ಬಿಜೆಪಿಗೆ ಲಾಡ್ಕೀ-ಲಾಡ್ಲೀ ಯೋಜನೆಗಳು ಓಕೆಯಾದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಕೆ ಬೇಡ ?

ಯುಪಿಎ-1 ಸರಕಾರದ ಮನರೇಗ ಯೋಜನೆಯನ್ನು ಬಿಜೆಪಿ ಮತ್ತು ಸ್ವತಃ ಪ್ರಧಾನ ಮಂತ್ರಿಗಳೇ ವಿರೋಧಿಸಿದರು, ಅದನ್ನು ನಿರ್ನಾಮಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದೇ ಬಿಜೆಪಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಚುನಾವಣೆಗಳಲ್ಲಿ ಮಹಿಳೆಯರ ಮತ ಪಡೆಯಲು ಲಾಡ್ಲೀ ಬಹನಾ- ಲಾಡ್ಕೀ ಬಹೀಣ್ ಯೋಜನೆಯಂತಹ ನಗದು ವರ್ಗಾವಣೆ ಯೋಜನೆಗಳನ್ನು ಪ್ರಕಟಿಸಿದವು. ಏಕೆ? ಏಕೆಂದರೆ ನಗದು ವರ್ಗಾವಣೆ ಯೋಜನೆಗಳು ಉಪಕಾರ ರೂಪದಲ್ಲಿದ್ದು, ಪ್ರತಿಯಾಗಿ ಅದಕ್ಕೆ ಕೃತಜ್ಞತೆ ಬಯಸುತ್ತವೆ. ಮತ್ತು ಸರಕಾರ ಅವನ್ನು ಯಾವಾಗ ಬೇಕಾದರೂ ನಿಲ್ಲಿಸಬಹುದು, ಆದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ‘ಮನರೇಗ’ ಹಾಗಲ್ಲ, ಅದು ಜನರಿಗೆ ಒಂದು ಹಕ್ಕು ನೀಡುವ ಸಬಲೀಕರಣ ಯೋಜನೆ. ಫ್ಯಾಸಿಸ್ಟ್ ತೆರನ ಮನೋಭಾವದವರಿಗೆ ಇದು ರುಚಿಸುವುದಿಲ್ಲ, ಏಕೆಂದರೆ ಅವರು ಸದಾ ಜನರನ್ನು ನಿಶ್ಶಕ್ತಗೊಳಿಸಲು ಪ್ರಯತ್ನಿಸುವವರು. ಬಿಜೆಪಿ

-ಪ್ರೊ. ಫಭಾತ್‍ ಪಟ್ನಾಯಕ್
-ಅನು : ಕೆ.ಎಂ.ನಾಗರಾಜ್

ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳ ಗುರಿಯೂ ಜನರ ನಿಶ್ಶಕ್ತೀಕರಣವೇ ಆಗಿರುತ್ತದೆ. ಮೋದಿ ಸರ್ಕಾರವೂ ಇದಕ್ಕೆ ಹೊರತಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗ-MGNREG) ಯೋಜನೆಯು ಪ್ರತಿ ಗ್ರಾಮೀಣ ಕುಟುಂಬದ ಒಬ್ಬ ಸದಸ್ಯನಿಗೆ ವರ್ಷಕ್ಕೆ ಗರಿಷ್ಠ 100 ದಿನಗಳ ಉದ್ಯೋಗ ನೀಡುವ ಭರವಸೆಯಿಂದ ಕೂಡಿದ ಒಂದು ಬೇಡಿಕೆ-ಚಾಲಿತ ಯೋಜನೆ. ಒಂದು ಸೀಮಿತ ಅರ್ಥದಲ್ಲಿ ಅದು ಜನರಿಗೆ ಉದ್ಯೋಗದ ಹಕ್ಕನ್ನು ನೀಡಿದೆ. ಎಲ್ಲರಿಗೂ ಅಲ್ಲದಿದ್ದರೂ ಮತ್ತು ಒಬ್ಬ ವ್ಯಕ್ತಿಯು ಬಯಸಿದಷ್ಟು ದಿನಗಳವರೆಗೆ ಅಲ್ಲದಿದ್ದರೂ, ಅದು ಒಂದು ಹಕ್ಕು ಎಂಬುದಂತೂ ಹೌದು. ಬಿಜೆಪಿ

ಈ ಹಕ್ಕು ನವ ಉದಾರವಾದದ ತರ್ಕಕ್ಕೆ ವಿರುದ್ಧವಾಗಿದ್ದರೂ ಸಹ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಎಡ ಪಕ್ಷಗಳ ಬೆಂಬಲವನ್ನು ಅವಲಂಬಿಸಿದ್ದ ಅವಧಿಯಲ್ಲಿ ಎಡ ಪಕ್ಷಗಳ ಒತ್ತಡದಿಂದಾಗಿ ಜಾರಿಗೆ ಬಂತು. ಆದಾಗ್ಯೂ, ಅಂದಿನಿಂದಲೂ ಒಂದಲ್ಲ ಒಂದು ನೆಪದಲ್ಲಿ ಈ ಯೋಜನೆಯನ್ನು
ಬುಡಮೇಲು ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಪ್ರಸ್ತುತ ಬಿಜೆಪಿಯ ಫ್ಯಾಸಿಸ್ಟ್ ತೆರನ ಸರ್ಕಾರದ ಅಡಿಯಲ್ಲಿ ಈ ಪ್ರಯತ್ನವು ಒಂದು ಪರಾಕಾಷ್ಠೆಯನ್ನು ತಲುಪಿದೆ. ಈ ಯೋಜನೆಗೆ ವಿರೋಧವನ್ನು ಸ್ವತಃ ಪ್ರಧಾನ ಮಂತ್ರಿಯೇ ವ್ಯಕ್ತಪಡಿಸಿದ್ದಾರೆ. ಬಿಜೆಪಿ

ಬಿಜೆಪಿಯೂ ಇತರ ರಾಜಕೀಯ ಪಕ್ಷಗಳಂತೆಯೇ ಮಹಿಳೆಯರ ಮತಗಳನ್ನು ಪಡೆಯಲು ಅವರಿಗೆ ನಗದು ವರ್ಗಾವಣೆ ಮಾಡಲು ಸಿದ್ಧವಾಗಿಯೇ ಇದೆ. ವಾಸ್ತವವಾಗಿ ಈ ವರ್ಗಾವಣೆಗಳು ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟದ ಗೆಲುವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಭಾವಿಸಲಾಗಿದೆ. ಆದಾಗ್ಯೂ, ಅದು ಉದ್ಯೋಗ ಖಾತ್ರಿ ಯೋಜನೆಯನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಈ ಎರಡು ಯೋಜನೆಗಳ ನಡುವಿನ ಮೂಲಭೂತ ವ್ಯತ್ಯಾಸವೆಂದರೆ, ನಗದು ವರ್ಗಾವಣೆಯು ಒಂದು ರೀತಿಯ ದಾನವಾಗಿದ್ದು, ಅದನ್ನು ಸ್ವೀಕರಿಸಿದವರು ಕೃತಜ್ಞರಾಗಿರಬೇಕು ಎಂದು ಭಾವಿಸಲಾಗುತ್ತದೆ. ಆದರೆ ಉದ್ಯೋಗ ಖಾತ್ರಿ ಯೋಜನೆಯು ಅದರ ಫಲಾನುಭವಿಗೆ ಒಂದು ರೀತಿಯ ಉದ್ಯೋಗದ ಹಕ್ಕನ್ನು ನೀಡುತ್ತದೆ. ಬಿಜೆಪಿ

ಇದನ್ನೂ ಓದಿ: ಜನವರಿ 2: ಸಫ್ದರ್ ಹಶ್ಮಿ ಹುತಾತ್ಮರಾದ ದಿನ

ಯೋಜನೆಯ ಫಲಾನುಭವಿಯು ತಾನು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಕೂಲಿ ಪಡೆಯುತ್ತಾನೆ. ಇಲ್ಲಿ ಉಪಕಾರ-ಕೃತಜ್ಞತೆಯ ಪ್ರಶ್ನೆಯೇ ಇಲ್ಲ. ಫಲಾನುಭವಿಗೆ ಲಭಿಸುವ ಉದ್ಯೋಗದ ಈ ಹಕ್ಕು, ಅವನ ಪೌರತ್ವಕ್ಕೆ ಒಂದು ಘನತೆಯನ್ನು ಒದಗಿಸುತ್ತದೆ. ಈ ಅಂಶವು ಬಿಜೆಪಿಯನ್ನು ಕೆರಳಿಸುತ್ತದೆ. ಉದ್ಯೋಗ ಖಾತ್ರಿ ಯೋಜನೆಯು ಸಬಲೀಕರಣದ ಒಂದು ರೂಪವಾಗಿದೆ. ನಗದು ವರ್ಗಾವಣೆಯ ಕ್ರಮವು ಫಲಾನುಭವಿಗೆ ಉಪಯುಕ್ತವಾಗಿದ್ದರೂ, ಸರ್ಕಾರ ಬಯಸಿದಲ್ಲಿ ಅದನ್ನು ಯಾವುದೇ ಕ್ಷಣದಲ್ಲಿ ನಿಲ್ಲಿಸಬಹುದು. ಫ್ಯಾಸಿಸ್ಟ್ ತೆರನ ಸಂಘಟನೆಗಳು ಜನರನ್ನು ನಿಶ್ಶಕ್ತಗೊಳಿಸಲು ಸದಾ ಪ್ರಯತ್ನಿಸುತ್ತವೆ. ಹಾಗಾಗಿಯೇ ಉದ್ಯೋಗ ಖಾತ್ರಿ ಯೋಜನೆಯು ದಾಳಿಗೆ ಗುರಿಯಾಗುತ್ತದೆ. ಬಿಜೆಪಿ

