ಮಹಿಳೆಯರು ಅಧೀನತೆಯ ಸಂಕೋಲೆ ಮುರಿಯಬೇಕು: ಸುನಂದಮ್ಮ

ಹಾಸನ: ಅಧೀನತೆಯಿಂದ ಮಹಿಳೆಯರು ಮುಕ್ತರಾಗಬೇಕಿದ್ದು, ಕೇವಲ ಪುರುಷರ ಅಧೀನತೆಯಿಂದಷ್ಟೇ ಅಲ್ಲದೆ ಸಮಾಜ ಹೇರಿರುವ ಕಟ್ಟಳೆಗಳ ಅಧೀನತೆಯಿಂದಲೂ ಹೊರಬರಬೇಕು. ಅದಕ್ಕಾಗಿ ಮಹಿಳೆಯರು ನಿತ್ಯ ಜಾಗೃತರಾಗಬೇಕು ಹಾಗೂ ಚರ್ಚೆ–ಸಂವಾದಗಳನ್ನು ನಡೆಸಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ಎರಡನೇ ದಿನದ “ಮಹಿಳಾ ದೌರ್ಜನ್ಯ: ಸವಾಲುಗಳು, ಬಿಡುಗಡೆಯ ಸಾಧ್ಯತೆಗಳು” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುದ್ಧ ಯೋಧರನ್ನು ಹುಟ್ಟುಹಾಕಿದ್ದು ಮಹಿಳೆಯರೇ. ಆದರೆ ಇಂದಿಗೂ ಮಹಿಳೆಯರೇ ಅನೇಕ ರೀತಿಯ ನೋವು ಅನುಭವಿಸುತ್ತಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿಯೇ ಮಹಿಳೆಯರನ್ನು ಅಂಚಿನಲ್ಲಿರಿಸಲಾಯಿತು. ಅಂದಿನಿಂದ ಇಂದಿನವರೆಗೆ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರದ “ಜನವಿರೋಧಿ ನೀತಿಗಳ” ವಿರುದ್ಧ ಮಾ. 24ರಂದು ಸಿಪಿಐ(ಎಂ) ರ‍್ಯಾಲಿ

ಇಂದಿಗೂ ಕೌಟುಂಬಿಕ ಹಿಂಸಾಚಾರ ನಡೆಯುತ್ತಿದ್ದು, ದೂರು ನೀಡಿದ ನಂತರವೂ ಪ್ರಕರಣಗಳ ವಿಚಾರಣೆಯಲ್ಲಿ ಪುರುಷಪ್ರಧಾನ ಮನೋಭಾವ ಹೊಂದಿರುವವರು ಇದ್ದರೆ ನಿರೀಕ್ಷಿತ ನ್ಯಾಯ ದೊರಕುವುದು ಕಷ್ಟವಾಗುತ್ತದೆ. ‘ಪುರುಷ ಹೇಳಿದಂತೆ ಕೇಳಬೇಕು’ ಎಂಬ ಪುರುಷಪ್ರಧಾನ ಮೌಲ್ಯಗಳ ವಿರುದ್ಧ ಮಹಿಳೆಯರು ಹೋರಾಡಬೇಕಿದೆ ಎಂದು ಅವರು ತಿಳಿಸಿದರು.

ಹೈದರಾಬಾದ್‌ನ ಮೌಲಾನಾ ಅಜಾದ್ ವಿಶ್ವವಿದ್ಯಾಲಯದ ಪ್ರೊ. ಶಾಹಿದಾ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಇನ್ನೂ ಹೆಚ್ಚಾಗುತ್ತಿರುವುದು ಆತಂಕಕಾರಿ. ಇದಕ್ಕೆ ಮೂಲ ಕಾರಣ ಪುರುಷಪ್ರಧಾನ ಮನೋಭಾವವೇ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಾನೂನು ಅರಿವು ಕಡಿಮೆ, ಶಿಕ್ಷಣದ ಕೊರತೆ ಹಾಗೂ ರಾಜಕೀಯ ತಿಳುವಳಿಕೆ ಅಭಾವವಿದೆ. ಆದ್ದರಿಂದ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ, ಹೋರಾಟಕ್ಕೆ ಅವರನ್ನು ಅಣಿ ನೆರೆಸಬೇಕು ಎಂದು ಅವರು ಕರೆ ನೀಡಿದರು.

ಮಹಿಳೆಯರ ಮೇಲೆ ತಾಳಿ, ಕಾಲುಂಗರ, ಕುಂಕುಮ ಧರಿಸುವುದು, ಗಂಡ ಸತ್ತ ನಂತರ ಬಿಳಿ ಸೀರೆ ಧರಿಸುವುದು ಮುಂತಾದ ಸಂಪ್ರದಾಯಗಳನ್ನು ಹೇರಲಾಗಿದೆ. ಆದರೆ ಗಂಡಸರ ಮೇಲೆ ಇಂತಹ ನಿಯಮಗಳಿಲ್ಲ. ಮುಸ್ಲಿಂ ಸಮುದಾಯದಲ್ಲಿ ತಲಾಖ್ ಮೂಲಕ ಗಂಡಸರು ಮಹಿಳೆಯರನ್ನು ವಸ್ತುವಿನಂತೆ ನೋಡುತ್ತಿರುವುದು ಕೂಡ ಪ್ರಶ್ನಾರ್ಥಕವಾಗಿದೆ. ಇಂತಹ ಸಂಪ್ರದಾಯಗಳು ಎಷ್ಟು ನ್ಯಾಯಸಮ್ಮತ ಎಂಬುದನ್ನು ಮಹಿಳೆಯರು ಪ್ರಶ್ನಿಸಬೇಕು ಹಾಗೂ ಅವುಗಳ ಅಗತ್ಯವಿಲ್ಲ ಎಂಬುದನ್ನು ಕುಟುಂಬಗಳಿಗೆ ಮನವರಿಕೆ ಮಾಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ‘ಕೂಡಿ ಕಟ್ಟುವಾ ನ್ಯಾಯದ ಜಗವಾ’ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ. ಸೌಭಾಗ್ಯ ವಹಿಸಿದ್ದರು. ವೇದಿಕೆಯಲ್ಲಿ ಜಯಲಕ್ಷ್ಮಿ ಮುನಿವೆಂಕಟೇಗೌಡ, ತಾರಾಸ್ವಾಮಿ, ಡಾ. ಶೈಲಜಾ ಕರ್ಕಡ, ಗೀತಾ ಕಿರಣ್, ಡಾ. ಟಿ.ಎಂ. ಉಷಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಹಾಸನ | ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ Janashakthi Media

Donate Janashakthi Media

Leave a Reply

Your email address will not be published. Required fields are marked *