ಬೆಳಗಾವಿ: ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಇಲ್ಲಿನ ಮಾರ್ಕೆಟ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಮಾಸ್ತಮರಡಿ ಗ್ರಾಮದ ಯಲ್ಲಪ್ಪ ಲಕ್ಷ್ಮಪ್ಪ ನಾಯ್ಕ ಹಾಗೂ ದುರ್ಗಪ್ಪ ಸಿದ್ಧಲಿಂಗಪ್ಪ ಕಸಾಯಿ ಬಂಧಿತರು.
ಪ್ರಕರಣದ ಹಿನ್ನೆಲೆ: ಆರೋಪಿಗಳು ನಗರದ ಸಿಬಿಟಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಅನಿಗೋಳಕ್ಕೆ ಕರೆದುಕೊಂಡು ಹೋಗುವುದಾಗಿ ಸುಳ್ಳು ಹೇಳಿ ನಂಬಿಸಿದ್ದಾರೆ. ಬಳಿಕ ಅನಿಗೋಳ ಮನೆಯೊಂದರಲ್ಲಿ ಕೂಡಿಹಾಕಿ ಇಬ್ಬರು ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಮೂಲತಃ ಬೆಳಗಾವಿ ನಗರದವಳಾಗಿದ್ದು ನಾಲ್ಕು ವರ್ಷದ ಹಿಂದೆ ಮಹಾರಾಷ್ಟ್ರದ ಶಿರೋಳ ತಾಲೂಕಿನ ಗ್ರಾಮವೊಂದರ ಯುವಕನ ಜೊತೆಗೆ ಮದುವೆಯಾಗಿತ್ತು. ಎರಡು ವರ್ಷದ ಹಿಂದೆ ಗಂಡ ತೀರಿಕೊಂಡ ಹಿನ್ನೆಲೆ ಮಹಿಳೆ ಗಂಡನ ಮನೆ ಮತ್ತು ಬೆಳಗಾವಿಯಲ್ಲಿರುವ ತವರು ಮನೆಯಲ್ಲಿ ನೆಲೆಸಿದ್ದಳಂತೆ.
ಅತ್ಯಾಚಾರಕ್ಕೊಳಗಾದ ಮಹಿಳೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಸಿಪಿಐ ಮಾರ್ಗದರ್ಶನದಲ್ಲಿ ಪಿಎಸ್ಐ ವಿಠ್ಠಲ ಹಾವನ್ನವರ ತಂಡ ಇಬ್ಬರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ.