ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಈಗಾಗಲೇ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್ ರವರು ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಯಾರು ಓಡಾಡಬಹುದು, ಯಾರು ಓಡಾಡಬಾರದು ಅಂತ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಿದೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದು ಎಂದು ಹೇಳಿದರು. ಇನ್ನು, ಟೆಲಿಕಾಂ ಕಂಪನಿ ಉದ್ಯೋಗಿಗಳು ಐಡಿಕಾರ್ಡ್ ತೋರಿಸಿ ಓಡಾಡಬೇಕು. ರೋಗಿಗಳು ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ ನಾಗರೀಕರು ಓಡಾಡಬಹುದು. ತಮ್ಮ ಮನೆಯ ಆಸುಪಾಸಿನ ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಗ್ಗೆ 6-10 ಗಂಟೆಯವರೆಗೆ ತೆಗೆದಿರಬಹುದು. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಇರುತ್ತದೆ. ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ. ರೈಲ್ವೆ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಟಿಕೆಟ್ ತೋರಿಸಬೇಕು ಎಂದು ಸ್ಪಷ್ಟನೆ ನೀಡಿದರು.
ಇದನ್ನು ಓದಿ: ಅಸಹಾಯಕರು ಹಣ ಕೊಟ್ಟು ಕೋವಿಡ್ ಲಸಿಕೆ ಪಡೆಯಲಾಗದು: ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಕಳಕಳಿ
ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎರಡು ದಿನ ಮಾತ್ರ ಕಟ್ಟಡದ ಸಿವಿಲ್ ಕೆಲಸ ಇರುವುದಿಲ್ಲ. ಉಳಿದ ದಿನ ಇರತ್ತೆ. ಅಂತರ್ ಜಿಲ್ಲೆಗೆ ಹೋಗುವವರು ಬಸ್ ಬಳಸಬಹುದು. ರೈಲು, ವಿಮಾನ ಬಳಸಬಹುದು.. ರೋಗಿಗಳು ಖಾಸಗಿ ವಾಹನದಲ್ಲಿ ಓಡಾಡಬಹುದು. ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಎಲ್ಲರೂ ಕೂಡ ಓಡಾಡಬಹುದು. ಅಂತರ್ ಜಿಲ್ಲಾ ಓಡಾಟಕ್ಕೆ ಬಸ್ಸು, ರೈಲು, ವಿಮಾನ ಮಾತ್ರ ಬಳಸಬೇಕು. ಅಂತರ್ ಜಿಲ್ಲಾ ಓಡಾಟಕ್ಕೆ ಖಾಸಗಿ ವಾಹನಗಳಲ್ಲಿ ಓಡಾಡಬೇಡಿ. ರೋಗಿಗಳು ಅವರ ಕುಟುಂಬಸ್ಥರು ಓಡಾಡುವುದಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದರು.ಇನ್ನು, ಕೋವಿಡ್ನಿಂದ ಮೃತಪಟ್ಟವರನ್ನು ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ ಪಾಲನೆ ಮಾಡಬೇಕು. ನಾಳೆಯಿಂದ ಪ್ರತಿ ಮೂರು ಗಂಟೆಗೆ 50 ಶವಸಂಸ್ಕಾರಕ್ಕೆ ಅವಕಾಶ ನೀಡಲಾಗ್ತಿದೆ. ನೀರಿನ ಸಂಪರ್ಕ ಕೂಡ ಲಭ್ಯವಾಗಿದೆ. ಅಂಬ್ಯುಲೆನ್ಸ್ ಗಳು ರಸ್ತೆಯಲ್ಲಿ ಕ್ಯೂ ನಿಲ್ಲಬಾರದು. ಬಂದಂತಹ ಜನರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬಂದ ತಕ್ಷಣ ಯಾವುದೇ ವಿಳಂಬವಿಲ್ಲದೆ ಶವಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿ ಕೂಡ ನಿಯೋಜನೆ ಮಾಡಿದ್ದೇವೆ. ಬೆಂಗಳೂರಿನ ಮೇಲೆ ಇರುವ ಒತ್ತಡ ನೂರಕ್ಕೆ ನೂರು ಕಡಿಮೆಯಾಗಲಿದೆ. ಯಾವುದೇ ಶವ ಸಂಸ್ಕಾರಕ್ಕೆ ಕ್ಯೂ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇಂದು ರಾತ್ರಿಯಿಂದ ವೀಕೆಂಡ್ ಕರ್ಪ್ಯೂ ಜಾರಿಯಾಗಲಿದ್ದು ಏನಿರುತ್ತೆ? ಏನಿರಲ್ಲ?
ವೀಕೆಂಡ್ ಕರ್ಪ್ಯೂನಲ್ಲಿ ಏನಿರುತ್ತದೆ?
ಬಸ್, ರೈಲು, ವಿಮಾನ, ಟ್ಯಾಕ್ಸಿ ಸಂಚಾರ
ಅಗತ್ಯ, ತುರ್ತು ಚಟುವಟಿಕೆ
4 ತಾಸು ಮಾತ್ರ ಹಾಲು, ತರಕಾರಿ, ಹಣ್ಣು, ದಿನಸಿ ವಸ್ತು, ಮಾಂಸ, ಮಾರಾಟ
50 ಜನರ ಮಿತಿಯೊಂದಿಗೆ ಮದುವೆ
ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ
ಲಸಿಕೆ ಪಡೆಯಲು ಅವಕಾಶ
ವೀಕೆಂಡ್ ಕರ್ಪ್ಯೂನಲ್ಲಿ ಏನಿರಲ್ಲ?
ಬೆಳಗ್ಗೆ 10 ರ ನಂತರ ದಿನಸಿ, ಅಗತ್ಯ ವಸ್ತು ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್
ಜಿಮ್, ಕ್ರೀಡಾ ಕಾಂಪ್ಲೆಕ್ಸ್, ಈಜುಕೊಳ, ಮನರಂಜನಾ ಪಾರ್ಕ್, ಸ್ಟೇಡಿಯಂ
ಚಿತ್ರಮಂದಿರ, ಶಾಪಿಂಗ್ ಮಾಲ್, ಬಾರ್, ಪಬ್ ಗಳು, ಆಡಿಟೋರಿಯಂ
ರಾಜಕೀಯ, ಧಾರ್ಮಿಕ ಸಭೆ, ಧಾರ್ಮಿಕ ಸ್ಥಳಗಳು, ಪೂಜಾ ಮಂದಿರ
ಮೆಟ್ರೋ ಸೇವೆ ಇರಲ್ಲ : ವೀಕೆಂಡ್ ಕರ್ಫ್ಯೂ ಹಿನ್ನಲೆ, ನಮ್ಮ ಮೆಟ್ರೋ ಸೇವೆ ಇಂದು ಸಂಜೆ ಸ್ಥಗಿತಗೊಳ್ಳಲಿದೆ. ಇಂದು ಸಂಜೆ 7.30 ಕ್ಕೆ ಕೊನೆಯ ಟ್ರೈನ್ ಇದೆ. ಅದಾದ ಬಳಿಕ ಸೋಮವಾರ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಶನಿವಾರ ಹಾಗೂ ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ನಿಂದ ಪ್ರಕಟಣೆ ಹೊರಡಿಸಿದೆ.