ್ತು ಜನ ಗಾಬರಿಯಾಗಿ ಹೆಚ್ಚೆಚ್ಚು ಆಹಾರ ವಸ್ತು ಖರೀದಿ ಮಾಡಲಾರಭಿಸಿದ್ದರಿಂದ ಕೃತಕ ಕೊರತೆ ಸೃಷ್ಟಿಯಾಗಿದೆ ಎಂದು ಶ್ರೀಲಂಕಾ ಸರಕಾರ ಹೇಳುತ್ತದೆ. ಆದರೆ ಆಹಾರದ ಕೊರತೆ ಆರಂಭವಾಗಿದ್ದು ಕಟುವಾಸ್ತವ. ಇನ್ನಷ್ಟು ಆಹಾರದ ಕೊರತೆಯ ನಿರೀಕ್ಷೆಯಿಂದ  ವರ್ತಕರು ಅಕ್ರಮ ದಾಸ್ತಾನು, ಕಾಳಸಂತೆ ಮಾಡಿದ್ದೂ ನಿಜವೆಂದು ಹೇಳಲಾಗಿದೆ.

ಆಹಾರದ ಕೊರತೆ ಉಂಟಾಗಿದ್ದು ಹಲವು ಕಾರಣಗಳಿಂದ ಎಂದು ವಿಶ್ಲೇಷಕರ ಅಭಿಪ್ರಾಯ. ಕ್ರಿಶ್ಚಿಯನ್-ವಿರೋಧಿ ಭಯೋತ್ಪಾದನೆಯ ಆತಂಕದಿಂದ ಇಳಿಮುಖವಾಗಿದ್ದ ಪ್ರವಾಸೋದ್ಯಮ ಕೋವಿಡ್‌ನಿಂದಾಗಿ ಪೂರ್ತಿ ನೆಲಕಚ್ಚಿತ್ತು. ಪ್ರಮುಖ ಸಾಧನವಾಗಿದ್ದ ಪ್ರವಾಸೋದ್ಯಮದ ಕುಸಿತದಿಂದ ಹಾಗೂ ಚಹ ಮುಂತಾದ ಪ್ರಮುಖ ರಫ್ತು ವಸ್ತುಗಳ ಉತ್ಪಾದನೆಯ ಕುಸಿತದಿಂದಾಗಿ ವಿದೇಶೀ ವಿನಿಮಯ ಗಳಿಕೆಯಲ್ಲಿ ತೀವ್ರ ಕುಸಿತವಾಗಿತ್ತು. ವಿದೇಶಿ ವಿನಿಮಯದ ಕೊರತೆಯಿಂದಾಗಿ ಹಾಗೂ ಕೋವಿಡ್‌ನಿಂದಾಗಿ ಇತರ ಆರ್ಥಿಕ ಚಟುವಟಿಕೆಗಳೂ ಸ್ಥಗಿತವಾದ್ದರಿಂದ ಆರ್ಥಿಕತೆ ತೀವ್ರ ಕುಸಿತ ಕಂಡಿದೆ. ಇದರ ಜೊತೆಗೆ ಈಗಾಗಲೇ ಸಾವಯವ ಕೃಷಿಗೆ ಉತ್ತೇಜನ ಕೊಡುವ ಭಾಗವಾಗಿ ತೀವ್ರ ನಿರ್ಬಂಧಿತವಾಗಿದ್ದ ಮತ್ತು ವಿದೇಶ ವಿನಿಮಯ ಕೊರತೆಯಿಂದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಆಮದಿನ ಪೂರ್ಣ ನಿಷೇಧ ಮತ್ತು ಆಹಾರ ಅಮದು ನಿಷೇಧ ಕೃಷಿ ನೀತಿಗಳಲ್ಲಿ ಬದಲಾವಣೆಗಳಿಂದ ಆಹಾರ ಉತ್ಪಾದನೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು. ಕೊರತೆ ಮುಂದುವರೆಯುವ ನಿರೀಕ್ಷೆಯಿಂದಾಗಿ ಬೆಲೆ ಏರಿಕೆ ಮತ್ತು ಕಾಳಸಂತೆ ಆರಂಭವಾಗಿರಬೇಕು.

ಆರ್ಥಿಕ ತುರ್ತುಪರಿಸ್ಥಿತಿಗೆ ಕಾರಣವಾದ ಶ್ರೀಲಂಕಾದ ಬದಲಾದ ಕೃಷಿ ನೀತಿ ಮತ್ತು ಅದರ ಹಿನ್ನೆಲೆ ಪರಿಣಾಮಗಳ ಬಗೆಗೆ  ಪ್ರೊ. ಆರ್ ರಾಮಕುಮಾರ್ ಅವರು ಬರೆದ ಲೇಖನದ ಸಂಗ್ರಹಾನುವಾದ ಕೆಳಗಿದೆ.

ಸಂಗ್ರಹಾನುವಾದ: ಜಿ.ಎಸ್.ಮಣಿ

ಶ್ರೀಲಂಕಾದ ಕೃಷಿ ಅರ್ಥಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಒಂದು ಪ್ರಭಾವಿ ಗುಂಪು  ಗೋಟಾಬಯ ರಾಜಪಕ್ಸೆ ಸರ್ಕಾರವು ಜಾರಿ ಮಾಡಿದ ದೇಶದ ಕೃಷಿ ನೀತಿಯಲ್ಲಿ ಇತ್ತೀಚಿನ ದಿಕ್ಕು ಬದಲಾವಣೆಯನ್ನು ಖಂಡಿಸಿದೆ. ಶ್ರೀಲಂಕಾಗೆ “ಶೇಕಡಾ 100 ರಷ್ಟು ಸಾವಯವ ಆಹಾರ ಉತ್ಪಾದಕ”ಸ್ಥಾನಮಾನದ ಸಾಧನೆಯ ಅನ್ವೇಷಣೆಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮತ್ತು ಆಮದನ್ನು ನಿಷೇಧಿಸಿದ ಸರ್ಕಾರದ ನಿರ್ಧಾರವು ಈಗಾಗಲೇ ದ್ವೀಪ ರಾಷ್ಟ್ರದ ಕೃಷಿಯ ಮೇಲೆ  ಹಾನಿಕಾರಕ ಪರಿಣಾಮಗಳನ್ನು ಬೀರಿದೆ. ಶ್ರೀಲಂಕಾದ ಕೃಷಿ ಅರ್ಥಶಾಸ್ತ್ರಜ್ಞರ ಸಂಘಟನೆ ​​(SAEA)ಮೇ 25, 2021 ರಂದು ಅಧ್ಯಕ್ಷ ರಾಜಪಕ್ಸೆ ಅವರಿಗೆ ಬರೆದ ಪತ್ರದಲ್ಲಿ ಇದು “ಆಹಾರ ಭದ್ರತೆ, ಕೃಷಿ ಆದಾಯ, ವಿದೇಶಿ ವಿನಿಮಯ ಗಳಿಕೆ ಮತ್ತು ಗ್ರಾಮೀಣ ಬಡತನ” ದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದೆ.

ಅಧ್ಯಕ್ಷ ರಾಜಪಕ್ಸೆ ಅವರ ಕೆಟ್ಟ ಕಲ್ಪನೆಮತ್ತು ಉಗ್ರ ನೀತಿಯನ್ನು, ಈ ವರ್ಷ (2021) ಏಪ್ರಿಲ್‌ನಲ್ಲಿ ಘೋಷಿಸಲಾಯಿತು. ಈ ನೀತಿಯು ಎಲ್ಲಾ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಆಮದನ್ನು ನಿಷೇಧಿಸಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶ ತೋರಿತು. ಪರಿಣಾಮವಾಗಿ, ದೇಶದ ಕೃಷಿಯನ್ನು ಆಳವಾದ ಉತ್ಪಾದನಾ ಕುಸಿತಕ್ಕೆ ತಳ್ಳುವ ಅಪಾಯ ಉಂಟಾಯಿತು. ಇದರ ಪರಿಣಾಮವಾಗಿ, ಚಹಾದ ರಫ್ತು, ಶ್ರೀಲಂಕಾದ ಪ್ರಾಥಮಿಕ ಕೃಷಿ ರಫ್ತು ಮತ್ತು ಇತರ ಸರಕುಗಳ ಇಳಿಕೆ ನಿರೀಕ್ಷಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ ನಡುವೆ ವಿದೇಶಿ ವಿನಿಮಯ ಗಳಿಕೆಯಲ್ಲಿ ಕುಸಿತಕ್ಕೆ ಆರ್ಥಿಕತೆಯು ಎರವಾಗುವ ಲಕ್ಷಣಗಳಿವೆ.

ಸಂಘಟನೆಯ (SAEA)ಪತ್ರವು ಈ ನೀತಿಯಿಂದಾಗಿ ರೈತರಿಗೆ ಆಗಬಹುದಾದ ಆರ್ಥಿಕ ನಷ್ಟದ ವಿವರವಾದ ಅಂದಾಜುಗಳನ್ನು ಒದಗಿಸುತ್ತದೆ:

“ಸಾಂಪ್ರದಾಯಿಕ ಕೃಷಿಯಿಂದ ಸಾವಯವ ಕೃಷಿಗೆ ಪರಿವರ್ತಿಸುವಾಗ, ಸರ್ಕಾರವು ತಾಂತ್ರಿಕ, ಪರಿಸರ ಮತ್ತು ಆರ್ಥಿಕ ವೆಚ್ಚಗಳು ಮತ್ತು ಪ್ರಯೋಜನಗಳನ್ನು ಅಳೆಯಬೇಕು. ಆಮದು ನಿಷೇಧದ ಸಂಭಾವ್ಯ ಆರ್ಥಿಕ ನಷ್ಟಗಳ ಕುರಿತು ಸಂಘಟನೆ ನಡೆಸಿದ ಅಧ್ಯಯನದ ಪ್ರಾಥಮಿಕ ಸಂಶೋಧನೆಗಳು ಮತ್ತು ಆಯಾ ಅಂದಾಜುಗಳನ್ನು ಕೆಳಗೆ ನೀಡಲಾಗಿದೆ.

(ಎ) ಭತ್ತ:ರಾಸಾಯನಿಕ ರಸಗೊಬ್ಬರಗಳನ್ನು ಸಂಪೂರ್ಣವಾಗಿ ಸಾವಯವ ಗೊಬ್ಬರಗಳಿಂದ ಬದಲಾಯಿಸಿದರೆ ಭತ್ತದ ಸರಾಸರಿ ಇಳುವರಿಯು ಶೇಕಡಾ 25 ರಷ್ಟು ಕುಸಿಯಬಹುದು ಎಂದು ಕೃಷಿ ಅಧ್ಯಯನಗಳು ಬಹಿರಂಗಪಡಿಸುತ್ತವೆ. ಉತ್ಪಾದಕತೆಯಲ್ಲಿನ ಈ ನಷ್ಟವು ಭತ್ತದ ಆಮದಿನ  ಮೇಲೆ ಸಂಪೂರ್ಣ ನಿಷೇಧದೊಂದಿಗೆ ಕೇವಲ ಸಾವಯವ ಗೊಬ್ಬರಗಳೊಂದಿಗೆ ಭತ್ತವನ್ನು ಬೆಳೆಸಿದರೆ ಭತ್ತದ ಕೃಷಿಯ ಲಾಭವನ್ನು ಶೇಕಡಾ 33 ರಷ್ಟು ಮತ್ತು ಅಕ್ಕಿಯ ಸೇವನೆಯನ್ನು ಶೇಕಡಾ 27 ರಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಸಾಯನಿಕ ಗೊಬ್ಬರಗಳ ಶಿಫಾರಸು ಪ್ರಮಾಣಗಳೊಂದಿಗೆ ಸಾವಯವ ಗೊಬ್ಬರವನ್ನು ಅನ್ವಯಿಸುವುದರಿಂದ ಬೇಸಾಯದ ಲಾಭವನ್ನು 16 ಪ್ರತಿಶತದಷ್ಟು ಸುಧಾರಿಸುತ್ತದೆ.

(ಬಿ) ಚಹಾ:ರಾಸಾಯನಿಕ ಗೊಬ್ಬರದ ಅನುಪಸ್ಥಿತಿಯು ಸಸ್ಯೀಯವಾಗಿ ಪ್ರಚಾರ ಮಾಡಿದ ಚಹಾದ (Vegetatively Propagated Tea – VPT)) ಉತ್ಪಾದಕತೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಶೇ. 35 ರಷ್ಟು ಉತ್ಪಾದಕತೆಯ ಕುಸಿತದೊಂದಿಗೆ, ಚಹಾದ ರಫ್ತು ಪ್ರಮಾಣವು 27.9 ರಿಂದ 18.1 ಕೋಟಿ ಕೆಜಿಗೆ ಇಳಿಕೆಯಾಗುತ್ತದೆ!ಇದರಿಂದ 84 ಶತಕೋಟಿರೂಪಾಯಿಗಳ ಆದಾಯ ನಷ್ಟವಾಗುತ್ತದೆ.. ಚಹಾದಲ್ಲಿ  ಸಣ್ಣ ಹಿಡುವಳಿದಾರರಿಗೆ ಹೋಲಿಸಿದರೆ ಎಸ್ಟೇಟ್ ವಲಯವು ಗಮನಾರ್ಹ ನಷ್ಟವನ್ನು ಅನುಭವಿಸುತ್ತದೆ. ಬೃಹತ್ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಲು  ಕಾರ್ಮಿಕರ ವೆಚ್ಚ ಹೆಚ್ಚಾಗುವ  ಕಾರಣ ಈ ನಷ್ಟಗಳು ಮತ್ತಷ್ಟು ಉಲ್ಬಣಗೊಳ್ಳಬಹುದು.

(ಸಿ) ತೆಂಗು:ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಹಾಕದಿದ್ದರೆ ತೆಂಗಿನ ಇಳುವರಿ ಶೇ. 30 ರಷ್ಟು ಕಡಿಮೆಯಾಗುತ್ತದೆ. ಈ ಪರಿಸ್ಥಿತಿಯು ತೆಂಗಿನ ಎಣ್ಣೆ, ಒಣಗಿದ ತೆಂಗಿನಕಾಯಿ ಮತ್ತು ಇತರ ತೆಂಗಿನ ಉತ್ಪನ್ನಗಳ ಉತ್ಪಾದನೆಗೆ ತಾಜಾ ತೆಂಗಿನ ಲಭ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿದೇಶಿ ವಿನಿಮಯ ಗಳಿಕೆಯಲ್ಲಿನ ನಷ್ಟವು ರೂ. 18 ಶತಕೋಟಿ, ಒಟ್ಟು ತೆಂಗಿನ ವ್ಯಾಪ್ತಿಯಲ್ಲಿ ಕೇವಲ ಶೇಕಡಾ 26 ರಷ್ಟು ಫಲವತ್ತಾಗಿದೆ ಎಂಬ ಊಹೆಯ ಆಧಾರದ ಮೇಲೆ. ಖಾದ್ಯ ತೈಲಗಳ ಆಮದಿಗಾಗಿ ಹೆಚ್ಚುವರಿ ವೆಚ್ಚವನ್ನು ಪರಿಗಣಿಸಿದಾಗ, ವಿದೇಶಿ ವಿನಿಮಯ ಗಳಿಕೆಯ ನಷ್ಟವು ಇನ್ನೂ ಹೆಚ್ಚಾಗುತ್ತದೆ.

(ಡಿ) ಮೂರು ಕೃಷಿ ಉಪ-ವಲಯಗಳ ಮೇಲೆ ತಕ್ಷಣದ ಪರಿಣಾಮಗಳನ್ನು ಪರಿಗಣಿಸಿ ಮೇಲಿನ ಫಲಿತಾಂಶಗಳನ್ನು ಪಡೆಯಲಾಗಿದೆ. ಮಧ್ಯಮದಿಂದ ದೀರ್ಘಾವಧಿಯವರೆಗೆ ಆರ್ಥಿಕತೆಯಲ್ಲಿ ಹೊಂದಾಣಿಕೆಗಳನ್ನು ಮಾಡಿದ ವಿಶ್ಲೇಷಣೆಯು . ಆಮದು ನಿಷೇಧದ ಅನುಷ್ಠಾನ ಸರಾಸರಿ ಕೃಷಿ ಉತ್ಪಾದಕತೆಯನ್ನು ಶೇ 20 ರಷ್ಟು  ಕಡಿಮೆ ಮಾಡುವುದರಿಂದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. 3.05 ರಷ್ಟು ಇಳಿಕೆಗೆ ಕಾರಣವಾಗಬಹುದು ಎಂದು ತಿಳಿಸುತ್ತದೆ”

“ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಮೇಲಿನ ಆಮದು ನಿಷೇಧವನ್ನು ಪರ್ಯಾಯ ಕ್ರಮಗಳ ಗುಂಪಿನೊಂದಿಗೆ ಬದಲಿಸಲು” ಪತ್ರದಲ್ಲಿ ರಾಷ್ಟ್ರಪತಿಯವರಿಗೆ ವಿನಂತಿಸಲಾಗಿದೆ. ಇದರಲ್ಲಿ ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಉತ್ತಮ ಕೃಷಿ ಪದ್ಧತಿಗಳನ್ನು (Good Agricultural Practices ಜಿಎಪಿ) ಕಡ್ಡಾಯ ರಾಷ್ಟ್ರೀಯ ಮಾನದಂಡವನ್ನಾಗಿ ಮಾಡುವುದು ಮತ್ತು ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯನ್ನು ಸೂಕ್ತ ಮಿಶ್ರಣದ ಮೂಲಕ ನಿಷೇಧಿಸುವುದು ಕಾನೂನು ಮಾನದಂಡಗಳು, ತೆರಿಗೆಗಳು, ಸಬ್ಸಿಡಿಗಳು ಮತ್ತು ಉತ್ಪನ್ನಗಳಿಗೆಬೆಂಬಲ ಬೆಲೆ ನೀಡುವ ಜೊತೆಗೆ  “ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆಯ ಅರಿವನ್ನು ಸುಧಾರಿಸಲು” ಕೃಷಿ ವಿಸ್ತರಣೆಯನ್ನು ಬಲಪಡಿಸುವಂತೆಯೂ ಸಂಘಟನೆಯ ಪತ್ರದಲ್ಲಿ ಕೇಳಲಾಗಿದೆ.

2019 ರಲ್ಲಿ ಅಧಿಕಾರಕ್ಕೆ ಬಂದ ನಂತರ, ಅಧ್ಯಕ್ಷ ರಾಜಪಕ್ಸೆ ಆಮದು ಮಾಡಿದ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿದರು. ಇನ್ನೂ ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಶ್ರೀಲಂಕಾ ಕ್ಯಾಬಿನೆಟ್ ಅಜೈವಿಕ ಗೊಬ್ಬರಗಳು ಮತ್ತು ಎಲ್ಲಾ ಕೃತಕ ಕೃಷಿ-ರಾಸಾಯನಿಕಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವ ರಾಜಪಕ್ಸೆ ಅವರ ಪ್ರಸ್ತಾಪವನ್ನು ಅನುಮೋದಿಸಿತು-ಪರಿಣಾಮವಾಗಿ, ಎಲ್ಲಾ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಕಳೆನಾಶಕಗಳ ಆಮದು ನಿಂತಿತು. ಮೇ 6, 2021 ರ ಗೆಜೆಟ್ ಅಧಿಸೂಚನೆಯು ಇದನ್ನು ತಕ್ಷಣದಿಂದ ಜಾರಿಗೆ ತಂದಿತು. 6ನೇ ಮೇ 2021 ರ ನಂತರ ಯಾವುದೇ ಸಾಗಣೆಗೆ, ಇಳಿಸುವಿಕೆಯ ಅನುಮತಿಗಳನ್ನು ರದ್ದುಗೊಳಿಸಲಾಯಿತು ಮತ್ತು ನಿಷೇಧಿತ ವಸ್ತುಗಳ ಆಮದಿನ ಮೇಲೆ ಸಾಲ ಪತ್ರಗಳನ್ನು ನೀಡದಂತೆ ಬ್ಯಾಂಕುಗಳಿಗೆ ತಿಳಿಸಲಾಯಿತು.

ಕೃಷಿ ನೀತಿಯಲ್ಲಿನ ಈ ತಿರುವಿಗೆ ಕಾರಣವೇನು?

ನೀತಿ ಬದಲಾವಣೆಯ ಹಿಂದಿನ ಎರಡು ಅಂಶಗಳು, ವರದಿಗಳ ಪ್ರಕಾರ

  1. ಶ್ರೀಲಂಕಾದ ವಿದೇಶಿ ವಿನಿಮಯದಲ್ಲಿನ ಬಿಕ್ಕಟ್ಟು, ಮತ್ತು
  2. ಲಾಕ್‌ಡೌನ್‌ಗಳು ಮತ್ತು ಕೋವಿಡ್ -19 ನಿಂದ ಉಂಟಾದ ಇತರ ಅಡೆತಡೆಗಳಿಂದಾಗಿ ಆಹಾರ ಬೆಲೆ ಏರಿಕೆ.

ಶ್ರೀಲಂಕಾ ವಾರ್ಷಿಕವಾಗಿ ರಸಗೊಬ್ಬರ ಆಮದಿಗಾಗಿ 40 ಕೋಟಿಡಾಲರುಗಳಷ್ಟು ಖರ್ಚು ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ರಾಸಾಯನಿಕ ಗೊಬ್ಬರಗಳ ಮೇಲಿನ ನಿಷೇಧವು ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿದೆ. ಅಧ್ಯಕ್ಷ ರಾಜಪಕ್ಸೆ ಅವರ ಸಲಹೆಗಾರರ ​​ಗುಂಪಿನಲ್ಲಿ  ವೈದ್ಯರೊಬ್ಬರನ್ನು  ಒತ್ತಡದಿಂದ ಸೇರಿಸಲಾಯಿತು. ಅವರು ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯ ಹರಡುವಿಕೆಗೆ ಕಾರಣವಾಗುತ್ತದೆ ಎಂಬ ವಾದ ಮಾಡಿ ಆಢಳಿತವನ್ನು ನಂಬಿಸಿದರು. ಶ್ರೀಲಂಕಾದ ವಿಜ್ಞಾನಿಗಳು ವಾಸ್ತವವಾಗಿ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಮತ್ತು ಮೂತ್ರಪಿಂಡದ ಕಾಯಿಲೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂಬ ಸುಸಂಬದ್ಧ  ವಾದ ಮಂಡಿಸಿದ್ದಾರೆ. ಮೂತ್ರಪಿಂಡದ ರೋಗಗಳ ಹೆಚ್ಚಳಕ್ಕೆ “ಹಲವು ಬಾವಿಗಳಲ್ಲಿ ಇರುವ ಫ್ಲೋರೈಡ್ ಮತ್ತು ಗಡಸು ನೀರು” ಎಂದು ಅವರು ಹೇಳಿದ್ದಾರೆ. ಆದರೆ ಈ ಧ್ವನಿಗಳನ್ನು ಕಡೆಗಣಿಸಲಾಯಿತು, ಮತ್ತು ಸಾವಯವ ಕೃಷಿ ಲಾಬಿಯು ಸಾಂಪ್ರದಾಯಿಕ ನೀತಿಯನ್ನು ತಳ್ಳಿ ಹಾಕಿತು.

ಮೇ 10 2021 ರಂದು, ಹವಾಮಾನ ಬದಲಾವಣೆಗೆ ಸಮರ್ಥನೀಯ ಪರಿಹಾರಗಳೊಂದಿಗೆ “ಹಸಿರು ಶ್ರೀಲಂಕಾವನ್ನು ರಚಿಸುವ ಅಧ್ಯಕ್ಷೀಯ ಕಾರ್ಯಪಡೆ”ಯನ್ನು ರಚಿಸಲಾಯಿತು. ಆಮದು ನಿಷೇಧವನ್ನು ಕಾರ್ಯಗತಗೊಳಿಸಲು ಮತ್ತು “ಹಸಿರು ಶ್ರೀಲಂಕಾ” ವನ್ನು ಕಟ್ಟಲು ಯೋಜನೆಯನ್ನು ಸಲ್ಲಿಸಲು ಕಾರ್ಯಪಡೆಗೆ ಅಧಿಕಾರ ನೀಡಲಾಗಿದೆ. ಆರಂಭದಲ್ಲಿ, ಕಾರ್ಯ ಪಡೆ 46 ಸದಸ್ಯರನ್ನು ಹೊಂದಿತ್ತು. ಆದರೆ ನಂತರ ಸದಸ್ಯರ ಸಂಖ್ಯೆಯನ್ನು 25 ಕ್ಕೆ ಇಳಿಸಲಾಯಿತು.  ಮಹಿಂದಾ ಅಮರವೀರ ಅಧ್ಯಕ್ಷರಾಗದರು. ಅನೇಕ ಹಿರಿಯ ಕೃಷಿ ವಿಜ್ಞಾನಿಗಳನ್ನು ಅದರ ಸದಸ್ಯತ್ವದಿಂದ ಹೊರಗಿಡಲಾಯಿತು. ಅಲ್ಲದೆ ಈ ಪಡೆ ಪ್ರಶ್ನಾರ್ಹ ವೈಜ್ಞಾನಿಕ ಹಿನ್ನೆಲೆಗಳನ್ನು ಹೊಂದಿರುವ ಜನರಿಂದ ತುಂಬಿರುವುದು ಕಂಡುಬರುತ್ತದೆ. ಉದಾಹರಣೆಗೆ, ಈ ಕಾರ್ಯಪಡೆಯ ಸದಸ್ಯರೊಬ್ಬರು ಒಮ್ಮೆ ಸ್ವಯಂ-ಉತ್ಪಾದಿಸುವ ಅಕ್ಕಿಯ ವೈವಿಧ್ಯತೆಯನ್ನು ಗುರುತಿಸಿದ್ದೆನೆ ಎಂದು ಹೇಳಿಕೊಂಡಿದ್ದರು. ಈ ಅಕ್ಕಿ ಚರಿತ್ರೆಯಲ್ಲಿ ಅನುರಾಧಪುರ ಸಾಮ್ರಾಜ್ಯದ ಸಿಂಹಳ ರಾಜ ದುತುಗೆಮುನುವಿನ ಹತ್ತು ದೈತ್ಯ ಯೋಧರಿಗೆ ಕ್ರಿ,ಪೂ.205ರಿಂದ ಕ್ರಿ,ಪೂ. 161 ನಡುವೆ ಆಹಾರ ನೀಡಿತು. ಕೃಷಿ ವಿಜ್ಞಾನಿಗಳು ಇದನ್ನು  ಪರೀಕ್ಷಿಸಿದರು.  ಹೇಳಲಾದ ಈ ಧಾನ್ಯವು  ಸಿರಿಧಾನ್ಯವೇ ಹೊರತು ಅಕ್ಕಿಯಲ್ಲ ಎಂದು ಕಂಡುಕೊಂಡರು! ಮತ್ತೊಬ್ಬ ಸದಸ್ಯರು ಗ್ಲೈಫೋಸೇಟ್ ಎಂಬ ರಾಸಾಯನಿಕ  ಜಲಾಶಯದ ಕಟ್ಟುಗಳನ್ನು ಕರಗಿಸಿದೆ ಎಂದು ಹೇಳಿಕೊಂಡಿದ್ದರು! ಕಾರ್ಯಪಡೆಯೊಳಗಿನ ವೈಜ್ಞಾನಿಕ ದೃಷ್ಟಿಕೋನದ  ಸ್ಥಿತಿ ಹೀಗಿದೆ.

ದೊಡ್ಡ ಪ್ರಮಾಣದ ಕಾಂಪೋಸ್ಟ್ ಅನ್ನು ಆಮದು ಮಾಡಿಕೊಳ್ಳುವುದರ ಜೊತೆಗೆ ದೇಶೀಯ ಕಾಂಪೋಸ್ಟ್ ಉತ್ಪಾದನೆಯನ್ನು ಹೆಚ್ಚಿಸಲು, ರಾಸಾಯನಿಕ ಗೊಬ್ಬರಗಳನ್ನು ಬದಲಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಕಾಂಪೋಸ್ಟ್ ಅನ್ನು “ಸಾವಯವ” ಎಂದು ವರ್ಗೀಕರಿಸಲಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ ಏಕೆಂದರೆ ಇದು ಅನೇಕ ವಿಷಕಾರಿ ಜಾಡಿನ ಅಂಶಗಳನ್ನು ಒಳಗೊಂಡಿದೆ.

ಹೊಸ ನೀತಿಯ ಫಲಿತಾಂಶದ ಬಗ್ಗೆ ಕೇವಲ SAEA ಎಚ್ಚರಿಕೆಯನ್ನು ನೀಡಿಲ್ಲ. ಅಕ್ಕಿ, ಕಾಳುಮೆಣಸು ಮತ್ತು ದಾಲ್ಚಿನ್ನಿ ನಂತರ ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಪರಿಣಾಮ ಬೀರುವ ಬೆಳೆಯಾದ ಚಹಾ ಬೆಳೆಗಾರರು ತುಂಬಾ ಚಿಂತಿತರಾಗಿದ್ದಾರೆ. ಸಾವಯವ ಕೃಷಿ ನೀತಿಯಿಂದಾಗಿ ಶ್ರೀಲಂಕಾದ ಚಹಾ ಉತ್ಪಾದನೆಯು ಅರ್ಧದಷ್ಟು ಕಡಿಮೆಯಾಗಬಹುದು ಎಂದು ಅಹಂಗಮದ ಮಾಸ್ಟರ್ ಟೀ ತಯಾರಕ ಮತ್ತು ಸ್ವತಃ ಟಾಸ್ಕ್ ಫೋರ್ಸ್ ಸದಸ್ಯ ಹರ್ಮನ್ ಗುಣರತ್ನೆ ಹೇಳುತ್ತಾರೆ. ಶ್ರೀಲಂಕಾದ ಶೇಕಡಾ 10 ರಫ್ತು ಆದಾಯವು ಚಹಾದಿಂದ ಬರುತ್ತದೆ. ಇದು ಗಂಭೀರ ಸಮಸ್ಯೆಯನ್ನು ಒಡ್ಡುತ್ತದೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದು:

