ನೆಹರೂ- ಮಹಾಲನೋಬಿಸ್ ಕಾರ್ಯತಂತ್ರವನ್ನು ದೂಷಿಸುತ್ತಿರುವುದೇಕೆ?

ಭೂಸುಧಾರಣೆಗಳನ್ನು ಕೈಗೊಳ್ಳಲು ಅಸಮರ್ಥವಾಗಿದ್ದ ಕಾರಣದಿಂದಾಗಿ ಬಡತನವನ್ನು ನಿವಾರಿಸುವಲ್ಲಿ ನೆಹರೂ-ಮಹಾಲನೊಬಿಸ್ ಕಾರ್ಯತಂತ್ರವು ಅಸಮರ್ಪಕವಾಗಿದ್ದರೂ ಸಹ, ದುಡಿಯುವ ಜನತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ನವ ಉದಾರವಾದಿ ಕಾರ್ಯತಂತ್ರಕ್ಕಿಂತ ಶ್ರೇಷ್ಠವಾಗಿತ್ತು. ಈ ನವ ಉದಾರವಾದಿ ಕಾರ್ಯತಂತ್ರವು ದೇಶವನ್ನು ಮತ್ತೊಮ್ಮೆ ವಸಾಹತುಶಾಹಿ ಅವಧಿಯ ಆರ್ಥಿಕ ನೀತಿ-ವ್ಯವಸ್ಥೆಯ ನಿಟ್ಟಿನಲ್ಲಿ ಹಿಂದಕ್ಕೆ ತಳ್ಳುತ್ತದೆ. ಮುಂಬರುವ ದಿನಗಳಲ್ಲಿ, ದೇಶದಲ್ಲಿ ಬಡತನ ಕಣ್ಮರೆಯಾಗುತ್ತಿದೆ ಎಂಬ ಮಾತುಗಳು ಹೆಚ್ಚೆಚ್ಚಾಗಿ ಕೇಳಿಬರಲಿವೆ ಮತ್ತು ಮುಂದುವರೆದ ಬಂಡವಾಳಶಾಹಿ ದೇಶಗಳ ಬೇಡಿಕೆಗಳಿಗಾಗಿ ನಮ್ಮ ರೈತರ ಭೂಮಿಯನ್ನು ತೆರೆದು ಕೊಡಲು ಅನುಕೂಲವಾಗುವಂತೆ ಅದರ ಮೇಲಿನ ಅಳಿದುಳಿದ ನಿರ್ಬಂಧಗಳನ್ನು ಕೂಡ ಕೈಬಿಡಬೇಕು ಎಂದು ಹೇಳಲಾಗುತ್ತದೆ. ನೆಹರೂವಾದಿ ಕಾರ್ಯತಂತ್ರದ ಮೇಲಿನ ಪ್ರಸ್ತುತ ದಾಳಿಯು ಇದಕ್ಕೆ ಒಂದು ಪೀಠಿಕೆಯಾಗಿದೆ.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು:ಕೆ.ಎಂ.ನಾಗರಾಜ್

1991ರ ಹಿಂದೆ ಜಾರಿಯಲ್ಲಿದ್ದ ನಿಯಂತ್ರಣ ನೀತಿಗಳ ತಳದಲ್ಲಿದ್ದ ನೆಹರೂ-ಮಹಾಲನೋಬಿಸ್ ಕಾರ್ಯತಂತ್ರವನ್ನು ಈಗ ಮೋದಿ ಮಂದೆ ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದೊಳಗಿನ ಮತ್ತು ಹೊರಗಿನ ಕೆಲವು ನವ ಉದಾರವಾದಿ ಗುಂಪುಗಳು ಕೂಡ ಮನಸಿಗೆ ಬಂದಂತೆ ತೆಗಳುತ್ತಿವೆ. ನವ ಉದಾರವಾದವು ಸಿಕ್ಕಿಕೊಂಡಿರುವ ಬಿಕ್ಕಟ್ಟು ಆಳಗೊಳ್ಳುತ್ತಿರುವಾಗ ಅದರ ಬಗ್ಗೆ ಉಂಟಾಗಿರುವ ಭ್ರಮನಿರಸನವೂ ಹೆಚು ವ್ಯಾಪಕಗೊಳ್ಳುತ್ತಿರುವಾಗ, ನಿಯಂತ್ರಣ ನೀತಿಗಳ ಆಳ್ವಿಕೆಗೆ ಹೋಲಿಸಿದರೆ ನವ ಉದಾರವಾದಿ ಆಳ್ವಿಕೆಯು ಹೆಚ್ಚು ಪ್ರಯೋಜನಗಳನ್ನು ತಂದಿದೆ ಎಂಬುದಾಗಿ ಅದರ ಬೆಂಬಲಿಗರು ಇನ್ನಷ್ಟು ಅಬ್ಬರದಿಂದ ಹೇಳಲಾರಂಭಿಸಿದ್ದಾರೆ. ನಿಯಂತ್ರಣ ನೀತಿಗಳ ಆಳ್ವಿಕೆಯನ್ನು ದೂಷಿಸುವುದು ಅವರಿಗೆ ಅನಿವಾರ್ಯವಾಗುತ್ತದೆ ಮತ್ತು ಪ್ರಸ್ತುತ ಸರ್ಕಾರದ ಪಕ್ಷ ವಹಿಸುವುದರಿಂದ ಅವರಿಗೆ “ಅಧಿಕ ಪ್ರಯೋಜನ”ವೂ ಲಭಿಸುತ್ತದೆ.

ನವ ಉದಾರವಾದದ ಈ ಟೀಕೆ-ಟಿಪ್ಪಣಿಗಳು ಹೊರಬರುವ ಬಹಳ ಹಿಂದೆಯೇ, ನೆಹರೂವಾದಿ ಕಾರ್ಯತಂತ್ರವನ್ನು ಒಂದು ಸಂಪೂರ್ಣ ವಿಭಿನ್ನ ನೆಲೆಯಲ್ಲಿ ಎಡಪಂಥೀಯರು ಟೀಕಿಸುತ್ತಿದ್ದರು. ನಿಯಂತ್ರಣ ನೀತಿಗಳ ಬಗ್ಗೆ ಎಡಪಂಥೀಯರ ಮತ್ತು ನವ ಉದಾರವಾದಿ ಟೀಕೆಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: ತಮ್ಮದೇ ರಾಜಕೀಯ ಪಕ್ಷ ಘೋಷಿಸಿದ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್

ಕಾರ್ಮಿಕರ ಅಂತಾರಾಷ್ಟ್ರೀಯ ವಿಭಜನೆಯ ವಸಾಹತುಶಾಹಿ ಮಾದರಿಯನ್ನು ಮುರಿಯಲು, ಉತ್ಪಾದಕ ಸರಕುಗಳನ್ನು ತಯಾರಿಸುವ ದೇಶೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು, ತಾಂತ್ರಿಕ ಸ್ವಾವಲಂಬನೆಯನ್ನು ಸಾಧಿಸಲು, ಸಾರ್ವಜನಿಕ ವಲಯವನ್ನು ಬೆಳವಣಿಗೆಯ ಪ್ರಮುಖ ಸಾಧನವಾಗಿ ಬಳಸಲು, ಎಲ್ಲ ಖನಿಜ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸಲು, ಪ್ರಮುಖ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸಲು ಮತ್ತು ವಸಾಹತುಶಾಹಿ ಯುಗದಲ್ಲಿ ವಿದೇಶಿ ಬಂಡವಾಳ ಆಕ್ರಮಿಸಿಕೊಂಡಿದ್ದ ಅನುಕೂಲ ಸ್ಥಾನದಿಂದ ಅದನ್ನು ತೆಗೆದುಹಾಕಲು ನೆಹರೂ ಕಾರ್ಯತಂತ್ರದ ಪ್ರಯತ್ನವನ್ನು ಎಡಪಂಥೀಯರು ಬೆಂಬಲಿಸಿದರು. ನವ ಉದಾರವಾದಿ ವಿಶ್ವ ದೃಷ್ಟಿಕೋನದಿಂದ ವಿರೋಧಿಸಲ್ಪಟ್ಟ ಈ ಪ್ರತಿಯೊಂದು ಕ್ರಮಗಳನ್ನೂ ಎಡಪಂಥೀಯರು ಬೆಂಬಲಿಸಿದ್ದರು.

ವರ್ಗ-ವಿರೋಧವನ್ನು ದುರ್ಬಲಗೊಳಿಸಿದ ಕಾರ್ಯತಂತ್ರ

ನೆಹರೂ ಅವರ ಕಾರ್ಯತಂತ್ರದ ಬಗ್ಗೆ ಎಡಪಂಥೀಯರ ಟೀಕೆಯ ಒತ್ತು ಬೇರೊಂದು ವಿಷಯದ ಮೇಲಿತ್ತು. ಈ ಕಾರ್ಯತಂತ್ರವು ದೇಶೀಯ ಮಾರುಕಟ್ಟೆ ಆಧಾರಿತ ಬೆಳವಣಿಗೆಯನ್ನು ಕಲ್ಪಿಸಿಕೊಂಡಿತ್ತು. ಭಾರತದಂತಹ ಒಂದು ಅರ್ಥವ್ಯವಸ್ಥೆಯಲ್ಲಿ ಆಂತರಿಕ ಮಾರುಕಟ್ಟೆಯ ಬೆಳವಣಿಗೆಯು ಮೂಲಭೂತವಾಗಿ ಕೃಷಿಯ ಬೆಳವಣಿಗೆ ಮೇಲೆ ಅವಲಂಬಿತವಾಗಿರುವುದರಿಂದ, ಕಾರ್ಯತಂತ್ರದ ಯಶಸ್ಸು ಉನ್ನತ ಕೃಷಿ ಬೆಳವಣಿಗೆಯ ದರವನ್ನು ಸಾಧಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.

ಕೃಷಿಯ ಉನ್ನತ ಬೆಳವಣಿಗೆಗಾಗಿ ಭೂಸುಧಾರಣೆಗಳು ಅತ್ಯಗತ್ಯವಾಗುತ್ತವೆ. ಆದ್ದರಿಂದ, ನೆಹರೂ ಕಾರ್ಯತಂತ್ರದ ಬಗ್ಗೆ ಎಡಪಂಥೀಯರು ಮಾಡಿದ್ದ ಟೀಕೆಯೆಂದರೆ ಅದು ಭೂ ಮಾಲೀಕತ್ವದ ಕೇಂದ್ರೀಕರಣವನ್ನು ಮುರಿಯದಿರುವುದು ಮಾತ್ರವಲ್ಲದೆ, ನಿಜ ಕೃಷಿಕರಿಗೆ/ಗೇಣಿದಾರರಿಗೆ ಸಾಗುವಳಿಯ ಭದ್ರತೆಯನ್ನು ಒದಗಿಸದೆ ಆಂತರಿಕ ಮಾರುಕಟ್ಟೆ ಆಧಾರಿತ ಅಭಿವೃದ್ಧಿಯನ್ನು ಪ್ರಯತ್ನಿಸುತ್ತಿದೆ ಎಂಬುದು. ಅಂತಹ ಒಂದು ಪರಿಸ್ಥಿತಿಯಲ್ಲಿ, ನಿಯಂತ್ರಣ ನೀತಿಗಳ ಅಡಿಯಲ್ಲಿ ಉಂಟಾಗುವ ಬೆಳವಣಿಗೆಯು, ಬೃಹತ್ ಪ್ರಮಾಣದ ನಿರುದ್ಯೋಗವನ್ನು ನಿವಾರಿಸುವಲ್ಲಿ ಮತ್ತು ಆ ಮೂಲಕ ವಸಾಹತುಶಾಹಿಯ ಬಳುವಳಿಯಾಗಿ ದೇಶದಲ್ಲಿ ನೆಲೆಸಿದ್ದ ಬಡತನವನ್ನು ನಿವಾರಿಸುವಲ್ಲಿ ಬಹಳವಾಗಿ ನಿರ್ಬಂಧಿತವಾಗಿರುತ್ತದೆ ಎಂಬುದು ಎಡಪಂಥೀಯರ ವಾದವಾಗಿತ್ತು.

ನಿಜಕ್ಕೂ ಸಂಭವಿಸಿದ್ದುದು ಇದುವೇ. ಈ ವಿದ್ಯಮಾನದ ಕಾರಣದಿಂದಾಗಿಯೇ ನವ ಉದಾರವಾದವು ಜಾರಿಗೆ ಬರುವುದನ್ನು ತಡೆಯುವಷ್ಟು ವರ್ಗ ವಿರೋಧವು ಬಲಶಾಲಿಯಾಗಿರಲಿಲ್ಲ. ನಿಜ ಸಾಗುವಳಿದಾರರ ಹಕ್ಕುಗಳನ್ನು ಗುರುತಿಸುವುದೂ ಸಹ ಎಷ್ಟೊಂದು ವ್ಯತ್ಯಾಸವನ್ನುಂಟುಮಾಡುತ್ತದೆ ಎಂಬುದನ್ನು ಪಶ್ಚಿಮ ಬಂಗಾಳದಲ್ಲಿ ತೋರಿಸಲಾಗಿದೆ. “ಆಪರೇಷನ್ ಬಾರ್ಗಾ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ನಂತರ, ತೊಂಬತ್ತರ ದಶಕದ ಪಶ್ಚಿಮ ಬಂಗಾಳದಲ್ಲಿ ಕೃಷಿ ಬೆಳವಣಿಗೆಯ ದರವು ದೇಶದ ಎಲ್ಲ ರಾಜ್ಯಗಳಿಗಿಂತಲೂ ಅತಿ ಹೆಚ್ಚಿನದಾಗಿತ್ತು. ಈ ನಿಟ್ಟಿನಲ್ಲಿ ನಿಯಂತ್ರಣ ನೀತಿಗಳ ನೆಹರೂವಾದಿ ಕಾರ್ಯತಂತ್ರವು ವಿಫಲವಾಯಿತು

ಆದರೆ, ನೆಹರೂವಾದಿ ಕಾರ್ಯತಂತ್ರದ ಬಗ್ಗೆ ನವ ಉದಾರವಾದಿ ಟೀಕೆಯು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಅದು ಬೌದ್ಧಿಕ-ಕೈಚಳಕವನ್ನು ಆಧರಿಸಿತ್ತು- “ಒಳ-ಮುಖಿ” ಅಭಿವೃದ್ಧಿ ಕಾರ್ಯತಂತ್ರವನ್ನು “ಹೊರ-ಮುಖಿ” ಅಭಿವೃದ್ಧಿ ಕಾರ್ಯತಂತ್ರದೊಂದಿಗೆ ಹೋಲಿಸಿತು; ಪೂರ್ವ ಏಷ್ಯಾದ ದೇಶಗಳ ಅನುಭವದ ಆಧಾರದ ಮೇಲೆ “ಹೊರ-ಮುಖಿ” ಅಭಿವೃದ್ಧಿ ಕಾರ್ಯತಂತ್ರವು ಹೆಚ್ಚಿನ ಬೆಳವಣಿಗೆಯ ದರಗಳನ್ನು ಕಂಡಿದೆ ಎಂದಿತು.

ಆದ್ದರಿಂದ, ನೆಹರೂ ಅವರ “ಒಳ-ಮುಖಿ” ಅಭಿವೃದ್ಧಿ ಕಾರ್ಯತಂತ್ರದ ಬದಲಿಗೆ, ಪೂರ್ವ ಏಷ್ಯಾದ ದೇಶಗಳು ಅನುಸರಿಸಿದ ರೀತಿಯ “ಹೊರ-ಮುಖಿ” ಅಭಿವೃದ್ಧಿ ಕಾರ್ಯತಂತ್ರವನ್ನು ಭಾರತವು ಒಂದು ವೇಳೆ ಅನುಸರಿಸಿದ್ದರೆ ಅದು ಇನ್ನೂ ಹೆಚ್ಚು ಒಳ್ಳೆಯದಾಗುತ್ತಿತ್ತು ಎಂದಿತು. ಈ “ಹೊರ-ಮುಖಿ” ಅಭಿವೃದ್ಧಿ ಕಾರ್ಯತಂತ್ರವು ಅರ್ಥವ್ಯವಸ್ಥೆಯನ್ನು ಸರಕುಗಳು, ಸೇವೆಗಳು ಮತ್ತು ಹಣಕಾಸು ಸೇರಿದಂತೆ ಬಂಡವಾಳದ ಒಳಹರಿವಿಗೆ ತೆರೆದಿಡುತ್ತದೆ ಮತ್ತು ಅದಕ್ಕಾಗಿ ಸರ್ಕಾರದ ಮೇಲೆ “ವಿತ್ತೀಯ ಜವಾಬ್ದಾರಿ” ಕಾಯ್ದೆಯನ್ನು (ಅಲ್ಪ ವಿತ್ತೀಯ ಕೊರತೆಗಳು) ಜಾರಿಗೊಳಿಸಲಾಗುತ್ತದೆ ಮತ್ತು ಕೂಲಿಯನ್ನು ಕೆಳ ಮಟ್ಟದಲ್ಲಿಡುವ ಮೂಲಕ ಮತ್ತು ಕಾರ್ಮಿಕ ಮುಷ್ಕರಗಳ ಸಂಭವವನ್ನು ಕಡಿಮೆ ಮಾಡುವ ಮೂಲಕ ಅರ್ಥವ್ಯವಸ್ಥೆಯನ್ನು “ಹೂಡಿಕೆದಾರ ಸ್ನೇಹಿ”ಯನ್ನಾಗಿ ಮಾಡುತ್ತದೆ ಎಂದು ಹೇಳಲಾಯಿತು.

ಮೋಸದಿಂದ ಕೂಡಿದ ತರ್ಕ

ಇದು ಸೈದ್ಧಾಂತಿಕವಾಗಿಯೂ ಮತ್ತು ಪೂರ್ವ ಏಷ್ಯಾದ ಅನುಭವದ ಒಂದು ಅರ್ಥವಿವರಣೆಯಾಗಿಯೂ ಸಹ ಮೋಸದಿಂದ ಕೂಡಿದ ತರ್ಕವಾಗಿತ್ತು. ನಂತರ ನಡೆಸಿದ ಸಂಶೋಧನೆಯು ಪೂರ್ವ ಏಷ್ಯಾ ವಿದ್ಯಮಾನವು ಸರಕುಗಳು, ಸೇವೆಗಳು ಮತ್ತು ಹಣಕಾಸು ಸೇರಿದಂತೆ ಬಂಡವಾಳದ ಮುಕ್ತ ಹರಿವಿನೊಂದಿಗೆ ನವ ಉದಾರವಾದಿ ಅಭಿವೃದ್ಧಿಯ ಒಂದು ಪ್ರಕರಣವಲ್ಲ ಎಂಬುದನ್ನು ಮತ್ತು ಸರ್ಕಾರದ ಮಧ್ಯಪ್ರವೇಶವಿಲ್ಲದ ಅಭಿವೃದ್ಧಿಯ ಒಂದು ಪ್ರಕರಣವಲ್ಲ ಎಂಬುದನ್ನು ತೋರಿಸಿದೆ.

ಸೈದ್ಧಾಂತಿಕವಾಗಿ, “ಹೊರ-ಮುಖಿ” ಅಭಿವೃದ್ಧಿ ಕಾರ್ಯತಂತ್ರದ ವಾದವನ್ನು ಪ್ರತಿಯೊಂದು ದೇಶವೂ ಒಂದು “ಸಣ್ಣ ದೇಶ”ದಂತೆಯೇ ಮತ್ತು ಅದು ತನಗೆ ಸಾಧ್ಯವಾದಷ್ಟು ಪ್ರಮಾಣದ ರಫ್ತುಗಳನ್ನು ಮಾಡಬಹುದು ಎಂಬ ಊಹೆಯ ಮೇಲೆ ಮಂಡಿಸಲಾಯಿತು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವುದೇ ಅವಧಿಯಲ್ಲಿ ಒಂದು ನಿರ್ದಿಷ್ಟ ಗಾತ್ರದ ವಿಶ್ವ ಬೇಡಿಕೆ ಮಾತ್ರ ಇರುತ್ತದೆ, ಆದ್ದರಿಂದ ಒಂದು ದೇಶವು ಅತಿ ಹೆಚ್ಚು ರಫ್ತು ಮಾಡಿದಾಗ ಅದು ಮತ್ತೊಂದು ದೇಶಕ್ಕೆ ಹೊರೆಯಾಗುತ್ತದೆ/ನಷ್ಟವಾಗುತ್ತದೆ. ಆದ್ದರಿಂದ, ಪ್ರತಿಯೊಂದು ದೇಶವೂ ಪೂರ್ವ ಏಷ್ಯಾದ ಕಾರ್ಯತಂತ್ರವನ್ನೇ ಅನುಸರಿಸಿದರೂ ಸಹ, ಪೂರ್ವ ಏಷ್ಯಾದ ದೇಶಗಳಂತೆ ಯಶಸ್ವಿಯಾಗುವುದು ಸಾಧ್ಯವಿಲ್ಲ ಎಂಬ ಅಂಶವನ್ನು ಸಂಪೂರ್ಣವಾಗಿ ಮರೆಮಾಚಲಾಯಿತು.

ನವ ಉದಾರವಾದವು ವಾಸ್ತವವಾಗಿ ಜಾಗತಿಕ ದಕ್ಷಿಣದ ದೇಶಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟಿದೆ. ಇದು ಪ್ರತಿಯೊಂದು ದೇಶವನ್ನೂ, ಇತರ ದೇಶಗಳಿಗೆ ಹೋಲಿಸಿದರೆ ತನ್ನ ಕೂಲಿಯ ಮಟ್ಟವನ್ನು ಇನ್ನೂ ಕೆಳ ಮಟ್ಟಕ್ಕೆ ಇಳಿಸುವ ಮತ್ತು ಕಾರ್ಮಿಕರ ಕೆಲಸದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಒಂದು ಅವನತಿಯ ಸ್ಪರ್ಧೆಗಿಳಿಯುವತ್ತ ತಳ್ಳಿದೆ. ಈ ದೇಶಗಳಲ್ಲಿ ರೈತ ಕೃಷಿಗೆ ಮತ್ತು ಕಿರು ಉತ್ಪಾದನೆಗೆ ಒದಗಿಸುತ್ತಿದ್ದ ಪ್ರಭುತ್ವದ ಬೆಂಬಲವನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾಗಿದೆ. ಹಾಗಾಗಿ, ಕಿರು ಉತ್ಪಾದಕರು ಮತ್ತು ರೈತರು ತೀವ್ರ ಸಂಕಷ್ಟಗಳಿಗೆ ಸಿಲುಕಿದ್ದಾರೆ. ನವ ಉದಾರವಾದೀ ಬಂಡವಾಳಶಾಹಿಯ ಬಿಕ್ಕಟ್ಟಿನಿಂದಾಗಿ ಈ ಎಲ್ಲ ಲಕ್ಷಣಗಳೂ ಉಲ್ಬಣಗೊಂಡಿವೆ. ಇದು ಒಟ್ಟಾರೆ ವಿಶ್ವ ಬೇಡಿಕೆಯ ಗಾತ್ರದ ತೀವ್ರ ಇಳಿಕೆಗೆ ಕಾರಣವಾಗಿದೆ.

ನವ ಉದಾರವಾದದ ಪ್ರತಿಪಾದಕರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ನಿಯಂತ್ರಣ ನೀತಿಗಳ ಯುಗಕ್ಕೆ ಹೋಲಿಸಿದರೆ ಜಿಡಿಪಿಯ ಬೆಳವಣಿಗೆಯು ವೇಗವರ್ಧನೆಯನ್ನು ಕಂಡಿದೆ ಎಂಬುದನ್ನು ಒತ್ತಿಹೇಳುತ್ತಾರೆ. ಈ ವೇಗವರ್ಧನೆಯೇ ಒಂದು ಗಂಭೀರ ಅನುಮಾನದ ವಿಷಯವಾಗಿದೆ. ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರೂ ಸಹ ಜಿಡಿಪಿಯ ಅಧಿಕೃತ ಬೆಳವಣಿಗೆಯ ದರವು ಒಂದು ದೊಡ್ಡ ಅತಿ-ಅಂದಾಜು ಎಂದು ಹೇಳಿದ್ದಾರೆ. ಜೊತೆಗೆ, ಜಿಡಿಪಿಯು ಕೆಲವರ ಜೇಬಿಗೆ ಮಾತ್ರ ಹೋದರೆ ಉಳಿದವರ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ, ನಿಯಂತ್ರಣ ನೀತಿಗಳ ಆಳ್ವಿಕೆಯ ಮತ್ತು ನವ ಉದಾರವಾದಿ ಆಳ್ವಿಕೆಯ ಅವಧಿಗಳ ಸಾಪೇಕ್ಷ ಕಾರ್ಯಕ್ಷಮತೆಯ ಬಗ್ಗೆ ತೀರ್ಪು ನೀಡಬೇಕಾದರೆ ನಾವು ದುಡಿಯುವ ಜನತೆಯ ನಿಜ ಪರಿಸ್ಥಿತಿಗಳನ್ನು ನೋಡಬೇಕಾಗುತ್ತದೆ.

ಹೀನಾಯವಾದ ಸ್ಥಿತಿ

ನವ ಉದಾರವಾದಿ ಆಳ್ವಿಕೆಯ ಜಮಾನದಲ್ಲಿ ಶ್ರೀಮಂತರಿಗೆ ಹೋಲಿಸಿದರೆ ದುಡಿಯುವ ಜನರು ತುಲನಾತ್ಮಕವಾಗಿ ಹೀನಾಯವಾದ ಸ್ಥಿತಿಯಲ್ಲಿದ್ದಾರೆ ಎಂಬ ಅಂಶದ ಬಗ್ಗೆ ಅನುಮಾನಪಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಒಂದು ಅತ್ಯಂತ ಸಮಗ್ರವಾದ ಅಧ್ಯಯನವನ್ನು ಥಾಮಸ್ ಪಿಕೆಟ್ಟಿ ಮತ್ತು ಇತರರು ನಡೆಸುವ ಒಂದು ಸಂಸ್ಥೆ ಮಾಡಿದೆ. ಈ ಅಧ್ಯಯನದ ವರದಿಯ ಪ್ರಕಾರ, ಸ್ವಾತಂತ್ರ‍್ಯ ಸಮಯದ ರಾಷ್ಟ್ರೀಯ ಆದಾಯದಲ್ಲಿ ಜನಸಂಖ್ಯೆಯ ಮೇಲ್ತುದಿಯ ಶೇ. 1ರಷ್ಟು ಮಂದಿಯ ಪಾಲು ಸುಮಾರು ಶೇ. 12 ರಷ್ಟಿತ್ತು.

ಇದು 1982ರ ಹೊತ್ತಿಗೆ ಶೇ. 6ಕ್ಕೆ ಇಳಿದಿತ್ತು. ಅದರ ನಂತರ ಏರಿಕೆ ಆರಂಭವಾಗಿ, 2023ರ ವೇಳೆಗೆ ಸುಮಾರು ಶೇ. 23ರ ಮಟ್ಟವನ್ನು ತಲುಪಿತ್ತು. ಲಭ್ಯವಿರುವ ಕಳೆದ ಒಂದು ಶತಮಾನದ ಅಂದಾಜುಗಳಲ್ಲಿ ಇದು ಅತಿ ಹೆಚ್ಚಿನ ಮಟ್ಟದ್ದಾಗಿದೆ. ಆದ್ದರಿಂದ, ವಸಾಹತುಶಾಹಿ ಕಾಲದಲ್ಲಿಯೂ ಸಹ ಕಂಡುಬರದ ವರಮಾನ ಅಸಮಾನತೆಗಳ ಅಂತರದಲ್ಲಿ ನವ ಉದಾರವಾದಿ ಯುಗವು ಒಂದು ಅಭೂತಪೂರ್ವ ಮಟ್ಟದ ಹೆಚ್ಚಳವನ್ನು ಕಂಡಿದೆ.

ನವ ಉದಾರವಾದಿ ಆಳ್ವಿಕೆಯ ಅವಧಿಯಲ್ಲಿ ದುಡಿಯುವ ಜನತೆಯ ಜೀವನ ಪರಿಸ್ಥಿತಿಗಳು ಸಂಪೂರ್ಣ ಹದಗೆಡುತ್ತಿರುವ ಬಗ್ಗೆ ಇನ್ನೂ ಹೆಚ್ಚು ಅರ್ಥಪೂರ್ಣವಾದ ಪುರಾವೆಗಳಿವೆ. ಈ ಅವಧಿಯಲ್ಲಿ ದೇಶದಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆಗಳ ಬೃಹತ್ ಅಲೆಯ ಪುರಾವೆಯಂತೂ ಇದ್ದೇ ಇದೆ. ಆದರೂ, ಗ್ರಾಮೀಣ ಭಾರತದ ಜನತೆಯ ಸರಾಸರಿ ದೈನಿಕ ಕ್ಯಾಲೋರಿ ಸೇವನೆಯ ಒಂದು ನಿರ್ದಿಷ್ಟ ಸೂಚಕವನ್ನೇ ತೆಗೆದುಕೊಳ್ಳೋಣ. ಹಿಂದಿನ ಯೋಜನಾ ಆಯೋಗವು 1973-74ರಲ್ಲಿ ಮೊದಲ ಬಾರಿಗೆ ದೇಶದ ಬಡತನವನ್ನು ವ್ಯಾಖ್ಯಾನಿಸಲು ಕೈಗೊಂಡ ಗ್ರಾಹಕ ವೆಚ್ಚಗಳ ಕುರಿತ ರಾಷ್ಟ್ರೀಯ ಮಾದರಿ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಬಡತನವನ್ನು ಅಂದಾಜಿಸಲು ಗ್ರಾಮೀಣ ಭಾರತದ ಪ್ರತಿ ವ್ಯಕ್ತಿಯ ದೈನಿಕ 2200 ಕ್ಯಾಲೋರಿಗಳ ಸೇವನೆಯನ್ನು ಒಂದು ಮಾನದಂಡವಾಗಿ ತೆಗೆದುಕೊಂಡಿತ್ತು.

ಆಗ ಕ್ಯಾಲೋರಿಗಳ ಸೇವನೆಯ ಈ ಮಾನದಂಡದ ಕೆಳಗಿದ್ದ ಗ್ರಾಮೀಣ ಜನಸಂಖ್ಯೆಯ ಪ್ರಮಾಣವು ಶೇಕಡಾ 56.4ರಷ್ಟಿತ್ತು. 1993-94ರಲ್ಲಿ ದೇಶದಲ್ಲಿ ನವ ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿದ ಕೇವಲ ಎರಡು ವರ್ಷಗಳ ನಂತರ, ಈ ಪ್ರಮಾಣವು ಶೇ. 58.5ಕ್ಕೆ ಏರಿತ್ತು. 2011-12ರ ವೇಳೆಗೆ ಈ ಪ್ರಮಾಣವು ಗಣನೀಯವಾಗಿ ಶೇ. 67ಕ್ಕೆ ಏರಿತು ಮತ್ತು 2017-18ರ ವೇಳೆಗೆ ಶೇ. 80ರ ಮಟ್ಟವನ್ನು ತಲುಪಿತು ಎಂದು ಹೇಳಲಾಗಿದೆ. ಈ ಸನ್ನಿವೇಶದಲ್ಲಿ ಮೋದಿ ಸರ್ಕಾರವು ರಾಷ್ಟ್ರೀಯ ಮಾದರಿ ಸಮೀಕ್ಷೆಯು ಅಂಕಿ-ಅಂಶಗಳನ್ನು ಸಂಗ್ರಹಿಸುವ ವಿಧಾನವನ್ನೇ ಬದಲಾಯಿಸಿತು. ಹಾಗಾಗಿ, ಹಿಂದಿನ ಅಂಕಿ-ಅಂಶಗಳೊಂದಿಗಿನ ಹೋಲಿಕೆಯನ್ನು ಈಗ ಮಾಡಲಾಗದು.

ಸಾಮ್ರಾಜ್ಯಶಾಹಿ ಕಾರ್ಯತಂತ್ರಕ್ಕೆ ಪೀಠಿಕೆ

ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ನೆಹರೂವಾದಿ ಕಾರ್ಯತಂತ್ರದ ಅಡಿಯಲ್ಲಿ ಗ್ರಾಮೀಣ ಬಡತನದ ಅನುಪಾತದಲ್ಲಿ ಯಾವುದೇ ಹೆಚ್ಚಳ ಕಂಡುಬರುವುದಿಲ್ಲ. ಸ್ವಾತಂತ್ರ‍್ಯದ ಸಮಯದಲ್ಲಿದ್ದ ಕೆಟ್ಟ ಪರಿಸ್ಥಿತಿಗೆ ಹೋಲಿಸಿದರೆ, ಈ ಮಾನದಂಡದ ಪ್ರಕಾರ, ಬಡತನದಲ್ಲಿ ಸ್ವಲ್ಪ ಇಳಿಕೆ ಇದ್ದಿರಲೇಬೇಕು. ಆದರೆ ಅದನ್ನು ಸಮರ್ಥಿಸುವ ಯಾವುದೇ ಅಂಕಿಅಂಶಗಳು ನಮ್ಮಲ್ಲಿ ಲಭ್ಯವಿಲ್ಲ. ಆದರೂ, 1973-74 ಮತ್ತು 1993-94ರ ನಡುವೆ ಗ್ರಾಮೀಣ ಬಡತನದ ಅನುಪಾತವು ಸರಿಸುಮಾರು ಬದಲಾಗದೇ ಉಳಿದಿತ್ತು ಎಂಬುದು ನೆಹರೂವಾದಿ ಕಾರ್ಯತಂತ್ರದ ಬಗ್ಗೆ ಎಡಪಂಥವು ಮಾಡಿದ ವಿಮರ್ಶೆಯು ಅಂಗೀಕಾರಾರ್ಹವಾಗಿತ್ತು ಎಂಬುದನ್ನು ಒತ್ತಿಹೇಳುತ್ತದೆ.

ಆದರೆ, ನವ ಉದಾರವಾದಿ ಆಳ್ವಿಕೆಯ ಅವಧಿಯು ಗ್ರಾಮೀಣ ಬಡತನದ ಅನುಪಾತದಲ್ಲಿ ಒಂದು ತೀವ್ರ ಏರಿಕೆಯನ್ನು ಕಂಡಿದೆ. ಭೂಸುಧಾರಣೆಗಳನ್ನು ಕೈಗೊಳ್ಳಲು ಅಸಮರ್ಥವಾಗಿದ್ದ ಕಾರಣದಿಂದಾಗಿ ಬಡತನವನ್ನು ನಿವಾರಿಸುವಲ್ಲಿ ನೆಹರೂವಾದಿ ಕಾರ್ಯತಂತ್ರವು ಅಸಮರ್ಪಕವಾಗಿದ್ದರೂ ಸಹ, ದುಡಿಯುವ ಜನತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ನವ ಉದಾರವಾದಿ ಕಾರ್ಯತಂತ್ರಕ್ಕಿಂತ ಶ್ರೇಷ್ಠವಾಗಿತ್ತು.

ಈ ನವ ಉದಾರವಾದಿ ಕಾರ್ಯತಂತ್ರವು ದೇಶವನ್ನು ಮತ್ತೊಮ್ಮೆ ವಸಾಹತುಶಾಹಿ ಅವಧಿಯ ಆರ್ಥಿಕ ನೀತಿ-ವ್ಯವಸ್ಥೆಯ ನಿಟ್ಟಿನಲ್ಲಿ ಹಿಂದಕ್ಕೆ ತಳ್ಳುತ್ತದೆ. ಇದು ಸಹ ಸರಕು-ಸೇವೆUಳು ಮತ್ತು ಹಣಕಾಸು ಸೇರಿದಂತೆ ಬಂಡವಾಳದ ಮುಕ್ತ ಹರಿವಿನಿನ (ವಾಸ್ತವವಾಗಿ ಹೆಚ್ಚಿನ ಬಂಡವಾಳವು ದೇಶಕ್ಕೆ ಹರಿಯದಿದ್ದರೂ) ಅವಧಿ. ಭೂ-ಇಳುವರಿಯನ್ನು ಹೆಚ್ಚಿಸುವ ಸಲುವಾಗಿ ಸಾರ್ವಜನಿಕ ಹೂಡಿಕೆ ಇಲ್ಲದಿರುವಾಗ ಮತ್ತು ಇಂತಹ ಹೂಡಿಕೆಯನ್ನು ನವ ಉದಾರವಾದವು ಉದ್ದೇಶಪೂರ್ವಕವಾಗಿ ತಡೆಯುವ ಸನ್ನಿವೇಶದಲ್ಲಿ, ಗಾತ್ರದಲ್ಲಿ ಸೀಮಿತವಾಗಿರುವ ಮತ್ತು ವೃದ್ಧಿಸಲಾಗದ ಭಾರತದ ಭೂಪ್ರದೇಶವನ್ನು ಸ್ಥಳೀಯ ಜನತೆಗೆ ನಷ್ಟವನ್ನುಂಟುಮಾಡಿ ಮುಂದುವರೆದ ಬಂಡವಾಳಶಾಹಿ ದೇಶಗಳ(ಮೆಟ್ರೊಪಾಲಿಟನ್) ಬೇಡಿಕೆಗಳಿಗಾಗಿ ತೆರೆದಿಡುತ್ತದೆ.

ಇದೇ ನವ ಉದಾರವಾದಿ ಕಾರ್ಯತಂತ್ರ. ಆದ್ದರಿಂದ, ಆದ್ದರಿಂದ ಸ್ಥಳೀಯ ಜನತೆಗೆ ಪೌಷ್ಟಿಕಾಂಶದ ವಂಚನೆಯು ನವ ಉದಾರವಾದಿ ಕಾರ್ಯತಂತ್ರದ ಒಂದು ಅನಿವಾರ್ಯ ಫಲಿತಾಂಶವಾಗಿದೆ. ಈ ಕಾರ್ಯತಂತ್ರವು ವಿಶ್ವ ಬ್ಯಾಂಕ್, ಐಎಂಎಫ್ ಮತ್ತು ಮುಂದುವರಿದ ದೇಶಗಳ ಸರ್ಕಾರಗಳ ಬೆಂಬಲವನ್ನು ಹೊಂದಿರುವ ಸಾಮ್ರಾಜ್ಯಶಾಹಿ ಕಾರ್ಯತಂತ್ರವನ್ನು ಪ್ರತಿನಿಧಿಸುತ್ತದೆ.

ಇನ್ನು ಮುಂದೆ ಆಹಾರ ಧಾನ್ಯಗಳ ಖರೀದಿ ಮತ್ತು ಸಾರ್ವಜನಿಕ ವಿತರಣೆಗಾಗಿ ಸರ್ಕಾರದ ಮಧ್ಯಪ್ರವೇಶವು ಅಗತ್ಯವಿಲ್ಲ ಎಂದು ಬಿಂಬಿಸುವಂತೆ ಮಾಡುವ ಸಲುವಾಗಿ ಮುಂಬರುವ ದಿನಗಳಲ್ಲಿ ದೇಶದಲ್ಲಿ ಬಡತನ ಕಣ್ಮರೆಯಾಗುತ್ತಿದೆ ಎಂಬ ಮಾತುಗಳು ಹೆಚ್ಚೆಚ್ಚಾಗಿ ಕೇಳಿಬರಲಿವೆ. ಆದ್ದರಿಂದ ಭಾರತದ ಭೂಪ್ರದೇಶವನ್ನು ಮುಂದುವರೆದ ಬಂಡವಾಳಶಾಹಿ ದೇಶಗಳ ಬೇಡಿಕೆಗಳಿಗಾಗಿ ಮುಕ್ತಗೊಳಿಸುವ ಸಲುವಾಗಿ ಭೂಮಿಯ ಮೇಲಿನ ಅಳಿದುಳಿದ ನಿರ್ಬಂಧಗಳನ್ನು ಕೈಬಿಡಬೇಕು ಎಂದು ಹೇಳಲಾಗುತ್ತದೆ. ನೆಹರೂವಾದಿ ಕಾರ್ಯತಂತ್ರದ ಮೇಲಿನ ಪ್ರಸ್ತುತ ದಾಳಿಯು ಇದಕ್ಕೆ ಒಂದು ಪೀಠಿಕೆಯಾಗಿದೆ.

ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ Janashakthi Media

Donate Janashakthi Media

Leave a Reply

Your email address will not be published. Required fields are marked *