ಜಿನೀವಾ: ನಿಯೊಕೋವ್ ಮನುಷ್ಯರಿಗೆ ಅಪಾಯಕಾರಿಯೇ ಎಂಬುದರ ಕುರಿತು ಮತ್ತಷ್ಟು ಅಧ್ಯಯನದ ಅಗತ್ಯವಿದೆ. ಮನುಷ್ಯರ ಮೇಲೆ ನಿಯೋಕೋವ್ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಯಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೊನಾ ವೈರಸ್ ಹೊಸ ಹೊಸ ರೂಪಾಂತರಿಗಳು ಭಾರತ ಸೇರಿದಂತೆ ಇಡೀ ಜಗತ್ತಿನಲ್ಲೇ ತೀವ್ರ ಆತಂಕ ಸೃಷ್ಟಿಸುತ್ತಿರುವುದರ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳ ನಡುವೆ ಹರಡುವ ನಿಯೋಕೋವ್ ಹೊಸ ಕೊರೊನಾ ವೈರಸ್ ಪತ್ತೆಯಾಗಿದೆ. ನಿಯೋಕೋವ್ ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದರೂ ಸಹ ಅದರ ಬಗ್ಗೆ ಅಧ್ಯಯನ ನಡೆಸಬೇಕು.
ಈ ನಿಟ್ಟಿನಲ್ಲಿ ವರ್ಲ್ಡ್ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ , ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಜತೆ ನಿಕಟವಾಗಿ ಕೆಲಸ ನಿರ್ವಹಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಹೊಸ ಕೊರೊನಾ ವೈರಸ್ ನಿಯೋಕೋವ್ ಇನ್ನೂ ಮನುಷ್ಯರಿಗೆ ಹರಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಈ ವೈರಸ್ ಬಾವಲಿಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಈ ವೈರಸ್ ಪ್ರಾಣಿಗಳಲ್ಲಿ ಮಾತ್ರ ಕಂಡುಬಂದಿದೆ. ಆದರೆ ಅದರ ಮತ್ತಷ್ಟು ರೂಪಾಂತರಿಗಳು ಮನುಷ್ಯರಿಗೆ ತಗುಲಬಹುದು ಎಂದು ಸಂಶೋಧಕರು ಹೇಳಿದ್ದಾರೆ.
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿಯ ಪ್ರಕಾರ, ಹೊಸ ಕೊರೊನಾ ವೈರಸ್ ನಿಯೋಕೋವ್ ಸಹ ಎಂಇಆರ್‌ಎಸ್-ಕೋವ್ ವೈರಸ್‌ಗೆ ಸಂಬಂಧಿಸಿದ್ದಾಗಿದೆ. ಇದು, 2012 ಮತ್ತು 2015ರಲ್ಲಿ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು.
ನಿಯೋಕೋವ್ ವೈರಸ್ ತುಂಬಾ ಸಾಂಕ್ರಾಮಿಕವಾಗಿದ್ದು, ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮೂವರು ಸೋಂಕಿತರಲ್ಲಿ ಒಬ್ಬ ರೋಗಿ ಸಾವನ್ನಪ್ಪಬಹುದು ಎಂದು ಅಂದಾಜಿಸಿದ್ದಾರೆ.
ಚೀನಾದ ವುಹಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಸಾರ್ಸ್-ಕೋವ್-2 ರೀತಿಯಲ್ಲಿಯೇ ನಿಯೊಕೋವ್ ಮಾನವ ಜೀವಕೋಶಗಳಿಗೆ ಹಾನಿಕಾರಕವಾಗುವ ಭೀತಿಯಿದೆ. ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್‌ಎಸ್) ಎಂಬ ಉಸಿರಾಟ ತೊಂದರೆ ಕಾಯಿಲೆಗೆ ಕಾರಣವಾಗುವ ವೈರಸ್‌ಗೆ ಇರುವಂತಹ ಗುಣಲಕ್ಷಣಗಳನ್ನೇ ನಿಯೊಕೋವ್ ವೈರಾಣು ಹೊಂದಿದೆ ಎನ್ನಲಾಗುತ್ತಿದೆ.
ಮನುಷ್ಯರಲ್ಲಿ ಕಂಡುಬರುತ್ತಿರುವ ಶೇ 75ಕ್ಕಿಂತ ಹೆಚ್ಚು ಸಾಂಕ್ರಾಮಿಕ ರೋಗಗಳ ಮೂಲ ಕಾಡು ಪ್ರಾಣಿಗಳದ್ದಾಗಿವೆ.