ಜಜ್ಜರ್: ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಪ್ರತಿಭಟನೆ ನಡೆಸುತ್ತಿರುವ ವೇಳೆ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾ ನಿರತರ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿರುವ ಘಟನೆ ನಡೆದಿದೆ.
ಇದನ್ನು ಓದಿ: ಕೇಂದ್ರದ ಬಿಜೆಪಿ ಸರ್ಕಾರ ಮಾತುಕತೆಗೆ ಸಿದ್ಧ ಎಂದು ಹೇಳುತ್ತಿರುವುದು ಸುಳ್ಳು: ರಾಕೇಶ್ ಟೀಕಾಯತ್
ಇಂದು ಬೆಳಿಗ್ಗೆ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಜ್ಜರ್‌ಗೆ ಆಗಮಿಸಿದ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ವಿರುದ್ಧ ರೈತರು ಪ್ರತಿಭಟನೆ ಮುಂದಾದರು ಹಾಗೂ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಘರ್ಷಣೆ ನಡೆದಿದೆ. ಚೌಟಾಲಾ ಪ್ರತಿಭಟನಾ ಸ್ಥಳಕ್ಕೆ ತಲುಪಿದಾಗ ರೈತರು ಕಪ್ಪು ಬಾವುಟಗಳನ್ನು ತೋರಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಅಲ್ಲದೆ, ಅರೆ ಸೇನಾ ಪಡೆಯನ್ನು ನಿಯೋಜಿಸಿದ್ದರು. ಗಂಭೀರ ಸ್ವರೂಪ ಪಡೆದ ಪ್ರತಿಭಟನೆಯನ್ನು ನಿಯಂತ್ರಣಗೊಳಿಸಿಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಉಪ ಆಯುಕ್ತ ಶ್ಯಾಮ್ ಲಾಲ್ ಪೂನಿಯಾ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ಒಂದು ವರ್ಷದಿಂದ ದೆಹಲಿ ಸುತ್ತಮುತ್ತ ಹಾಗೂ ಗಡಿ ಭಾಗಗಳು ಮತ್ತು ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹರಿಯಾಣ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಯು ಇದು ಸತತ ಎರಡನೇ ದಿನವಾಗಿದ್ದು, ಗುರುವಾರದಂದು ಕರ್ನಾಲ್‌ನಲ್ಲಿ ನಿಗದಿಯಾಗಿದ್ದ ಬಿಜೆಪಿ ಕಾರ್ಯಕ್ರಮ ಆರಂಭಕ್ಕೂ ಮುನ್ನ ಘರ್ಷಣೆ ನಡೆದಿದೆ.
ಇದನ್ನು ಓದಿ: ಐತಿಹಾಸಿಕ ಭಾರತ ಬಂದ್-ಜನತೆಗೆ ಎಐಕೆಎಸ್ ಅಭಿನಂದನೆ
ರೈತರು ಹರಿಯಾಣದ ಹಲವು ಭಾಗಗಳಲ್ಲಿ ಆಡಳಿತ ಪಕ್ಷ ಮತ್ತು ಅದರ ನಾಯಕರ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ, ಅವರು ಭಾಗವಹಿಸುವ ಎಲ್ಲೆಡೆ ಕೇಂದ್ರದ ರೈತರ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ಸು ಪಡೆಯಲು ಆಗ್ರಹಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.