ಉತ್ತರ ಪ್ರದೇಶ | ಸಕಾಲಕ್ಕೆ ಸಿಗದ ಆಂಬ್ಯುಲೆನ್ಸ್ : ರಾಜಭವನದೆದುರು ಹೆರಿಗೆ, ಶಿಶು ಸಾವು

ಲಕ್ನೊ : ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ ಆಟೋ ರಿಕ್ಷಾದಲ್ಲೇ ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಗೆ ರಾಜಭವನ ಮುಂಭಾಗದಲ್ಲೇ ಹೆರಿಗೆ ಆಗಿದ್ದು, ನವಜಾತ ಶಿಶು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ನಾಲ್ಕೂವರೆ ತಿಂಗಳ ಗರ್ಭಿಣಿಗೆ ರಸ್ತೆ ಬದಿಯಲ್ಲೇ ಹೆರಿಗೆ ಆಗಿದೆ. ಅವಧಿಪೂರ್ವ ಹೆರಿಗೆಯಾದ್ದರಿಂದ ಗಂಡುಮಗು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದೆ. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಮಾಲ್ ಅವೆನ್ಯೂ ಪ್ರದೇಶದ ನಿವಾಸಿಯಾಗಿದ್ದ ಮಹಿಳೆಗೆ ಹೆರಿಗೆ ನೋವು ಬಂದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆಂಬ್ಯುಲೆನ್ಸ್​ಗೆ ಪದೇ ಪದೇ ಕರೆ ಮಾಡಿದರೂ ಬರಲಿಲ್ಲ. ಹೀಗಾಗಿ ರೀಕ್ಷಾದಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ರಾಜಭವನದ ಗೇಟ್ ಸಂಖ್ಯೆ 15ರ ಮುಂದೆ ಸಾಗುತ್ತಿದ್ದಾಗ ಹೆರಿಗೆ ನೋವು ಇನ್ನೂ ಹೆಚ್ಚಾಯಿತು ಎಂದು ಕುಟುಂಬದ ಸಂಬಂಧಿಕರು ತಿಳಿಸಿದರು.

ಇದರಿಂದ ಅಲ್ಲಿಯೇ ರಿಕ್ಷಾ ನಿಲ್ಲಿಸಿ ದಾರಿಹೋಕರ ನೆರವಿನಿಂದ ಹೆರಿಗೆ ಮಾಡಿಸಲಾಯಿತು. ಆದಾಗ್ಯೂ, ಒಂದು ಗಂಟೆಯ ನಂತರ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತು. ತಾಯಿ ಮತ್ತು ನವಜಾತ ಶಿಶುವನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಶಿಶು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಇದು ಅವಧಿಪೂರ್ವ ಹೆರಿಗೆ ಎಂದು ವೈದ್ಯರು ತಿಳಿಸಿದರು.

ಸರ್ಕಾರದ ವಿರುದ್ಧ ಆಕ್ರೋಶ: ರಾಜಭವನದ ಸಮೀಪವೇ ನಡೆದ ಘಟನೆಯನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ”ರಾಜ್ಯ ಸರ್ಕಾರದ ಲಕ್ಷಾಂತರ ಜಾಹೀರಾತುಗಳು ಮತ್ತು ಘೋಷಣೆಗಳ ಹೊರತಾಗಿಯೂ ರಾಜ್ಯದ ಆರೋಗ್ಯ ವ್ಯವಸ್ಥೆ ವೆಂಟಿಲೇಟರ್‌ನಲ್ಲಿದೆ. ರಿಕ್ಷಾದಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಗೆ ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ರಾಜಭವನದ ಬಳಿಯ ರಸ್ತೆಯಲ್ಲಿ ಹೆರಿಗೆ ಮಾಡಿಸುವಂತಾಗಿದೆ. ಇದು ನಾಚಿಕೆಗೇಡಿನ ಸಂಗತಿ. ರಾಜ್ಯದ ಇಡೀ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆಯ ವಾಸ್ತವಕ್ಕೆ ಹಿಡಿದ ಕನ್ನಡಿ” ಎಂದು ಟ್ವೀಟ್​ ಮಾಡಿದ್ದಾರೆ.

ತನಿಖೆಗೆ ಆದೇಶ :ಘಟನೆ ಕುರಿತು ಪ್ರತಿಕ್ರಿಯಿಸಿದ ಯುಪಿ ಡಿಸಿಎಂ ಬ್ರಜೇಶ್ ಪಾಠಕ್, ನಾಲ್ಕೂವರೆ ತಿಂಗಳ ಗರ್ಭಿಣಿ ನೋವಿನಿಂದ ಬಳಲುತ್ತಿದ್ದಳು. ಆಕೆ ರಿಕ್ಷಾದಲ್ಲಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ್ದಾಳೆ. ನಾವು ಎಲ್ಲಾ ವೈದ್ಯಕೀಯ ಸಹಾಯವನ್ನು ನೀಡುತ್ತಿದ್ದೇವೆ. ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದಿರುವ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ನಿರ್ಲಕ್ಷ್ಯ ವಹಿಸಿದರೆ ಯಾರನ್ನೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *