ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಟೆಕ್ಕಿ; ಟ್ರಕ್ ಹರಿದು ಸ್ಥಳದಲ್ಲೇ ಸಾವು!

  • ತಮಿಳುನಾಡಿನ ಚೆನ್ನೈನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಯುವತಿ ಸಾವು
  • ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದ ಸಾಫ್ಟ್‌ವೇರ್ ಉದ್ಯೋಗಿ
  • ಸಹೋದರನನ್ನು ನೀಟ್ ಕೋಚಿಂಗ್ ಕೇಂದ್ರಕ್ಕೆ ಬಿಟ್ಟುಬರಲು ಹೋಗುತ್ತಿದ್ದಾಗ ಅಪಘಾತ

ಚೆನ್ನೈ: ರಸ್ತೆ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿ ಗಾಡಿಯಿಂದ ಕೆಳಗೆ ಬಿದ್ದ 22 ವರ್ಷದ ಯುವತಿ ಟ್ರಕ್​ಗೆ  ಸಿಲುಕಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಮೃತ ಯುವತಿಯನ್ನು ಶೋಭನಾ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಟೆಕ್ ಕಂಪನಿ  ಝೋಹೋದಲ್ಲಿ  ಇಂಜಿನಿಯರ್  ಆಗಿ ಕೆಲಸ ಮಾಡುತ್ತಿದ್ದರು.

ಶೋಭನಾ ತಮ್ಮ ಸಹೋದರನನ್ನು ನೀಟ್ ಕೋಚಿಂಗ್ ತರಗತಿಗೆ  ಡ್ರಾಪ್​ ಮಾಡಲು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಟ್ರಕ್ ಚಾಲಕನ ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯವೇ ಯುವತಿ ಸಾವಿಗೆ ಕಾರಣ ಎಂಬ ಆರೋಪದಡಿ ಮೋಹನ್ ಅನ್ನು ಬಂಧಿಸಲಾಗಿದೆ. ರಸ್ತೆಯಲ್ಲಿದ್ದ ಗುಂಡಿಯನ್ನು ಇದೀಗ ನಾಗರಿಕ ಅಧಿಕಾರಿಗಳು ಸರಿಪಡಿಸಿದ್ದಾರೆ. ಇನ್ನೂ ಮೃತ ಯುವತಿಯ ಸಹೋದರನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಶೋಭನಾ ಸಾವಿಗೆ ಝೋಹೋ ಕಂಪನಿಯ ಸಿಇಒ ಶ್ರೀಧರ್ ವೆಂಬು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಶೋಭನಾ ಅವರ ಸಾವಿಗೆ ಹದಗೆಟ್ಟ ರಸ್ತೆಗಳೇ ಕಾರಣ ಎಂದು ದೂಷಿಸಿದ್ದಾರೆ. ನಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ಶೋಭನಾ, ಚೆನ್ನೈನ ಮಧುರವಾಯಲ್ ಬಳಿ ಇದ್ದ ದೊಡ್ಡ ರಸ್ತೆ ಗುಂಡಿ ಯಿಂದ ತಪ್ಪಿಸಿಕೊಳ್ಳಲು ಹೋಗಿ ಸ್ಕೂಟರ್ ಸ್ಕಿಡ್ ಆಗಿ ದುರಂತವಾಗಿ ಸಾವನ್ನಪ್ಪಿದ್ದಾರೆ. ತಮ್ಮ ಕಿರಿಯ ಸಹೋದರನನ್ನು ತರಗತಿಗೆ ಬಿಡಲು ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನಮ್ಮ ನಗರದಲ್ಲಿರು ಹದಗೆಟ್ಟ ರಸ್ತೆಗಳಿಂದ ಯುವತಿಯ ಕುಟುಂಬಕ್ಕೆ ಮತ್ತು ಜೊಹೋ ಕಂಪನಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.

ರಸ್ತೆ ಗುಂಡಿಗಳು ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಗುಂಡಿ ತಪ್ಪಿಸಲು ಹೋಗಿ ವಾಹನದಿಂದ ಬಿದ್ದು ಗಂಭೀರವಾಗಿ ಗಾಯಗೊಂಡವರು ಕೆಲವರಾದರೆ, ಪ್ರಾಣವನ್ನೇ ಕಳೆದುಕೊಂಡವರು ಮತ್ತಷ್ಟು ಜನ. ಹೀಗಿದ್ದರೂ ಸರ್ಕಾರಗಳು ಮಾತ್ರ ರಸ್ತೆ ಗುಂಡಿಗಳ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.

Donate Janashakthi Media

Leave a Reply

Your email address will not be published. Required fields are marked *