ಐದು ವಿಧಗಳಲ್ಲಿ ದಾಳಿ

ಈ ದಾಳಿಯನ್ನು ಐದು ನಿಶ್ಚಿತ ಮಾರ್ಗಗಳಲ್ಲಿ ನಡೆಸಲಾಗುತ್ತಿದೆ. ಮೊದಲನೆಯದು, ನ್ಯಾಷನಲ್ ಮೊಬೈಲ್ ಮಾನಿಟರಿಂಗ್(ರಾಷ್ಟ್ರಿಯ ಸಂಚಾರಿ ಉಸ್ತುವಾರಿ) ವ್ಯವಸ್ಥೆಯ ಮೂಲಕ ಕೆಲಸಗಾರರು ತಾವು ಮಾಡುತ್ತಿರುವ ಕೆಲಸದ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು ಮತ್ತು ತಾವು ಕೆಲಸದ ಸ್ಥಳದಲ್ಲಿ ಹಾಜರಿರುವುದನ್ನು ಮತ್ತು ತಮಗೆ ವಹಿಸಿದ ಕೆಲಸವನ್ನು ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸಬೇಕು. ಜೊತೆಗೆ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ತಮ್ಮ ಬ್ಯಾಂಕ್ ಖಾತೆಗಳನ್ನು ತಮ್ಮ ಆಧಾರ್ ಕಾರ್ಡ್‌ಗಳಿಗೆ ಜೋಡಣೆ ಮಾಡುವುದು ಅಗತ್ಯವಾಗುತ್ತದೆ. ಈ ಅವಶ್ಯಕತೆಗಳನ್ನು ಪೂರೈಸುವುದು ಕಾರ್ಮಿಕರಿಗೆ ತುಂಬಾ ಕಷ್ಟಕರವಾಗಿದೆ. ಅದಕ್ಕೆ ಒಂದು ಪ್ರಮುಖ ಕಾರಣವೆಂದರೆ ಗ್ರಾಮೀಣ ಭಾರತದ ಹೆಚ್ಚಿನ ಭಾಗಗಳಲ್ಲಿ ಅಂತರ್ಜಾಲ (ಇಂಟರ್ನೆಟ್) ಲಭ್ಯವಿಲ್ಲದಿರುವುದು.

ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳು ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಪಡೆಯಲು ಅನರ್ಹರಾಗುತ್ತಾರೆ. ನ್ಯೂಸ್‌ಕ್ಲಿಕ್‌ ಪತ್ರಿಕೆಯ ವರದಿಯ ಪ್ರಕಾರ, ಆಧಾರ್ ಜೋಡಣೆಯಾಗದ ಕಾರಣದಿಂದಾಗಿ 6.7 ಕೋಟಿ ಕಾರ್ಮಿಕರು ಉದ್ಯೋಗ ಖಾತ್ರಿ
ಯೋಜನೆಯ ಅಡಿಯಲ್ಲಿ ಕೆಲಸ ಪಡೆಯಲು ಅನರ್ಹರಾಗಿದ್ದಾರೆ ಎಂಬುದನ್ನು ಒಂದು ಎನ್‌ಜಿಒ (LibTech India) ಅಂದಾಜು ಮಾಡಿದೆ.

ಎರಡನೆಯ ಮಾರ್ಗವೆಂದರೆ, ಉದ್ಯೋಗ ಖಾತ್ರಿ ಯೋಜನೆಗಾಗಿ ರಾಜ್ಯಗಳಿಗೆ, ವಿಶೇಷವಾಗಿ ವಿರೋಧ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ, ಯೋಜನೆಯ ಅನುಷ್ಠಾನದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಹಣ ಬಿಡುಗಡೆ ಮಾಡುತ್ತಿಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಕಿರುಕುಳ ಅನುಭವಿಸುವ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಸಾಮಾಜಿಕ ಲೆಕ್ಕಪರಿಶೋಧನೆಯ ಒಂದು ವ್ಯವಸ್ಥೆಯೇ ಇದೆ. ರಾಜ್ಯಗಳು ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಡೆಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಆರೋಪಿಸುತ್ತದೆ. ಆದರೆ ಈ ಸಾಮಾಜಿಕ ಲೆಕ್ಕ ಪರಿಶೋಧನಾ ಘಟಕಗಳಿಗೆ ತಗಲುವ ವೆಚ್ಚವನ್ನು/ಸಂಭಾವನೆಯನ್ನು ಪಾವತಿಸುವುದು ಕೇಂದ್ರ ಸರ್ಕಾರದ
ಜವಾಬ್ದಾರಿಯಾಗಿದ್ದರೂ ಸಹ, ಬಹಳ ದಿನಗಳಿಂದಲೂ ಅದಕ್ಕಾಗಿ ಬೇಕಾಗುವ ಹಣವನ್ನೇ ಬಿಡುಗಡೆ ಮಾಡಿಲ್ಲ. ಬಿಜೆಪಿ

ಅದಲ್ಲದೆ, ರಾಜ್ಯ ಸರ್ಕಾರವು ಒಂದು ವೇಳೆ ತಪ್ಪು ಮಾಡಿದೆ ಎಂದು ಭಾವಿಸಿದರೂ ಸಹ, ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಹಣ ಒದಗಿಸಬೇಕಾದ ಒಂದು ಯೋಜನೆಗೆ ಅದೇ ಕೇಂದ್ರ ಸರ್ಕಾರವೇ ಹಣ ನಿರಾಕರಿಸುವ ಕ್ರಮವು, ರಾಜ್ಯ ಸರ್ಕಾರ ಮಾಡಿದ ಪಾಪಗಳಿಗೆ ಬಡ ಜನರನ್ನು ಶಿಕ್ಷಿಸಿದಂತಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಯೋಜನೆಯನ್ನು ನಿಲ್ಲಿಸಲು ಭ್ರಷ್ಟಾಚಾರವನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಿದೆ.

ಈ ಯೋಜನೆಯನ್ನು ಸ್ಥಗಿತಗೊಳಿಸಲು ಬಳಸಿಕೊಳ್ಳುತ್ತಿರುವ ಮೂರನೇ ಮಾರ್ಗವೆಂದರೆ, ಕೂಲಿ ಕೆಲಸಮಾಡಿದವರಿಗೆ ಕೊಡಬೇಕಾದ ಕೂಲಿಯ ಹಣವನ್ನು ಬಾಕಿ ಉಳಿಸಿಕೊಳ್ಳುವುದು. ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಾರರು ಇತ್ತೀಚೆಗೆ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಒಂದು ಪ್ರತಿಭಟನೆಯ ಸಂದರ್ಭದಲ್ಲಿ, ತಾವು ಮಾಡಿದ ಕೆಲಸಕ್ಕೆ ಮೂರು ವರ್ಷಗಳ ನಂತರ ತಮ್ಮ ವೇತನದ ಬಾಕಿಯನ್ನು ಪಾವತಿಸಲಾಗಿದೆ ಎಂದು ಅನೇಕ ಮಂದಿ ತಮ್ಮ ಅಳಲನ್ನು ತೋಡಿಕೊಂಡರು! ಈ ಉದ್ಯೋಗ ಖಾತ್ರಿ ಕಾಯ್ದೆಯ ನಿಯಮಾಳಿಗಳ ಪ್ರಕಾರ, ಯೋಜನೆಯಡಿಯಲ್ಲಿ ಒಂದು ವೇಳೆ ಕೆಲಸ ಒದಗಿಸದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ನಿಯಮದಂತೆಯೇ ಕೆಲಸ ಮಾಡಿದವರಿಗೆ ಕೊಡಬೇಕಾದ ಕೂಲಿಯನ್ನು ಪಾವತಿಸುವಲ್ಲಿ ವಿಳಂಬವಾದರೆ ಅವರಿಗೆ ಪರಿಹಾರ ನೀಡಬೇಕಾಗುತ್ತದೆ.

ಆದರೆ, ನಿರುದ್ಯೋಗ ಭತ್ಯೆಯನ್ನೂ ನೀಡದ ಹಾಗೂ ಕೂಲಿ ಪಾವತಿ ವಿಳಂಬದ ಪರಿಹಾರವನ್ನೂ ಕೊಡದ ಹಲವಾರು ಪ್ರಕರಣಗಳಿವೆ. ಇದು ಕಾನೂನಿನ ಘೋರ ಉಲ್ಲಂಘನೆಯಾಗುತ್ತದೆ. ಆದಾಗ್ಯೂ, ಇಂಥಹ ಉಲ್ಲಂಘನೆಗಳಿಗಾಗಿ ಯಾರಿಗೂ ಈ ವರೆಗೂ ಶಿಕ್ಷೆಯಾಗಿಲ್ಲ. ಹಾಗಾಗಿ, ಕೂಲಿ ಪಾವತಿಯ ವಿಳಂಬ ಮತ್ತು ಪರಿಹಾರದ ನಿರಾಕರಣೆಯ ಪ್ರಕರಣಗಳು ಯೋಜನೆಯಡಿಯಲ್ಲಿ ಕೆಲಸ ಕೇಳುವವರನ್ನು ನಿರುತ್ಸಾಹಗೊಳಿಸುತ್ತವೆ ಮಾತ್ರವಲ್ಲ, ಯೋಜನೆಯನ್ನೂ ದುರ್ಬಲಗೊಳಿಸುತ್ತವೆ.

ಅಸಮರ್ಪಕ ಬಜೆಟ್ ಹಂಚಿಕೆ

ಯೋಜನೆಯನ್ನು ಹಾಳುಗೆಡವುವ ನಾಲ್ಕನೇ ಮಾರ್ಗವೆಂದರೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಅದಕ್ಕಾಗಿ ಮಾಡುತ್ತಿರುವ ಅಸಮರ್ಪಕ ಹಂಚಿಕೆಗಳೇ. ಪ್ರಾಸಂಗಿಕವಾಗಿ ಹೇಳುವುದಾದರೆ ಕೂಲಿ ಪಾವತಿಯು ತಡವಾಗುತ್ತಿರುವುದಕ್ಕೆ ಅಸಮರ್ಪಕ ಹಂಚಿಕೆಯೇ ಮುಖ್ಯವಾದ ಕಾರಣವಾಗಿದೆ. ಈ ಪ್ರವೃತ್ತಿಯು ಯುಪಿಎ-2 ಸರಕಾರದ ಅವಧಿಯಲ್ಲೂ ಇತ್ತು. ಆಗ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರು ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ವರ್ಷ
ವರ್ಷವೂ ಕಡಿಮೆ ಅನುದಾನವನ್ನು ನೀಡುತ್ತಿದ್ದರು ಮತ್ತು ಆ ಬಗ್ಗೆ ಕೇಳಿದರೆ, ಇದೊಂದು ಬೇಡಿಕೆ-ಚಾಲಿತ ಯೋಜನೆಯಾಗಿರುವುದರಿಂದ ಅಗತ್ಯವಿದ್ದಲ್ಲಿ ಅದಕ್ಕೆ ಸಾಕಷ್ಟು ಹಣ ಒದಗಿಸಲಾಗುವುದು ಎಂದು ಹೇಳುತ್ತಿದ್ದರು. ಸಮಸ್ಯೆಯೆಂದರೆ, ಅಗತ್ಯ ಉದ್ಭವಿಸಿದಾಗ, ಹಣ ಒದಗಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಕಳೆದುಹೋಗುತ್ತದೆ. ನಂತರ ಅದು ವೇತನ ಪಾವತಿಯಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ. ಪ್ರತಿಯಾಗಿ ಇದು ಸೃಷ್ಟಿಸುವ ನಿರುತ್ಸಾಹಗೊಂಡ ಕೆಲಸಗಾರ ಪರಿಣಾಮವು ಯೋಜನೆಯಡಿಯಲ್ಲಿ ಕೆಲಸಕ್ಕೆ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಬಿಜೆಪಿ ಸರ್ಕಾರವು ಇದನ್ನು ವಿಪರೀತ ಮಟ್ಟಕ್ಕೆ ಕೊಂಡೊಯ್ದಿದೆ.

ಉದ್ಯೋಗ ಖಾತ್ರಿ ಯೋಜನೆಗಾಗಿ 2024-25ರ ಬಜೆಟ್‌ನಲ್ಲಿ 86,000 ಕೋಟಿ ರೂಗಳಷ್ಟು ಹಣವನ್ನು ಒದಗಿಸಲಾಗಿದೆ. ಅದರಲ್ಲಿ ಹಿಂದಿನ ಕೂಲಿಯ ಬಾಕಿಯನ್ನು ಕಳೆದ ನಂತರ ಈ ಮೊತ್ತವು ಸುಮಾರು 60,000 ಕೋಟಿ ರೂ ಗಳಿಗೆ ಇಳಿಯುತ್ತದೆ. ಇದು ತೀರಾ ಕಡಿಮೆ ಇರುವುದರಿಂದ ವೇತನದ ಬಾಕಿ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ, ನಿರಂತರವಾಗಿ ಮತ್ತು ಶಾಶ್ವತವಾಗಿ ಹೆಚ್ಚುತ್ತಾ ಹೋಗುವ ಕೂಲಿಯ ಬಾಕಿಯು ಅರ್ಜಿದಾರರನ್ನು ಪರಿಣಾಮಕಾರಿಯಾಗಿ ನಿರುತ್ಸಾಹಗೊಳಿಸುತ್ತದೆ ಮತ್ತು ಯೋಜನೆಯನ್ನು ದುರ್ಬಲಗೊಳಿಸುತ್ತದೆ. ಕೋವಿಡ್ ಕಾರಣದ ಮೇಲೆ ಹಠಾತ್ತಾಗಿ ಘೋಷಣೆಯಾದ ಲಾಕ್‌ಡೌನ್‌ನಿಂದಾಗಿ ಸಾವಿರ ಸಾವಿರಗಟ್ಟಲೆ ಕೆಲಸಗಾರರು ತಮ್ಮ ಹಳ್ಳಿಗಳಿಗೆ ಹಿಂತಿರುಗಿದಾಗ, ಪರಿಷ್ಕೃತ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗಾಗಿ 1,13,000 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು.

ಇದು ಅವರಿಗೆ ತಮ್ಮ ಜೀವ ಉಳಿಸಿಕೊಳ್ಳಲು ನೆರವಾಯಿತು. ನಗರಗಳಿಂದ ಗ್ರಾಮೀಣಕ್ಕೆ ಜರುಗಿದ ಈ ವಲಸೆಯನ್ನು ಕೋವಿಡ್‌ ಇಳಿಕೆಯಾದ ನಂತರವೂ ಹಿಮ್ಮೆಟ್ಟಿಸಲಾಗಲಿಲ್ಲ. ಹಾಗಾಗಿ, ಯೋಜನೆಯು ಜೀವ ಹಿಡಿದಿಟ್ಟುಕೊಂಡಿರುವ ಪ್ರಸ್ತುತ ಮಟ್ಟದಲ್ಲಿಯೂ ಸಹ, ಸುಮಾರು ಅಷ್ಟೇ ಹಣವನ್ನು ಈ ವರ್ಷವೂ
ಒದಗಿಸಬೇಕಿತ್ತು. ಬದಲಾಗಿ, ವೇತನ ಬಾಕಿಯನ್ನು ಕಳೆದ ನಂತರ ಈ ವರ್ಷದ ಹಂಚಿಕೆಯು ಕೇವಲ 60,000 ಕೋಟಿ ರೂ.ಗಳಷ್ಟಾಗುತ್ತದೆ. ಇದು ಕೂಲಿ ಪಾವತಿಯಲ್ಲಿ ವಿಳಂಬವನ್ನು ಮತ್ತು ಈ ಕಾರಣದಿಂದ ನಿರುತ್ಸಾಹದ ಪರಿಣಾಮವನ್ನು ವಿಸ್ತರಿಸುತ್ತದೆ. ವಾಸ್ತವವಾಗಿ ಡಿಸೆಂಬರ್ 6ರಂದು ದೆಹಲಿಯಲ್ಲಿ ಪ್ರತಿಭಟನಾ ನಿರತ ಉದ್ಯೋಗ ಖಾತ್ರಿ ಯೋಜನಾ ಕಾರ್ಯಕರ್ತರು ಈ ಯೋಜನೆಯನ್ನು ವಿಸ್ತರಿಸಬೇಕೆಂದೂ ಮತ್ತು ಬಜೆಟ್‌ನಲ್ಲಿ ಅದಕ್ಕಾಗಿ 2.5 ಲಕ್ಷ
ಕೋಟಿ ರೂ.ಗಳನ್ನು ತೆಗೆದಿಡುವಂತೆ ಒತ್ತಾಯಿಸಿದ್ದರು. ಇದು ಯೋಜನೆಗೆ ಅವಶ್ಯವಾಗಿ ಬೇಕಾಗುವ ಹಣದ ಪ್ರಮಾಣ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.

ಸರಕಾರವೇ ಹಾಳುಗೆಡವುತ್ತಿದೆ

ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಕತ್ತು ಹಿಸುಕುತ್ತಿರುವ ಐದನೇ ಮಾರ್ಗವೆಂದರೆ, ವೇತನ-ದರಗಳನ್ನು ಅತ್ಯಂತ ಕೆಳ ಮಟ್ಟದಲ್ಲಿಡುವುದು. ಕೂಲಿಯು ಎಷ್ಟು ಕೆಳ ಮಟ್ಟದಲ್ಲಿದೆ ಎಂಬುದರ ಕಲ್ಪನೆಯನ್ನು ಈ ಕೆಲವು ವಿವರಗಳಿಂದ ಗಮನಿಸಬಹುದು. ಹಿಂದಿನ ಯೋಜನಾ ಆಯೋಗವು ಗ್ರಾಮೀಣ ಭಾರತದಲ್ಲಿ ಪ್ರತಿ ವ್ಯಕ್ತಿಗೆ ದಿನಾ 2200 ಕ್ಯಾಲೊರಿ ಮಟ್ಟದ ಆಹಾರ ಸೇವನೆಯನ್ನು ಬಡತನದ ಮಾನದಂಡವಾಗಿ ತೆಗೆದುಕೊಂಡಿತ್ತು. 2011-12ರ ಎನ್‌ಎಸ್‌ಎಸ್ ದೊಡ್ಡ ಮಾದರಿ ಸಮೀಕ್ಷೆಯ ಪ್ರಕಾರ, ದೈನಂದಿನ ತಲಾ ವೆಚ್ಚವು ಸರಿಸುಮಾರು 50 ರೂಗಳನ್ನು ತಲುಪಿದಾಗ ಮಾತ್ರ 2200 ಕ್ಯಾಲೊರಿಗಳ ಸೇವನೆ ಸಾಧ್ಯವಾಗುತ್ತದೆ. ಆಗಿನಿಂದ ಇಂದಿನವರೆಗೆ ಹೋಲಿಸಬಹುದಾದ ರೀತಿಯ ಎನ್‌ಎಸ್‌ಎಸ್ ಸಮೀಕ್ಷೆಗಳು ನೆಡೆದಿಲ್ಲ. ಆದರೆ, ನಾವು ಗ್ರಾಹಕ ಬೆಲೆ ಸೂಚ್ಯಂಕವನ್ನು ಬಳಸಿಕೊಂಡು
ಸರಳವಾಗಿ ಲೆಕ್ಕ ಹಾಕಿದರೆ, ಗ್ರಾಮೀಣ ಪ್ರದೇಶಗಳಿಗೆ 2023-24ರಲ್ಲಿ 2200 ಕ್ಯಾಲೊರಿಗಳ ಸೇವನೆಗಾಗಿ ದೈನಂದಿನ ತಲಾ ವೇತನ ದರವು 82 ರೂಗೆ ಬರುತ್ತದೆ.

ಇದನ್ನೂ ಓದಿ: ಧಾರವಾಡ: ತಿನ್ನಲು ಕಡ್ಲೆ ಗಿಡ ಕಿತ್ತಿದ್ದಕ್ಕೆ ನಾಲ್ವರು ದಲಿತ ಹುಡುಗರ ಮೇಲೆ ಹಲ್ಲೆ

ಐದು ವ್ಯಕ್ತಿಗಳ (ಗಂಡ, ಹೆಂಡತಿ, ಇಬ್ಬರು ಮಕ್ಕಳು ಮತ್ತು ವಯಸ್ಸಾದ ಒಬ್ಬ ಸಂಬಂಧಿ) ಒಂದು ಕುಟುಂಬವನ್ನು ಊಹಿಸಿಕೊಂಡರೆ, ಅದಕ್ಕೆ ದೈನಂದಿನ ಕನಿಷ್ಠ 410 ರೂ.ಗಳ ಕೂಲಿ ದರದ ಅಗತ್ಯವಿರುತ್ತದೆ. ವಾಸ್ತವವಾಗಿ ನೋಡಿದರೆ ದೈನಂದಿನ ಕೂಲಿ ದರವು ಇನ್ನೂ ಹೆಚ್ಚಿನ ಮಟ್ಟದಲ್ಲೇ ಇರಬೇಕಾಗುತ್ತದೆ. ಏಕೆಂದರೆ, ಕೆಲವು ತುರ್ತು ಅಗತ್ಯಗಳಿಗಾಗಿ ಮತ್ತು ಗ್ರಾಹಕ ಬೆಲೆ ಸೂಚ್ಯಂಕವು ವಾಸ್ತವಿಕ ಜೀವನ ವೆಚ್ಚದ ಹೆಚ್ಚಳವನ್ನು ಸಂಪೂರ್ಣವಾಗಿ ಪರಿಗಣಿಸದ/ಸೆರೆಹಿಡಿಯದ ಕಾರಣದಿಂದಾಗಿ ಸ್ವಲ್ಪ ಹಣವನ್ನು ಮೀಸಲಿಡಬೇಕಾಗುತ್ತದೆ. ಮೇಲಾಗಿ, ಗ್ರಾಹಕ ಬೆಲೆ ಸೂಚ್ಯಂಕವು ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸೇವೆಗಳ
ಖಾಸಗೀಕರಣದ ಪರಿಣಾಮವನ್ನು ಪರಿಗಣಿಸುವುದಿಲ್ಲ. ಖಾಸಗೀಕರಣವು ಈ ಸೇವೆಗಳನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ.

ಕೇಂದ್ರ ಸರ್ಕಾರವು ನೇಮಿಸಿದ ಒಂದು ತಜ್ಞರ ಸಮಿತಿಯು ಇತ್ತೀಚೆಗೆ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ 375 ರೂಪಾಯಿಗಳ ದೈನಂದಿನ ಕೂಲಿ ದರವನ್ನು ಶಿಫಾರಸು ಮಾಡಿದೆ. ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯಗಳ ನಡುವೆ ಕೂಲಿ ದರಗಳ ವಿಷಯದಲ್ಲಿ ಬಹಳ ವ್ಯತ್ಯಾಸಗಳಿವೆ. ಕೂಲಿಯ ದರವು ಯಾವ ರಾಜ್ಯದಲ್ಲೂ 375 ರೂ.ಗಳಿಗೆ ಸಮೀಪದಲ್ಲಿಲ್ಲ. ವಾಸ್ತವವಾಗಿ ಹರಿಯಾಣ, ಕೇರಳ, ಕರ್ನಾಟಕ ಮತ್ತು ಪಂಜಾಬ್ ಈ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮಾತ್ರ ರೂ 300ಕ್ಕಿಂತಲೂ ತುಸು ಮೇಲಿದೆ. ಉಳಿದ ಎಲ್ಲ ರಾಜ್ಯಗಳಲ್ಲೂ ಕೂಲಿ ದರವು 200 – 300 ರೂಗಳ ನಡುವೆ ಇದೆ. ಈ ಮಟ್ಟದ ಅತಿ ಕಡಿಮೆ ಕೂಲಿ ಮತ್ತು ಅದನ್ನೂ ಸಹ ವರ್ಷಗಟ್ಟಲೆ ಪಾವತಿಸದಿರುವುದು ಕೆಲಸಗಾರರಿಗೆ ಭಾರೀ ನಿರುತ್ಸಾಹ ಉಂಟುಮಾಡುತ್ತದೆ.

ಇಂತಹ ವಿಧಾನಗಳ ಮೂಲಕ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ರೂಪಿಸಲಾದ ಅತ್ಯಂತ ಪರಿಣಾಮಕಾರಿ ಶಾಸನಗಳ ಪೈಕಿ ಒಂದಾಗಿರುವ ಹಕ್ಕು-ಆಧಾರಿತ ಉದ್ಯೋಗ ಖಾತ್ರಿ ಯೋಜನೆಯನ್ನು ಈಗಿನ ಸರ್ಕಾರವು ಹಾಳುಗೆಡವುತ್ತಿದೆ ಮತ್ತು ನಗದು ವರ್ಗಾವಣೆಯ ಕೃಪೆಗಾಗಿ ಕೈಯ್ಯೊಡ್ಡುವಂತೆ ಜನರನ್ನು ಬಲವಂತಪಡಿಸುತ್ತದೆ. ಆದರೆ, ಫ್ಯಾಸಿಸ್ಟ್ ತೆರನ ವ್ಯಕ್ತಿಗಳ ನೇತೃತ್ವದ ಸರ್ಕಾರದಿಂದ ಬೇರೇನನ್ನು ತಾನೇ ನಿರೀಕ್ಷಿಸಬಹುದು?

ಇದನ್ನೂ ನೋಡಿ: ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ

Donate Janashakthi Media

Leave a Reply

Your email address will not be published. Required fields are marked *