ಹಿಂದೂ ರಾಷ್ಟ್ರಕ್ಕೆ ‘ಸಂವಿಧಾನ’ ಸಿದ್ಧವಾಗಿದೆಯಂತೆ..! ಈಗಿರುವ ಸಂವಿಧಾನ ಭಾರತ ಅಥವಾ ಇಂಡಿಯಾ ರಾಷ್ಟ್ರಕ್ಕೆ ಮಾಡಿರುವ – ಮಾಡುತ್ತಿರುವ ತಪ್ಪಾದರೂ ಏನು..?

ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಿಗಾಗಿ ಒಡಲಾಳದಿಂದ ಬರೆದ ನಮ್ಮ ಲಿಖಿತ ಸಂವಿಧಾನಕ್ಕೆ ಇಂದಿಗೆ ಎಪ್ಪತೈದು ವರ್ಷಗಳು . ಸ್ವಾತಂತ್ರ್ಯ ಭಾರತದಲ್ಲಿನ ಪ್ರಜಾಪ್ರಭುತ್ವ ಆಳ್ವಿಕೆಯ ವ್ಯವಸ್ಥೆಯಲ್ಲಿ ಈ ಸಂವಿಧಾನವೇ ಆಧಾರ . ಇಂತಹ ಮಹತ್ವದ ಸಂವಿಧಾನ ಜಾರಿಗೆ ಬಂದು ಇಂದಿಗೆ ಕೇವಲ ಎಪ್ಪತೈದು ವರ್ಷಗಳು . ಎರಡುವರೆ ಸಾವಿರ ವರ್ಷಗಳಿಂದ ಈ ದೇಶವನ್ನು ಆಳ್ವಿಕೆ ಮಾಡಿಕೊಂಡೇ ಬಂದ ಹಾಗೂ ಇಂದಿಗೂ ಆ ಸಂವಿಧಾನದ ಮೂಲಕವೇ ಭಾರತವನ್ನು ಆಳ್ವಿಕೆ ಮಾಡಲು ಅಪೇಕ್ಷಿಸುವವರಿಗೆ ಅಜ್ಞಾನದ ಜನ ವಿರೋಧಿ ಹಿಂದೂ ರಾಷ್ಟ್ರ ಸಂವಿಧಾನದ ಅಲಿಖಿತ ತತ್ವ ಸಿದ್ಧಾಂತಗಳ ಪೂರ್ಣ ಪ್ರಮಾಣದ ಹಿರಿತನ ಇದೆ ಅಷ್ಟೇ. ಇವರ ಈ ವಿತಂಡವಾದದ ಸಂವಿಧಾನದಲ್ಲಿ ಸ್ವಾರ್ಥ ಇದೇ ಹೊರತು – ಜನ, ಜನಸೇವೆಯ ಮೂಲಕ ಗಟ್ಟಿಯಾಗಿ ಕಟ್ಟುವ ಭಾರತ ಇಲ್ಲ. ಇದಕ್ಕೆ ಎರಡುವರೆ ಸಾವಿರ ವರ್ಷಗಳ ಭಾರತದ ಸಾಂಸ್ಕೃತಿಕ ಚರಿತ್ರೆ ಸಾಕ್ಷಿಯಾಗಿದೆ. ಒಬ್ಬರ ವೈಭವದ ಚರಿತ್ರೆಯನ್ನೇ ನಾವು ಭಾರತದ ವೈಭವದ ಚರಿತ್ರೆ ಎಂದು ಹೇಳಿಕೊಂಡು- ಬರೆದುಕೊಂಡು ಮೆರೆದವರು ನಾವೆಲ್ಲವೇ.

-ಎನ್. ಚಿನ್ನಸ್ವಾಮಿ ಸೋಸಲೆ

ದೇವರು ಧರ್ಮದ ಹೆಸರಿನಲ್ಲಿರುವ ಈ ಸಂವಿಧಾನಕ್ಕೆ ಪುರಾಣದ ಹಿನ್ನೆಲೆಯಿಂದ ಬಹು ಹಿರಿತನವೇ ಇದೇ ಹೊರತು ಮತ್ಯಾವುದರಿಂದಲೂ ಅಲ್ಲ . ಇಂತಹ ಅಲಿಖಿತ ಸಂವಿಧಾನದ ಮುಂದೆ ಎಪ್ಪತೈದು ವರ್ಷದ ಲಿಖಿತ ಸಂವಿಧಾನ ಈಗ ತಾನೆ ಹುಟ್ಟಿದ ಕೂಸೇ ಸರಿ. ಈ ಕೂಸನ್ನು ನೂರು ವರ್ಷ ಬೆಳೆಯಲು ಬಿಟ್ಟು , ಅದರ ಬೆಳವಣಿಗೆಯಲ್ಲಿ ಆಗುವ ಸ್ತಿತ್ಯಾಂತಗಳನ್ನು ಗಮನಿಸಿ, ತಮ್ಮ ಪಾರಂಪರಿಕ ಕಟ್ಟುಪಾಡುಗಳ ಸಂಸ್ಕೃತಿಗೆ ಕುಂದುಾಗುತ್ತದೆ ಎಂದು ಕಂಡು ಬಂದಾಗ ಆ ಮಗುವನ್ನು ಕತ್ತು ಹಿಸುಕಿ ಸಾಯಿಸಿ ಹಿಂದೂ ರಾಷ್ಟ್ರಕ್ಕೆ “ಸಂವಿಧಾನ ” ವನ್ನು ಸಿದ್ಧಪಡಿಸಲು ( ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ 26-01-2025) ಕೆಲವು ಮೂಲಭೂತ ವಾದಿಗಳು ಮುಂದಾಗುತ್ತಿದ್ದಾರೆ. ಅಂದರೆ.., ಈ ಸಂದರ್ಭದಲ್ಲಿ ಹುಟ್ಟುವ ಮೊದಲ ಪ್ರಶ್ನೆ “ಈಗಿರುವ ಸಂವಿಧಾನ ಹಿಂದೂ ಧರ್ಮಕ್ಕೆ ಹಾಗೂ ಹಿಂದೂಗಳಿಗೆ ವಿರೋಧವಾಗಿದೆಯೇ..? ” ವಿರೋಧವಾಗಿದ್ದರೆ ಹೇಗೆ ವಿರುದ್ಧವಾಗಿದೆ..?. ಯಾಕಾಗಿ ವಿರೋಧವಾಗಿದೆ.? ಯಾರು? ಏಕೆ ಇದು ನಮಗೆ ವಿರುದ್ಧವಾಗಿದೆ ಎಂದು ಹೇಳಿಕೊಳ್ಳುತ್ತಾರೆ..? ಎಂಬ ವಸ್ತುನಿಷ್ಠ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಈ ಮೇಲಿನ ವಸ್ತು ನಿಷ್ಠ ಪ್ರಶ್ನೆಗೆ ಉತ್ತರವನ್ನು ನೀವು ಎಷ್ಟೇ ಸ್ಪಷ್ಟವಾಗಿ ಹೇಳಿದರೂ ಸಹ ಅಲಿಖಿತ ಸಂವಿಧಾನವನ್ನು ಬಯಸುವವರು ಒಪ್ಪುವುದಿಲ್ಲ. ಇವರಿಗೆ ಸಂಪೂರ್ಣ ಉನ್ನತ ಉನ್ನತ ಅಧಿಕಾರಗಳನ್ನು ನೀಡಿ, ಇವರ ಸಮಸ್ತ ಸಂಪ್ರದಾಯಗಳಿಗೆ ಪ್ರೋತ್ಸಾಹ ನೀಡಿದ ಬ್ರಿಟಿಷರ ಹಾಗೂ ಮೊಘಲರ ಆಳ್ವಿಕೆಯನ್ನು ಸಮಯ ಬದಲಾದಂತೆ ತೀವ್ರವಾಗಿ ವಿರೋಧಿಸಿದವರು ಇವರೇ. ಹೈದರ್- ಟಿಪ್ಪು ಕಾಲದ ಆಳ್ವಿಕೆ – ಆದಿಲ್ ಶಾಹಿಗಳ ಕಾಲದ ಆಳ್ವಿಕೆಯನ್ನು ಆಯಾ ಕಾಲಘಟ್ಟದಲ್ಲಿ ಸ್ವಾರ್ಥ ಸಾಧನೆಗಾಗಿ ಪ್ರೀತಿಯಿಂದಲೇ ಅವರೊಂದಿಗೆ ಬೆರೆತು ದಿವಾನರುಗಳಾಗಿ ತಮ್ಮ ಏಕಮುಖ ಸಿದ್ದಾಂತದ ಧರ್ಮ ರಕ್ಷಣೆಗೆ ಯಥೇಚ್ಛವಾಗಿ ಬಳಸಿಕೊಂಡರು . ಇವರೆಲ್ಲರನ್ನು ಪಾರಂಪರಿಕವಾಗಿ ತಮ್ಮದಾಗಿಸಿಕೊಂಡಿದ್ದ ಶಿಕ್ಷಣ ನಾವು ಮಾತ್ರ ಕಲಿಯಬೇಕು ಎಂಬ ಸಂಪ್ರದಾಯ ಈ ಹಿನ್ನೆಲೆಯಿಂದ ಅಕ್ಷರ ಬರೆಯುವುದನ್ನು ಕಲಿತಿದ್ದ ಕಾರಣಕ್ಕಾಗಿ ಅವರ ಕುರಿತು ಕಂಡು ಕೇಳರಿಯದ ಹೋಗಳಿಕೆಯ ಪದಪುಂಚಗಳನ್ನು ಸೇರಿಸಿ ಶಾಸನಗಳು ಹಾಗೂ ಹಸ್ತ ಪ್ರತಿಗಳನ್ನು ಬರೆದು ಇಟ್ಟರು.

ಇದನ್ನೂ ಓದಿ: ಆರೋಗ್ಯದಲ್ಲಿ ಸಂಪೂರ್ಣ ಚೇತರಿಸಿಕೊಂಡು ತವರಿಗೆ ಆಗಮಿಸಿದ ನಟ ಶಿವರಾಜ್ ಕುಮಾರ್

ಜೊತೆಗೆ ತಮಗೆ ತೋಚಿದಂತೆ ಬಿರುದು ಬಾವಲಿಗಳನ್ನು ನೀಡಿ ಹೋಗಳಿ ಅಟ್ಟಕ್ಕೇರಿಸಿ ಸಕಲ ಸೌಲಭ್ಯವನ್ನು ಅವರಿಂದ ಪಡೆದುಕೊಂಡರು. ಇಂತಹ ಹಿನ್ನೆಲೆ ಇರುವವರು ಇಂದು ಭಾರತ ಹಾಗೂ ಸಮಸ್ತ ಭಾರತೀಯರ ಒಳಿತಿಗಾಗಿ ಬರೆದುಕೊಂಡ ಲಿಖಿತ ಸಂವಿಧಾನವನ್ನು ಮಾತ್ರ ಒಪ್ಪುವುದಿಲ್ಲ. ಏಕೆಂದರೆ ಈ ಸಂವಿಧಾನ ಅಂತರಾಳದಲ್ಲಿ ಭಾರತೀಯರ ಧರ್ಮ ಹಾಗೂ ಸಮಾಜದ ಹಿನ್ನೆಲೆಯಿಂದ ಅಸಮಾನತೆಯನ್ನು ಬಯಸುವುದಿಲ್ಲ. ಸಮಾನತೆಯನ್ನು ಬಯಸುತ್ತದೆ. ಮುಂದುವರೆದು, ಸಹೋದರತ್ವ – ಭಾದೃತ್ವವನ್ನು ಗಟ್ಟಿತನದ ಹಿನ್ನೆಲೆಯಿಂದ ಬೌದ್ಧಿಕವಾಗಿ ಬೆಸೆಯುತ್ತದೆ. ಇದೆ ಇವತ್ತಿನ ಸಂವಿಧಾನದ ಮುಖ್ಯ ಆಶಯವೂ ಆಗಿದೆ.

ಹಿಂದೂ ರಾಷ್ಟ್ರ ಸಂವಿಧಾನವನ್ನು ಬಯಸುವವರ ಚಿಂತನೆ ಪಾರಂಪರಿಕ ಹಿನ್ನೆಲೆಯ ವರ್ಣಾಶ್ರಮ ಹಾಗೂ ಸಾಮಾಜಿಕ ಅಸಮಾನತೆಯ ಬಯಸುವ ಮೇಲು- ಕೀಳು, ಸ್ಪೃಶ್ಯ -ಅಸ್ಪೃಶ್ಯ, ಊರಿನವ – ಕೇರಿಯವ ಎಂಬ ಬಹುದೊಡ್ಡ ಮಾನವ ವಿರೋಧಿ ವ್ಯವಸ್ಥೆಯನ್ನು ಬಯಸುವ ಸಂವಿಧಾನವನ್ನೇ ಎಂಬುದು ಸ್ಪಷ್ಟ. ಇದೆಲ್ಲವನ್ನು ಇಂದಿನ ಅಂಬೇಡ್ಕರ್ ಅವರು ರಚಿಸಿ ಜಾರಿಯಲ್ಲಿರುವ ಸಂವಿಧಾನದ ಮೂಲಕ ಅಪೇಕ್ಷಿಸಲು ಸಾಧ್ಯವಿಲ್ಲ. ಕೇವಲ ಕೆಲವು ಸಂಪ್ರದಾಯ ಆಚರಣೆಗಳ ಮೂಲಕ ಮಾತ್ರ (ಧಾರ್ಮಿಕ ಉತ್ಸವಗಳು) ಪುರಾಣ ಹಿನ್ನೆಲೆಯ ವಿತಂಡವಾದದ ಮೂಲಕ ಹೇಳಬಹುದು ಹಾಗೂ ಪಡೆಯಬಹುದು ಎಂಬುವುದು ಇವರ ವಾದ. ಹಾಗೂ ಧಾರ್ಮಿಕ ಹಿನ್ನೆಲೆಯ ಸಂದರ್ಭದಲ್ಲಿ ಭಕ್ತಿ ಭಾವದಿಂದ ಹೇಳಿದಾಗ ಜನರು ಇದನ್ನು ಭಾವನಾತ್ಮಕವಾಗಿ ಸ್ವೀಕರಿಸುತ್ತಾರೆ ಎಂಬ ಅರಿವು ಅವರಿಗೆ ಚೆನ್ನಾಗಿ ತಿಳಿದಿದೆ. ಈ ಹಿನ್ನೆಲೆಯಿಂದ ಜಯಗಳಿಸಬಹುದು ಎಂಬುವುದು ಅವರ ಆಕಾಂಕ್ಷೆ. ಈ ಹಿನ್ನೆಲೆಯಿಂದಲೇ ಸ್ವಾತಂತ್ರ ಭಾರತದಲ್ಲಿಯೂ ಜನ ಇನ್ನೂ ಸಹ ಸ್ವಾತಂತ್ರ್ಯ ಭಾರತ ಹಾಗೂ ಲಿಖಿತ ಸಂವಿಧಾನಕ್ಕೆ ತೆಗೆದುಕೊಳ್ಳದೆ ಇನ್ನೂ ಸಹ ಅಲಿಖಿತ ಸಂವಿಧಾನದ ನೀತಿಗಳಿಗೆ ಬದ್ಧರಾಗಿ ಜೀವಿಸುತ್ತಿರುವುದು ದುರಂತವಾಗಿದೆ.

ಇಂದು ಈ ಸಂವಿಧಾನವನ್ನು ಬದಲಾಯಿಸಬೇಕು- ಹಿಂದೂ ರಾಷ್ಟ್ರಕ್ಕೆ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವವರು ಮುನ್ನೂರು ವರ್ಷ ಆಳ್ವಿಕೆ ಮಾಡಿದ ಮುಸ್ಲಿಂ ಅರಸರಾದ ಖಿಲ್ಜಿ – ಮೊಘಲರ ಆಳ್ವಿಕೆಯಲ್ಲಿಯೂ ಸುಖವಾಗಿದ್ದರು. ಮುಂದುವರೆದು ಮುನ್ನೂರು ವರ್ಷಗಳ ಕಾಲ ವರ್ಷಗಳ ಕಾಲ ಏಕಮುಷ್ಟಿಯಿಂದ ಭರತ ಖಂಡವನ್ನೇ ಆಳ್ವಿಕೆ ಮಾಡಿದ ಬ್ರಿಟಿಷರ ಆಳ್ವಿಕೆಯಲ್ಲಿಯೂ ಸುಖವಾಗಿದ್ದರು. ಇಂದು ಇವರೇ ವಿರೋಧಿಸುತ್ತಿರುವ ಹೈದರ್ ಹಾಗೂ ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿಯೂ ಸುಖವಾಗಿದ್ದರು. ಇಷ್ಟೇ ಅಲ್ಲದೆ ಇಂದಿನ ಲಿಖಿತ ಸಂವಿಧಾನದ ಸಂತೃಪ್ತಿಯಲ್ಲಿಯೂ ಸರ್ವ ಅಂಗಗಳಲ್ಲಿಯೂ ಸರ್ವಸ್ವವನ್ನು ಪಡೆದುಕೊಂಡು ಇಂದಿಗೂ ಸುಖವಾಗಿಯೇ ಇದ್ದಾರೆ.

ಆದರೆ ಇವರೇ ಕರೆದ ಅಸ್ಪೃಶ್ಯತೆರು – ಸಂವಿಧಾನದ ಈ ಭಾರತದ ಪ್ರಜೆಗಳಿಗೆ ನೀಡಿರುವ ಕಾನೂನಾತ್ಮಕವಾದ ಒಂದಷ್ಟು ಮೂಲಭೂತ ಹಕ್ಕುಗಳ ಆದರದ ಮೇಲೆ “ಸ್ಪೃಶ್ಯತೆ” ಯ ಸ್ಥಾನವನ್ನು ಪಡೆಯಲು ಮುಂದಾಗುತ್ತಿರುವುದನ್ನು ಮಾತ್ರ ಸಹಿಸದ ಕಾರಣಕ್ಕಾಗಿ ಇಂತಹ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ. ಈ ವಿಷಯದಲ್ಲಿ ಮಾತ್ರ ಇವರ ಮನಸ್ಸುಗಳು ಪಾರಂಪರಿಕವಾಗಿ ಶಾಶ್ವತ ಅಸ್ಪೃಶ್ಯತೆಗೆ ಒಳಗಾಗಿವೆ.

ಹಿಂದೂ ರಾಷ್ಟ್ರ ಸಂವಿಧಾನದಲ್ಲಿ ಶತಶತಮಾನಗಳಿಂದಲೂ ಬದುಕಿದ ಇವರು ದೇಶಿಯ ಸಾಮ್ರಾಟರು – ಮಹಾರಾಜರು – ರಾಜರು- ಪಾಳ್ಳೇಗಾರರ ಸುವರ್ಣಯುಗ ಆಳ್ವಿಕೆಗಳ ಕಾಲದಲ್ಲಿಯೂ ಸುಖವಾಗಿಯೇ ಇದ್ದರು ಎಂಬುದಕ್ಕೆ ಅವರೇ ಬರೆದುಕೊಂಡಿರುವ ಚರಿತ್ರೆ ಸಾಕ್ಷಿಯಾಗಿದೆ . ಏಕೆಂದರೆ, ಅವರೇ ಪುರಾಣದ ಹಿನ್ನೆಲೆಯಿಂದ ಬರೆದುಕೊಂಡಿರುವ ಹಾಗೆ ಭಾರತದ ಪ್ರತಿಯೊಂದು ಸಾಮ್ರಾಜ್ಯಗಳ ಸ್ಥಾಪನೆ ಮಾಡಿದವರು ಹಿಂದೂ ರಾಷ್ಟ್ರದ ಸಂವಿಧಾನವನ್ನು ಬಯಸುವವರೇ ಎಂಬ ವಾದ. ಚಿರತೆಯಲ್ಲಿ ಹೀಗೆ ಹೇಳಿಕೊಂಡು ಹಾಗೂ ಬರೆದುಕೊಂಡು ಮೆರೆದ ಕಾರಣಕ್ಕಾಗಿ ಸಾಮಾಜಿಕ ಸೈನಿಕೃತ ವ್ಯವಸ್ಥೆಯಲ್ಲಿ ಇವರು ಮೇಲ್ಪಂತಿಯಲ್ಲಿ ನಿಂತುಕೊಂಡರು. ತಮ್ಮ ಸ್ವಾರ್ಥ ಸಾಧನೆಗಾಗಿ ಹಾಗೂ ದೇವಾಲಯ- ಅಗ್ರಹಾರ- ಗುರುಕುಲ, ಘಟ್ಟಿಕಾಲಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇವರ ಅನುಕೂಲಕ್ಕಾಗಿ “ಕ್ಷತ್ರಿಯ” ಎಂಬ ಒಂದು ವೃತ್ತಿ ಪ್ರಧಾನ ಜನವರ್ಗವನ್ನೇ ಸೃಷ್ಟಿಸಿ ಅವರನ್ನು ತಮ್ಮ ಕೈಗೊಂಬೆಗಳನ್ನಾಗಿಸಿಕೊಂಡರು. ಈ ಹಿನ್ನೆಲೆಯಿಂದಲೇ ಯಾವ ಪ್ರಭುತ್ವದ ಕಾಲದಲ್ಲಿಯೂ ಇವರಿಗೆ ರಾಜಾಜ್ಞೆ ಮೂಲಕ ಶಿಕ್ಷೆ ಆಗಿರುವುದಕ್ಕೆ ದಾಖಲೆಗಳು ಇಲ್ಲ.

ಮೊಘಲರು ಹಾಗೂ ಬ್ರಿಟಿಷರ ಆಳ್ವಿಕೆ ಕಾಲಘಟ್ಟದಲ್ಲಿಯೂ ಇವರ ತಪ್ಪಿಗೆ ಕಠಿಣ ಶಿಕ್ಷೆ ವಿಧಿಸಿದ ಮಾಹಿತಿ ನೀಡುವ ಯಾವುದೇ ದಾಖಲೆಗಳು ದೊರಕುವುದೆ ಇಲ್ಲ. ಇವರಿಗೆ ಪೂರಕವಾಗಿ ಸಹಾಯದ ಮೇಲೆ ಸಹಾಯದ ಮಾಡಿದ – ಸಹಾಯ ಪಡೆದುಕೊಂಡ ದಾಖಲೆಗಳೆ ಹೇರಳವಾಗಿ ದೊರಕುತ್ತವೆ. ಇವರ ಆಳ್ವಿಕೆಯ ಕಾಲಘಟ್ಟದಲ್ಲಿ ಇವತ್ತು ಹಿಂದೂ ರಾಷ್ಟ್ರ ಸಂವಿಧಾನವನ್ನು ಬಯಸುವವರು ಅತ್ಯಂತ ಹೆಚ್ಚು ಸುಖವಾಗಿದ್ದರು. ಇವರ ಪ್ರಮುಖ ಕೊರತೆ ಉಂಟಾದದ್ದೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಲಿಖಿತ ಸಂವಿಧಾನದ ಮೂಲಕ ಭಾರತ ಆಳ್ವಿಕೆ ಮಾಡಲು ಮುಂದಾದದ್ದೆ ಕಾರಣವಾಯಿತು.

ಇಂತಹ ಲಿಖಿತ ಸಂವಿಧಾನದ ಸಂದರ್ಭದಲ್ಲಿ ಭಾರತವನ್ನು ಆಳ್ವಿಕೆ ಮಾಡುವ ಪ್ರಭು ರಾಜ ನಿಂದ ಹುಟ್ಟಲಿಲ್ಲ – ಬದಲಿಗೆ ಪ್ರಜೆಗಳ ಓಟಿನಿಂದ ಹುಟ್ಟಬೇಕಾಯಿತು. ಹಾಗೂ ಇವರು ಯಾರನ್ನು ಕ್ಷತ್ರಿಯರೆಲ್ಲ ಎಂದು ಮೂಲೆಗುಂಪು ಮಾಡಿದ್ದರು ಅವರೇ ವೋಟಿನ ಮೂಲಕ ದೇಶವನ್ನು ಆಳ್ವಿಕೆ ಮಾಡುವ ಸಂದರ್ಭವೂ ಒದಗಿತು. ಹಿಂದೂ ರಾಷ್ಟ್ರ ಸಂವಿಧಾನ ಅಪೇಕ್ಷೆ ಪಡುವವರಿಗೆ ಇದು ಸಹಿಸಲಾರದ ಸಂದರ್ಭವಾಯ್ತು. ಇವರು ಎರಡುವರೆ ಸಾವಿರ ವರ್ಷಗಳಿಂದ ಆಳ್ವಿಕೆ ಮಾಡಿಕೊಂಡು ಬಂದ ಅಲಿಖಿತ ಸಂವಿಧಾನದ ಕಟ್ಟುಪಾಡುಗಳನ್ನು ಎಂದೂ ಪ್ರಶ್ನೆ ಮಾಡದ ಭಾರತೀಯರು – 75 ವರ್ಷದ ಲಿಖಿತ ಸಂವಿಧಾನವನ್ನು ಇವರು ಪ್ರಶ್ನೆ ಮಾಡುತ್ತಿದ್ದರೆ ಪಕ್ಷ ರಾಜಕಾರಣ ಹಾಗೂ ತಮ್ಮ ಪರಂಪರಿಕ ಅಜ್ಞಾನದಿಂದ ಮೌನವಾಗಿಯೇ ಇದ್ದಾರೆ. ಕಾರಣ ಭಾರತೀಯರ ಜ್ಞಾನ ಪುರಾಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದೇ ಹೊರತು ವಾಸ್ತವಕ್ಕೆ ಅಲ್ಲ ಎಂಬುದು ಸ್ಪಷ್ಟ.

ಬ್ರಿಟೀಷರ ಆಳ್ವಿಕೆಯಲ್ಲಿ ಸಕಲ ಸೌಲಭ್ಯಗಳನ್ನು ಪಡೆದು ಸುಖವಾಗಿದ್ದವರು ಇವರೇ. ಇಷ್ಟೆಲ್ಲ ಸುಖವಾಗಿದ್ದರೂ ಸಹ ಬ್ರಿಟಿಷರ ಆಳ್ವಿಕೆಯನ್ನು ಕಠೋರವಾಗಿ ವಿರೋಧ ಮಾಡಿದ್ದು ಬ್ರಿಟಿಷರು ಕೆಲವು ಸಂದರ್ಭದಲ್ಲಿ ಭಾರತದ ಮೂಲ ನಿವಾಸಿಗಳಿಗೆ ಬದುಕಲು ಬೇಕಾದ ಕೆಲವೇ ಕೆಲವು ಮೂಲಭೂತ ಹಕ್ಕುಗಳನ್ನು ನೀಡಲು ಮುಂದಾದಂತೆ ಕಾರಣ. ಶಿಕ್ಷಣವನ್ನು ಸಾರ್ವತ್ರಿಕ ಗೊಳಿಸಿದ್ದು -ತಮ್ಮ ಸ್ವಾರ್ಥಕ್ಕಾಗಿ ಬಹುಜನರ ಆಚರಣೆಗೆ ವಿಧಿಸಿದ್ದ ಅಮಾನವೀಯ ಪದ್ಧತಿಗಳನ್ನು ಶಾಸನಬದ್ಧವಾಗಿ ನಿರ್ಮೂಲನೆ ಮಾಡಿದ್ದು – ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಕಾನೂನು ರೂಪಿಸಿದ್ದು – ಸರ್ವರಿಗೂ ಭೂಮಿಯ ಹಕ್ಕನ್ನು ನೀಡಿದ್ದು – ಚರ್ಚ್ ಮಸೀದಿ ದೇವಸ್ಥಾನಗಳಿಗೆ ಎಲ್ಲರಿಗೂ ಪ್ರವೇಶವನ್ನು ನೀಡಿದ್ದು ಇನ್ನಿತರ ಪ್ರಮುಖ ಕಾರಣ ಸಾಕ್ಷಿಯಾದವು.

ಏಕೆಂದರೆ… ಶತಶತಮಾನಗಳಿಂದಲೂ ತಮ್ಮ ಅಡಿಆಳುಗಳಾಗಿ ಜೀವಿಸಿದ್ದವರು ಇಂದು ಹಿಂದೂ ಸಂವಿಧಾನ ಬಯಸುವವರ ಮುಂದೆ ಅನೇಕ ಪ್ರಶ್ನೆಗಳ ಮೂಲಕ ಸಮಾನತೆ ಕೇಳಲು ಮುಂದಾದದ್ದೆ ಬಹುದೊಡ್ಡ ಲೋಕವಾಯಿತು. ಈ ಬೆಳವಣಿಗೆಯನ್ನು ಎಂದೂ ಸಹ ಇವರು ಇಷ್ಟಪಡುವುದಿಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಇನ್ನೊಂದು ಬಹು ಮುಖ್ಯವಾದ ಕಾರಣವೆಂದರೆ “ನೀವು ಅಸ್ಪೃಶ್ಯರು” ನೀವು ಶಿಕ್ಷಣವನ್ನು ಪಡೆಯಬಾರದು – ಈ ನೆಲದಲ್ಲಿ ನೀವು ಚಾಂಡಾಳವಾಗಿ ಜೀವಿಸಬೇಕು ಎಂದು ಇನ್ನಿತರ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಸಾಂಸ್ಕೃತಿಕ ಕಟ್ಟುಪಾಡುಗಳಲ್ಲಿ ಸಿಲುಕಿಸಿದ್ದ ಹಿಂದೂ ರಾಷ್ಟ್ರ ಸಂವಿಧಾನ ಬಯಸುವವರು ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿರುವ ವಿಶ್ವಪ್ರಸಿದ್ಧ ಲಿಖಿತ ಸಂವಿಧಾನವನ್ನು ಬರದದ್ದು ಹಾಗೂ ಅದನ್ನೇ ಸ್ವಾತಂತ್ರ ಭಾರತ ಒಪ್ಪಿಕೊಂಡು ಜಾರಿಗೆ ತಂದದ್ದು ಪ್ರಮುಖ ಕಾರಣವೂ ಆಯಿತು.

ಜೊತೆಗೆ ತಮ್ಮ ಅಜ್ಞಾನದ ಅಸ್ಪೃಶ್ಯತೆ ತುಂಬಿದ ತಮಗೆ ತಾವೇ ನಾವು ದೇವರ ಮಕ್ಕಳು ಹಾಗೂ ಸ್ಪೃಶ್ಯರು ಎಂದು ಹೇಳಿಕೊಳ್ಳುವ “ಸ್ಪೃಶ್ಯತೆ” ಯ ಹಿನ್ನೆಲೆಯಿಂದಲೇ ಸಂವಿಧಾನ ಬರೆದ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಹೇಳಬೇಕು ಎಂಬುವುದು… ಇತ್ಯಾದಿ ಇತ್ಯಾದಿ ಕಾರಣಗಳು ಇಲ್ಲಿ ಕೆಲಸ ಅಜ್ಞಾನದ ಬೌದ್ಧಿಕ ಹಾಗೂ ಭೌತಿಕವಾಗಿ ರಾಕ್ಷಸ ರೂಪದಲ್ಲಿ ಕೆಲಸ ಮಾಡುತ್ತಿವೆ.

ಇವತ್ತು ಹಿಂದೂ ರಾಷ್ಟ್ರ ಸಂವಿಧಾನವನ್ನು ಬಯಸುವವರು ನೂರಾರು ವರ್ಷಗಳ ಕಾಲ ವಿದೇಶಿಯರು ಹಾಗೂ ಅನ್ಯ ದರ್ಮಿಯರು ದೇಶವನ್ನು ಕೊಳ್ಳೆ ಹೊಡೆಯುವಾಗ ಸ್ವಲ್ಪವೂ ರಾಷ್ಟ್ರಪ್ರೇಮದ ಹಿನ್ನೆಲೆಯಿಂದ ಮಾಡಿಕೊಳ್ಳದ ರೋಷ – ವೇಷ – ಕೋಪ ಈ ನೆಲದ ಮೂಲ ನಿವಾಸಿಗಳಾದರೂ ಸಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ದಾಳಿಗೆ ತುತ್ತಾಗಿ ತಮ್ಮ ಸ್ವದೇಶದಲ್ಲಿಯೇ ಅಸ್ಪೃಶ್ಯರಾಗಿ ಮಾನವನಿಗೆ ಬೇಕಾದ ಮೂಲಭೂತ ಹಕ್ಕುಗಳಿಂದ ಶತಶತಮಾನಗಳಿಂದಲೂ ವಂಚಿತರಾಗಿ ಬದುಕಿದವರಿಗೆ ವಿದೇಶಿಯರು ತಮ್ಮ ಸ್ವಾರ್ಥಕ್ಕಾಗಿಯಾದರೂ ನೀಡಲು ಮುಂದಾದ ಕೆಲವು ಮೂಲಭೂತ ಹಕ್ಕುಗಳನ್ನು ಕಠೋರವಾಗಿಯೇ ವಿರೋಧಿಸಿರುವುದಕ್ಕೆ ನೂರಾರು ಜ್ವಲಂತ ನಿದರ್ಶನಗಳಿವೆ.

ಈ ಕಾರಣಕ್ಕಾಗಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರ ಹೋರಾಟವನ್ನು ತಿರಸ್ಕರಿಸಿದರು. ಅವರ ರಾಷ್ಟ್ರೀಯತೆಯ ಹೋರಾಟವನ್ನು ರಾಷ್ಟ್ರಧ್ರೋಹದ ಹೋರಾಟ ಎಂದು ಕರೆದರು. ಅಂಬೇಡ್ಕರ್ ತತ್ವ ಸಿದ್ಧಾಂತದ ಮೂಲಕ ಭಾರತೀಯರಿಗೆ ಅನುಕೂಲ ಮಾಡಲು ಮುಂದಾದ ಬ್ರಿಟಿಷರನ್ನೇ ದೇಶದಿಂದ ಹೊರದೂಡಲು ಭಾರತದಲ್ಲಿ ರಾಷ್ಟ್ರೀಯ ಚಳುವಳಿಯನ್ನೇ ಹೂಡಿದರು . ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯಲು ಹತ್ತಾರು ಕಾರಣಗಳಲ್ಲಿ ಇದೆ ಬಹು ಮುಖ್ಯವಾದದ್ದು.

ಅಂಬೇಡ್ಕರ್ ಬರೆದ ಭಾರತದ ಸಂವಿಧಾನವನ್ನು ಇಷ್ಟಪಡದವರಿಗೆ (ಹಿಂದೂ ರಾಷ್ಟ್ರ ಸಂವಿಧಾನ ಬಯಸುವವರಿಗೆ ) ಇದರ ಮಹತ್ವ ಹಾಗೂ ಇದರ ದೂರದೃಷ್ಟಿಯ ಗೊತ್ತು ಗುರಿಗಳು ಸ್ಪಷ್ಟವಾಗಿ ತಿಳಿದಿದೆ. ಏಕೆಂದರೆ ಇವರೇ ಇಂದಿನ ಲಿಖಿತ ಸಂವಿಧಾನದಲ್ಲಿ ವಿರೋಧ ಪಕ್ಷದವರು. ಇವರಿಗೆ ಏಕೆ ಈ ವಿರೋಧ ಪಕ್ಷ ಸ್ಥಾನ ದೊರಕಿತು ಎಂದರೆ ಅವರು ಪಾರಂಪರಿಕ ಶಿಕ್ಷಣವಂತರು. ತಮ್ಮ ಪಾರಂಪರಿಕ ಶಿಕ್ಷಣದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಇವರು ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಶತಶತಮಾನಗಳಿಂದ ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಡಿದ ಹಾಗೂ ಮಾಡುತ್ತಿರುವ ಅಂಧಕಾರವನ್ನು ಇದು ವಿರೋಧಿಸುತ್ತದೆ ಎಂಬ ಅರಿವು ಅವರಿಗೆ ಇದೆ. ಆದರೆ ದುರಂತವೆಂದರೆ ನಿಜವಾಗಲೂ ಇದರ ಸೌಲಭ್ಯವನ್ನು ಪಡೆಯಬೇಕಾದವರಿಗೆ ಇನ್ನೂ ಅಂಬೇಡ್ಕರ್ ಹಾಗೂ ಅವರು ಬರೆದಿರುವ ಸಂವಿಧಾನದ ಮಹತ್ವದ ಅರಿವೆ ಇಲ್ಲ. ಇದಕ್ಕೆ ಕಾರಣ ಶಿಕ್ಷಣದ ಕೊರತೆ ಒಂದಾದರೆ ಮತ್ತೊಂದು ಪಾರಂಪರಿಕ ಪುರಾಣದ ಹಿನ್ನೆಲೆಯ ಅಜ್ಞಾನವೂ ಇದಕ್ಕೆ ಪ್ರಮುಖ ಕಾರಣ. ಇದು ಇಂದಿನ ಸಂವಿಧಾನದ ಬಳಕೆ ಹಾಗೂ ನಿರಾಕರಣೆಯ ನಡುವೆ ಭಾರತದ ಸಂವಿಧಾನ ಸಿಲುಕಿರುವ ವಾಸ್ತವದ ದುರಂತ .

ಅಂಬೇಡ್ಕರ್ ಅವರ ಸಂವಿಧಾನದ ಆಕಾಂಕ್ಷಿಗಳು ಇಂದು ಉನ್ನತ ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ಅಜ್ಞಾನದ ದೇವರು ಸಂಪ್ರದಾಯದ ಹಿನ್ನೆಲೆಯಿಂದ ಶತಶತಮಾನಗಳಷ್ಟು ಹಿಂದೆ ಇರುವುದು ವಾಸ್ತವ. ಈ ವಾಸ್ತವ ತಿಳಿದಿದ್ದರೂ ಪುರಾಣದ ಕಟ್ಟುಪಾಡುಗಳ ಜೀವನವನ್ನೇ ಬಯಸುವುದು ಇಂದಿನ ಲಿಖಿತ ಸಂವಿಧಾನ ಅಂಬೇಡ್ಕರ್ ಅವರು ಒಡಲಾಳದಿಂದ ಬಯಸಿದ ಜನ ವರ್ಗಕ್ಕೆ ದೊರಕದಿರಲು ಕಾರಣವಾಗಿದೆ. ಅಂಬೇಡ್ಕರ್ ಅವರು ತಮ್ಮ ಕಡೆಯ ದಿನಗಳಲ್ಲಿ ಈ ನೆಲದ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಬೌದ್ಧಧರ್ಮ ದೊಂದಿಗೆ ಭಾರತ ಹಾಗೂ ಭಾರತೀಯರಿಗೆ ಇರುವ ಅವಿನಾಭಾವ ಸಂಬಂಧಗಳು ಸ್ಪಷ್ಟವಾಗಿ ತಿಳಿದಿದ್ದರೂ ಸಹ ಈ ಹಿನ್ನಲೆಯಿಂದ ಜ್ಞಾನವಂತರಾಗಿ ಅದನ್ನು ಸಂಪೂರ್ಣವಾಗಿ ಸ್ವೀಕರಿಸಲು ಅಥವಾ ಒಪ್ಪಿಕೊಳ್ಳಲು ಮುಂದಾಗದಿರುವುದು , ಈ ನೆಲದ ಮೂಲ ನಿವಾಸಿಗಳಿಗೆ ತಮ್ಮ ಧರ್ಮದ ಅರಿವನ್ನು ಮೂಡಿಸಲು ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿ ಭಾರತ ನಿಜವಾಗಲೂ ಬೌದ್ಧ ಜನರ ರಾಷ್ಟ್ರ ಎಂಬ ಸ್ಪಷ್ಟವಾದ ಹರಿವನ್ನು ಉಂಟುಮಾಡಿದರೂ ಬೌದ್ಧ ಧರ್ಮದ ಪುನರ್ಚೇತನಕ್ಕೆ ಮುಂದಾಗದಿರುವುದು ಇದಕ್ಕೆ ಕಾರಣವಾಗಿದೆ .

ಅಂಬೇಡ್ಕರ್, ಅಂಬೇಡ್ಕರ್ ವಾದ ಹಾಗೂ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಬೌದ್ಧಿಕ ಅರಿವೇ ಇಲ್ಲದೆ ಕೇವಲ ಭೌತಿಕವಾಗಿ ಮಾತ್ರ ಅಂಬೇಡ್ಕರ್- ಅಂಬೇಡ್ಕರ್ ವಾದ ಹಾಗೂ ಸಂವಿಧಾನವನ್ನು ನೋಡಿ ಆರಾಧಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಎಲ್ಲ ಅಂಶಗಳನ್ನು ಬಹು ಸೂಕ್ತವಾಗಿ ಗ್ರಹಿಸಿರುವ ಹಿಂದೂ ರಾಷ್ಟ್ರ ಸಂವಿಧಾನವನ್ನು ಅಪೇಕ್ಷಿಸುವವರು ನಮ್ಮಲ್ಲೇ ಹೊಡೆದಾಳುವ ನೀತಿಯನ್ನು ಸೃಷ್ಟಿ ಮಾಡಿ ಜಯಗಳಿಸುತ್ತಿದ್ದಾರೆ. ಒಂದು ವರ್ಗ ಅಂಬೇಡ್ಕರ್ ಅವರು ಮರು ಸ್ಥಾಪಿಸಿದ ಬೌದ್ಧ ಧರ್ಮ ಸ್ಥಾಪನೆಯ ಕುರಿತು ಪ್ರತಿಪಾದನೆ ಮಾಡಿದರೆ – ಇನ್ನೊಂದು ವರ್ಗ ಹಿಂದೂ ಧರ್ಮವನ್ನು ಪ್ರತಿಪಾದನೆ ಮಾಡುವ ಹಾಗೆ ಮಾಡಿ ತಮ್ಮ ಪಾರಂಪರಿಕವಾದದಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಇಂದಿನ ಸಂವಿಧಾನದ ಹಿನ್ನೆಲೆಯಿಂದ ದಲಿತರು ಸ್ವಾಭಿಮಾನಿಗಳಾಗಿ ಮುನ್ನಡೆಯಲು ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ – ಸಂಘಟನೆ – ಹೋರಾಟ ಎಂಬ ಮೂರು ನೀತಿ ಮುಖ್ಯವಾಗಬೇಕಾಗಿತ್ತು.. ಇದರ ಮಹತ್ವವನ್ನು ಸಂವಿಧಾನಬದ್ಧವಾಗಿ ಅರಿಯುವ ಸಂದರ್ಭದಲ್ಲಿಯೇ ಇವರಲ್ಲಿ ಪುರಾಣದ ಹಿನ್ನೆಲೆಯಿಂದ ಹೊಡೆದಾಳಿದವರು ಹಾಗೂ ಇಂದಿಗೂ ಒಡೆದಾಳುವ ನೀತಿಗೆ ಬದ್ಧರಾಗಿರುವವರು ‘ಹಿಂದೂ ರಾಷ್ಟ್ರದ ಸಂವಿಧಾನ’ ವನ್ನು ಬಯಸುತ್ತಿರುವವರೇ ಆಗಿದ್ದಾರೆ. ಸಂವಿಧಾನದ ಪ್ರಕಾರ ಸಂಘಟನೆಯ ಮಹತ್ವ ಗೊತ್ತಿದ್ದರೂ ಸಂಘಟಿತರಾಗದೆ ಇರುವುದು ಅಥವಾ ಸಂಘಟಿತರಾಗದಂತೆ ಮಾಡುವವರ ಕುತಂತ್ರಕ್ಕೆ ಬಲಿಯಾಗುತ್ತಿರುವುದು ಸಹ ಇವರ ಒಗ್ಗಟ್ಟನ್ನು ಬಯಸದವರು ಮಾಡುತ್ತಿರುವ ಧಾರ್ಮಿಕ ಹಿನ್ನೆಲೆ ಸಾಮಾಜಿಕ ಒಡೆದಾಳುವ ನೀತಿ ಎಂಬುದನ್ನು ತಿಳಿಯಬೇಕಾಗಿದೆ. ಇದೆ ಹಿಂದೂ ರಾಷ್ಟ್ರ ಸಂವಿಧಾನ ಸೃಷ್ಟಿಕರ್ತರ ಆಶಯ.

ಪ್ರಜಾಪ್ರಭುತ್ವ ಭಾರತದಲ್ಲಿನ ರಾಜಕೀಯ ಪಕ್ಷಗಳ ರಾಜಕಾರಣದಲ್ಲಿ ಕೇವಲ ಅಧಿಕಾರ ಹಾಗೂ ಇತರ ಸೌಲಭ್ಯಗಳಿಗಾಗಿ ಯೂಸ್ ಅಂಡ್ ಥ್ರೂ ಆಗುತ್ತಿರುವುದು ಅಂಬೇಡ್ಕರ್ ಅವರು ಬರೆದ ಸಂವಿಧಾನದ ನೂರಕ್ಕೆ ನೂರು ಫಲಾನುಭವಿಗಳಾಗಬೇಕಾದವರೆ.

