ಮಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ನನ್ನ ಟಿಕೆಟ್ ಕೈತಪ್ಪಲು ನೇರ ಹೊಣೆ. ನನಗೆ ಸಿಗಬೇಕಿದ್ದ ಟಿಕೆಟ್ ಅನ್ನು ಅವರು ಮಾರಾಟ ಮಾಡಿದ್ದಾರೆ’ ಎಂದು ಪಕ್ಷದ ಟಿಕೆಟ್ ವಂಚಿತ ಮೊಹಿಯುದ್ದೀನ್ ಬಾವ ಆರೋಪ ಮಾಡಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಾನೇನು ತಪ್ಪು ಮಾಡಿದ್ದೇನೆ ಡಿ.ಕೆ.ಶಿಯವರೇ. ನನಗೇಕೆ ಅನ್ಯಯ ಮಾಡಿದಿರಿ’ ಎಂದು ಕಣ್ಣೀರಿಟ್ಟರು.
‘ಡಿ.ಕೆ.ಶಿ. ಅವರೊಬ್ಬರನ್ನು ಬಿಟ್ಟು ಸಿದ್ದರಾಮಯ್ಯ ಸೇರಿದಂತೆ ಕೋರ್ ಕಮಿಟಿಯಲ್ಲಿದ್ದವರೆಲ್ಲರೂ ನನಗೆ ಆಶೀರ್ವಾದ ಮಾಡಿದ್ದರು. ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಆದರೆ, ಕೊನೆಯ ಗಳಿಗೆಯಲ್ಲಿ ಕೆ.ಜೆ.ಜಾರ್ಜ್ ಅವರು ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿ ಅಲಿ ಅವರನ್ನು ಸಿದ್ದರಾಮಯ್ಯ ಬಳಿ ಕರೆದೊಯ್ದರು. ಅವರ ಕುತಂತ್ರಕ್ಕೆ ನಾನು ಬಲಿಯಾದೆ’ ಎಂದು ಬೇಸರ ತೋಡಿಕೊಂಡರು.
‘ಇನಾಯತ್ ಅಲಿ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲೂ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ. ಅವರಿಗೆ ಗುತ್ತಿಗೆ ಕೊಡಿಸಿದ್ದು ಯಾರು. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಯಿ ಅವರನ್ನೇ ಕೇಳಿ, ಹೇಳುತ್ತಾರೆ. ಅಲಿಗೆ ಗುತ್ತಿಗೆ ಕೊಡಿಸಿದ್ದು, ಶೇ 40 ಕಮಿಷನ್ ಕೊಡಿಸಿದ್ದು ನೀವೇ ಅಲ್ಲವೇ ಡಿ.ಕೆ.ಶಿ ಅವರೇ’ ಎಂದು ಪ್ರಶ್ನೆ ಮಾಡಿದರು.
‘ಡಿ.ಕೆ.ಶಿ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನನಗೆ ಅನ್ಯಾಯ ಆಗಿದೆ. ನನ್ನನ್ನು ವೈರಿಯಾಗಿ ಕಾಡಿದ್ದಾರೆ. ಕ್ಷೇತ್ರದಲ್ಲಿ 20ವರ್ಷದಲ್ಲಿ ಇನಾಯತ್ ಅಲಿ ಅವರನ್ನು ನೋಡಿದವರು ಯಾರೂ ಇಲ್ಲ. ಆರು ತಿಂಗಳ ಹಿಂದೆ ಅವರನ್ನು ನೇರವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಮಂಗಳೂರು ದಕ್ಷಿಣ ಉಸ್ತುವಾರಿಯನ್ನಾಗಿಯೂ ನೇಮಿಸಿದರು. ಪಕ್ಷವನ್ನು ಒಡೆದಿದ್ದೇ ಅವರ ಸಾಧನೆ.’ ಎಂದರು.
ಇದನ್ನೂ ಓದಿ : ಡಿಕೆಶಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ ಸಾಧ್ಯತೆ ಹಿನ್ನೆಲೆ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ
‘ಕೆಲವರು ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಟಿಕೆಟ್ ತಪ್ಪಿಸಿದವರಿಗೆ ನನ್ನ ಶಾಪ ತಟ್ಟದೇ ಬಿಡದು. ಇನಾಯತ್ ಅಲಿ ಗೆದ್ದರೆ, ಮೇ 14ರಂದು ನಾನು ನನ್ನ ತಲೆಯನ್ನು ಕಡಿಯುತ್ತೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಾಗಿದೆ’ ಎಂದು ಭವಿಷ್ಯ ನಡೆದರು.
‘ನಾನು ಕಾಂಗ್ರೆಸ್ ಪಕ್ಷದ ಮೇಲೆ ಅಷ್ಟೊಂದು ಪ್ರೀತಿ ಇಟ್ಟಿದ್ದೆ. ಡಿಕೆಶಿ ಕುತಂತ್ರಕ್ಕೆ ಬಲಿಯಾಗಿ ಕಣ್ಣೀರು ಹಾಕುತ್ತಾ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯ ಮುಂದೆ ನಡುರಾತ್ರಿಯಲ್ಲಿ ಬಿಕಾರಿ ತರಹ ರಸ್ತೆಯಲ್ಲಿ ನಿಂತಿದ್ದೆ. ನಾಯಕರ ನಡೆಯಿಂದ ಬೇಸತ್ತು ಬಹಳ ನೋವಿನಿಂದ ಪಕ್ಷ ತೊರೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ’ ಎಂದರು.
ಖಾದರ್ ವಿರುದ್ಧವೂ ಕಿಡಿ:
‘ಕರಾವಳಿ ಭಾಗದಲ್ಲಿ ಏಕಾಂಗಿ ಶಾಸಕನೆಂದು ಬೀಗುತ್ತಿರುವ ಮಾನ್ಯರೊಬ್ಬರು ನನಗೆ ಟಿಕೆಟ್ ಕೈತಪ್ಪಲು ಕಾರಣ’ ಎಂದು ಯು.ಟಿ.ಖಾದರ್ ಹೆಸರು ಹೇಳದೆಯೇ ಅವರ ವಿರುದ್ಧ ಕಿಡಿಕಾರಿದರು.
‘ಶಿವಮೊಗ್ಗದಲ್ಲಿ ಪಕ್ಷವನ್ನು ಮುಳುಗಿಸಿ, ಈಗ ವಿಧಾನ ಪರಿಷತ್ ಸದಸ್ಯರಾಗಿರುವ ಒಬ್ಬರೂ ಇದರಲ್ಲಿ ಶಾಮೀಲಾದ್ದಾರೆ’ ಎನ್ನುವ ಮೂಲಕ ಮಂಜುನಾಥ ಭಂಡಾರಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
‘ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಎಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದು ಜೆಡಿಎಸ್ ಸೇರಿದ್ದೇನೆ. ಕೊರೊನಾ ಬಂದಾಗ ನಾನು ಮನೆ ಮನೆಗೆ ಕಿಟ್ ಹಂಚಿದ್ದೆ. ಎಂಟು ಕಡೆ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿದ್ದೆ. ಪಾಲಿಕೆ ಚುನಾವಣೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ ನಿಮ್ಮ ಹೆಸರು ಮುಂಚೂಣಿಯಲ್ಲಿದೆ. ಕೆಲಸ ಮಾಡು ಎಂದಿದ್ದರು. ಐದು ವರ್ಷ ಶಾಸಕನಾಗಿದ್ದಾಗ ರಾಜ್ಯದ ಯಾವುದೇ ಶಾಸಕರು ಮಾಡ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನ ನನ್ನ ಕೈಬಿಡಲ್ಲ. ನಾನು ಸೋಲುವುವುದಿಲ್ಲ. ಜನ ಆಶೀರ್ವಾದ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.