ಕಂಡಕ್ಟರ್‌ ಟೋಪಿ ತೆಗೆಯುವಂತೆ ಒತ್ತಾಯಿಸಿ ಅಸಹಿಷ್ಣುತೆ ಪ್ರದರ್ಶಿಸಿದ ಮಹಿಳೆ: ತೀವ್ರ ಆಕ್ರೋಶ

ತನ್ನನ್ನು ಅವಮಾನಿಸುತ್ತಿದ್ದ ಮಹಿಳೆಯ ಜೊತೆಗೆ ಕಂಡಕ್ಟರ್‌ ತೋರಿದ ಸೌಮ್ಯತೆಗೆ ವ್ಯಾಪಕ ಬಣ್ಣನೆ

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಕಂಡಕ್ಟರ್‌ಗೆ ಕರ್ತವ್ಯದ ವೇಳೆ ಟೋಪಿ ತೆಗೆಯುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟೋಪಿ ಧರಿಸಲು ಅವಕಾಶವಿದೆಯೇ ಎಂದು ಮಹಿಳೆ ಪದೇ ಪದೇ ಕಂಡಕ್ಟರ್‌ಗೆ ಕೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಈ ಘಟನೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಘಟನೆಯು ಯಾವಾಗ ಮತ್ತು ಎಲ್ಲಿಯದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕರ್ತವ್ಯದಲ್ಲಿರುವಾಗ ತನ್ನ ಸಮವಸ್ತ್ರದೊಂದಿಗೆ ಹಸಿರು ಟೋಪಿ ಧರಿಸಲು ಅನುಮತಿಯ ಬಗ್ಗೆ ಮಹಿಳೆ ಪದೇ ಪದೇ ಕಂಡಕ್ಟರ್‌ಗೆ ಪ್ರಶ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಂಡುಬಂದಿದೆ. ಸರ್ಕಾರಿ ನೌಕರರು ತಮ್ಮ ಮನೆಯಲ್ಲಿ ಧರ್ಮವನ್ನು ಪಾಲಿಸಬೇಕು ಎಂದು ಮಹಿಳೆಯು ಪ್ರತಿಪಾದಿಸುವುದನ್ನು ವಿಡಿಯೊದಲ್ಲಿ ದಾಖಲಾಗಿದೆ. ಜೊತೆಗೆ ಕಂಡಕ್ಟರ್ ಅವರ ಟೋಪಿಯನ್ನು ತೆಗೆದುಹಾಕಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ.

ಮಹಿಳೆಯ ಮಾತಿಗೆ ಕಂಡಕ್ಟರ್ ವಿನಯವಾಗಿ ಪ್ರತಿಕ್ರಿಯಿಸಿ, ತಾನು ಹಲವಾರು ವರ್ಷಗಳಿಂದ ಟೋಪಿ ಧರಿಸುತ್ತಿದ್ದೇನೆ ಎಂದು ವಿವರಿಸಿದ್ದಾರೆ. ಇಷ್ಟಕ್ಕೆ ಪಟ್ಟು ಬಿಡದ ಮಹಿಳೆ ಅಧಿಕಾರಿಗಳಿಗೆ ವಿಷಯವನ್ನು ತಿಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಕಂಡಕ್ಟರ್ ವಿವರಣೆಯನ್ನು ನಿರ್ಲಕ್ಷಿಸುವ ಮಹಿಳೆ, ಹಲವಾರು ವರ್ಷಗಳಿಂದ ಕ್ಯಾಪ್ ಧರಿಸಿದ ಮಾತ್ರಕ್ಕೆ ಅದು ಕಾನೂನು ಆಗುವುದಿಲ್ಲ, ತಕ್ಷಣವೇ ಟೋಪಿ ತೆಗೆಯಿರಿ ಎಂದು ಎಂದು ಒತ್ತಾಯಿಸುತ್ತಾರೆ. ಅಂತಿಮವಾಗಿ, ಕಂಡಕ್ಟರ್ ಮಹಿಳೆಯ ಬೇಡಿಕೆಯನ್ನು ಒಪ್ಪಿ ತಲೆಯಿಂದ ಟೋಪಿಯನ್ನು ತೆಗೆಯುತ್ತಾರೆ.

ಇದೀಗ ಈ ವಿಡಿಯೊ ಚರ್ಚೆ ಹುಟ್ಟುಹಾಕಿದ್ದು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ಬಗ್ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ. ಮೊಹಮ್ಮದ್ ಹನೀಫ್ ಎಂಬವರು, “ವಾಟ್ಸಾಪ್ ಅಲ್ಲಿ ಈ ವಿಡಿಯೊ ನೋಡಿದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ದರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ದವೇನೊ?. ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆ ಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ” ಎಂದು ಹೇಳಿದ್ದಾರೆ.

ಪತ್ರಕರ್ತೆ ಜಾಹ್ನವಿ ರವೀಂದ್ರ ಅವರು, “ಸಾಮಾನ್ಯ ಬಸ್ ಪ್ರಯಾಣಿಕಳಾಗಿ, ಯಾವುದೇ ಚಾಲಕ/ಕಂಡಕ್ಟರ್‌ನ ಧಾರ್ಮಿಕ ಆದ್ಯತೆಗಳು ನನಗೆ ಎಂದಿಗೂ ಮುಖ್ಯವಲ್ಲ, ಅವರು ಎಂದಿಗೂ ಧರ್ಮ ಅಥವಾ ವರ್ಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಜೀವನದಲ್ಲಿ ಈ ರೀತಿಯ ಮಾನ್ಯತೆ ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆ.

ಪತ್ರಕರ್ತ ಪ್ರಜ್ವಲ್ ಮಣಿಪಾಲ್ ಅವರು, ಮಹಿಳೆಯ ಕೃತ್ಯವನ್ನು ಅನೈತಕ ಪೊಲೀಸ್‌ಗಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ಕಂಡಕ್ಟರ್ ನ ಸಂಯಮಕ್ಕೆ ಬೆರಗಾದೆ. ಈ ಮಹಿಳೆ ಯಾವ ನಿಯಮದ ಬಗ್ಗೆ ಮಾತನಾಡುತ್ತಿದ್ದಾಳೆ? ಇದು ನೈತಿಕ ಪೊಲೀಸ್‌ಗಿರಿ” ಎಂದು  ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕಿ ಲಾವಣ್ಯ ಬಳ್ಳಾಲ್ ಅವರು, ಎಲ್ಲಾ ಮಹಿಳೆಯರು #ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೆಲಸದಲ್ಲಿ ನಿರತರಾಗಿರುವ ಉದ್ಯೋಗಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಇದು ಅನಗತ್ಯವಾಗಿತ್ತು ಮತ್ತು ಇದು ಅನೈತಿಕ ಪೊಲೀಸ್‌ಗಿರಿ. ಈ ಸಮಸ್ಯೆಯನ್ನು ನಮ್ಮ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ತಂದಿದ್ದೇವೆ” ಎಂದು ಹೇಳಿದ್ದಾರೆ.

ಸಿರಾಜ್ ಬಾರೆಬೆಟ್ಟು ಅವರು, “ಕಂಡಕ್ಟರ್ ಒಬ್ಬರು ಟೋಪಿ ಹಾಕಬಾರದು ಅಂತಾನೂ ನಿಯಮ ಇದೆಯಾ ? ಇವಳಿಗೆ ಪ್ರಶ್ನಿಸೋಕೆ ಅರ್ಹತೆ ಆದರೂ ಏನೂ? ಅವರ ವೇಷ ಅವರ ಇಷ್ಟ. ಹಿಂದೂ ಸಂಸ್ಕೃತಿ ಅನುಸರಿಸಿ ಕಾವಿ ಹಾಕಿ ಎಷ್ಟೋ ಕಂಡಕ್ಟರ್‌ಗಳು ಬಸ್‌ಗಳಲ್ಲಿ ಇರ್ತಾರೆ ಅದು ತೊಂದರೆ ಇಲ್ವಾ? ಸರ್ಕಾರಿ ಬಸ್ ಗಳಲ್ಲಿ ಹಿಂದೂ ಧರ್ಮದ ದೇವತೆಗಳ ಫೋಟೋ ಹಾಕೋತಾರೆ ಅದು ತೊಂದರೆ ಇಲ್ವಾ? ಸರ್ಕಾರಿ ವಾಹನ ಯಾವ ಧರ್ಮಕ್ಕೆ ಸೀಮಿತವೇ? ಸರ್ಕಾರಿ ಬಸ್ ಗಳಲ್ಲಿ ತೋಳಿಗೆ ಕೆಂಪು ಶಾಲು ಹಾಕಿ ಟಿಕೆಟ್ ಕೇಳೋ ಕಂಡಕ್ಟರ್ ಗಳು ಇರ್ತಾರೆ ಅದು ತಪ್ಪು ಅಲ್ವಾ? ಇದೆಲ್ಲ ಗೊತ್ತಿದ್ದೂ ಒಂದು ಧರ್ಮವನ್ನು ಟಾರ್ಗೆಟ್ ಮಾಡುವವರ ವಿರುದ್ಧ ಸರ್ಕಾರ ದಯವಿಟ್ಟು ಕ್ರಮ ಕೈಗೊಳ್ಳಬೇಕು. ಇದು ಭಾರತ ಶಾಂತಿಯ ತೋಟ. ಸರ್ವ ಧರ್ಮಗಳ ಉದ್ಯಾನ” ಎಂದು ಹೇಳಿದ್ದಾರೆ.

ಬಿಲ್ಲವ ನಾಯಕ ಸುನಿಲ್ ಕುಮಾರ್ ಬಜಿಲಕೇರಿ ಪ್ರತಿಕ್ರಿಯಿಸಿ, ಟೋಪಿ ಹಾಕೊಂಡು ಡ್ಯೂಟಿ ಮಾಡಬಾರದು ಅಂತ ಯಾರಾದರೂ ಸರಕಾರದ ಆದೇಶ ಇದೆಯಾ. ನಮ್ಮ ರಾಜ್ಯದ ಬಸ್ಸಿನಲ್ಲಿ ದೇವರ ಫೋಟೋಗಳಿಗೆ ಹೂವು ಹಾಕ್ತಾರೆ. ಇದು ಜಾತ್ಯತೀತ ದೇಶ. ಇಲ್ಲಿ ಎಲ್ಲಾ ಧರ್ಮದವರು ಕೂಡಿ ಬಾಳುತ್ತಿದ್ದಾರೆ ಈ ಮಹಿಳೆಯನ್ನ ಹುಡುಕಿ ಕೇಸು ಜಡಿಯಬೇಕು” ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ : ಆರ್‌ಎಸ್‌ಎಸ್‌ ಕಾರ್ಯಕರ್ತನ ಬಂಧನ.

Donate Janashakthi Media

Leave a Reply

Your email address will not be published. Required fields are marked *