ಇಷ್ಟೆಲ್ಲಾ ಮೂಲಭೂತ ಹಕ್ಕುಗಳನ್ನು ನೀಡಿರುವ ಅಂಬೇಡ್ಕರ್ ಅವರು ಬರೆದ ಭಾರತದ ಲಿಖಿತ ಸಂವಿಧಾನದ ಜೀವಂತಿಕೆಯ ಅರಿವನ್ನು ಪ್ರತಿಯೊಬ್ಬರೂ ತಿಳಿಯಬೇಕಾಗಿದೆ. ಇದರ ಅರಿವಿಲ್ಲದೆ ಶತಶತಮಾನಗಳಿಂದ ಒಡೆದಾಳಿದವರ ಕುತಂತ್ರಕ್ಕೆ ಶಾಶ್ವತವಾಗಿ ಬಲಿಯಾಗುತ್ತಿರುವುದನ್ನು ಗಮನಿಸಿದರೆ – ಈ ಎಪ್ಪತೈದು ವರ್ಷಗಳ ಲಿಖಿತ ಸಂವಿಧಾನ ಎಂಬ ಇನ್ನೂ ನಡೆದಾಡದ – ತೊಟ್ಟಿಲಲ್ಲಿ ಮಲಗಿ ತೂಗಿಸಿಕೊಳ್ಳುತಿರುವ ಮಗುವನ್ನು ಎದ್ದು ನಿಂತು ನಡೆದಾಡುವುದಕ್ಕೂ ಬಿಡುವುದಿಲ್ಲ ಈ ಹಿಂದೂ ರಾಷ್ಟ್ರ ಸಂವಿಧಾನ ಪರ ಇರುವವರು ಎಂಬುವುದು ಸ್ಪಷ್ಟವಾಗುತ್ತದೆ. ಇದಕ್ಕೆ ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ಸಾಕ್ಷಿಯಾಗುತ್ತಿವೆ.

ಇಂದಿನ ಲಿಖಿತ ಸಂವಿಧಾನದ ಮಹತ್ವವನ್ನು ಸಮಸ್ತ ಭಾರತೀಯರು ಸ್ಪಷ್ಟವಾಗಿ – ಒಗ್ಗಟ್ಟಿನಿಂದ ಅರಿಯದೆ ಇದ್ದರೆ,
ಹಾಗೂ – ಹೀಗೂ ಇದರ ಆಳ್ವಿಕೆಯನ್ನು ನೂರು ವರ್ಷಗಳವರೆಗೆ ತಳ್ಳಿ , ನೂರು ವರ್ಷದ ನಂತರ ಇಂದಿನ ಬೆಳವಣಿಗಳನ್ನು ಗಮನಿಸಿದರೆ ಅವರ ಆಕಾಂಕ್ಷೆ ನೆರವಿರುವುದಿಲ್ಲ ಎಂದರೆ ತಪ್ಪಾಗುತ್ತದೆ. ಈ ಮಾತನ್ನು ಇಂದಿನ ಸಂವಿಧಾನ ಹಾಗೂ ಅಂಬೇಡ್ಕರ್ ವಾದಿಗಳು ಮುಂದೆ ಎದುರಾಗುವ ಬಹುದೊಡ್ಡ ಅಪಾಯದಿಂದ ಪಾರಾಗಲು ಬೌದ್ಧಿಕವಾಗಿ ಇಂದಿನಿಂದಲೇ ಎಚ್ಚೆತ್ತಿಕೊಳ್ಳಬೇಕಾದ ಹಿನ್ನೆಲೆಯಿಂದ ತಿಳಿಯಬೇಕಾಗಿದೆ.

ಹಿಂದೂ ರಾಷ್ಟ್ರದ ಸಂವಿಧಾನವನ್ನು ಬಯಸುವವರು – ಇವರ ಇಂತಹ ಅಲಿಖಿತ ಸಂವಿಧಾನದ ಹಿನ್ನೆಲೆಯಿಂದಲೇ ಹಲವಾರು ಸಾಮ್ರಾಜ್ಯವನ್ನು ನಾಶಮಾಡಿ ಹೊಸ, ಸಾಮ್ರಾಜ್ಯಗಳನ್ನು ಸ್ಥಾಪನೆ ಮಾಡಿ ಹೇಗೆ ತಮಗೆ ಅನುಕೂಲಕ್ಕೆ ತಕ್ಕಂತೆ ಪ್ರಭುತ್ವವನ್ನು ಬಳಸಿಕೊಂಡರೂ ಅದೇ ಮಾದರಿಯಲ್ಲಿ ಮತ್ತೆ ಹೊಸ ಪರ್ವವನ್ನು ಆರಂಭಿಸುವುದಿಲ್ಲ ಎಂದುಕೊಂಡರೆ ತಪ್ಪಾಗುತ್ತದೆ. ಇದರ ಸುಳಿವುಗಳು ಅಂಬೇಡ್ಕರ್ ಅವರ ಹೋರಾಟದ ದಿನಗಳಲ್ಲಿ ಹಾಗೂ ಸಂವಿಧಾನ ಜಾರಿಗೆ ಬಂದ ದಿನಗಳಿಂದಲೂ ಚಲ್ತಿಯಲ್ಲಿದೆ.

ಮುಂದಿನ ಅನಾಹುತಗಳಿಗೆ ಇಂದು ಒಗ್ಗಟ್ಟನಿಂದ ಹೇಳುತ್ತಿರುವ “ಹಿಂದೂ ರಾಷ್ಟ್ರ- ಸಂವಿಧಾನ ರಚನೆ ” ಕುರಿತ ಅಜ್ಞಾನದ ಚಿಂತನೆಯನ್ನು – ಅದಕ್ಕೂ ಮೀರಿದ ಒಗ್ಗಟ್ಟಿನಿಂದ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಅವರು ಬರೆದ ಲಿಖಿತ ಸಂವಿಧಾನವಾದಿಗಳು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಒಗ್ಗಟ್ಟಾಗಿ ವಿರೋಧಿಸಬೇಕಾಗಿದೆ. ಈ ವಿರೋಧ ಬೀದಿಗಿಳಿದು ದೇಶವನ್ನು ಬಂದ್ ಮಾಡುವ ಮೂಲಕ – ಸರ್ಕಾರಿ ವಸ್ತುಗಳಿಗೆ ಹಾನಿ ಮಾಡುವುದರ ಮೂಲಕ ಸಾಧ್ಯವಿಲ್ಲ. ನಮ್ಮ ಸಂವಿಧಾನದ ಆಧಾರದ ಮೇಲೆ ರಾಜಕೀಯವಾಗಿ ಬೌದ್ಧಿಕವಾಗಿ ಎದುರಿಸಿ ಶಾಶ್ವತವಾಗಿ ” ನಮ್ಮ ಸಂವಿಧಾನ -ನಮ್ಮ ಹಕ್ಕು” ಎಂಬ ಮಾದರಿಯಲ್ಲಿ ಉಳಿಸಿ- ಗಳಿಸಿಕೊಳ್ಳಬೇಕಾಗಿದೆ.

ಇದನ್ನೂ ನೋಡಿ: ಗಣತಂತ್ರ ದಿನ : ವೆಂಟ್ರಿಲೋಕ್ವಿಸ್ಟ್ ಜಾನು ಆವಂತಿಕಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *