ಭೋಪಾಲ್ : 8 ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಕರುಣಾಜನಕ ಕಥೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪೂಜಾರಾಮ್ ಹೆಸರಿನ ವ್ಯಕ್ತಿಯ ಮಗ ರಾಜಾ(2) ರಕ್ತಹೀನತೆಯಿಂದಾಗಿ ಇತ್ತೀಚೆಗೆ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸ್ಥಳೀಯ ಪತ್ರಕರ್ತರೊಬ್ಬರು ಚಿತ್ರೀಕರಿಸಿದ ದೃಶ್ಯಗಳಲ್ಲಿ, ತಂದೆ ಪೂಜಾರಾಮ್ ಜಾತವ್ ಶವವನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ.
ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಆಯಂಬುಲೆನ್ಸ್ಗಾಗಿ ಕಾದು ಕುಳಿತ ಬಾಲಕ pic.twitter.com/WqiCyXf3C6
— Janashakthi Media (@janashakthikw) July 11, 2022
ಗ್ರಾಮದಿಂದ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು : ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಅವರು ತಮ್ಮ 2 ವರ್ಷದ ಮಗನನ್ನು ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಯಿಂದ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು.
ರಕ್ತಹೀನತೆ ಮತ್ತು ಅಸ್ಸೈಟ್ಸ್‌ನಿಂದ (ದ್ರವದ ಶೇಖರಣೆಯಿಂದ ಉಂಟಾದ ಹೊಟ್ಟೆಯ ಊತ, ಹೆಚ್ಚಾಗಿ ಯಕೃತ್ತಿನ ಕಾಯಿಲೆ) ಬಳಲುತ್ತಿರುವ ರಾಜಾ ಚಿಕಿತ್ಸೆ ಫಲಕಾರಿಯಾಗದೆ ಮೊರೆನಾ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅಷ್ಟರಲ್ಲಾಗಲೇ ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಹಿಂತಿರುಗಿತ್ತು.
30 ಕಿಲೋ ಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಬಳಿ ಪೂಜಾರಾಮ್ ಮನವಿ ಮಾಡಿದ್ದಾರೆ. ಆದರೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಹನವಿಲ್ಲ ಎಂದು ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ, ಆದರೆ ಅದಕ್ಕೆ ಹಣ ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಆಂಬ್ಯುಲೆನ್ಸ್‌ಗೆ ಪಾವತಿಸಲು ಹಣದ ಕೊರತೆ: ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ನಿರ್ವಾಹಕರೊಬ್ಬರು ಮಗುವಿನ ಶವವನ್ನು ಅವರ ಗ್ರಾಮಕ್ಕೆ ಸಾಗಿಸಲು 1,500 ರುಪಾಯಿ ಕೇಳಿದ್ದಾರೆ. ಆದರೆ ಪೂಜಾರಾಮ್ ಬಳಿ ಅಷ್ಟೊಂದು ಹಣವಿರಲಿಲ್ಲ.
ಅಸಹಾಯಕರಾದ ಪೂಜಾರಾಮ್ ತನ್ನ ಮಗ ರಾಜಾ ದೇಹವನ್ನು ಎತ್ತಿಕೊಂಡು ಇನ್ನೊಬ್ಬ ಮಗ ಗುಲ್ಶನ್ ಜೊತೆ ಆಸ್ಪತ್ರೆಯಿಂದ ವಾಪಸ್ ಬಂದಿದ್ದಾರೆ. ಅಲ್ಲಿ ಆತನಿಗೆ ಯಾವುದೇ ವಾಹನ ಸಿಗಲಿಲ್ಲ.
ಯಾವುದೇ ದಾರಿ ಕಾಣದೆ ಪೂಜಾರಾಮ್ ಗ್ರಾಮಕ್ಕೆ ತೆರಳಿ ಹಣದ ವ್ಯವಸ್ಥೆ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ. ಮಗ ಗುಲ್ಶನ್‌ನನ್ನು ಮೊರೆನಾದ ನೆಹರೂ ಪಾರ್ಕ್‌ನ ಮುಂದೆ ಕೂರಿಸಿ, ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ.
ಏನಾಗುತ್ತಿದೆ ಎನ್ನುವುದನ್ನೂ ಅರಿಯದ ಗುಲ್ಶನ್ ಅರ್ಧ ಗಂಟೆಯವರೆಗೆ ರಸ್ತೆ ಬದಿಯಲ್ಲೇ ತಮ್ಮನ ಮೃತದೇಹದ ಜೊತೆ ಕಾಲಕಳೆದಿದ್ದಾನೆ. ತಮ್ಮನ ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಹಾಕುತ್ತಾ ಕೂತಿದ್ದಾನೆ. ಅಷ್ಟರಲ್ಲೇ ಈ ದೃಶ್ಯವನ್ನು ಕಂಡ ಜನ ಗುಂಪುಗೂಡಲು ಆರಂಭಿಸಿದ್ದಾರೆ. ಆಗ ಯಾರೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ಮಗುವಿನ ಮೃತದೇಹವನ್ನು ಎತ್ತಿಕೊಂಡು ಗುಲ್ಶನ್ ಜೊತೆ ಮತ್ತೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪೂಜಾರಾಮ್‌ಗೆ ಮನೆಗೆ ಮಗುವಿನ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು.