ಕೇರಳ ಇನ್ನೊಂದು ಟ್ರೆಂಡ್ ಮುರಿಯುವುದೇ?

– ವಸಂತರಾಜ ಎನ್.ಕೆ

ಕೇರಳ 2021 ರ ವಿಧಾನಸಭಾ ಚುನಾವಣೆಗಳಲ್ಲಿ 1980ರ ದಶಕದ ಆದಿಯಿಂದ  ಕಂಡು ಬಂದ ದೀರ್ಘಕಾಲೀನ ಟ್ರೆಂಡ್ ಒಂದನ್ನು ಮುರಿದಿದೆ.  ಒಂದು ರಂಗ ಸತತ  ಎರಡು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಬಹುಮತ ಪಡೆಯುವುದಿಲ್ಲ ಎಂಬುದು ಆ ಟ್ರೆಂಡ್. ಇನ್ನೊಂದು ಟ್ರೆಂಡ್ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸಹ ಅದೇ ರಂಗಕ್ಕೆ ಮೇಲುಗೈ ಕೊಡುವುದಿಲ್ಲ ಎಂಬುದು. 2024ರ ಲೋಕಸಭಾ ಚುನಾವಣೆಯಲ್ಲಿ  LDF ಮತ್ತು UDF ನಡುವೆ ತೀವ್ರ ಪೈಪೋಟಿ ಇದ್ದ ಹಾಗೆ ಕಾಣುತ್ತದೆ. NDA ತನ್ನ ಮತಗಳಿಕೆ ಹೆಚ್ಚು ಮಾಡಿಕೊಳ್ಳುವುದಕ್ಕೆ ಮತ್ತು ಖಾತೆ ತೆಗೆಯುವುದಕ್ಕೆ ಹಾತೊರೆಯುತ್ತಿದೆ.  ಕೇರಳ ಇನ್ನೊಂದು ಟ್ರೆಂಡ್ ಮುರಿದು LDF ಗೆ ಮೇಲುಗೈ ಕೊಡುವುದೇ ?

ನೆರೆಯ ಕೇರಳ 18ನೆಯ ಲೋಕಸಭಾ ಚುನಾವಣೆಯ ಎರಡನೆಯ ಹಂತದಲ್ಲಿ ಚುನಾವಣೆಗೆ ಹೋಗಲಿದೆ. ಎಂದಿನಂತೆ ಕೇರಳದಲ್ಲಿ ಈ ಚುನಾವಣೆಯಲ್ಲಿ ಸಹ ಎಡ ಪ್ರಜಾಸತ್ತಾತ್ಮಕ ರಂಗ (LDF) ಮತ್ತು ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF) ಮುಖ್ಯ ಸ್ಪರ್ಧಿಗಳು. ಎರಡೂ ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಕೂಟದ ಭಾಗವಾಗಿದ್ದರೂ, ರಾಜ್ಯದಲ್ಲಿ   ಬಿಜೆಪಿ ಮತ್ತು ಅದರ ನಾಯಕತ್ವದ ಮೂರನೆಯ ರಂಗ NDA ಈ ಬಾರಿ ಖಾತೆ ತೆರೆಯುತ್ತದೆ ಎಂದು ಪ್ರಧಾನಿಯಿಂದ ಕೆಲವು ಮಾಧ್ಯಮಗಳ ವರೆಗೆ ಹಲವರು ಹೇಳಿಕೊಳ್ಳುತ್ತಿದ್ದಾರೆ. ಪ್ರಧಾನಿ NDA ಎರಡಂಕಿ ದಾಟುತ್ತದೆ ಎನ್ನುವವರೆಗೆ  ಹೋಗಿದ್ದಾರೆ, ಆದರೆ ಅತ್ಯಂತ ‘ಮೋದಿಕೃತ’ ಮಾಧ್ಯಮಗಳು ಸಹ ತಮ್ಮ ಸಮೀಕ್ಷೆಗಳಲ್ಲಿ.2-3 ಸೀಟುಗಳಿಗಿಂತ ಹೆಚ್ಚು ಕೊಟ್ಟಿಲ್ಲ. ಇನ್ನೊಂದು ಕಡೆ LDF ಮತ್ತು UDF ನಡುವೆ ತೀವ್ರ ಹಣಾಹಣಿ ನಡೆದಿದ್ದು, ಹಲವರು ತೀವ್ರ ಸ್ಪರ್ಧೇಯಲ್ಲಿ ಏನೂ ಹೇಳುವದು ಕಷ್ಟ  ಎಂದರೆ ಕೆಲವರು LDF ಮತ್ತು ಇನ್ನೂ ಕೆಲವವರು UDF ಹೆಚ್ಚಿನ ಸೀಟುಗಳನ್ನು ಪಡೆಯುತ್ತವೆ ಎಂದಿದ್ದಾರೆ. ಕೇರಳದ ಚುನಾವಣಾ ಇವುಗಳಲ್ಲಿ ಯಾವುದು ಸರಿಯೆಂದು ಹೇಳುವುದು ಕಷ್ಟ. ಆದರೆ ಹಿಂದಿನ ನಾಲ್ಕು ದಶಕಗಳ ಚುನಾವಣಾ ಫಲಿತಾಂಶಗಳ ದೀರ್ಘಕಾಲೀನ ಟ್ರೆಂಡ್ ಮತ್ತು ಇತ್ತೀಚಿನ ಮಹತ್ವದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವು ದಿಕ್ಸೂಚಕಗಳನ್ನು ಕಾಣಬಹುದು.

ದೀರ್ಘಕಾಲೀನ ಟ್ರೆಂಡ್ ಗಳು ಮತ್ತು ರಾಜಕೀಯ ಅಂಶಗಳು

ಈಗಿನ LDF ಮತ್ತು UDF ಅನುಕ್ರಮವಾಗಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ನಾಯಕತ್ವದಲ್ಲಿ 1980ರ ದಶಕದ ಆದಿಯಲ್ಲಿ ರಚನೆಯಾದಾಗಿನಿಂದ ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಗಳ ಫಲಿತಾಂಶದ ಸಾರಾಂಶ ಕೆಳಗಿನ ಕೋಷ್ಟಕದಲ್ಲಿದೆ:

ಈ ಅಂಕಿ ಅಂಶಗಳಿಂದ ಕಂಡಿರುವ ದೀರ್ಘಕಾಲೀನ ಟ್ರೆಂಡ್ ಗಳು ಮತ್ತು ರಾಜಕೀಯ ಅಂಶಗಳು ಹೀಗಿವೆ :

  • ಮುಖ್ಯ ಸ್ಪರ್ಧೆ LDF ಮತ್ತು UDF ನಡುವೆ ಇರುತ್ತದೆ, ಮೂರನೇ ಪಕ್ಷ ಅಥವಾ ರಂಗ ಅಥವಾ ಸ್ವತಂತ್ರ ಅಭ್ಯರ್ಥಿ ಅದೂ ಲೋಕಸಭೆಯಲ್ಲಿ ಗೆದ್ದಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ
  • ವಿಧಾನಸಭೆ ಚುನಾವಣೆಯಲ್ಲಿ ಸತತ ಎರಡು ಬಾರಿ ಯಾವ ರಂಗವೂ ಗೆಲ್ಲುವುದಿಲ್ಲ (ಇದು ಇತ್ತೀಚಿನ 2021 ಚುನಾವಣೆಯಲ್ಲಿ ಮಾತ್ರ ನಿಜವಾಗಲಿಲ್ಲ)
  • ವಿಧಾನಸಭೆಗೆ 1980ರಿಂದ ಈಚಿನ 10 ಚುನಾವಣೆಗಳಲ್ಲಿ 6 ಬಾರಿ LDF ಮತ್ತು 4 ಬಾರಿ UDF ಬಹುಮತ ಪಡೆದಿದೆ.
  • ಲೋಕಸಭೆಗೆ  1980ರಿಂದ ಈಚಿನ 10 ಚುನಾವಣೆಗಳಲ್ಲಿ 6 ಬಾರಿ UDF ಹೆಚ್ಚಿನ ಸೀಟು ಪಡೆದಿದೆ. 3 ಬಾರಿ LDF ಮತ್ತು UDF ಸಮಬಲ ಪಡೆದಿದ್ದವು. ಒಂದು ಬಾರಿ ಮಾತ್ರ LDF ಹೆಚ್ಚಿನ ಸೀಟು ಪಡೆದಿದೆ.
  • ವಿಧಾನಸಭೆ ಮತ್ತು ಲೋಕಸಭೆಗೆ ಮತದಾರರ ಧೋರಣೆ ಬೇರೆಯಿರುತ್ತದೆ. ರಾಷ್ಟ್ರಮಟ್ಟದ ಟ್ರೆಂಡ್ ಜತೆ ಪೂರ್ಣವಾಗಿ ತಾಳೆಯಾಗದಿದ್ದರೂ ಅದರ  ಪರಿಣಾಮವೂ ಕಾಣುತ್ತದೆ.
  • ಎರಡೂ ರಂಗಗಳಿಗೆ ಸುಮಾರು 35-40 % ಮತದಾರರ ಶಾಶ್ವತ ಸ್ಥಿರ ನೆಲೆ ಇದ್ದು, ಉಳಿದ ಸುಮಾರು 20-30% ಮತದಾರರ ವಿಭಾಗ ಪ್ರತಿ ಚುನಾವಣೆಯಲ್ಲಿ ಆಯಾ ಸನ್ನಿವೇಶ ಅನುಸಾರವಾಗಿ ನಿರ್ಣಯಿಸುತ್ತಾರೆ
  • ಶೇಕಡಾ ಮತಗಳಿಕೆಯಲ್ಲಿ ಕೆಲವೊಮ್ಮೆ 1% ಮಾತ್ರ ವ್ಯತ್ಯಾಸವಿದ್ದರೂ ಸೀಟುಗಳಿಕೆಯಲ್ಲಿ ಭಾರೀ ವ್ಯತ್ಯಾಸಗಳಿರುವುದು ಉಂಟು

ಎರಡು ರಂಗದ ಮುಖ್ಯ ಪಕ್ಷಗಳಾದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಯಾವುದೇ ಜಾತಿ, ಧರ್ಮ ಗಳಿಗೆ ಸೀಮಿತವಾಗಿರದೆ ನಿರ್ದಿಷ್ಟ ರಾಜಕೀಯ ನೀತಿ-ಧೋರಣೆಗಳನ್ನು ಪ್ರತಿನಿಧಿಸುತ್ತವೆ. ಆದರೆ ಈ ಎರಡು ರಂಗಗಳಲ್ಲಿರುವ ಮುಸ್ಲಿಂ ಲೀಗ್ ಮತ್ತು ಕೇರಳ ಕಾಂಗ್ರೆಸಿನ ಬಣಗಳು ಅನುಕ್ರಮವಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಮತಧರ್ಮೀಯರ ಒಂದು ವಿಭಾಗವನ್ನು ಪ್ರತಿನಿಧಿಸುತ್ತವೆ.  ಕೆಲವು ಇತರ ಸಣ್ಣ ಪಕ್ಷಗಳು ಕೆಲವು ಜಾತಿಗಳ ಒಂದು ವಿಭಾಗವನ್ನು ಪ್ರತಿನಿಧಿಸುತ್ತವೆ.

ಇದನ್ನು ಓದಿ : ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುವಂತೆ ನಾವು ಒತ್ತಾಯಿಸಿದ್ದರೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ: ಖಾರವಾಗಿ ಪ್ರಶ್ನಿಸಿದ ಸಿ.ಎಂ.ಸಿದ್ದರಾಮಯ್ಯ

ಈಗ ಸಿಪಿಐ(ಎಂ) ನಾಯಕತ್ವದ LDF ನಲ್ಲಿ ಸಿಪಿಐ, ಕೇರಳ ಕಾಂಗ್ರೆಸ್ (ಮಣಿ), ಜನತಾ ದಳ (ಎಸ್), ಎನ.ಸಿಪಿ., ಕಾಂಗ್ರೆಸ್ (ಎಸ್)ಲೋಕತಾಂತ್ರಿಕ ಕನತಾ ದಳ, ಐ.ಎನ್.ಎಲ್ ಇವೆ. ಕಾಂಗ್ರೆಸ್ ನಾಯಕತ್ವದ UDF ನಲ್ಲಿ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಜೇಕಬ್), ಆರ.ಸಿ.ಪಿ, ಆರ್.ಎಂ.ಪಿ.ಐ ಇವೆ. NDA ನಲ್ಲಿ ಬಿಜೆಪಿ ಯಲ್ಲದೆ, ಬಿಡಿಜೆ.ಎಸ್ (ಭಾರತ ಧರ್ಮ ಜನ ಸೇನಾ) ಇದೆ.

ಸಿಪಿಐ(ಎಂ) ನ  15,  ಸಿಪಿಐ ನ 4 ಮತ್ತು ಕೇರಳ ಕಾಂಗ್ರೆಸ್ (ಮಣಿ) 1 ಅಭ್ಯರ್ಥಿಗಳನ್ನು LDF ಕಣಕ್ಕೆ ಇಳಿಸಿದೆ. UDF ನಿಂದ ಕಾಂಗ್ರೆಸ್ ನ 16, ಮುಸ್ಲಿಂ ಲೀಗ್ ನ 2, ಆರ್.ಎಸ್.ಪಿ ಯ 1, ಕೇರಳ ಕಾಂಗ್ರೆಸ್ (ಜೇಕೊಬ್) ನ 1 ಅಭ್ಯರ್ಥಿಗಳು ಕಣದಲ್ಲಿದ್ದಾರೆ. NDA ಬಿಜೆಪಿಯ ಯ 16 ಮತ್ತು ಬಿ.ಡಿ.ಜೆ.ಎಸ್ ನ 4 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇವಲ್ಲದೆ ಬಿ.ಎಸ್.ಪಿ, ವಿ.ಸಿ.ಕೆ, ಎಸ್.ಯು.ಸಿ.ಐ(ಸಿ) ಇತ್ಯಾದಿ ಕೇರಳದಲ್ಲಿ ಹೆಚ್ಚೇನೂ ನೆಲೆಯಿಲ್ಲದ ಸಣ್ಣ ಪಕ್ಷಗಳು ಸಹ ಸ್ಪರ್ಧಿಸುತ್ತಿವೆ.

ಎರಡೂ ರಂಗಗಳಿಂದ ಘಟಾನುಘಟಿಗಳು ಕಣಕ್ಕಿಳಿದಿದ್ದಾರೆ. LDF ನಿಂದ ಆನ್ನಿ ರಾಜಾ, ಎ.ವಿಜಯರಾಘವನ್, ಇ ಕರೀಂ, ಶೈಲಜಾ ಟೀಚರ್, ಥಾಮಸ್ ಐಸಾಕ್ ನಂತಹ ಪ್ರಮುಖರು ಸ್ಪರ್ಧೆಯಲ್ಲಿದ್ದಾರೆ. UDF ನಿಂದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್, ಕೆ.ಮುರಳೀಧರನ್, ಪ್ರೇಮಚಂದ್ರನ್ ನಂತಹ ಘಟಾನುಘಟಿಗಳಿದ್ದಾರೆ. NDA ಯಿಂದಲೂ ಪ್ರಸಿದ್ಧ ನಟ ಸುರೇಶ್ ಗೋಪಿ, ರಾಜೀವ್ ಚಂದ್ರಶೇಖರ್, ಸುರೆಂದ್ರನ್ ನಂತಹ ಪ್ರಮುಖರು ರಂಗದ ಖಾತೆ ತೆಗೆಯುವ ಪ್ರಯತ್ನದಲ್ಲಿ ಕಣದಲ್ಲಿದ್ದಾರೆ.

ಮೇಲೆ ಹೇಳಿದ ದೀರ್ಘಕಾಲೀನ್ ಟ್ರೆಂಡ್ ಗಳು ಮತ್ತು ರಾಜಕೀಯ ಅಂಶಗಳು, ಇತ್ತೀಚಿನ ರಾಜಕೀಯ ಪಲ್ಲಟಗಳು, ರಂಗಗಳ ಪ್ರಚಾರದ ವ್ಯೂಹ-ತಂತ್ರಗಳು ಮತ್ತು ಅವುಗಳಿಗೆ ಪ್ರತಿಸ್ಪಂದನೆಯ ಬೆಳಕಿನಲ್ಲಿ ಎಷ್ಟರ ಮಟ್ಟಿಗೆ ಫಲಿತಾಂಶಗಳ ಮುನ್ನೋಟ ಕೊಡುವಲ್ಲಿ ಸಹಕಾರಿಯಾಗುತ್ತವೆ ಎಂದು ಪರಿಶೀಲಿಸೋಣ.

ಮೂರು ರಂಗಳಿಂದ ಬಿರುಸಿನ ಪ್ರಚಾರ

ಅತ್ಯಂತ ಸುಸಂಘಟಿತ ಕಾರ್ಯಕರ್ತರು ಇರುವ LDF ಕಳೆದ ಹಲವು ತಿಂಗಳುಗಳಿಂದ ಜನಸಂಪರ್ಕ ಕಾರ್ಯಕ್ರಮ ಆರಂಭಿಸಿದೆ. ಕಳೆದ ಮೂರು ವರ್ಷಗಳ ಆಡಳಿತದ ನ್ಯೂನತೆಗಳು ತೊಡಕಾಗದಂತೆ ಮುಖ್ಯಮಂತ್ರಿ ಸೇರಿದಂತೆ ಇಡೀ ಸಚಿವ ಸಂಪುಟ ಬಸ್ ನಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಹೋಗಿ ಜನರ ದೂರುಗಳನ್ನು ನೇರವಾಗಿ ಆಲಿಸಿತು. ಮನೆಮನೆ ಸಂಪರ್ಕ, ಬೀದಿ ಬದಿ ಸಭೆಗಳು, ಭಾರೀ ಬಹಿರಂಗ ಸಭೆಗಳಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ಪ್ರಚಾರ ಕೈಗೊಂಡಿದೆ.

LDF ನಾಯಕರು ಕಾರ್ಯಕರ್ತರು ಎಲ್ಲ ಹಂತಗಳಲ್ಲಿ ಕಾರ್ಪೊರೆಟ್-ಕೋಮುವಾದಿ ಕೂಟದ ಪ್ರಧಾನ ಪಕ್ಷವಾಗಿ ಬಿಜೆಪಿ-ಮೋದಿ ಆಡಳಿತವನ್ನು,  ಕಾರ್ಪೊರೆಟ್ ಪರ ನೀತಿಗಳ ಸರಣಿಯನ್ನು ಸಮಗ್ರ ಟೀಕೆಗೆ ಗುರಿ ಮಾಡುತ್ತಿದ್ದಾರೆ.  ಅದಕ್ಕೆ ಜನಪರ ಬದಲಿ ನೀತಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಕೇರಳ ಮತ್ತು ಇತರ ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವ ಗವರ್ನರ್ ಗಳ ಅಸಾಂವಿಧಾನಿಕ ಹಸ್ತಕ್ಷೇಪ ಅತಿರೇಕಗಳು: ಕೇರಳವನ್ನು ಆರ್ಥಿಕವಾಗಿ ಕತ್ತು ಹಿಸುಕುವ ಜಿ.ಎಸ್.ಟಿ ಆದಾಯ ಮತ್ತಿತರ ತೆರಿಗೆಗಳು ಪ್ರಾಕೃತಿಕ ವಿಕೋಪ ನಿಧಿಯಲ್ಲಿ ರಾಜ್ಯದ ಪಾಲು ಕೊಡದ ವಿಳಂಬ ಮಾಡುವ ತಾರತಮ್ಯ  ಒಕ್ಕೂಟವಾದಿ-ವಿರೋಧಿ ಹಣಕಾಸು ನೀತಿಗಳು: ವಿರೋಧ ಪಕ್ಷದ ನಾಯಕರ ಮತ್ತು ನಿಕಟವರ್ತಿಗಳ ಮೇಲೆ ಇಡಿ-ಸಿಬಿಐ ಗಳ ಮೂಲಕ ಹುಸಿ ಭ್ರಷ್ಟಾಚಾರ ಆರ್ಥಿಕ-ಅಪರಾಧಗಳ ಪ್ರಕರಣ ದಾಖಲೆಗಳ ಮೂಲಕ ಕಿರುಕುಳ ಕೊಡುವ ಮೂಲಕ ಪ್ರಜಾಪ್ರಭುತ್ವ-ವಿರೋಧಿ ಕ್ರಮಗಳು – ಇವುಗಳ ವಿರುದ್ಧ ಬಿರುಸಿನ ಪ್ರಚಾರ ನಡೆಸುತ್ತಿದೆ.  ರಾಜ್ಯದ ಹಿತಾಸಕ್ತಿಗಳನ್ನು ಸ್ವಾಯತ್ತತೆಯನ್ನು ಸಂರಕ್ಷಿಸಲು ದೆಹಲಿಗೆ ಕೇರಳದ ಇಡೀ ಮಂತ್ರಿಮಂಡಲ, ಎಲ್ಲ ಶಾಸಕರ, ಸಂಸದರ ಪ್ರತಿಭಟನಾ ಸಭೆಯನ್ನು ದೆಹಲಿಯ ಜಂತರ್ ಮಂತರ್ ನಲ್ಲಿ ಸಂಘಟಿಸುವ ಮೂಲಕ ಬಿಜೆಪಿ ಕೇಂದ್ರ ಸರಕಾರದ ಅಂಗಳಕ್ಕೆ ಒಯ್ದಿತ್ತು. ಹಲವು ವಿಷಯಗಳಲ್ಲಿ ಕೇಂದ್ರ ಸರಕಾರದ ಕಾನೂನು-ಸಂವಿಧಾನ ವಿರೋಧಿ ಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲು ಸಹ ಹತ್ತಿದೆ.

ಸಿಎಎ ವಿರುದ್ಧ ರಾಜ್ಯದ ಹಲವು ಪ್ರಾದೇಶಿಕ ಕೇಂದ್ರಗಳಲ್ಲಿ  ಭಾರೀ ಸಭೆಗಳನ್ನು ನಡೆಸಿ ಅಭಿಯಾನ ನಡೆಸಿತ್ತು. ಕೇರಳದಲ್ಲಿ ಸಿಎಎ ಜಾರಿ ಮಾಡುವುದಿಲ್ಲ, ಬಿಜೆಪಿಯೇತರ ಬದಲಿ ಸರಕಾರ ಸಿಎಎ ರದ್ದು ಮಾಢಲು ಒತ್ತಡ ಹೇರುತ್ತದೆ ಎಂದು ಈ ಸಭೆಗಳಲ್ಲಿ ಹೇಳಲಾಯಿತು. ಇದೇ ರೀತಿ ಇಡಿ ಗೆ ಅನಗತ್ಯ ಅನಿರ್ಬಂಧಿತ ಅಧಿಕಾರ ಕೊಟ್ಟು ವಿರೋಧ ಪಕ್ಷಗಳ ಮತ್ತು ಇತರ ವಿರೋಧಿಗಳಿಹೆ ಕಿರುಕುಳ ವಸೂಲಿ ಧಂಧೆಗೆ ಕಾರಣವಾಗಿರುವ ಪಿ.ಎಂ.ಎಲ್.ಎ ತಿದ್ದುಪಡಿಗಳನ್ನು ರದ್ದು ಮಾಡುತ್ತದೆ ಎಂದೂ ಪ್ರಚಾರ ಮಾಡುತ್ತಿದೆ. ಏಕರೂಪ ನಾಗರಿಕ ಸಂಹಿತೆ(ಯು.ಸಿ.ಸಿ) ಯನ್ನು ಸಹ ವಿರೋಧಿಸಿದೆ. ಕಲಮು 370ನ್ನು ಮರುಸ್ಥಾಪಿಸುವುದಕ್ಕೆ ಹೋರಾಡುವುದಾಗಿ ಸಹ ಹೇಳಿದೆ. ಚುನಾವಣಾ ಬಾಂಡುಗಳ ವಿವರಗಳಿಂದ ಗೊತ್ತಾಗಿರುವ ಮತ್ತು ಇತರ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ವನ್ನು ಸಹ ಬಿರುಸಿನಿಂದ ಬಯಲಿಗೆಳೆಯುತ್ತಿದೆ. ಚುನಾವಣಾ ಬಾಂಡುಗಳನ್ನು ತಿರಸ್ಕರಿಸಿದ ಮತ್ತು ಅದಕ್ಕೆ ಕಾನೂನಾತ್ಮಕವಾಗಿ ಸಫಲವಾಗಿ ಸವಾಲು ಹಾಕಿದ ಏಕಮಾತ್ರ ಪಕ್ಷವೆಂದು ಸಾರುತ್ತಿದೆ.

ಕೇರಳ ಇನ್ನೊಂದು ಟ್ರೆಂಡ್ ಮುರಿಯುವುದೇ?

UDF ಸಹ ಚುನಾವಣಾ ಪ್ರಚಾರದಲ್ಲಿ 10 ವರ್ಷಗಳ ಮೋದಿ ದುರಾಡಳಿತದ, ಕೆಲವು ಆರ್ಥಿಕ ನೀತಿಗಳ ಟೀಕೆ ಮಾಡುತ್ತವೆ. ಜನರ ಸಮಸ್ಯೆಗಳಾದ ಬೆಲೆಏರಿಕೆ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ವೈಫಲ್ಯ; ಚುನಾವಣಾ ಬಾಂಡ್ ಭ್ರಷ್ಟಾಚಾರ, ಬಿಜೆಪಿಯೇತರ ರಾಜ್ಯ ಸರಕಾರಗಳು ಮತ್ತು ನಾಯಕರ ವಿರುದ್ಧ ಅಪ್ರಜಾಸತ್ತಾತ್ಮಕ ಕ್ರಮಗಳ ಟೀಕೆ ಮಾಡುತ್ತಿದೆ.  ಆದರೆ LDF ರಾಜ್ಯ ಸರಕಾರದ ಆರ್ಥಿಕ ಅಶಿಸ್ತು, ದುರಾಡಳಿತ, ಭ್ರಷ್ಟಾಚಾರದ ಆಪಾದನೆಗಳ ಮೇಲೂ ಅಷ್ಟೇ ಅಥವಾ ಇನ್ನೂ ಹೆಚ್ಚು ಬಿರುಸಾಗಿ ಒತ್ತು ಕೊಡುತ್ತಿದೆ. ಸಿಎಎ, ಯುಸಿಸಿ, ಕಲಮು 370 ಗಳ ಬಗ್ಗೆ ಪ್ರಚಾರದಲ್ಲಿ UDF ಮೌನವಾಗಿದೆ.

NDA ಎರಡೂ ರಂಗಗಳ ವಿರುದ್ಧ ಅಥವಾ ಇಡಿಯಾಗಿ ಇಂಡಿಯಾ ಕೂಟದ ವಿರುದ್ಧ ಪ್ರಚಾರದಲ್ಲಿ ಪ್ರಮುಖವಾಗಿ ಹಿಂದೂ-ವಿರೋಧಿ ಮುಸ್ಲಿಂ ತುಷ್ಟೀಕರಣದ ಆಪಾದನೆಗಳನ್ನು ಮಾಡುವುದಕ್ಕೆ ಒತ್ತು ಕೊಟ್ಟಿದೆ. ಕೇರಳ ಲವ್-ಜಿಹಾದ್ ನ, ಇಸ್ಲಾಮಿಕ್ ಮೂಲಭೂತವಾದದ ಕೇಂದ್ರ ಇತ್ಯಾದಿಯಾಗಿ ಪ್ರಚಾರ ಮಾಡುತ್ತಿದೆ. ಇದಕ್ಕಾಗಿ ‘ಕೇರಳ ಸ್ಟೋರಿ’ ಫಿಲಂ ನ್ನು ಉಚಿತ ಸಾರ್ವಜನಿಕ ಪ್ರದರ್ಶನ ಮಾಡಿತು. ಅದನ್ನು ದೂರದರ್ಶನದಲ್ಲೂ ಪ್ರಸಾರ ಮಾಡಿಸಿತು. ಕಳೆದ ಕೆಲವು ವರ್ಷಗಳಿಂದ ಕೆಲವು ಕ್ರೈಸ್ತ ಪಾದರಿಗಳನ್ನು ವಿಶ್ವಾಸಕ್ಕೆ ಪಡೆದು ಅವರ ನೆರವಿನಿಂದ ಕ್ರೈಸ್ತರ ನಡುವೆ ಮುಸ್ಲಿಂ ದ್ವೇಷ ಹರಡುವ ಮೂಲಕ ಬಿಜೆಪಿಗೆ ಗೆದ್ದುಕೊಳ್ಳುವ ಪ್ರಯತ್ನ ನಡೆಸಿತು. ಕೆಲವು ಕ್ರೈಸ್ತ ಪಾದರಿಗಳು ಕ್ರೈಸ್ತರು ‘ಲವ್-ಜಿಹಾದ್’ ಗೆ ಬಲಿ ಬೀಳದಂತೆ ಎಚ್ಚರ ವಹಿಸುವ ಧಾರ್ಮಿಕ ನಿರ್ದೇಶನ ಸಹ ಕೊಟ್ಟರು. ಕೆಲವು ಕ್ರೈಸ್ತ ಧಾರ್ಮಿಕ ಸಂಸ್ಥೆಗಳಲ್ಲಿ ‘ಕೇರಳ ಸ್ಟೋರಿ’ ಚಿತ್ರ ಪ್ರದರ್ಶನವೂ ನಡೆಯಿತು. ಆದರೆ ಮಣಿಪುರದಲ್ಲಿ ಕ್ರೈಸ್ತ ಬುಡಕಟ್ಟುಗಳ ಮೇಲೆ ದೌರ್ಜನ್ಯಗಳು ಮತ್ತು ದೇಶದ ಇತರೆಡೆಯಲ್ಲಿ ಕ್ರೈಸ್ತರು ಮತ್ತು ಚರ್ಚುಗಳ ಮೇಲೆ ದಾಳಿಯ ಹಿನ್ನೆಲೆಯಲ್ಲಿ ಇಂತಹ ಪ್ರಯತ್ನಗಳಿಗೆ ಪ್ರತಿರೋಧ ಮತ್ತು ತಡೆಗಳು ಬಂದಿವೆ. ಇತ್ತೀಚೆಗೆ  ಕೇರಳ ಕಾಂಗ್ರೆಸ್ ನ ಒಂದು ಹೊಸ ಬಣ ಸೃಷ್ಟಿಸಿ ತನ್ನ ರಂಗಕ್ಕೆ ಸೇರಿಸಿಕೊಳ್ಳುವುದರಲ್ಲೂ ಸಫಲವಾಗಿದೆ. ಇಂಡಿಯಾ ಕೂಟ ಒಬ್ಬ ನಾಯಕನಿಲ್ಲದ ಒಡೆದ ಮನೆ, ಹಿಂದೂ-ವಿರೋಧಿ, ಮೋದಿ ಅಪ್ರತಿಮ ನಾಯಕ, ಜಿಡಿಪಿ ಹೆಚ್ಚಳ, ಕಲ್ಯಾಣ ಯೋಜನೆಗಳು, ವಿಶ್ವದಲ್ಲಿ ಪ್ರತಿಷ್ಟೆ, ಮೋದಿ ಸರಕಾರ ಸಾಧನೆಗಳು, ವಿಕಸಿತ ಭಾರತದ ಕನಸುಗಳು – ಇವು NDA ಪ್ರಚಾರದ ಪ್ರಮುಖ ಅಂಶಗಳು. ಇದಲ್ಲದೆ LDF ರಾಜ್ಯ ಸರಕಾರದ ವಿರುದ್ಧ UDF ಮಾಡುವ ಆರ್ಥಿಕ ಅಶಿಸ್ತು, ದುರಾಡಳಿತ, ಭ್ರಷ್ಟಾಚಾರದ ಆಪಾದನೆಗಳ ಪ್ರಚಾರ ಸಹ ಮಾಡುತ್ತಿದೆ. ಸಿಎಎ, ಯುಸಿಸಿ, ಕಲಮು 370 ರದ್ದತಿಗಳ ಸಮರ್ಥನೆಯಲ್ಲೂ ತೊಡಗಿದೆ.

ಫಲಿತಾಂಶದ ಮೇಲೆ ಪರಸ್ಪರ ಬಿರುಸಿನ ಪ್ರಚಾರದ ಒಟ್ಟು ಪರಿಣಾಮವೇನು?

ಲೋಕಸಭೆಯಲ್ಲಿ ಕೇರಳದ ಮತದಾರರ ಆಯ್ಕೆಯ ದೀರ್ಘ ಕಾಲೀನ ಟ್ರೆಂಡ್ UDF ಪರವಾಗಿದೆ. ಇದು ಪ್ರಮುಖವಾಗಿ ಕೆಲವು ರಾಜಕೀಯ ಅಂಶಗಳ ಮೇಲೆ ಅವಲಂಬಿತವಾಗಿದೆ

* ಕೇರಳದ ಸುಮಾರು ಶೇ.45 ಇರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಒಂದು ವಿಭಾಗ UDF ನ ಭಾಗವಾಗಿರುವ ಮುಸ್ಲಿಂ ಲೀಗ್ ಮತ್ತು ಕೇರಳ ಕಾಂಗ್ರೆಸ್ ನ್ನು ಸ್ಥಿರವಾಗಿ ಬೆಂಬಲಿಸುತ್ತದೆ.

* ಬಿಜೆಪಿಯಂತಹ ಹಿಂದೂ ಕೋಮುವಾದಿ ಪಕ್ಷವನ್ನು ಕೇಂದ್ರ ಸರಕಾರ ರಚಿಸದಂತೆ ಮಾಡುವುದು ಕೇರಳದ ಎಲ್ಲ ಅಲ್ಪಸಂಖ್ಯಾತರ ಮತ್ತು ಬಹುಪಾಲು ಸೆಕ್ಯುಲರ್ ಹಿಂದೂಗಳ ಆದ್ಯತೆ

* ಕೇಂದ್ರದಲ್ಲಿ ಸೆಕ್ಯುಲರ್ ಸರಕಾರ ರಚಿಸುವುದಕ್ಕೆ ಪ್ರಬಲ ಕಾಂಗ್ರೆಸ್ ಅಗತ್ಯವಿದೆ. ರಾಷ್ಟ್ರಮಟ್ಟದಲ್ಲಿ (ಪ.ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಅದು ದುರ್ಬಲವಾಗಿರುವುದರಿಂದ) ಸೆಕ್ಯುಲರ್ ಸರಕಾರ ರಚಿಸುವುದರಲ್ಲಿ ಎಡಪಕ್ಷಗಳು ಹೆಚ್ಚಿನ ಪ್ರಭಾವ ಬೀರಲಾಗುವುದಿಲ್ಲವೆಂದು LDF ನ ಶಾಶ್ವತ, ಸ್ಥಿರ ಬೆಂಬಲಿಗರನ್ನು ಬಿಟ್ಟರೆ ಉಳಿದವರ ಸ್ಥೂಲ ಅಭಿಮತ

ಈ UDF ಪರವಾಗಿರುವ ಅಂಶಗಳನ್ನು ಬದಲಾಯಿಸಲು LDF ಮತ್ತು NDA ಎರಡೂ ಪ್ರಯತ್ನಿಸುತ್ತಿವೆ.

LDF ಸಿಎಎ, ಯುಸಿಸಿ, ಕಲಮು 370 ಗಳ ಮತ್ತು ಮುಸ್ಲಿಮರು ಕ್ರಿಶ್ಚಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಪ್ರಚಾರದಲ್ಲೂ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ನ ಮೌನ ಮತ್ತು ಒಟ್ಟಾರೆ ಮೃದು-ಹಿಂದುತ್ವವನ್ನು ಕಟುವಾಗಿ ಟೀಕಿಸುತ್ತಿದೆ. ಇದಲ್ಲದೆ ದೇಶದಾದ್ಯಂತ ಮತ್ತು ಕೇರಳದಲ್ಲಿಯೂ ಇಬ್ಬರು ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಮಕ್ಕಳು ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣೆಗೆ ಮೊದಲೂ ನಂತರವೂ (ಉದಾ: ಹಿಮಾಚಲ ಪ್ರದೇಶ) ಬೆದರಿಕೆ ಆಮಿಷಗಳಿಗೆ ಬಲಿಬಿದ್ದು ಬಿಜೆಪಿಗೆ ಪಕ್ಷಾಂತರ ಮಾಡುತ್ತಿರುವುದನ್ನು LDF ತನ್ನ ಪ್ರಚಾರದಲ್ಲಿ ಎತ್ತಿತೋರಿಸುತ್ತಿದೆ. ಕೇಂಧ್ರದಲ್ಲಿ ಬಿಜೆಪಿಯೇತರ ಸರಕಾರ ರಚನೆಗೆ LDF ಅಭ್ಯರ್ಥಿಗಳು ಹೆಚ್ಚು ಭದ್ರ ಬುನಾದಿಯಾಗುತ್ತಾರೆ.  ಮುಸ್ಲಿಮರು ಕ್ರಿಶ್ಚಿಯನ್ನರ ರಕ್ಷಣೆಗೆ ಹೋರಾಡುವುದಕ್ಕೆ ಮತ್ತು ಹಿಂದುತ್ವಕ್ಕೆ ದೃಢ ಪ್ರತಿರೋಧ ತೋರುವುದಕ್ಕೆ ಎಡ ಪಕ್ಷಗಳು ಹೆಚ್ಚು ಉತ್ತಮ ಆಯ್ಕೆ ಎಂದು ಪ್ರತಿಪಾದಿಸುತ್ತಿವೆ.

ಕೇರಳದ ಹಿತಾಸಕ್ತಿ ಕಾಪಾಡುವುದಕ್ಕೆ ಹೋರಾಡುವುದಕ್ಕಿಂತ ರಾಜ್ಯ ಸರಕಾರಕ್ಕೆ ವಿರೋಧ ವ್ಯಕ್ತಪಡಿಸುವುದೇ ಆದ್ಯತೆಯಾಗಿದೆ. ಕೇರಳದ ವಿರುದ್ಧ ಕೇಂದ್ರದ ಬಿಜೆಪಿ ಸರಕಾರದ ತಾರತಮ್ಯ ದಮನ ಧೋರಣೆಯ ವಿರುದ್ಧ ಕೇರಳ ಸರಕಾರ ದೆಹಲಿಯಲ್ಲಿ ಆಯೋಜಿಸಿದ ಎಲ್ಲ ಶಾಸಕರ ಮತ್ತು ಸಂಸದರ ಪ್ರತಿಭಟನಾ ಸಭೆಯಲ್ಲಿ UDF ಭಾಗವಹಿಸಿಲ್ಲ, ಪಾರ್ಲಿಮೆಂಟಿನಲ್ಲೂ ಮೌನವಾಗಿದೆ. ಅದರ ಬಗ್ಗೆ ಪ್ರಾಮಾಣಿಕವಾಗಿಲ್ಲ ಎಂದು ಗಂಭೀರ ಆರೋಪ ಮಾಡಿದೆ. ಹಲವು ವಾರಗಳ ಮೊದಲೇ ಘೋಷಿಸಿ ಫೆ.8ರಂದು LDF ಸರಕಾರ ಸಂಘಟಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಅದರ ಒಂದು ದಿನ ಮೊದಲು ಕರ್ನಾಟಕ ಕಾಂಗ್ರೆಸ್ ಶಾಸಕರು, ಸಂಸದರು ಅದೇ ಪ್ರತಿಭಟನೆಯ ಕಾಪಿ ಹೊಡೆದದ್ದು ಗೋಸುಂಬೆತನವಲ್ಲವೇ ಎಂದು LDF ಪ್ರಶ್ನಿಸಿದೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ UDF ಗೆ ಲೋಕಸಭೆಯಲ್ಲಿ ಬೆಂಬಲಿಸುತ್ತಿದ್ದ ಧಾರ್ಮಿಕ ಅಲ್ಪಸಂಖ್ಯಾತರ ಒಂದು ವಿಭಾಗ ಮತ್ತು ಸೆಕ್ಯುಲರ್ ಹಿಂದೂಗಳ ಒಂದು ವಿಭಾಗ LDF ನತ್ತ ವಾಲುವ ಸಾಧ್ಯತೆಯಿದೆ.

ಈ ಅಪಾಯ ಮನಗಂಡ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ, ಬಿಜೆಪಿ ಕೇಂದ್ರ ಸರಕಾರದ ಜತೆ LDF ಗುಪ್ತ ಹೊಂದಾಣಿಕೆ ಇಟ್ಟುಕೊಂಡಿದೆ. ಹಾಗಾಗಿಯೇ ಇಡಿ-ಸಿಬಿಐ ಪ್ರಕರಣಗಳಿದ್ದರೂ, ದೆಹಲಿ-ಜಾರ್ಖಂಡ್ ನಂತೆ  ಕೇರಳ ಮುಖ್ಯಮಂತ್ರಿಯನ್ನು ಬಂಧಿಸಿಲ್ಲ ಎಂಬ ಹೇಳಿಕೆ ನೀಡಿ ತೀವ್ರ ವಿವಾದವೆಬ್ಬಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ಸೇರಿದಂತೆ ಸಿಪಿಐ(ಎಂ) ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.  ಉತ್ತರ ಪ್ರದೇಶದಂತಹ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸ್ಪರ್ಧೆ ನೀಡಿ ತಮ್ಮ ಬಿಜೆಪಿ-ವಿರೋಧಿ ನಾಯಕತ್ವವನ್ನು ದೃಢವಾಗಿ ಪ್ರದರ್ಶಿಸುವ ತಾಕತ್ತು ಇಲ್ಲದೆ ಕೇರಳಕ್ಕೆ ವಲಸೆ ಬಂದಿದ್ದಾರೆ ಎಂದು ಮೂದಲಿಸಿದ್ದಾರೆ. LDF ಮತ್ತು UDF ನಡುವಿನ ಈ ಘರ್ಷಣೆಯನ್ನು ಬಳಸಿ ಇಂಡಿಯಾ ಕೂಟ ಒಡೆದ ಮನೆ, ಕೇರಳದಲ್ಲಿ ಅವರ ಘರ್ಷಣೆ, ಕೇಂದ್ರದಲ್ಲಿ ಅವರ ಒಕ್ಕಟ್ಟು ಎರಡೂ ಬರಿಯ ಡ್ರಾಮಾ ಎಂದು ಮೂದಲಿಸಲು NDA ಬಳಸಿದೆ.

ಇವೆಲ್ಲ ಬಿರುಸಿನ ಪ್ರಚಾರದ ಪರಿಣಾಮ ಪ್ರತಿ ರಂಗದ ಮತಗಳಿಕೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದರ ಮೇಲೆ ಸೀಟುಗಳ ಪ್ರಮಾಣ ನಿಗದಿಯಾಗುತ್ತದೆ. ಇತ್ತೀಚಿನ ಸೀಟು ಮತ್ತು % ಮತಗಳಿಕೆ ಈ ಕೆಳಗಿನಂತಿದೆ.

ಲೋಕಸಭಾ ಚನಾವಣೆಯಲ್ಲಿ ಮೇಲೆ ಹೇಳಿದ UDF ಪರ ಅಂಶಗಳ ಜತೆ 2019 ರಲ್ಲಿ ಶಬರಿಮಲೈ ವಿವಾದವನ್ನು LDF ವಿರುದ್ಧ ತಿರುಗಿಸಿದ್ದು, UDF ಜಯಭೇರಿಗೆ ಕಾರಣವಾಗಿತ್ತು. ಎರಡು ಸತತ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ LDF ತನ್ನ ಶಾಶ್ವತ ಸ್ಥಿರ ಮತದಾರರನ್ನು ಹೆಚ್ಚಿಸಿಕೊಂಡಿದೆ. ಉತ್ತಮ ಆಡಳಿತ ಮತ್ತು ರಾಜ್ಯದ ವಿರುದ್ಧ ಕೇಂದ್ರದ ತಾರತಮ್ಯದ ವಿರುದ್ಧ ದೃಢ ಹೋರಾಟಗಳಿಂದಾಗಿ, ಹೊಯ್ದಾಡುವ ಮತದಾರರ ವಿಭಾಗದ ಸಾಕಷ್ಟು ಮತ ಗಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ನ ಮೃದು ಹಿಂದುತ್ವದ ಮತ್ತು ಅನೈಕ್ಯತೆ ಅಸ್ಥಿರತೆ ಗಳ ಕಾರಣದಿಂದ  UDF ಅಲ್ಪಸಂಖ್ಯಾತರ ಮತ್ತು ಇತರ ಮತವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೋದಿ ಸರಕಾರದ 10 ವರ್ಷಗಳ ಕೇಂದ್ರದ ಆಡಳಿತದ ವೈಫಲ್ಯ ಮತ್ತು ಕೇರಳಕ್ಕೆ ತಾರತಮ್ಯದ ನೀತಿಯಿಂದಾಗಿ NDA 2019ರ ಮತಗಳಿಕೆಗಿಂತ ಕಡಿಮೆ ಯಾಗುವ ಸಾಧ್ಯತೆ ಹೆಚ್ಚಿದೆ. ಹೆಚ್ಚು ಕಡಿಮೆ 2014ರ ಪ್ರಮಾಣ ಆದರೆ LDF ಮತ್ತು UDF ಪಾತ್ರ ತಿರುವು ಮುರುವು ಆಗುವ ಸಾಧ್ಯತೆ ಹೆಚ್ಚು. ಅಂದರೆ LDF 12 ಸೀಟು (43% ಮತ) UDF 8 ಸೀಟು (40% ಮತ) NDA 0 ಸೀಟು (10%) ಸಂಭಾವ್ಯ ಫಲಿತಾಂಶವಾಗಿರುತ್ತದೆ.

 

ಇದನ್ನು ನೋಡಿ : ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!

Donate Janashakthi Media

Leave a Reply

Your email address will not be published. Required fields are marked *