ಅಂಬಾನಿ, ಆರ್‌ಎಸ್‌ಎಸ್‌ ಸಂಬಂಧಿತ ವ್ಯಕ್ತಿಯಿಂದ 300 ಕೋಟಿ ಲಂಚದ ಆಮಿಷ: ಸತ್ಯಪಾಲ್ ಮಲಿಕ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ತಾವು ಎರಡು ಕಡತಕ್ಕೆ ಅನುಮೋದನೆ ನೀಡಿದರೆ “ಅಂಬಾನಿ” ಮತ್ತು “ಆರ್‌ಎಸ್ಎಸ್-ಸಂಬಂಧಿತ ವ್ಯಕ್ತಿ”ಗಳು 300 ಕೋಟಿ ರೂಪಾಯಿ ಲಂಚ ನೀಡುವುದಾಗಿ ಆಮಿಷವೊಡ್ಡಿದ್ದರು ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಜಮ್ಮು ಕಾಶ್ಮೀರ ರಾಜ್ಯಪಾಲರಾಗಿದ್ದ ಸಮಯದಲ್ಲಿ ಅಂಬಾನಿ ಹಾಗೂ ಆರ್‌ಎಸ್‌ಎಸ್‌ ಸಂಬಂಧಿತ ವ್ಯಕ್ತಿಯಿಂದ ಲಂಚದ ಆಮಿಷವಿತ್ತು ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಹೇಳಿಕೆಯಾಗಿದೆ.

ಇದನ್ನು ಓದಿ: ನಾನು ಆರ್​ಎಸ್​ಎಸ್ ಹೊಗಳಿದ್ದೇನೆ ಎನ್ನುವುದು ಶುದ್ಧ ಸುಳ್ಳು: ಹೆಚ್ ​ಡಿ ದೇವೇಗೌಡ

ಎರಡು ಕಡತಗಳಿಗೆ ಅನುಮೋದನೆ ನೀಡಿದರೆ ನಿಮಗೆ ತಲಾ 150 ಕೋಟಿ ರೂಪಾಯಿ ನೀಡಲಾಗುವುದು’ ಎಂದು ಕಾರ್ಯದರ್ಶಿಗಳು ನನಗೆ ತಿಳಿಸಿದರು. ಆದರೆ ನಾನು ಐದು ಕುರ್ತಾ-ಪೈಜಾಮಗಳೊಂದಿಗೆ ಬಂದಿದ್ದು, ಅದರೊಂದಿಗೇ ಹೊರಡುತ್ತೇನೆ” ಎಂದು ಹೇಳುವ ಮೂಲಕ 300 ಕೋಟಿ ರೂಪಾಯಿ ಲಂಚದ ಆಮಿಷವನ್ನು ತಿರಸ್ಕರಿಸಿದ್ದೆ ಎಂದು ಮಲಿಕ್ ರಾಜಸ್ಥಾನದ ಜುಂಜುನುದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ. ಮಲಿಕ್ ಅವರ ಭಾಷಣದ ವಿಡಿಯೋ ಈಗ ವೈರಲ್ ಆಗಿದೆ.

ಕಾಶ್ಮೀರದ ರಾಜ್ಯಪಾಲನಾಗಿ ನೇಮಕಗೊಂಡ ನಂತರ ನನ್ನ ಬಳಿಗೆ ಬಂದ ಆ ಎರಡು ಕಡತಗಳಲ್ಲಿ ಒಂದು ಅಂಬಾನಿಗೆ ಸೇರಿದ್ದು, ಮತ್ತೊಂದು ಆರ್‌ಎಸ್‌ಎಸ್-ಸಂಬಂಧಿತ ಮತ್ತು ಹಿಂದೆ ಮೆಹಬೂಬಾ ಮುಫ್ತಿ ನೇತೃತ್ವದ(ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಗೆ ಸೇರಿದ್ದ ಕಡತಗಳು ಈ ವ್ಯಕ್ತಿ ತಾನು ಪ್ರಧಾನಿಗೆ ಬಹಳ ಹತ್ತಿರದವರು ಎಂದು ಹೇಳಿಕೊಂಡಿದ್ದರು. ಆದರೆ ನಾನು ಆ ವ್ಯವಹಾರವನ್ನು ರದ್ದುಗೊಳಿಸಿದೆ ಎಂದು ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

2018ರಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಿಲಿಯನ್ಸ್ ಕಂಪನಿ ಜತೆಗಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ಏಕೆಂದರೆ ಅದರಲ್ಲಿ ಕೆಲವು ಗೊಂದಲವಿತ್ತು. ಎರಡು ದಿನಗಳ ನಂತರ ಒಪ್ಪಂದವನ್ನು ಒಪ್ಪಿಕೊಳ್ಳಲಾಯಿತು ಹಾಗೂ ಹಾಗೆಯೇ ಎಲ್ಲವೂ ಪಾರದರ್ಶಕವಾಗಿದೆಯೇ ಎಂದು ತಿಳಿಯಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಲಾಗಿತ್ತು ಎಂದಿದ್ದಾರೆ.

ಇದನ್ನು ಓದಿ: ಪಿಡಿಒಯಿಂದ ರಾಷ್ಟ್ರಪತಿವರೆಗೂ ಆರೆಸ್ಸೆಸ್‌ ನವರೇ ಇದ್ದಾರೆ: ಹೆಚ್‌ಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್

ಆದರೆ ಇದರಲ್ಲಿ ಹಗರಣ ನಡೆದಿದೆ ಎಂದು ಎರಡೂ ಇಲಾಖೆಗಳ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದರು. ಅದರ ಪ್ರಕಾರ ನಾನು ಅನುಮೋದನೆಗೆ ಒಪ್ಪಿಕೊಂಡಿಲ್ಲ, ರದ್ದುಗೊಳಿಸಿದೆ’. ಬಳಿಕ ಪ್ರಧಾನಿಯನ್ನು ಭೇಟಿಯಾಗಿ ಹಗರಣ, ಅವರ ಹೆಸರು ಎಲ್ಲವನ್ನೂ ವಿವರಿಸಿದೆ. ನಾನು ರಾಜೀನಾಮೆ ಕೊಡಲು ಸಿದ್ಧವಿದ್ದೇನೆ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಮೇಘಾಲಯ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲಿಕ್ ಕೆಲವು ದಿನಗಳ ಹಿಂದೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದರು ಮತ್ತು ರೈತರ ಪ್ರತಿಭಟನೆ ಮುಂದುವರಿದರೆ ತಮ್ಮ ಸ್ಥಾನವನ್ನು ತೊರೆದು ಅವರೊಂದಿಗೆ ನಿಲ್ಲಲು ಸಿದ್ಧ ಎಂದು ಹೇಳಿದ್ದರು.

Donate Janashakthi Media

Leave a Reply

Your email address will not be published. Required fields are marked *