ನವದೆಹಲಿ: “ಉತ್ತರ ಪ್ರದೇಶವನ್ನು ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಿ ಬದಲಾಗದಂತೆ ಎಚ್ಚರಿಕೆ ವಹಿಸಿ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಹೇಳಿಕೆಗೆ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಪ್ರತಿಕ್ರಿಯಿಸಿದ್ದಾರೆ.
ʼʼಉತ್ತರ ಪ್ರದೇಶವು ಕೇರಳವಾಗಿ ಬದಲಾದರೆ ಅಲ್ಲಿನ ಜನರು ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಸುಧಾರಣೆ, ಜೀವನ ಗುಣಮಟ್ಟ ಮತ್ತು ಸಾಮರಸ್ಯದ ಸಮಾಜವನ್ನು ಆನಂದಿಸುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ ಕೊಲೆಗಳು ಸಂಭವಿಸುವುದಿಲ್ಲ. ಉತ್ತರ ಪ್ರದೇಶದ ಜನತೆಗೆ ಬೇಕಿರುವುದೇ ಇದುʼʼ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಮೊದಲ ಹಂತದ ಮತದಾನ ಆರಂಭವಾಗುವ ಗಂಟೆಗಳ ಮೊದಲು ನಿನ್ನೆ ಸಂಜೆ ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು ಕಳೆದ ವರ್ಷ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಿ ಮೂರನೇ ಬಾರಿ ಆಡಳಿತಕ್ಕೆ ಬಂದಿರುವ ತೃಣಮೂಲ ಕಾಂಗ್ರೆಸ್ ಹಾಗೂ ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ಎಡಪಕ್ಷವನ್ನು ಉಲ್ಲೇಖಿಸಿ ಮಾತನಾಡಿದ್ದರು.
‘ಮತದಾರರು ಮೈಮರೆತರೆ 5 ವರ್ಷಗಳ ದುಡಿಮೆ ವ್ಯರ್ಥವಾಗುತ್ತದೆ. ಉತ್ತರ ಪ್ರದೇಶವು ಕಾಶ್ಮೀರ, ಕೇರಳ ಅಥವಾ ಬಂಗಾಳವಾಗಿ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ’ ಎಂದು ಎಚ್ಚರಿಕೆ ನೀಡಿರುವುದು ವಿಡಿಯೊದಲ್ಲಿದೆ.