ಚಿಕ್ಕಮಗಳೂರು: ದೂರು ನೀಡಿದರೂ ಪ್ರಕರಣ ದಾಖಲಿಸದ ಪೊಲೀಸರ ನಡೆಯಿಂದ ಅಸಮಾಧಾನಗೊಂಡ ಮಹಿಳೆಯೊಬ್ಬರು ತಡರಾತ್ರಿ 1 ಗಂಟೆಯವರೆಗೂ 4 ವರ್ಷದ ಮಗುವಿನ ಜತೆ ಠಾಣೆಯಲ್ಲೇ ಕುಳಿತು ನ್ಯಾಯಕ್ಕಾಗಿ ಪಟ್ಟು ಹಿಡಿದ ಘಟನೆ ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಆ ಗಟ್ಟಿಗಿತ್ತಿ ಮಹಿಳೆ. ಹೆಸರು ಸುನಿತಾ. ಚಿಕ್ಕಮಗಳೂರು ಜಿಲ್ಲೆಕಳಸ ತಾಲೂಕಿನ ಸಂಸೆ ನಿವಾಸಿ. ಈಕೆಯ ಕುಟುಂಬಕ್ಕೂ ಪಕ್ಕದ ಮನೆಯವರಿಗೂ ಆಗುತ್ತಿರಲಿಲ್ಲ. ಈಕೆಯ ಪತಿ ರಾಜೇಂದ್ರ ಗಲಾಟೆಯೊಂದರ ವಿಡಿಯೋ ಮಾಡುತ್ತಿದ್ದ ಎಂಬ ಕಾರಣಕ್ಕೆ ಪಕ್ಕದ ಮನೆಯವರು ಇವರ ವಿರುದ್ಧ ಹಾಗೆ ಸಾಧಿಸುತ್ತಿದ್ದರು. ಈಕೆ ಅಡುಗೆ ಮಾಡುವಾಗ ಮನೆಯ ಕಿಟಕಿ ಬಳಿ ಬಂದು ಅಶ್ಲೀಲ ಸನ್ನೆ ಮೂಲಕ ಅಸಭ್ಯವಾಗಿ ವರ್ತಿಸಿ ನಿನ್ನ ಗಂಡನನ್ನ ಬಿಡೋದಿಲ್ಲ ಎಂದಿದ್ದರು.
ಇದನ್ನು ಓದಿ : ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ
ಪಕ್ಕದ ಮನೆ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಮತ್ತು ಗಂಡನಿಗೆ ಜೀವ ಬೆದರಿಕೆ ಇದೆ ಅಂತ ಮಹಿಳೆ ಎರಡು ದಿನದ ಹಿಂದೆಯೇ ದೂರು ನೀಡಿದ್ದರು. ಅಲ್ಲದೆ, ಇದಕ್ಕೆ ಸಂಬಂಧಿಸಿ ವಿಡಿಯೋವನ್ನು ಸಹ ಸಾಕ್ಷಿಯನ್ನಾಗಿ ಮಹಿಳೆ ಕೊಟ್ಟಿದ್ದರು. ಸೂಕ್ತ ದಾಖಲೆಗಳು ಲಭ್ಯವಾದರೂ ಸಹ ಕುದುರೆಮುಖ ಪೊಲೀಸರು ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದರು. ಆಮೇಲೆ ಬಾ ಕರೆಂಟ್ ಇಲ್ಲ, ಕಳಸ ಠಾಣೆಯಲ್ಲಿ ಇರಿ ಬರುತ್ತೇನೆ ಎಂದು ಹೇಳು ಸಮಯ ವ್ಯರ್ಥ ಮಾಡುತ್ತಿದ್ದರು. ವಿಷಯ ತಿಳಿದ ಸರ್ಕಲ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಕರೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರೂ ಕೂಡ ಸಬ್ಇನ್ಸ್ಪೆಕ್ಟರ್ ಶಂಭುಲಿಂಗ ಪ್ರಕರಣ ದಾಖಲಿಸಿಕೊಂಡಿಲ್ಲ.
ಯಾವಾಗ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದರೋ ಸುನಿತಾ ಸ್ಟೇಷನ್ ಬಿಟ್ಟು ಕದಲಲಿಲ್ಲ. ಇಡೀ ದಿನ ಠಾಣೆಯಲ್ಲಿ ಕೂತ ಸುನಿತಾ ರಾತ್ರಿ 11.30ಕ್ಕೆ ತನ್ನ 4 ವರ್ಷದ ಮಗುವಿಗೆ ಪೊಲೀಸ್ ಠಾಣೆಯಲ್ಲೇ ಊಟ ಮಾಡಿಸಿ, ಮಲಗಿಸಿ, ತಡರಾತ್ರಿವರೆಗೂ ಅಲ್ಲಿಯೇ ಉಳಿದಿದ್ದರು. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗದೆ ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಹಿಳೆಯ ಆಕ್ರೋಶದಿಂದ ಎಚ್ಚೆತ್ತ ಪೊಲೀಸರು ಮಧ್ಯರಾತ್ರಿ ಯುವಕರ ವಿರುದ್ಧ ರಾತ್ರಿ 2 ಗಂಟೆಗೆ ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯಕ್ಕೆ ಜನಾಕ್ರೋಶ ವ್ಯಜ್ತವಾಗಿದೆ. ಜನಸಾಮಾನ್ಯರಿಗೆ ಅನ್ಯಾಯವಾದರೆ ಪೊಲೀಸರ ಬಳಿ ಹೋಗುತ್ತಾರೆ. ಆದರೆ ಆ ಪೊಲೀಸರು ಹೀಗೆ ಅನ್ಯಾಯ ಮಾಡಿದರೆ ಜನ ಯಾರ ಬಳಿ ಹೋಗಬೇಕು. ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯ ಇತರೆ ಠಾಣೆಗಳಲ್ಲಿ ಏನು ನಡೆಯುತ್ತಿದೆ ಎಂದು ಗಮನ ಹರಿಸಬೇಕಿದೆ. ಇಲ್ಲವಾದರೆ ಠಾಣೆಗಳಲ್ಲಿ ಈ ರೀತಿಯ ನಿರ್ಲಕ್ಷ್ಯ ಹೆಚ್ಚಾಗಿ ಜನ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.