“ಈ ಆಮದು ನಿಷೇಧವು ಚಹಾ ಉದ್ಯಮವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ… ಪರಿಣಾಮಗಳು ಊಹಾತೀತವಾಗಿದೆ… ಚಹಾ ಉದ್ಯಮವು ಸಾರಜನಕ (N), ರಂಜಕ (P) ಮತ್ತು ಪೊಟ್ಯಾಶ್ (K) ಅನ್ನು ಅವಲಂಬಿಸಿದೆ… ಮುಖ್ಯವಾಗಿ ಇವು  ಇಲ್ಲದೆ ನಾವು ಕೃಷಿ ಮಾಡಲು ಸಾಧ್ಯವಿಲ್ಲದ ಸ್ಥಿತಿ ಉಂಟಾಗುತ್ತದೆ. ಉತ್ಪಾದನೆಯಲ್ಲಿ 50 ಪ್ರತಿಶತದಷ್ಟು ಕುಸಿತವನ್ನು ನಿರೀಕ್ಷಿಸಬಹುದು … ನಾವು ಸಂಪೂರ್ಣವಾಗಿ ಸಾವಯವ ಕೃಷಿಗೆ ಬದಲಾಯಿಸಿದರೆ ಹೋದರೆ, ನಾವು ದೊಡ್ಡ ಪ್ರಮಾಣದಲ್ಲಿ ಆದಾಯ ಕಳೆದುಕೊಳ್ಳುತ್ತೇವೆ ಎಂಬ ಅಂಶವನ್ನು ಹೊರತುಪಡಿಸಿ ಅದು ಚಹಾ ಗುಣಮಟ್ಟಕ್ಕೆ ಸಹಾಯ ಮಾಡುತ್ತದೆ ಎಂಬ ದೃಷ್ಟಿಕೋನವನ್ನು ನಾನು ಒಪ್ಪುವುದಿಲ್ಲ. ಶೇ 50 ರಷ್ಟು ಬೆಳೆ ಕಡಿಮೆಯಾದರೆ ಅದನ್ನು ಸರಿತೂಗಿಸಲು ನಾವು ಶೇಕಡಾ 50 ರಷ್ಟು ಹೆಚ್ಚಿನ ಬೆಲೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ … ಮತ್ತು ಪ್ರಪಂಚದಲ್ಲಿ ಸಾವಯವ ಚಹಾಕ್ಕೆ ಅತ್ಯಂತ ಸೀಮಿತ ಮಾರುಕಟ್ಟೆ ಇದೆ. ಬೆಳೆಯ ಇಳಿಕೆಯನ್ನು  ಸರಿದೂಗಿಸಲು ಯಾವುದೇ ಮಾರ್ಗವಿಲ್ಲ.”

ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿ ಹಾಗೂ ರೈತರು ಮತ್ತು ಬೆಳೆಗಾರರಿಂದ ವ್ಯಾಪಕ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ ರಾಜಪಕ್ಸೆ ಸರ್ಕಾರವು ಮೇ 2021ರ ಅಂತ್ಯದ ವೇಳೆಗೆ ನೀತಿಯ ಕೆಲವು ಅಂಶಗಳನ್ನು ಹಿಂತೆಗೆದುಕೊಂಡಿತು. 31 ಮೇ 2021 ರಂದು, ಕ್ಯಾಬಿನೆಟ್ “ಕಾರ್ಬೊನಿಕ್ ಗೊಬ್ಬರಗಳು, ನೈಸರ್ಗಿಕ ಖನಿಜಗಳು ಮತ್ತು ಚೇಲೇಟೆಡ್ ಗಿಡಮೂಲಿಕೆಗಳ ಖನಿಜಗಳ ಆಮದನ್ನು ಅನುಮೋದಿಸಿತು. ಶೇಕಡಾ 13.25 ರಷ್ಟು ಸಾರಜನಕವಿರುವ ‘ಬ್ಲಡ್ ಮೀಲ್’ ಎಂಬ ಉತ್ಪನ್ನ ಬಿಟ್ಟರೆ, ಕನಿಷ್ಠ 10 ಪ್ರತಿಶತ ಸಾರಜನಕ ಇರುವಸಾವಯವ ಗೊಬ್ಬರ ಉತ್ಪನ್ನಗಳುಇಲ್ಲ ಎಂದು ತಿಳಿದಿಲ್ಲವಾದರೂ, ಅಂತಹ ಉತ್ಪನ್ನಗಳನ್ನುಆಮದು ಮಾಡಿಕೊಳ್ಳಲು ಟೆಂಡರ್ ಅನ್ನು ಕೂಡ ಹಾಕಲಾಯಿತು. 31 ಜುಲೈ 2021 ರಂದು, ಕೆಲವು ಸಂರಕ್ಷಿತ ಕೃಷಿ ವಲಯದಿಂದ ಕೆಲವು ರಸಗೊಬ್ಬರ ಮಿಶ್ರಣಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಯಿತು. ಮೇಲೆ ನೀಡಲಾದ ಆದೇಶಗಳಿಗಾಗಿ ಯಾವುದೇ ವಿವರವಾದ ಮಾರ್ಗಸೂಚಿಗಳು ಅಸ್ತಿತ್ವದಲ್ಲಿಲ್ಲ. ಮತ್ತು ಯಾವುದನ್ನು ಆಮದು ಮಾಡಿಕೊಳ್ಳಬಹುದು ಮತ್ತು ಯಾವುದನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಬಗ್ಗೆ ಹೆಚ್ಚಿನ ಗೊಂದಲಗಳಿವೆ. ಕೃಷಿ ವಿಜ್ಞಾನಿಗಳು ತುರ್ತು ಬಳಕೆಗಾಗಿ 25 ಕೃಷಿ ರಾಸಾಯನಿಕಗಳ ಪಟ್ಟಿಯನ್ನು ಆಮದು ಮಾಡಲು ಶಿಫಾರಸು ಮಾಡಿದ್ದಾರೆ. ಆದರೆ ಈ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸಸ್ಯ ಮತ್ತು ಪ್ರಾಣಿಗಳ ಸಂಪರ್ಕತಡೆಗೆ (ಕ್ವಾರಂಟೈನ್) ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಬಗ್ಗೆ ಅಧಿಕಾರಿಗಳು ಪ್ರಶ್ನೆಗಳನ್ನು ಎತ್ತಿದ ನಂತರ ಕಾಂಪೋಸ್ಟ್ ಆಮದನ್ನು ಸಹ ನಿಷೇಧಿಸಲಾಯಿತು.

ಗೊಂದಲಮಯ ಮತ್ತು ಅವೈಜ್ಞಾನಿಕ ನೀತಿಯು ಇತರ ಕ್ಷೇತ್ರಗಳಲ್ಲೂ ಹಾನಿಯನ್ನುಂಟು ಮಾಡಿದೆ. ಉದಾಹರಣೆಗೆ, ಶ್ರೀಲಂಕಾದ 107,000 ಹೆಕ್ಟೇರ್‌ಗಳಲ್ಲಿ 20,000 ರಬ್ಬರ್ ಪೆಸ್ಟಲೋಟಿಯೊಪ್ಸಿಸ್‌ನಿಂದ ಬಾಧಿತವಾಗಿದೆ. ಇದು ಶಿಲೀಂಧ್ರ ಎಲೆ ರೋಗವಾಗಿದ್ದು, ಕಾರ್ಬೆಂಡಜಿಮ್ ಮತ್ತು ಹೆಕ್ಸಾಕೊನಜೋಲ್ ಸಿಂಪಡಿಸುವಿಕೆಯಿಂದ ನಿಯಂತ್ರಿಸಲ್ಪಡುತ್ತದೆ. ಇದಲ್ಲದೆ, ಉತ್ತಮ ಎಲೆಗಳ ಬೆಳವಣಿಗೆಯನ್ನು ಉತ್ತೇಜಿಸಲು ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕಾಗುತ್ತದೆ. ಆದರೆ ರಾಸಾಯನಿಕ ಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರ ಪರಿಣಾಮವಾಗಿ, ಕೊಲಂಬೊ ರಬ್ಬರ್ ಟ್ರೇಡರ್ಸ್ ಅಸೋಸಿಯೇಷನ್ ​​ರಬ್ಬರ್ ಉತ್ಪಾದನೆ ಶೇಕಡಾ 15-20 ರಷ್ಟು ಕುಸಿಯುತ್ತದೆ ಎಂದು ನಿರೀಕ್ಷಿಸಿದೆ. ಅಸೋಸಿಯೇಷನ್ ​​ಪ್ರಕಾರ, “ಈ ಎಲೆ ರೋಗ ರಬ್ಬರ್ ಉದ್ಯಮದ ಸಂದರ್ಭದಲ್ಲಿ ಕೋವಿಡ್-19 ಗೆ ಸಮನಾಗಿದೆ ಎಂದು ಅದರ ವಿನಾಶಕಾರಿ ಸಾಮರ್ಥ್ಯ ಮತ್ತು ಅದು ಹರಡುವ ಕ್ಷಿಪ್ರ ವೇಗ ಎರಡನ್ನೂ ಪರಿಗಣಿಸಿ ಹೋಲಿಸಿದೆ.”

ಸಾವಯವ ಕೃಷಿಯೊಂದಿಗೆ ಶ್ರೀಲಂಕಾದ ಪ್ರಯೋಗದಿಂದ ಉಂಟಾದ ವಿನಾಶವು ಇದೇ ರೀತಿಯ ಬಲೆಗೆ ಬೀಳದಂತೆ ವಿಶ್ವದಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಎಚ್ಚರಿಕೆಯಾಗಿದೆ. ಕಡಿಮೆ ಉತ್ಪಾದಕತೆಯ ಮಟ್ಟದಲ್ಲಿಯೂ ಕೃಷಿಗೆ ರಾಸಾಯನಿಕ ಲಾಗುವಾಡುಗಳ ಅತಾರ್ಕಿಕ ಕಡಿತವು ದುರಂತವನ್ನು ತರಬಹುದು. ಮಣ್ಣು ಸಾವಯವ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಕಳಪೆಯಾಗಿರುವ ಭಾರತದಂತಹ ದೇಶವನ್ನು ತೆಗೆದುಕೊಳ್ಳಿ. ನಮ್ಮ ಕೃಷಿಭೂಮಿಯಲ್ಲಿ ಅಂದಾಜು ಶೇ. 59 ರಷ್ಟು ಮಣ್ಣಿನಲ್ಲಿ ಸಾರಜನಕ ಕಡಿಮೆ ಇರುವಂಥವು, ಶೇ. 49ರಷ್ಟು ರಂಜಕ ಕಡಿಮೆ ಮತ್ತು ಶೇ. 48 ರಷ್ಟು ಪೊಟ್ಯಾಸಿಯಮ್ ಕಡಿಮೆ ಇರುವಂಥವು. ಸತು, ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಮಾಲಿಬ್ಡಿನಮ್ ಮತ್ತು ಬೋರಾನ್ ನಂತಹ ಸೂಕ್ಷ್ಮ ಪೋಷಕಾಂಶಗಳಲ್ಲಿ ಭಾರತೀಯ ಮಣ್ಣುಗಳು ವಿವಿಧ ಹಂತಗಳಲ್ಲಿ ಕೊರತೆಯನ್ನು ಹೊಂದಿವೆ. ಸೂಕ್ಷ್ಮ ಪೋಷಕಾಂಶಗಳ ಕೊರತೆಗಳು ಕೇವಲ ಇಳುವರಿಯನ್ನು ಸೀಮಿತಗೊಳಿಸುವುದಿಲ್ಲ. ಅವು ಮಣ್ಣಿನಲ್ಲಿರುವ ಇತರ ಪೋಷಕಾಂಶಗಳ ಸಂಪೂರ್ಣ ಅಭಿವ್ಯಕ್ತಿಯನ್ನು ಸಹ ಸಾಧ್ಯವಾಗಿಸುವುದಿಲ್ಲ. ಇದು ಫಲವತ್ತತೆಯ ಒಟ್ಟಾರೆ ಕುಸಿತಕ್ಕೆ ಕಾರಣವಾಗುತ್ತದೆ.

ಕೃಷಿ ವಿಜ್ಞಾನಿಗಳು ಯಾವಾಗಲೂ ಮಣ್ಣಿನ ಪೌಷ್ಟಿಕಾಂಶದ ಕೊರತೆಗಳ ಬಗ್ಗೆ ತಿಳಿದಿದ್ದಾರೆ. ಜೊತೆಗೆ ರಾಸಾಯನಿಕಗಳ ಅತಿಯಾದ ಬಳಕೆ ಮತ್ತು ಅನುಚಿತ/ಅಸಮತೋಲಿತ ರಸಗೊಬ್ಬರಗಳ ಅಪಾಯಗಳ ಬಗ್ಗೆಯೂ ಸಹ. ಆದ್ದರಿಂದ ಅವರು ಮಣ್ಣಿನ ಆರೋಗ್ಯವನ್ನು ಪೋಷಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸ್ಥಳ-ನಿರ್ದಿಷ್ಟ ಪರಿಹಾರಗಳನ್ನು ಶಿಫಾರಸು ಮಾಡುತ್ತಾರೆ. ಅವರು ಮಣ್ಣು-ಪರೀಕ್ಷೆ ಆಧಾರಿತ ಸ್ಥಳ-ನಿರ್ದಿಷ್ಟ ಸಮತೋಲಿತ ಗೊಬ್ಬರ ಮತ್ತು ಸಂಯೋಜಿತ ಪೌಷ್ಟಿಕ ನಿರ್ವಹಣಾ ವಿಧಾನಗಳನ್ನು ಸಾವಯವ ಗೊಬ್ಬರಗಳನ್ನು (ಅಂದರೆ, ಗದ್ದೆಯ ಗೊಬ್ಬರ, ಕಾಂಪೋಸ್ಟ್, ಬೆಳೆಗಳ ಕಟಾವಿನ ನಂತರದ ಉಳಿಕೆಗಳು, ಜೈವಿಕ ಗೊಬ್ಬರ, ಹಸಿರು ಗೊಬ್ಬರ ಇತ್ಯಾದಿ) ರಾಸಾಯನಿಕ ಗೊಬ್ಬರಗಳೊಂದಿಗೆ ಸಂಯೋಜಿಸುತ್ತಾರೆ. ಹೀಗಾಗಿ, ಅವರು ಕೆಲವು ಸ್ಥಳಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವುದನ್ನು ಸಮರ್ಥಿಸಬಹುದಾದರೂ, ಅವರು ಇತರೆಡೆ  ಅದರ ಬಳಕೆಯನ್ನು ಉತ್ತೇಜಿಸುತ್ತಾರೆ.

ಇಂತಹ ಸಮಗ್ರ ಮತ್ತು ಸಂಯೋಜಿತ ವಿಧಾನಕ್ಕೆ, ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದ ದೃಢವಾದ ಅನುಸರಣೆ ಅಗತ್ಯವಿರುತ್ತದೆ ಮತ್ತು ಅವು “ಸಾವಯವ”, “ಪರಿಸರ ಸ್ನೇಹಿ”, “ಪ್ರಕೃತಿ-ಪರ” ವೇಷವನ್ನು ಧರಿಸಿರುವ ವಿಜ್ಞಾನ ವಿರೋಧಿ ಮಾದರಿಗಳನ್ನು ಅಷ್ಟೇ ದೃಢವಾಗಿ ತಿರಸ್ಕರಿಸಬೇಕು. ಅಧ್ಯಕ್ಷ ರಾಜಪಕ್ಸೆ ಅವರ ನೀತಿಯು ಪ್ರಸ್ತುತ ಭಾರತ ಸರ್ಕಾರದ ಶೂನ್ಯ ಬಜೆಟ್ ನೈಸರ್ಗಿಕ ಕೃಷಿಯ (ZBNF) ಪ್ರಚಾರದಂತೆಯೇ ಎರಡನೇ ವರ್ಗಕ್ಕೆ ಸೇರುತ್ತದೆ. ಈ ನೀತಿಯ ಒಟ್ಟು ಹಿಂಪಡೆಯುವಿಕೆಯಿಂದ ಮಾತ್ರ ಶ್ರೀಲಂಕಾದ ಕೃಷಿಯನ್ನು ಉಳಿಸಬಹುದು. ಶ್ರೀಲಂಕಾ ಸರ್ಕಾರವು ದೇಶದ ಕೃಷಿ ವಿಜ್ಞಾನಿಗಳ ಮಾತುಗಳನ್ನು ಕೇಳುವುದು ಒಳ್ಳೆಯದು ಮತ್ತು ತಜ್ಞರಂತೆ ಛದ್ಮವೇಷ ಹಾಕುವುವವರಿಗೆ ಮಣೆ ಹಾಕುವುದನ್ನು ಮುಂದುವರೆಸುವುದು ಅಪಾಯಕರ.

Donate Janashakthi Media

Leave a Reply

Your email address will not be published. Required fields are marked *