ಆಧುನಿಕ ವೈದ್ಯ ಪದ್ದತಿಗಳನ್ನು ನೀವೇಕೆ ಹಳಿಯುವುದು? ಬಾಬಾ ರಾಮದೇವ್​​ಗೆ ಸರ್ವೊಚ್ಚ ನ್ಯಾಯಾಲಯ ತರಾಟೆ

ನವದೆಹಲಿ: ಆಧುನಿಕ ಕಾಲಘಟ್ಟದ ಅಲೋಪತಿ ವೈದ್ಯಕೀಯ ಪದ್ಧತಿಯ ವಿರುದ್ಧವಾಗಿ ಯಾರೂ ದಾರಿ ತಪ್ಪಿಸಬಾರದು. ಅಲೋಪಥಿಯಂಥ ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ನೀವು ಹಳಿಯುವುದು ಏಕೆಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನೆ ಮಾಡಿದೆ.

ಯೋಗ ಗುರು ಬಾಬಾ ರಾಮದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸರ್ವೊಚ್ಚ ನ್ಯಾಯಾಲಯ, ರಾಮದೇವ್ ಆಯುರ್ವೇದವನ್ನು ಪ್ರಚಾರ ಮಾಡಬಹುದು. ಆದರೆ, ಇತರ ವೈದ್ಯಕೀಯ ಪದ್ಧತಿಗಳನ್ನು ನಿಂದಿಸಬಾರದು ಎಂದು ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.

ಅಲೋಪಥಿ ವೈದ್ಯಕೀಯ ಪದ್ಧತಿ ಬಗ್ಗೆ, ವೈದ್ಯರ ಬಗ್ಗೆ ಮತ್ತು ಕೋವಿಡ್ ಲಸಿಕೆ ವಿರುದ್ಧ ಬಾಬಾ ರಾಮದೇವ್ ಅಭಿಯಾನ ನಡೆಸುತ್ತಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘಟಣೆ(ಐಎಂಎ) ಸರ್ವೊಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತು. ರಾಮದೇವ್‌ ಯೋಗವನ್ನು ಜನಪ್ರಿಯಗೊಳಿಸಿದರು, ಒಳ್ಳೆಯದೇ. ಅವರು ಮಾಡುತ್ತಿರುವ ಪದ್ಧತಿ ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದು ಏನು ಗ್ಯಾರೆಂಟಿ? ಎಂದು ಪ್ರಶ್ನಿಸಿರುವ ನ್ಯಾಯಪೀಠ, ಎಚ್ಚರಿಕೆ ನೀಡಿದೆ.

ಅಲ್ಲದೆ, ಐಎಂಎಯ ಅರ್ಜಿಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕಳೆದ ವರ್ಷ ಕೊವಿಡ್ ಎರಡನೇ ಅಲೆಯಲ್ಲಿ ದೇಶದಲ್ಲಿ ಸಾವಿರಾರು ಮಂದಿ ಸಾವಿಗೀಡಾದಾಗ, ರಾಮದೇವ್ ಅವರು ವಿಡಿಯೊವೊಂದರಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿಯಿಂದಾಗಿ ಲಕ್ಷಗಟ್ಟಲೆ ಜನ ಸಾವಿಗೀಡಾಗಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದೆ ಅಥವಾ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚಿನವರು ಸಾವಿಗೀಡಾಗಿದ್ದಾರೆ ಎಂದಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಜೀವಗಳನ್ನು ಉಳಿಸಲು ಶ್ರಮಿಸುತ್ತಿರುವಾಗ ರಾಮದೇವ್ ಅಲೋಪತಿ ಮತ್ತು ಆಧುನಿಕ ಔಷಧದ ಅಭ್ಯಾಸ ಮಾಡುವವರ ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಭಾರತೀಯ ವೈದ್ಯರ ಸಂಘ ಹೇಳಿದೆ. ಕಳೆದ ವಾರ, ದೆಹಲಿ ಹೈಕೋರ್ಟ್ ಬಾಬಾ ರಾಮ್‌ದೇವ್‌ಗೆ ಆಯುರ್ವೇದದ ಬಗ್ಗೆ ತಪ್ಪುದಾರಿಗೆಳೆಯುವುದನ್ನು ತಡೆಯಬೇಕೆಂದು ಕೇಳಿಕೊಂಡಿತ್ತು.

ಕೋವಿಡ್ -19 ಗಾಗಿ ಪತಂಜಲಿಯ ಕರೋನಿಲ್ ಅನ್ನು ಬಳಸುವ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಬಾಬಾ ರಾಮ್‌ದೇವ್ ವಿರುದ್ಧ ವೈದ್ಯರ ವಿವಿಧ ಗುಂಪುಗಳು ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *