ಬೆಳಗಾವಿ: ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಕಾಯಿದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನ ವಿರೋಧಿ ಕಾನೂನು. ಇದು ಆರ್‌ಎಸ್‌ಎಸ್‌ನವರ ಅಜೆಂಡಾ. ಈ ಸರ್ಕಾರ ಸಾಧನೆ ಎಂದು ಹೇಳಿಕೊಳ್ಳಲು ಯಾವ ಕೆಲಸಗಳನ್ನು ಮಾಡಿಯೇ ಇಲ್ಲ, ಹಾಗಾಗಿ ಇಂಥದ್ದೊಂದು ವಿವಾದಾತ್ಮಕ ಕಾನೂನು ಜಾರಿ ಮಾಡಿ ಎಂದು ಆರ್‌ಎಸ್‌ಎಸ್‌ನವರೇ ಸರ್ಕಾರಕ್ಕೆ ಹೇಳಿರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇದರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ‘ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಆದರೆ, ಸರ್ಕಾರಕ್ಕೆ ಅವುಗಳ ಬಗ್ಗೆ ಚಿಂತೆ ಇಲ್ಲ’ ಎಂದು ಆರೋಪಿಸಿದರು. ಕೊರೊನಾದಿಂದ ಸತ್ತವರಿಗೆ ಪರಿಹಾರ ನೀಡಿಲ್ಲ, ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕೊಟ್ಟಿಲ್ಲ, ಬೆಳೆ ಪರಿಹಾರ ನೀಡಿಲ್ಲ, ಅಂಗನವಾಡಿ, ಶಾಲೆ, ರಸ್ತೆ, ಸೇತುವೆಗಳು ಬಿದ್ದುಹೋಗಿವೆ ಅದನ್ನು ಸರಿ ಮಾಡಿಲ್ಲ. ಅವೆಲ್ಲಾ ಬಿಟ್ಟು ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಮತಾಂತರ ನಿಷೇಧ ಕಾಯಿದೆಗೆ ಕದ್ದುಮುಚ್ಚಿ ಅನುಮೋದನೆ ಪಡೆಯಲು ಹೊರಟಿದ್ದಾರೆ. ಒಟ್ಟಿನಲ್ಲಿ ಜನರ ಗಮನ ಬೇರೆಕಡೆ ಸೆಳೆಯುವುದೇ ಕಾಯಿದೆಯ ಉದ್ದೇಶ ಎಂದು ಸಿದ್ದರಾಮಯ್ಯ ತಿಳಿಸಿದರು.
ಪರಿಷತ್ ಚುನಾವಣೆಯ ಫಲಿತಾಂಶದಿಂದ ಬಿಜೆಪಿ ಕಂಗಾಲಾಗಿದೆ. ನಮಗೆ 45% ಮತ ಬಿದ್ದಿದೆ, ಬಿಜೆಪಿಗೆ 41% ಮತ ಬಿದ್ದಿದೆ. ಹೋದ ಮಾನ ಉಳಿಸಿಕೊಳ್ಳಲು ಸರ್ಕಾರ ಸಂವಿಧಾನ ಬಾಹಿರ ಕಾನೂನು ಜಾರಿ ಮಾಡಲು ಹೊರಟಿದೆ. ಈ ಕಾಯ್ದೆಯ ವಿರುದ್ಧ ಕಾಂಗ್ರೆಸ್ ವ್ಯಾಪಕ ಪ್ರತಿಭಟನೆ ನಡೆಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.