– ಸಿ.ಸಿದ್ದಯ್ಯ
ಇತ್ತೀಚೆಗೆ (ಜನವರಿ 3ರಂದು) ‘ಜಾಗೃತ ಕರ್ನಾಟಕ’ ಡಾ.ಮನಮೋಹನ ಸಿಂಗ್ ನೀತಿಗಳು – ಭಾರತದ ವರ್ತಮಾನ ಮತ್ತು ಭವಿಷ್ಯತ್ತು’ ಎಂಬ ದೀರ್ಘ ಸಂವಾದವನ್ನು ಹಮ್ಮಿಕೊಂಡಿತ್ತು. ಮನಮೋಹನ ಸಿಂಗ್ ನಿಧನದ ನಂತರ ಕಾಂಗ್ರೆಸ್ ಮಾತ್ರವಲ್ಲದೆ ಪ್ರಧಾನಿ ಮೋದಿ, ಬಿಜೆಪಿ ವಕ್ತಾರರಿಂದ ಹಿಡಿದು ಗೋದಿ ಮೀಡಿಯಾದ ವರೆಗೆ ‘ಭಾರೀ ಹೊಗಳಿಕೆ’ಗೆ ಭಾಜನರಾಗಿದ್ದರು. ಅವರು ಜೀವಂತವಾಗಿದ್ದಾಗ ‘ಮೌನಿ’, ‘ಆಕಸ್ಮಿಕ’ ‘ರಿಮೋಟ್ ಕಂಟ್ರೋಲ್ಡ್’ ಪ್ರಧಾನಿ ಎಂದೆಲ್ಲ ವೈಯಕ್ತಿಕವಾಗಿ ಹಳಿದಿದ್ದವರೂ ಸೇರಿದಂತೆ ಹಲವರು ಅವರ ‘ಲೆಗೆಸಿ (ಬಳುವಳಿ) ಗೆ ಗುದ್ದಾಡುತ್ತಿದ್ದ ಮತ್ತು ‘ಸಿಂಗ್ ಅವರಿಗೆ ನೀವು ಅವಮಾನ ಮಾಡಿದ್ದೀರಿ’ ಎಂದು ಬಿಜೆಪಿ-ಕಾಂಗ್ರೆ್ಸ್ ಬೈದಾಢುತ್ತಿದ್ದ ಸನ್ನಿವೇಶದಲ್ಲಿ ಈ ಸಂವಾದ ಬಹಳ ನಿರೀಕ್ಷೆ ಹುಟ್ಟಿಸಿತ್ತು. ಇದಲ್ಲದೆ ‘ಜಾಗೃತ ಕರ್ನಾಟಕ’ ಈ ಜನವರಿ 26ರಂದು ಒಂದು ರಾಜಕೀಯ ಸಂಘಟನೆಯಾಗಿ (ಪಕ್ಷವಾಗಿ ಅಲ್ಲ) ಹೊಮ್ಮುವುದಕ್ಕೆ ಇದೊಂದು ‘ಮುನ್ನುಡಿ’ ಎಂದಿದ್ದು ಇನ್ನಷ್ಟು ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಈ ಸಂವಾದದ ಒಂದು ವಿಶ್ಲೇಷಣೆ. ಜಾಗೃತ ಕರ್ನಾಟಕ
ಈ ಸಂವಾದದಲ್ಲಿ ಮಾತನಾಡಿದ ಎಲ್.ಕೆ.ಅತೀಕ್ ಅವರು ಪ್ರಮುಖವಾಗಿ ಮನಮೋಹನ್ ಸಿಂಗ್ ಅವರ ಜತೆ ತಮ್ಮ ಕೆಲಸದ ಅನುಭವವನ್ನು ಹಂಚಿಕೊಂಡರು. ಅವರು ಪ್ರಧಾನಿಗಳ ಕಚೇರಿಯಲ್ಲಿ ಸಾಮಾಜಿಕ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದು ಅವುಗಳ ಬಗ್ಗೆ ಮಾತನಾಡಿ ಕೆಲವು ಪ್ರಶ್ನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
3 ಲಕ್ಷ ರೈತರ ಆತ್ಮಹತ್ಯೆ ಎಲ್.ಪಿ.ಜಿ ನೀತಿಗಳ ಪರಿಣಾಮ ಅಲ್ಲ : ಯಾದವ್
ಡಾ.ಮನಮೋಹನ ಸಿಂಗ್ ಅವರ ವ್ಯಕ್ತಿತ್ವ, ರಾಜಕೀಯ ಮತ್ತು ನೀತಿಗಳ ಬಗ್ಗೆ ಪ್ರೊ.ಯೋಗೇಂದ್ರ ಯಾದವ್ ಸಮಗ್ರವಾಗಿ ಮಾತನಾಡಿದರು. ನಂತರದ ಪ್ರಶ್ನೆಗಳಿಗೆ ಉತ್ತರ ನೀಡಿದರು. ನೆಹರೂ ನಂತರದ ದೇಶ ಕಂಡ ಏಕಮಾತ್ರ ಮುತ್ಸದಿ ಪ್ರಧಾನಿಯೆಂದ ಅವರು ಮನಮೋಹನ ನೀತಿಗಳ ಬಗ್ಗೆ ಮಾತನಾಡಿದ್ದು ಇಲ್ಲಿನ ಮುಖ್ಯ ಕಾಳಜಿ. ಅವರು ‘ಮನಮೋಹನಾಮಿಕ್ಸ್’ ನ್ನು ಇಡಿಯಾಗಿ ಎತ್ತಿ ಹಿಡಿದರು. ಮಾತ್ರವಲ್ಲದೆ ಅವರ ಪ್ರಧಾನಿಯಾದ ಅವಧಿ ಮಾತ್ರವಲ್ಲದೆ 1991-96 ರ ಅವರ ಅರ್ಥಮಂತ್ರಿ ಅವಧಿಯಲ್ಲಿ ಆರಂಭಿಸಿದ ನೀತಿಗಳಿಂದ ನಿರೀಕ್ಷಿಸಿದ ‘ಅನಾಹುತ’ಗಳೇನೂ ಆಗಿಲ್ಲ ಎಂದು ಪ್ರತಿಪಾದಿಸಿದರು. ಕೃಷಿ ಬಿಕ್ಕಟ್ಟಾಗಲಿ, ಅದರ ಪರಿಣಾಮಗಳಾದ 3 ಲಕ್ಷ ರೈತರ ಆತ್ಮಹತ್ಯೆಗಳಾಗಲಿ ಎಲ್.ಪಿ.ಜಿ (ಅಥವಾ ನವ-ಉದಾರವಾದಿ) ನೀತಿಗಳ ಪರಿಣಾಮಗಳು ಅಲ್ಲವೆಂದರು. ಅದಕ್ಕೆ ‘ಬೇರೆನೇ’ ಕಾರಣಗಳಿವೆಯೆಂದರು.
ಯುಪಿಎ ಅವಧಿಯಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಅತ್ಯಂತ ಹೆಚ್ಚು ಹೆಚ್ಚಳವಾಯ್ತು ಎಂದರು. ಅವರ ಪ್ರಕಾರ ಎಲ್.ಪಿ.ಜಿ ಗೂ ಕನಿಷ್ಠ ಬೆಂಭಲ ಬೆಲೆ ಕೊಡದಿರುವುದಕ್ಕೂ ಸಂಬಂಧವಿಲ್ಲ. ಅದು 1980ರ ದಶಕದಿಂದ ಬಂದ ಸಮಸ್ಯೆಯ ಮುಂದುವರಿಕೆಯಷ್ಟೇ. ಅಂತೆ. ಸಿಂಗ್ ಸರಕಾರವೇ ನೇಮಿಸಿದ್ದ ಸ್ವಾಮಿನಾಥನ್ ಕಮಿಶನ್ ಫಾರ್ಮುಲಾದ ಪ್ರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಜಾರಿ ಮಾಡಲಿಲ್ಲವೆಂಬುದನ್ನು ಮಾತ್ರ ಮರೆಮಾಚಿದರು. ಸಿಂಗ್ ಅವರ ಖಾಸಗೀಕರಣದ ನೀತಿಗಳು ಶಿಕ್ಷಣ ಮತ್ತು, ಆರೋಗ್ಯಕ್ಕೆ ಅನ್ವಯವಾಗಲಿಲ್ಲವೆಂದ ಅವರು ಪ್ರಧಾನಿಯಾಗಿದ್ದಾಗ ಸಾರ್ವಜನಿಕ ಉನ್ನತ ಶಿಕ್ಷಣಕ್ಕೆ ಆದ್ಯತೆ ಕೊಟ್ಟರು ಎಂದರು. ಸಿಂಗ್ ಅವರ ಆಡಳಿತ ಅವಧಿಯನ್ನೇ ತೆಗೆದುಕೊಂಡರೂ ನವ-ಉದಾರವಾದಿ ನೀತಿಗಳಿಂದಾಗಿ ಶಿಕ್ಷಣ ಮತ್ತು ಆರೋಗ್ಯ ದಲ್ಲಿ ಖಾಸಗೀಕರಣ ವಿಪರೀತವಾಗಿ ಬೆಳೆಯಲಿಲ್ಲ ಮತ್ತು ಸಾರ್ವಜನಿಕ ಹೂಡಿಕೆಯ ಕೊರತೆಯಿಂದ ಪರಿಸ್ಥಿತಿ ಇನ್ನಷ್ಟು ದುರ್ಭರವಾಯಿತು ಎನ್ನುವುದು, ಹಾಗೆನೇ ಅವರ ಇತರ ಹೇಳಿಕೆಗಳು ವಸ್ತುನಿಷ್ಠವೇ? ವಿಮರ್ಶಾತ್ಮಕವೇ?
ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದ 1991-96ರ ಅವಧೀಯಲ್ಲಿ ಉನ್ನತ ಶಿಕ್ಷಣವನ್ನು ಖಾಸಗೀಕರಣಕ್ಕಾಗಿ ಪುನ್ನಯ್ಯ ಸಮಿತಿಯನ್ನು ರಚಿಸಲಾಯಿತು. ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೆಬ್ಬಾಗಿಲುಗಳನ್ನು ತೆರೆಯಲಾಯಿತು. ಸಾರ್ವಜನಿಕ ಬಂಡವಾಳ ಹೂಡಿಕೆಯಲ್ಲಿ ಸರ್ಕಾರವು ತನ್ನ ಪಾಲನ್ನು ಕಡಿಮೆ ಮಾಡುತ್ತಾ ಬಂದಿತು. ಸಾವಜನಿಕ-ಖಾಸಗಿ ಪಾಲುದಾರಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರಚಾರವಾಗಿದ್ದು ಸಿಂಗ್ ಆರ್ಥಿಕ ನೀತಿಗಳ ಕಾರಣಕ್ಕೆ. ಇದೆಲ್ಲಕ್ಕೂ ಯಾವ ಉತ್ತರವಿದೆ?
ಯುಪಿಎ ಸರಕಾರದ ಮೈಲಿಗಲ್ಲು ಕಾರ್ಯಕ್ರಮಗಳಾದ ರೇಗಾ, ರೈತರ ಸಾಲಮನ್ನಾ, ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಇತ್ಯಾದಿ ಎಲ್ಲದರ ಕ್ರೆಡಿಟ್ ನ್ನು ಯಾದವ್ ಅವರು ಮನಮೋಹನ್ ಸಿಂಗ್ ಅವರಿಗೆ ಕೊಡುತ್ತಾರೆ. ಇದು ಸಹ ಅಷ್ಟೇನೂ ವಸ್ತುನಿಷ್ಠ ಹೇಳಿಕೆಯಲ್ಲ. ಈ ಎಲ್ಲ ಕಾರ್ಯಕ್ರಮಗಳ ಹಿಂದಿನ ನಿರ್ದೇಶಕ ತತ್ವಗಳು ಯುಪಿಎ ಯ ಕನಿಷ್ಠ ಕಾರ್ಯಕ್ರಮದಲ್ಲಿ ಎಡಪಕ್ಷಗಳ ಒತ್ತಡದಿಂದ ಸೇರ್ಪಡೆಯಾದವು ಮತ್ತು ಇವು ಎಡ ಪ್ರಗತಿಪರ ಪರಿಣತರಿದ್ದ ಸೋನಿಯಾ ಗಾಂಧಿ ಅದ್ಯಕ್ಷತೆಯಲ್ಲಿದ್ದ National Advisory Council (NAC) ರೂಪಿಸಿದ ಯೋಜನೆಗಳು. NAC ಯ ರಚನೆ ಸಹ ಮನಮೋಹನ್ ಅವರ ಐಡಿಯಾವೇನಲ್ಲ. ವಾಸ್ತವವಾಗಿ, ಮನಮೋಹನ ಅವರ ಉದಾರೀಕರಣದ ನೀತಿಗಳಿಗೆ ಅದು ಕಡಿವಾಣ ಹಾಕುತ್ತಿದೆ. ಅದು ‘ಅಸಂವೈಧಾನಿಕ’, ‘ಸೂಪರ್ ಕ್ಯಾಬಿನೆಟ್’ ‘ಪ್ರಧಾನಿಯನ್ನು ಡಮ್ಮಿ ಮಾಡಲಾಗಿದೆ; ಎಂಬೆಲ್ಲ ಟೀಕೆಗಳು ಬಿಜೆಪಿ ಮತ್ತು ಅದರ ಸಹಚರ ಪಕ್ಷಗಳಿಂದ ಹಾಗೂ ‘ಶುದ್ಧ ಎಲ್.ಪಿ.ಜಿ’ ಪ್ರತಿಪಾದಕರಿಂದ ಬಂದವು. ಇದರರ್ಥ ಮನಮೋಹನ ಅವರು ಇವೆಲ್ಲದರಿಂದ ಮುಕ್ತರಾಗಿದ್ದರೆ ಈ ‘ಕಲ್ಯಾಣ ಯೋಜನೆ’ಗಳನ್ನು ಅನುಸರಿಸುತ್ತಿರಲಿಲ್ಲ ಎಂದಲ್ಲವೇ? ಹಾಗಾಗಿ ಜನತೆಗೆ ಕಲ್ಯಾಣ ಯೋಜನೆಗಳ ಸುರಕ್ಷತಾ ಜಾಲ ಕೊಡುವ ಜತೆಗೆ ಎಲ್.ಪಿ.ಜಿ ನೀತಿಗಳ ರೂಪಿಸುವಿಕೆ ಮನಮೋಹನ್ ಸಿಂಗ್ ಅವರ ‘ಬಳುವಳಿ’ಯೆಂದು ಯಾದವ್ ವಾದಿಸಿದ್ದು ಸಹ ವಸ್ತುನಿಷ್ವವೂ ಅಲ್ಲ. ವಿಮರ್ಶಾತ್ಮಕವೂ ಅಲ್ಲ.
‘ಬಡವರು ಹೆಚ್ಚು ಬಡವರಾಗುತ್ತಿಲ್ಲ’
1991ರಲ್ಲಿ ಆರಂಭವಾದ ಎಲ್.ಪಿ.ಜಿ (ಅಥವಾ ನವ-ಉದಾರವಾದಿ) ನೀತಿಗಳಿಂದಾಗಿ ಅಸಮಾನತೆಯು ಅಗಾಧವಾಗಿ ಹೆಚ್ಚಿದೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಎಂಬುದು ನಿಜ. ಆದರೆ ಬಡವರು ಹೆಚ್ಚು ಬಡವರಾಗುತ್ತಿಲ್ಲ, ಅವರ ಆದಾಯ ಸಹ ಹೆಚ್ಚಿದೆ ಎಂದು ಯಾದವ್ ಅವರ ಪ್ರತಿಪಾದಿಸಿದರು. ಬಡವರ ಆದಾಯ ಹೆಚ್ಚಿದೆ ಎಂದು ಇಟ್ಟುಕೊಂಡರೂ ಜೀವನಾಗತ್ಯ ಬೆಲೆಗಳ ಸತತ ಹೆಚ್ಚಳದ ಸಂದರ್ಭದಲ್ಲಿ ಈ ಹೆಚ್ಚಿದ ಆದಾಯದಿಂದ ಬಡವರ ಕೊಳ್ಳುವ ಶಕ್ತಿ, ಜೀವನ ಮಟ್ಟ ಏರಿದೆಯೇ ಎಂಬದರ ಬಗ್ಗೆ ಅವರು ಮೌನವಾಗಿದ್ದರು. ಅದೇ ರೀತಿ ಯುಪಿಎ ಅವಧಿಯಲ್ಲಿ ಕಂಡು ಬಂದ ಬಡತನ ರೇಖೆ ದಾಟಿದ ಸಾಧನೆ ಸಹ ಎಲ್.ಪಿ.ಜಿ ನೀತಿಗಳದ್ದಲ್ಲ. ಅದರಿಂದುಂಟಾದ ಬೆಳವಣಿಗೆ ಸೃಷ್ಟಿಸಿದ ಉದ್ಯೋಗಗಳಿಂದ ಅಲ್ಲ. ವಾಸ್ತವವಾಗಿ ಮೇಲೆ ಹೇಳಿದ ಕಲ್ಯಾಣ ಯೋಜನೆಗಳ ಮತ್ತು ಬಡತನ ರೇಖೆಯನ್ನು ನಿರ್ವಚಿಸುವಾಗ ಯಾವಾಗಲೂ ಇದ್ದ ಗೋಲ್ ಮಾಲ್ ಗಳ ಒಟ್ಟು ಪರಿಣಾಮ. ಯಾದವ್ ಪ್ರಕಾರ ಎಲ್.ಪಿ.ಜಿ ಯ ಮೊದಲ 20 ವರ್ಷಗಳಲ್ಲಿ ಬಡತನ ಕಡಿಮೆಯಾಯಿತಂತೆ. ಇದು ನಿಜವೇ ಎಂದು ಬಡವರನ್ನೇ ಕೇಳಬೇಕು. ಸಿಂಗ್ ಪ್ರಧಾನಿಯಾಗಿದ್ದ ಸಂದಭದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಅಹ್ಲೂವಾಲಿಯಾ ಅವರು ಬಡತನ ರೇಖೆಯನ್ನು ಗುರುತಿಸಲು ದಿನವೊಂದಕ್ಕೆ ರೂ.26 ನಿಗದಿಪಡಿಸಿದ್ದರು. ಆ ಸಂದರ್ಭದಲ್ಲಿ ಈ ಬಡತನ ರೇಖೆಯನ್ನು ಗುರುತಿಸುವ ಹಿಪೋಕ್ರಸಿಯನ ಕುರಿತು ಹರ್ಷ ಮಂದರ್ ಅವರ ಲೇಖನಗಳನ್ನು ನೋಡಿದರೂ ಸಾಕು.
ದಲಿತರು ಎಲ್.ಪಿ.ಜಿ ನೀತಿಗಳಿಂದ ಹೆಚ್ಚು ಸಂತ್ರಸ್ತರಾದರು ಎಂದು ಯಾದವ್ ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಖಾಸಗೀಕರಣದಿಂದ ಸಾರ್ವಜನಿಕ ಕ್ಷೇತ್ರದ ನಾಶ ದಲಿತರ ಉದ್ಯೋಗವಕಾಶಗಳಿಗೆ ನೇರ ಹೊಡೆತ ಕೊಟ್ಟಿದೆ. ಖಾಸಗಿ ಕ್ಷೇತ್ರದಲ್ಲಿ ದಲಿತರನ್ನು ಅಗತ್ಯ ಶಿಕ್ಷಣ ಮತ್ತು ‘ಮೆರಿಟ್’ ಇದ್ದ ದಲಿತರಿಗೂ ಬಲಶಾಲಿ ಜಾತಿಗಳ ಪ್ರಾಬಲ್ಯದಿಂದಾಗಿ ದಕ್ಕಿಲ್ಲವೆಂಧು ಸಹ ಅವರು ಒಪ್ಪಿಕೊಳ್ಳುತ್ತಾರೆ. ಇದು ಒಟ್ಟು ಉದ್ಯೋಗಾವಕಾಶಗಳು ಮತ್ತು ಅದರಲ್ಲೂ ತಳ ಸಮುದಾಯದ ಎಲ್ಲರ ಉದ್ಯೋಗಾವಕಾಶಗಳ ಬಗೆಗೂ ನಿಜವೆಂಬುದರ ಬಗ್ಗೆ ಯಾದವ್ ಮೌನವಾಗಿರುತ್ತಾರೆ. ಮುಸ್ಲಿಮರಿಗೆ ಶಿಕ್ಷಣದಲ್ಲಾಗಲಿ ಉದ್ಯೋಗದಲ್ಲಾಗಲಿ ಪರಿಣಾಮಕಾರಿ ಮೀಸಲಾತಿ ಇಲ್ಲದ್ದರಿಂದ ಅವರನ್ನು ಎಲ್.ಪಿ.ಜಿ ನೀತಿಗಳು ಬಾಧಿಸಿಲ್ಲವೆಂದು ಯಾದವ್ ಹೇಳುತ್ತಿಲ್ಲ. ಬಹುಪಾಲು ಮುಸ್ಲಿಮರು ಕರಕುಶಲ ಉತ್ಪನ್ನಗಳಲ್ಲಿ ತೊಡಗಿದ್ದು ಎಲ್.ಪಿ.ಜಿ ನೀತಿಗಳ (ಯಾದವ್ ಅವರ ಪ್ರಕಾರ) ‘ಉದ್ದೇಶಪೂರ್ವಕವಲ್ಲದ’ ಪರಿಣಾಮವಾಗಿ ಅವುಗಳ ನಾಶವಾಗಿದ್ದರಿಂದ ಮುಸ್ಲಿಮರನ್ನು ‘ಪರೋಕ್ಷವಾಗಿ’ ಬಾಧಿಸಿತು ಎನ್ನುತ್ತಾರೆ. ಸಾಚಾರ್ ಸಮಿತಿಯ ವರದಿಯನ್ನು ಯಾರು ಮೂಲೆಗುಂಪು ಮಾಡಿದರು? ಎನ್ನುವ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ? ಹಾಗಾದರೆ ಎಲ್.ಪಿ.ಜಿ ಹರಿಯಬಿಟ್ಟ ಈ ಆರ್ಥಿಕ ಬೆಳವಣಿಗೆ ಯಾರಿಗೆ ಪ್ರಯೋಜನವಾಯಿತು? ಎಂಬುದನ್ನು ಯಾದವ್ ಹೇಳುವುದಿಲ್ಲ. ಕೊನೆಗೂ ಯಾದವ್ ಪ್ರಕಾರ ಸಿಂಗರ ಎಲ್.ಪಿ.ಜಿ ಯ ಸಾಧನೆ ಜಿಡಿಪಿಯ ಹೆಚ್ಚಳದ ಸರಾಸರಿ ದರ ಮಾತ್ರ.
‘ಸಿಂಗ್ ಎಲ್.ಪಿ.ಜಿ ನೀತಿಗಳು ಹಿಂದುತ್ವ-ಫ್ಯಾಸಿಸಂ ಮತ್ತು ಮೋದಾನಿನಾಮಿಕ್ಸ್ ಬೇರು – ಸಾಂಪ್ರದಾಯಿಕ ಎಡಪಂಥೀಯರ ‘ಮೈಗಳ್ಳ’ ವಾದ’! ಜಾಗೃತ ಕರ್ನಾಟಕ
ಇದನ್ನೂ ಓದಿ : ನವದೆಹಲಿ| ಉನ್ನಾವೊ ಅತ್ಯಾಚಾರ ಪ್ರಕರಣ: ಜಾಮೀನು ವಿಸ್ತರಣೆ ನಿರಾಕರಿಸಿದ ಹೈಕೋರ್ಟ್
ಕೊನೆಯದಾಗಿ ಮನ್ ಮೋಹನ್ ಸಿಂಗ್ 1991-96 ಅವಧಿಯಲ್ಲಿ ಆರಂಭಿಸಿದ ಎಲ್.ಪಿ.ಜಿ ನೀತಿಗಳು ಮತ್ತು ಅದರ ಸಾಮಾಜಿಕ-ಆರ್ಥಿಕ ಪರಿಣಾಮಗಳೇ ಇಂದು ದೇಶ ಎದುರಿಸುತ್ತಿರುವ ಕೋಮುವಾದ ಮತ್ತು ಹಿಂದುತ್ವ-ಫ್ಯಾಸಿಸಂ ತಲೆಯೆತ್ತಿ ಬೇರೂರಲು ಮತ್ತು ಇನ್ನಷ್ಟು ಕಠಿಣ ಮೋದಾನಿನಾಮಿಕ್ಸ್ ನೀತಿಗಳ ಬೇರು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಅದು ಸಾಂಪ್ರದಾಯಿಕ ಎಡಪಂಥೀಯರ ‘ಮೈಗಳ್ಳ’ (ಅಂದರೆ ಬಹುಶಃ ಹುರುಳಿಲ್ಲದ) ವಾದ. ಇದಕ್ಕೆ ಪುರಾವೆ ಕೊಡಬೇಕು ಎನ್ನುತ್ತಾರೆ.
ಯಾದವ್ ಎಲ್.ಪಿ.ಜಿ ಮತ್ತು ‘ಮನಮೋಹನಾಮಿಕ್ಸ್’ ನ್ನು ಇಡಿಯಾಗಿ ಎತ್ತಿ ಹಿಡಿಯುವುದಲ್ಲದೆ, ಆ ಮೂಲಕ ಎಲ್.ಪಿ.ಜಿ ಗೂ ವೈಟ್ ವಾಶ ಮಾಡುತ್ತಾರೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ನಾನೂ ಎಲ್.ಪಿ.ಜಿ ಮತ್ತು ‘ಮನಮೋಹನಾಮಿಕ್ಸ್’ ನ್ನು ’ಸಾಂಪ್ರದಾಯಿಕ ಎಡಪಂಥೀಯ’ ರಂತೆ ಕಟುವಾಗಿ ವಾದದಲ್ಲಿ ಮಾತ್ರವಲ್ಲ ಬೀದಿಯಲ್ಲೂ ವಿರೋಧಿಸಿದ್ದೆ. ಆದರೆ ಈಗ ಮರುಪರಿಶೀಲನೆ ಮಾಡುವಾಗ ಈ ಅಭಿಪ್ರಾಯಗಳಿಗೆ ಬಂದಿದ್ದೇನೆ ಎಂದರು. ಆದರೆ ’ಸಾಂಪ್ರದಾಯಿಕ ಎಡಪಂಥೀಯ’ ಈ ಮರುಚಿಂತನೆ ಮಾಡುತ್ತಿಲ್ಲವೆಂದು ಹೆಜ್ಜೆ ಹೆಜ್ಜೆಗೂ ಟೀಕಿಸಿದರು. ಅವರು ಇನ್ನೂ ತಮ್ಮ ವಾದಕ್ಕೆ ಅಂಟಿಕೊಂಡಿದ್ದಾರೆ. ಬರಿಯ ‘ಖರ್ಚಿನ ಖಾತೆ’ ಬಗ್ಗೆ ಮಾತ್ರ ಅವರ ಸೀಮಿತ ಚಿಂತನೆ. ಉತ್ಪಾದನೆ, ಬೆಳವಣಿಗೆ ಬಗ್ಗೆ ಅವರ ಚಿಂತನೆಯಿಲ್ಲ. ಬಂಡವಾಳಶಾಹಿ, ಸಮಾಜವಾದದ ಬೈನರಿಯಲ್ಲಿ ಮುಳುಗಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯ ಒಳಗಿನ ರಾಜಕೀಯ ಸಾಧ್ಯತೆಗಳನ್ನು ಅನ್ವೇಷಿಸುತ್ತಿಲ್ಲ. ಎಲ್.ಪಿ.ಜಿ ಗೆ ಬದಲಿ ನೀತಿಗಳನ್ನು ಗಂಭೀರವಾಗಿ ಪ್ರತಿಪಾದಿಸುತ್ತಿಲ್ಲ. ’ಸಾಂಪ್ರದಾಯಿಕ ಎಡಪಂಥೀಯ’ರ ಧೋರಣೆಗಳನ್ನು ‘ಮೈಗಳ್ಳ’ ಎಂದು ಪದೇ ಪದೇ ಅಣಕವಾಡಿದರು.
ಯಾದವ್ ಅವರ ಈ ಬೇಜವಾಬ್ದಾರಿ ಬೀಸು ಹೇಳಿಕೆಗಳಿಗೆ ಎಡಪಕ್ಷಗಳ ಪರವಾಗಿ ಉತ್ತರಿಸಬೇಕಾಗಿದೆ. ಎಲ್.ಪಿ.ಜಿ ಮತ್ತು ‘ಮನಮೋಹನಾಮಿಕ್ಸ್’ ನ ಮೇಲೆ ಹೇಳಿದ ಎಲ್ಲಾ ಗೊಂದಲಗಳು, ವೈರುಧ್ಯಗಳು, ಕಳೆದ ಕೆಲವು ವರ್ಷಗಳ ಯಾದವ್ ಅವರ ರಾಜಕೀಯ ಚಿಂತನೆಗಳ ಪಲ್ಲಟದ ಕಾರಣದಿಂದ ಉಂಟಾದವು. ಲೋಹಿಯಾ ಸಮಾಜವಾದದಿಂದ ಆರಂಭಿಸಿ, ಒನ್-ಪಾಯಿಂಟ್ ಭ್ರಷ್ಟಾಚಾರ ವಿರೋಧ ಚಳುವಳಿ, ಎಎಪಿ, ಸ್ವರಾಜ್ ಚಳುವಳಿ ಮತ್ತು ಪಕ್ಷದ ಮೂಲಕ ಹಾದು ‘ಭಾರತ ಜೋಡೋ ಯಾತ್ರೆ’ಯಲ್ಲಿ ‘ಜ್ಞಾನೋದಯ’ ವಾಗಿ ಕಾಂಗ್ರೆಸ್ ಪರ ಬುದ್ಧಿಜೀವಿ (ಕಾಂ.ಬು.ಜಿ) – ವರೆಗಿನ ಅವರ ರಾಜಕೀಯ ಪಲ್ಲಟಗಳ ಪಯಣ ಅವರ ವೈಯಕ್ತಿಕ ಆಯ್ಕೆ. ಆದರೆ ಈ ಪಲ್ಲಟಗಳಲ್ಲಿ ಅವರ ರಾಜಕೀಯ ದೃಷ್ಟಿಕೋಣ ಇವೆಲ್ಲದರ ಕಲಸು ಮೇಲೋಗರವಾಗಿದೆ ಎಂಬುದು ಸ್ಪಷ್ಟ.
ಸಿಂಗ್ ಗೆ ‘ಕ್ರೆಡಿಟ್’ ಕೊಡುವ ಯುಪಿಎ ಕಲ್ಯಾಣ ಯೋಜನೆ ’ಸಾಂಪ್ರದಾಯಿಕ ಎಡಪಂಥೀಯ’ ಒತ್ತಡದಿಂದಾಗಿ ಎಂಬ ಬಗ್ಗೆ ಜಾಣ ಕುರುಡು
ಈ ಸಂವಾದದಲ್ಲಿ ಮೇಲೆ ತೋರಿಸಿದಂತೆ ಅವರು ತಮ್ಮ ಹಿಂದಿನ ಕನಿಷ್ಠ ವಸ್ತುನಿಷ್ಠತೆ ಮತ್ತು ವಿಮರ್ಶಾತ್ಮಕತೆಯನ್ನು ಕಳೆದುಕೊಂಡಂತಿದೆ. ಹಾಗಾಗಿಯೇ ಯುಪಿಎ ಅವಧಿಯ ಸಾಮಾಜಿಕ ಕಲ್ಯಾಣ ಯೋಜನೆ ಮತ್ತು ಅವರು ಮನಮೋಹನ ಸಿಂಗ್ ಅವರಿಗೆ ‘ಕ್ರೆಡಿಟ್’ ಕೊಡುವ ಎಲ್ಲಾ ಸಕಾರಾತ್ಮಕ ಬೆಳವಣಿಗೆಗಳು ’ಸಾಂಪ್ರದಾಯಿಕ ಎಡಪಂಥೀಯ’ ಒತ್ತಡದಿಂದಾಗಿ ಎಂಬ ಸರಳ ಸತ್ಯದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಾರೆ.
ಸ್ವತಂತ್ರ ಬಾರತದ ಪ್ರಭುತ್ವ ಬೂರ್ಜ್ವಾ ಭೂಮಾಲಕ ವರ್ಗಗಳ ಕೈಯಲ್ಲಿದೆ. ಸರಕಾರದ ಎಲ್ಲ ನೀತಿಗಳು ಈ ವರ್ಗಗಳ ಹಿತಾಸಕ್ತಿಗಳನ್ನು ಎತ್ತಿ ಹಿಡಿಯಲು. ದುಡಿಯುವ ಜನರು ಸಿಡಿದೆದ್ದು ತಮ್ಮ ಆಳ್ವಿಕೆಗೆ ಅಪಾಯವೊಡ್ಡದಷ್ಟು ಮಾತ್ರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಾರೆ. ದುಡಿಯುವ ಜನರನ್ನು ಸಂಘಟಿಸಿ ಹೋರಾಟ ಮಾಡದೆ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದು ಸಾಧ್ಯವಿಲ್ಲವೆಂಬುದು ’ಸಾಂಪ್ರದಾಯಿಕ ಎಡಪಂಥೀಯ’ ಪಕ್ಷಗಳಿಗೆ ಮತ್ತು ಬುದ್ಧಿಜೀವಿಗಳಿಗೆ ಚೆನ್ನಾಗಿ ತಿಳಿದಿದೆ. ಇದು ‘ವಾಸ್ತವ ಪರಿಸ್ಥಿತಿಯ ನಿರ್ದಿಷ್ಟ ಅಧ್ಯಯನ ಮತ್ತು ಅಂಕಿ-ಅಂಶ ಆಧಾರಿತ ವಿಶ್ಲೇಷಣೆಯ ಫಲ, ಮೈಗಳ್ಳ’ ಧೋರಣೆಯಲ್ಲ. ಸಂರಚನಾತ್ಮಕ ಬದಲಾವಣೆಗಳನ್ನು ಮಾಡದೆ ಮತ್ತು ದುಡಿಯುವ ಜನರ ಜೀವನ ಮಟ್ಟ ಏರಿಸದೆ ಆಳುವ ವರ್ಗಗಳ ನೀತಿಗಳು ಬಿಕ್ಕಟ್ಟುಗ್ರಸ್ತವಾಗಿವೆ. ಈ ನೀತಿಗಳನ್ನು ಬದಲಾಯಿಸಲು ದುಡಿಯುವ ಜನರನ್ನು ಅಣಿನೆರೆಸುವುದು ಅಗತ್ಯ ಎಂಬುದು ಅವರಿಗೆ ಗೊತ್ತಿದೆ. ಇದಕ್ಕಾಗಿ ಆಯಾ ಘಟ್ಟದಲ್ಲಿ ಬದಲಿ ನೀತಿಗಳನ್ನು ನಿರ್ದಿಷ್ಟ ಅಧ್ಯಯನ-ವಿಶ್ಲೇಷಣೆಗಳ ಆಧಾರದ ಮೇಲೆ (ಮೈಗಳ್ಳ ಫಾರ್ಮುಲಾಗಳಲ್ಲ) ಪ್ರತಿಪಾದಿಸುತ್ತಾ ಬಂದಿವೆ.
ಆಳುವ ವರ್ಗಗಳ ಅಭಿವೃದ್ಧಿ ನೀತಿಗಳಲ್ಲಿನ ವಿವಿಧ ಹಂತಗಳು – 50-60-70ರ ದಶಕಗಳ ಲೈಸೆನ್ಸ್,-ಪರ್ಮಿಟ್ ರಾಜ್, 1980ರ ದಶಕದ ಉದಾರೀಕರಣ, 1991ರ ಎಲ್.ಪಿ.ಜಿ, ಆ ಮೇಲಿನ ವಿವಿಧ ಸರಕಾರಗಳಲ್ಲಿ ಎಲ್.ಪಿ.ಜಿ,ಯ ವಿಕಾಸ – ಇವು ಆಳುವ ವರ್ಗಗಳ ಅಭಿವೃದ್ಧಿ ನೀತಿಗಳು ಸೃಷ್ಟಿಸಿದ ಬಿಕ್ಕಟ್ಟುಗಳನ್ನು ದುಡಿಯುವ ಜನರಿಗೆ ಪ್ರತಿಕೂಲವಾಗಿ ಪರಿಹರಿಸುವ, ಪ್ರಯತ್ನಗಳು. ಈ ನೀತಿಗಳಲ್ಲಿ ಜಾಗತಿಕ ರಾಜಕೀಯ-ಆರ್ಥಿಕ ಪರಿಸ್ಥಿತಿಗಳೂ ಪ್ರಮುಖ ಪಾತ್ರ ವಹಿಸುತ್ತವೆ. 1991ರ ವಿದೇಶಿ ವಿನಿಮಯ ಬಿಕ್ಕಟ್ಟು 1980ರ ಉದಾರೀಕರಣ ದೇಶೀಯ ಬೇಡಿಕೆ ಹೆಚ್ಚಿಸುವುದರ ಬದಲು, ವಿದೇಶೀ ತಂತ್ರಜ್ಞಾನ ಬಂಡವಾಳ ಇವುಗಳ ಆಮದು ಮತ್ತು ತಯಾರಾದ ಉತ್ಪನ್ನಗಳ ರಫ್ತು ಆಧಾರಿತ ಬೆಳವಣಿಗೆಯ ವಿಫಲ ನೀತಿಯ ಫಲ. ಇಂತಹ ಪ್ರತಿಯೊಂದು ಬಿಕ್ಕಟ್ಟಿನ ಪರಿಹಾರಕ್ಕೆ ಇತರ ದಾರಿಗಳಿದ್ದವು ಎಂಬುದನ್ನು ’ಸಾಂಪ್ರದಾಯಿಕ ಎಡಪಂಥೀಯ’ ಪಕ್ಷಗಳು ಮತ್ತು ಬುದ್ಧಿಜೀವಿಗಳು ಪ್ರತಿಪಾದಿಸುತ್ತಾ ಬಂದಿದ್ದಾರೆ.
ಬಂಡವಾಳಶಾಹಿ ಸಮಾಜವಾದಿ ಬೈನರಿಗಳಲ್ಲೂ ಅವರು ಮುಳುಗಿಲ್ಲ. ಬಂಡವಾಳಶಾಹಿಯಿಂದ ಸಮಾಜವಾದದತ್ತ ವಿಕಾಸದ ಪ್ರಕ್ರಿಯೆ ದೀರ್ಘ ಮತ್ತು ಸಂಕೀರ್ಣವಾದ್ದು ಮತ್ತ ಅದರಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ದುಡಿಯುವ ಜನರ ಸಂಘಟನೆ ಮತ್ತು ರಾಜಕೀಯ ಪ್ರಜ್ಞೆಯ ಮಟ್ಟ ಎಂಬ ಅರಿವು ಅವರಿಗೆ ಇದೆ. ಕೇರಳ, ಪ.ಬಂಗಾಳ ತ್ರಿಪುರಾಗಳಲ್ಲಿ ಸರಕಾರ ರಚಿಸಿದಾಗ ‘ಕೆಲಸಕ್ಕಾಗಿ ಕೂಲಿ’, ಕೃಷಿ ಉತ್ಪಾದಕತೆ ಹೆಚ್ಚಳ, ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ, ಪಡಿತರ ವ್ಯವಸ್ಥೆಯ ಸಾರ್ವತ್ರೀಕರಣ, ಶಿಕ್ಷಣ ಆರೋಗ್ಯ ದಲ್ಲಿ ಹೆಚ್ಚಿನ ಹೂಡಿಕೆ – ಮುಂತಾದ ಬದಲಿ ನೀತಿಗಳನ್ನು ಜಾರಿ ಮಾಢಿದ್ದವು, ತಮ್ಮ ಅಧ್ಯಯನ-ವಿಶ್ಲೇಷಣೆಗಳ ಆಧಾರದ ಮೇಲೆ, 1991ರಲ್ಲಿ ಮತ್ತು ಈಗಲೂ ಎಲ್.ಪಿ.ಜಿ ಬಿಟ್ಟು ಬೇರೆ ದಾರಿಯಿಲ್ಲ. ಎಲ್.ಪಿ.ಜಿ ಗಳನ್ನು ಒಟ್ಟು ಸೇರಿಸಿ ವಿರೋಧಿಸುವುದು ತಪ್ಪು. ಎಂಬ ಯಾದವ್ ಅವರ ‘ಮೈಗಳ್ಳ’ ಚಿಂತನೆಯನ್ನು ’ಸಾಂಪ್ರದಾಯಿಕ ಎಡಪಂಥೀಯ’ ಪಕ್ಷಗಳು ಮತ್ತು ಬುದ್ಧಿಜೀವಿಗಳು ತಿರಸ್ಕರಿಸುತ್ತಾರೆ.
1991ರ ಎಲ್.ಪಿ.ಜಿ ಐ.ಎಂ.ಎಫ್ ಸಾಲಕ್ಕೆ ಬದಲಾಗಿ ಹೊರಿಸಿದ ಪ್ಯಾಕೇಜ್. ಇದರಲ್ಲಿ ಯಾವುದೇ ಆಯ್ಕೆಯಿರಲಿಲ್ಲ. ಆರ್,ಕೆ.ಲಕ್ಷ್ಮಣ್ (ಸಿಂಗ್ ಮತ್ತು ರಾವ್ ದ್ವಯರು ‘ಐ.ಎಂ.ಎಫ್ ನಮ್ಮ ಕೈ ತರುಚಲಿಲ್ಲ, ನಾವೇ ತಿರಿಚಿಕೊಂಡೆವು’) ಕಾರ್ಟೂನ್ ನಲ್ಲಿ ಬಂದು ಇದು ಜನಜನಿತವಾಗಿತ್ತು. ಭಾರತದ ಗುತ್ತೇದಾರಿ ಗುಂಪುಗಳಿಗೂ ಇದು ಆಪ್ಯಾಯಮಾನವಾಗಿತ್ತು. ಆದರೆ ದೇಶಕ್ಕೆ (ಅಂದರೆ ಸಣ್ಣ-ಮಧ್ಯಮ ಉದ್ಯಮಗಳು, ಸೇರಿದಂತೆ ಜನಕ್ಕೆ) ಅಲ್ಲ. 1991-96 ಅವಧಿಯಲ್ಲಿ ಆರಂಭಿಸಿದ ಎಲ್.ಪಿ.ಜಿ ನೀತಿಗಳು ಮತ್ತು ಅದರ ಸಾಮಾಜಿಕ-ಆರ್ಥಿಕ ಪರಿಣಾಮಗಳೇ ಇಂದು ದೇಶ ಎದುರಿಸುತ್ತಿರುವ ಕೋಮುವಾದ ಮತ್ತು ಹಿಂದುತ್ವ-ಫ್ಯಾಸಿಸಂ ತಲೆಯೆತ್ತಿ ಬೇರೂರಲು ಮತ್ತು ಇನ್ನಷ್ಟು ಕಠಿಣ ಮೋದಾನಿನಾಮಿಕ್ಸ್ ನೀತಿಗಳ ಬೇರು. 1991ರ ಎಲ್.ಪಿ.ಜಿ ನೀತಿಗಳ ಅನಾವರಣ ನಂತರ ರಾವ್ ಸರಕಾರ ಮೂಗಿನ ಕೆಳಗೆ 1992ರಲ್ಲಿ ಬಾಬರಿ ಮಸೀದಿ ಬೀಳಿಸಿದ್ದು, 1980ರ ದಶಕದ ವರೆಗೆ ಮಿತಿಯಲ್ಲಿದ್ದ ಹಿಂದುತ್ವ-ಫ್ಯಾಸಿಸ್ಟ್ ಚಳುವಳಿ ತೀವ್ರಗತಿಯಲ್ಲಿ ವಿಸ್ತಾರವಾದ್ದು, ಮುಂದಿನ 2-3 ದಶಕಗಳಲ್ಲಿ ವಿಸ್ತಾರವಾದ ನೆಲೆ ಪಡೆದುಕೊಂಡದ್ದು ಕಾಕತಾಳೀಯವೇನಲ್ಲ. ಈಗಲೂ ನವ-ಉದಾರವಾದಿ ನೀತಿಗಳ ವಿರುದ್ಧ ತೀವ್ರ ಅಣಿ ನೆರೆಸುವಿಕೆಯಿಲ್ಲದೆ ಕೋಮುವಾದ ಮತ್ತು ಹಿಂದುತ್ವ-ಫ್ಯಾಸಿಸಂ ವಿರುದ್ಧ ಹೋರಾಟ ಸಾಧ್ಯವಿಲ್ಲವೆಂಬುದು ’ಸಾಂಪ್ರದಾಯಿಕ ಎಡಪಂಥೀಯ’ ಪಕ್ಷಗಳ ಮತ್ತು ಬುದ್ಧಿಜೀವಿಗಳ ವಿಶ್ಲೇಷಣೆ ಮತ್ತು ಆಚರಣೆ ಆಧಾರಿತ ತಿಳುವಳಿಕೆ. ಇದಕ್ಕೆ ಕಾಲಕಾಲಕ್ಕೆ ಬದಲಿ ನೀತಿಗಳನ್ನು ರೂಪಿಸುತ್ತಲೇ ಇವೆ. ಇದು ಬರಿಯ ‘ಮೈಗಳ್ಳ’ ಧೋರಣೆಯಲ್ಲ. ಗಂಭೀರ ವಿಶ್ಲೇಷಣೆ ಆಧಾರಿತಯೆಂಬುದಕ್ಕೆ ಕೆಳಗಿನ ಎರಡು ಲಿಂಕ್ ಗಳಲ್ಲಿರುವ ಪ್ರೊ.ಪ್ರಭಾತ್ ಪಟ್ನಾಯಕ್ ಅವರ ಲೇಖನಗಳೇ ಸಾಕ್ಷಿ.
https://lokayat.org.in/2019/a-modest-tax-on-billionaires-can-ensure-basic-economic-rights-to-all/
https://cpim.org/wp-content/uploads/old/marxist/prabhat.pdf
ಜನಪರ ಕಾಳಜಿಗಳ ವಿಷಯದ ಕುರಿತು ಚರ್ಚೆ ಸಂವಾದ ಗಳನ್ನು ಸಂಘಟಿಸುತ್ತಿದ್ದು, ಜನಪರ ಕಾಳಜಿ ಇರುವ ಯುವಜನರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರನ್ನು ಅಣಿ ನೆರೆಸುತ್ತಿದ್ದ ಮತ್ತು ಒಂದು ಹೊಸ ರಾಜಕೀಯ ಸಂಘಟನೆ ರಚಿಸಲು ಮುನ್ನುಡಿಯಾಗಿದ್ದ ‘ಜಾಗೃತ ಕರ್ನಾಟಕ’ದ ಈ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಇದು ಅತ್ಯಂತ ನಿರಾಶಾದಾಯಕ ಮುನ್ನುಡಿಯೆಂದು ಹೇಳದೆ ವಿಧಿಯಿಲ್ಲ
‘ಜಾಗೃತ ಕರ್ನಾಟಕ’ ಈ ವಿಷಯವನ್ನು ಆರಿಸಿಕೊಂಡು ಪ್ರೊ.ಯೋಗೇಂದ್ರ ಯಾದವ್ ಅವರ ಮೂಲಕ ಮನಮೋಹನ ನೆನಪು ಹೆಸರಲ್ಲಿ ಎಲ್.ಪಿ.ಜಿ ‘ವೈಟ್ ವಾಶ್’ ಮಾಢುವ, ‘ಸಾಂಪ್ರದಾಯಿಕ ಎಡ ಪಂಥೀಯ’ರನ್ನು’ ದೂಷಿಸುವ ಕಾರ್ಯಕ್ರಮ ಏಕೆ ಸಂಘಟಿಸಿತು ಎಂಬುದು ಅಚ್ಚರಿಯ ಮತ್ತು ಆತಂಕದ ವಿಷಯವಾಗಿದೆ. ಜನಪರ ಕಾಳಜಿಗಳ ವಿಷಯದ ಕುರಿತು ಚರ್ಚೆ ಸಂವಾದ ಗಳನ್ನು ಸಂಘಟಿಸುತ್ತಿದ್ದು, ಜನಪರ ಕಾಳಜಿ ಇರುವ ಯುವಜನರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರನ್ನು ಅಣಿ ನೆರೆಸುತ್ತಿದ್ದ ಮತ್ತು ಒಂದು ಹೊಸ ರಾಜಕೀಯ ಸಂಘಟನೆ ರಚಿಸಲು ಮುನ್ನುಡಿಯಾಗಿದ್ದ ‘ಜಾಗೃತ ಕರ್ನಾಟಕ’ದ ಈ ಕಾರ್ಯಕ್ರಮ ಎಂದು ಹೇಳಲಾಗಿತ್ತು. ಇದು ಅತ್ಯಂತ ನಿರಾಶಾದಾಯಕ ಮುನ್ನುಡಿಯೆಂದು ಹೇಳದೆ ವಿಧಿಯಿಲ್ಲ. ಎಲ್ಲವನ್ನು ರಿ-ವಿಸಿಟ್ ಮಾಡಬಹುದು ಎಂಬ ಸಂವಾದದಲ್ಲಿ ಎಲ್.ಪಿ.ಜಿ ಯನ್ನು ವಿರೋಧಿಸುವ ಯಾರನ್ನೂ ಕರೆಯದಿರುವುದು ಸಹ ಅಚ್ಚರಿಯ ವಿಷಯವೇ. ಸಂವಾದದಲ್ಲಿ ಭಾಗವಹಿಸಿದ ಯುವ ಬುದ್ಧಿಜೀವಿಗಳಿಂದ ಪ್ರಾಮಾಣಿಕ ಜನಪರ ಕಾಳಜಿಯ ಉತ್ತಮ ಪ್ರಶ್ನೆಗಳು ಬಂದರೂ, ಅವುಗಳಿಗೆ ಉತ್ತರ ಎಲ್.ಪಿ.ಜಿ ‘ವೈಟ್ ವಾಶ್’ ಮಾಢುವ, ‘ಸಾಂಪ್ರದಾಯಿಕ ಎಡ ಪಂಥೀಯ’ರನ್ನು’ ದೂಷಿಸುವತ್ತಲೇ ಹೋಗುತ್ತಿತ್ತು. ಫೋನ್ ಮಾಡಿ ಒತ್ತಡ ಹಾಕಿದ ಮೇಲೆ ಅವಕಾಶ ಕೊಟ್ಟು ಬಂದ ಸಭಿಕರಿಂದ ಬಂದ ಪ್ರಶ್ನೆ “3.5 ಲಕ್ಷ ರೈತರ ಆತ್ಮಹತ್ಯೆಗಿಂತ ಹೆಚ್ಚಿನ ಅನಾಹುತ ಏನು ನಿರೀಕ್ಷಿಸುತ್ತಿದ್ದೀರಿ’ ಎಂಬ ಪ್ರಶ್ನೆಯನ್ನು ಸಹ ತಿಪ್ಪೆ ಸಾರಿಸಲಾಯಿತು. ಪ್ರೊ. ಎ ನಾರಾಯಣ ಅವರ ಅಧ್ಯಕ್ಷೀಯ ಭಾಷಣದ ದೋರಣೆ ಸ್ವಲ್ಪ ಭಿನ್ನವಾಗಿತ್ತು. ಆದರೆ ಈ ಕಾರ್ಯಕ್ರಮ ಒಟ್ಟಾರೆಯಾಗಿ ಅತ್ಯಂತ ಆತಂಕಕಾರಿಯಾಗಿತ್ತು.
ಇವೆಲ್ಲ ಗಮನಿಸಿದರೆ ರಾಡಿಕಲೈಸ್ ಆಗುತ್ತಿರುವ ಯುವಜನರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರಲ್ಲಿ ಕಾಂಗ್ರೆಸ್ ನ “ಮೃದು ಹಿಂದುತ್ವ ಮತ್ತು ಮಾನವೀಯ ಮುಖದ ನವ-ಉದಾರವಾದಿ ಬಂಡವಾಳಶಾಹಿ” ದೋರಣೆ ಕುರಿತು ಜಾಗೃತಿ ಮೂಡಿಸಲು “ಜಾಗೃತ ಕರ್ನಾಟಕ” ಹೊರಟಂತಿದೆ. ಇಂತಹ “ಜಾಗೃತ ಕರ್ನಾಟಕ ಕಾಂಗ್ರೆಸ್’ ಆಗುವ ಅಪಾಯದಿಂದ ಪಾರಾಗಿ, ಕಾರ್ಪೊರೆಟ್ ಹಿಂದುತ್ವದ ಕರಾಳತೆಯ ಕುರಿತು ವ್ಯಾಪಕ ಜಾಗೃತಿ ಮತ್ತು ಬದಲಿ ನೀತಿಗಳನ್ನು ಪ್ರತಿಪಾದಿಸುವ ಮತ್ತು ಎಡ ಪ್ರಗತಿಪರ ಜನಪರ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಕ್ರೋಢಿಕರಿಸುವತ್ತ ಸಾಗಲಿ ಎಂಬುದು ನಮ್ಮ ಆಶಯ.